ಯಾವ ಧರ್ಮದಲ್ಲಾದರೂ ಇರುವ ಒಳಿತಿನ ಭಾಗವನ್ನು ನಾವು ಒಪ್ಪಿಕೊಳ್ಳಲೇ ಬೇಕು, ಅದುವೇ ಪ್ರತ್ಯಕ್ಷ ದೇವರು, ಅದಲ್ಲ, ತನ್ನ ಅಲ್ಪತನ ಮತ್ತು ಧರ್ಮಾಂಧತೆಯ ಹಿನ್ನೆಲೆಯಲ್ಲಿ ಅದನ್ನು ಸುಳ್ಳು ಎಂದರೆ, ಆ ವ್ಯಕ್ತಿ ಈ ಬ್ರಹ್ಮಾಂಡದಲ್ಲೆಲ್ಲಾ ದೇವರನ್ನು ಹುಡುಕಿದರೂ ದೇವರು ಆತನಿಗೆ ಸಿಗಲಾರ, ಯಾಕೆಂದರೆ, ದೇವರು ಅಲ್ಲೇ ಆತನು ತುಳಿದ ಒಳಿತಿನಲ್ಲೇ ಇದ್ದನು!! ಇಂಥವರೇ ಆ ಪಕ್ಷಪಾತದ ಧರ್ಮದವರು, ಮತ್ತು ರಕ್ತಪಾತವನ್ನು ಆಗ್ರಹಿಸುವವರು.
ದೇವರನ್ನು ಮತ್ತು ಧರ್ಮವನ್ನು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೆಂದು ತಿಳಿಯುವಲ್ಲಿ ಜನಸಾಮಾನ್ಯನೂ ಒಮ್ಮೆಲೆ ಮಹಾತ್ಮರಂತಾಗಿಬಿಡುವನು, ಯಾಕೆಂದರೆ ಅವನಿಗೆ ಸುಲಭದಲ್ಲಿ ತನ್ನ ಅಲ್ಪತನವನ್ನು ಬಿಡಲು ಮತ್ತು ಮಹತ್ತಾದ ವಿಶಾಲ ಮನಸ್ಕತೆಯನ್ನು ಪಡೆಯಲು ಅದು ಸಹಾಯ ಮಾಡುವುದು! ವಿಶಾಲಮನಸ್ಕತೆ ಇರುವ ಮಹಾತ್ಮರನ್ನು ಯಾರನ್ನಾದರೂ ಒಬ್ಬಾತ ಸೈತಾನ ಎಂದರೆ ಆ ಹೇಳುವಾತನು ತನ್ನ ದೇವರನ್ನೇ, ತಾನೇ ಅರಿಯದೆ, ಸೈತಾನಿಗೆ ಹೋಲಿಸುತ್ತಾನೆ ಎಂಬುವುದು ಸತ್ಯ! ಮಹಾತ್ಮರ ಸ್ವಭಾವವು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ ಆಗುವುದೆಂದು ನಮಗೆಲ್ಲಾ ತಿಳಿದಿದೆ. ಆಗ, ಯಾರಾದರೂ ಆ ಮಹಾತ್ಮನನ್ನು ಸೈತಾನ ಎಂದರೆ ಅಲ್ಲಿ ಏನು ಸಂಭವಿಸುವುದು? ಅಲ್ಲಿ ಆ ಆರೋಪಿಸಿದ ವ್ಯಕ್ತಿಗೆ ಸೈತಾನನೆಂದರೆ ಆ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೀತಿ ಆಗುವುದು! ಸೈತಾನನ ತದ್ವಿರುದ್ಧ ಸ್ವಭಾವವು ದೇವರಿಗೆ ಇರುವುದು ಎಂದು ಆತನ ಧರ್ಮದಲ್ಲೇ ಹೇಳಿದೆ, ಆ ಹಿನ್ನೆಲೆಯಲ್ಲಿ, ದೇವರ ಸ್ವಭಾವವು, ಅವನ ಪ್ರಕಾರ, ಅಸತ್ಯ, ಧ್ವೇಷ, ಮತ್ತು ಅನೈತಿಕತೆ ಆಗುವುದು!! ಅಂದರೆ, ಯಾರು ಮಹಾತ್ಮರನ್ನು ಸೈತಾನ ಎಂದು ಹೇಳುವನೋ ಆತನು ತನ್ನ ದೇವರ ಸ್ವಭಾವವನ್ನು ಅಸತ್ಯ, ಧ್ವೇಷ, ಮತ್ತು ಅನೈತಿಕತೆ ಎಂದು ಹೇಳಿದಂತಾಗುವುದು. ಆದರೆ ಎಲ್ಲಾ ಧರ್ಮಗಳಲ್ಲೂ ಆ ಋಣಾತ್ಮಕ ಸ್ವಭಾವಗಳು ಸೈತಾನನದ್ದು ಎಂದೂ ಹೇಳಿರುವುದರಿಂದ, ಆ ವ್ಯಕ್ತಿಯು ತನ್ನ ದೇವರನ್ನೇ ಸೈತಾನನನ್ನಾಗಿ ಮಾಡಿದಂತೆ ಆಗುವುದು. ಆದರೆ, ದೇವರ ಸಂಕಲ್ಪವು ಎಂದಿಗೂ ಸೈತಾನ ಆಗದ ಕಾರಣ, ಆ ವ್ಯಕ್ತಿಯನ್ನು ಸೈತಾನನ ಭಕ್ತ ಎಂದು ಮಾತ್ರ ಹೇಳಬೇಕಾಗುವುದು.