ನಿಜವಾಗಿಯೂ ನೋಡಿ, ಈ ಜಗತ್ತಿನಲ್ಲಿ ಯಾರು ಧರ್ಮವನ್ನು ಹೊಸದಾಗಿ ಸೃಷ್ಟಿಸಿದ್ದಾರೆ? ಎಲ್ಲರೂ ಒಂದಿಷ್ಟು ಅವರದ್ದೇ ಆದ ಹೊಸ ನಂಬಿಕೆಯ ಆಚರಣೆಗಳನ್ನು ಕೊಟ್ಟು ಹೋಗಿದ್ದಾರೆ! ಆದರೆ ಆ ಆಚರಣೆಗಳ ಮಧ್ಯದಲ್ಲಿ ಎಲ್ಲೋ ಹುದುಗಿರುವ ಆ ನಿಜ ಸಾರವಾದ ಧರ್ಮವನ್ನು ಮಾತ್ರ ತೆಗೆದು ನೋಡಿದಾಗ, ಅವೆಲ್ಲಾ ಸಹಸ್ರ ಸಹಸ್ರ ವರುಷಗಳ ಹಿಂದೆ, ಧರ್ಮಕ್ಕೆ ಯಾರೂ ಹೆಸರಿಡದ ಕಾಲದಲ್ಲೇ, ಆ ಮರದಡಿಯ ವಿಶಾಲ ಮನಸ್ಕತೆಯ ಮಹಾತ್ಮರ ಮಾತುಗಳು ಮಾತ್ರವಾಗಿದೆ ಎಂದು ಸ್ಪಷ್ಟವಾಗುವುದು. ಆದುದರಿಂದ ಧರ್ಮವು, ಈ ಜಗತ್ತಲ್ಲಿ ಯಾವುದಾದರೂ ಒಂದು ಹೆಸರಿನಿಂದ ಕರೆಯಲ್ಪಡುವ ಮೊದಲೇ ಹುಟ್ಟಿಕೊಂಡಿದೆ ಎಂದು ತಿಳಿಯಬಹುದು. ಇನ್ನು, ಒಮ್ಮೆ ಹುಟ್ಟಿರುವುದು ಅದು ಇನ್ನೊಮ್ಮೆ ಹುಟ್ಟುವುದು ಸಾಧ್ಯವಿಲ್ಲದ ಕಾರಣ, ಅದೇ ಕೊನೆಯ ಧರ್ಮ ಎಂದೂ ಹೇಳಬಹುದಾಗಿದೆ. ಆದರೆ, ಅನಂತರದಲ್ಲಿ ಆ ಸತ್ಯಗಳನ್ನು ತಮ್ಮ ತಮ್ಮ ನಂಬಿಕೆಗಳ ಗೂಡಿನೊಳಗಿಂದ ಎತ್ತಿ ಹಿಡಿಯಲು ಶ್ರಮ ಪಟ್ಟಾಗ, ಪರಂಪರೆ, ಪಂಥ, ಮತ, ಧರ್ಮಗಳು ಹುಟ್ಟಿಕೊಂಡವು!! ಅವುಗಳು ಜನರನ್ನು “ನಮ್ಮದು” ಎಂಬ ಸಂಕುಚಿತ ರೀತಿಯಲ್ಲಿ ಒಗ್ಗಟ್ಟಾಗಲು ಹೇಳುವಾಗ, ಇತರ ಕಡೆ, ಅವು ಸಹಸ್ರ ಜನರಿಗೆ ಶತ್ರುಗಳಾಗಿ ಪರಿಣಮಿಸಿದವು! ಮಾತ್ರವಲ್ಲ, ಕಾಲಾಂತರದಲ್ಲಿ, ತಮ್ಮಲ್ಲೇ ಒಗ್ಗಟ್ಟು ಮುರಿದು ಹೊಸ ಪಂಥಗಳಾಗಿ ವಿಭಜಿಸಲ್ಪಟ್ಟು ತಮ್ಮೊಳಗೆ ರಕ್ತಪಾತ ಮಾಡಿದವು, ಮತ್ತು ಹೀಗೆ ಎರಡೂ ಕಡೆಯೂ ಸರ್ವ ನಾಶವನ್ನೇ ತಂದೊಡ್ಡಿದವು!! ಆದುದರಿಂದ, ಜಗತ್ತಲ್ಲಿ ಎಲ್ಲಾ ಧರ್ಮ, ಪಂಥಗಳಲ್ಲೂ ಹುದುಗಿರುವ ಆ ಸಾರಧರ್ಮವನ್ನು ಎಲ್ಲರೂ ಸೇರಿ ಎತ್ತಿ ಹಿಡಿವ ಆ ಸುಲಭದ ಕೆಲಸವನ್ನು ಮಾಡಿದಲ್ಲಿ, ಯಾರಿಗೂ ತೊಂದರೆ ಆಗದ ರೀತಿಯಲ್ಲಿ, ಮತ್ತು ಅವರವರ ಧರ್ಮ, ಪಂಥಗಳ ರಚನೆಗಳಲ್ಲಿ ಬದಲಾವಣೆ ಮಾಡದೆಯೇ, ಮಾನವರೆಲ್ಲರೂ ಒಂದಾಗುವ ಆ ಅದ್ಭುತ ಜಾಗತಿಕ ಒಗ್ಗಟ್ಟು ಸೃಷ್ಟಿಯಾಗಬಹುದು. ಈ ಜಾಗತಿಕ ಒಗ್ಗಾಟ್ಟಾಗುವಿಕೆಯು ಆ ಪ್ರಾಚೀನ ವಾಮಾಚಾರದ ಪ್ರಭಾವವನ್ನು ಖಂಡಿತವಾಗಿಯೂ ಗಣನೀಯವಾಗಿ ಕುಗ್ಗಿಸುವುದೆಂಬುವುದರಲ್ಲಿ ಸಂಶಯವಿಲ್ಲ.