ಜಾತಿಗಳು ಸಮಾಜದಲ್ಲಿ ಅನಿವಾರ್ಯ ಎನ್ನುವವರು ಆ ಮಾತನ್ನು ಸ್ಪಷ್ಟವಾದ ಕಾರಣ ಸಹಿತ ವಿವರಿಸಿ ಕೊಡಬೇಕು. ಅದಲ್ಲದೆ, ಯಾರಿಗೂ ನಂಬಿಕೆಯ ಹಿನ್ನೆಲೆಯಲ್ಲಿ ಆ ರೀತಿ ಹೇಳುವ ಹಕ್ಕಿಲ್ಲ. ಅಂದರೆ, ಧಾರ್ಮಿಕ ಹಿನ್ನೆಲೆಯಲ್ಲಿಯೇ ಹಾಗೆ ವಾದ ಮಾಡುವ ಪಂಡಿತರುಗಳು ವಿವರಿಸಿ ತಿಳಿಸಿ ಕೊಡಬೇಕಾಗುವುದು. ಆದರೆ ಅದು ಯಾರಿಗೂ ಎಂದಿಗೂ ಸಾಧ್ಯವಾಗಲಾರದು, ಯಾಕೆಂದರೆ ಧರ್ಮವು ಎಲ್ಲೂ ಜಾತಿ, ವರ್ಣಗಳ ಕುರಿತು ಹೇಳಿಲ್ಲ ಮತ್ತು ಹಾಗೆ ಹೇಳಿದಲ್ಲಿ ಅದು ಧರ್ಮವೇ ಅಲ್ಲದಾಗುವುದು!
ಧರ್ಮವು ಅಡಗಿರುವುದು ಸಾಮಾಜಿಕ ನ್ಯಾಯದಲ್ಲಿ, ಮತ್ತು ಸಾಮಾಜಿಕ ಅನ್ಯಾಯದಲ್ಲಿ ಅಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಶೂದ್ರರು ವೇದವನ್ನು ಅಥವಾ ಜ್ಞಾನವನ್ನು ಪಡೆಯಬಾರದು ಮತ್ತು ಅವರು ಎಂದೆಂದಿಗೂ ಸೇವೆ ಮಾಡುವವರಾಗಿಯೇ ಇರಬೇಕು ಎಂದು ಎಲ್ಲಾದರೂ ಇಂದು ನ್ಯಾಯಾಲಯದಲ್ಲಿ ವಾದ ಮಾಡಿದರೆ, ಆ ವಾದ ಮಾಡುವ ವಕೀಲನನ್ನೇ ನ್ಯಾಯಾಧೀಶರು ಸೆರೆಮನೆಗೆ ಅಟ್ಟಬಹುದು. ಇಂದಿನ ಭಾರತದ ಸಂವಿಧಾನವೇ ಇಂದಿನ ಸಮಾಜದ ನಿಯಮ ಸಂಹಿತೆ ಅಥವಾ ಇಂದಿನ ಭಾರತದ ಸ್ಮೃತಿ ಆಗಿದೆ ಎನ್ನಬಹುದು. ಇದು ನಿಜವಾಗಿಯೂ ಎಲ್ಲಾ ಧರ್ಮದವರಿಗೂ ಒಂದೇ ರೀತಿಯಲ್ಲಿರಬೇಕಾಗಿದೆ. ಇನ್ನು, ಹಿಂದಿನ ಕಾಲದಲ್ಲಿ ಮಾಡಿರುವ ಈ ಶೂದ್ರ ಶೋಷಣೆಯು ಅದು ಅಂದೂ ಸಾಮಾಜಿಕ ನ್ಯಾಯವನ್ನು ಕೊಟ್ಟಿರಲಿಲ್ಲ, ಬದಲು ಮಾನವನು ಭೀಕರವಾಗಿ ಶೋಷಣೆಯಲ್ಲಿ ನರಳುವಂತೆ ಮಾಡಿದೆ. ಹಾಗಾದರೆ ನಿಜವಾಗಿಯೂ ಈ ರೀತಿಯ ಶೋಷಣೆಗಳನ್ನು ಸೃಷ್ಟಿ ಮಾಡಿದವರು ಯಾರು? ಎಲ್ಲರ ಆತ್ಮವೂ ಆ ದೇವರೇ ಆಗಿದ್ದು ಮಾನವರೆಲ್ಲಾ ಆ ಒಂದೇ ದೇವರು ಎಂದು ಹೇಳುವ ಧರ್ಮಕ್ಕೆ ಅದು ಸಾಧ್ಯವಿದೆಯೇ? ಇಲ್ಲ, ಖಂಡಿತಾ ಸಾಧ್ಯವಿಲ್ಲ. ಅದೇ ರೀತಿ, “ದೇವರ ಮಕ್ಕಳು ನಾವೆಲ್ಲ” ಎಂಬ ರೀತಿಯಲ್ಲಿ ಆ ಏಕ ಸೃಷ್ಟಿಕರ್ತ ದೇವರನ್ನು ಹೊಗಳುವ ಅದೇ ಧರ್ಮದ ಇನ್ನೊಂದು ರೀತಿಗೂ ಸಾಧ್ಯವೇ? ಇಲ್ಲ, ಅದೂ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ, ಧರ್ಮದ ಹಿನ್ನೆಲೆಯಲ್ಲಿ ಜಾತೀಯತೆ ಅಥವಾ ವರ್ಣವು ಹೇಳಲ್ಪಟ್ಟಿದೆ ಎಂದರೆ ಆ ಮಾತಿಗೆ ತಾತ್ವಿಕ ಆಧಾರವೇ ಇಲ್ಲದೆ ಅದು ಸುಳ್ಳು ಆಗುವುದು!! ಹಾಗಿದ್ದರೆ, ಈ ವರ್ಣ, ಜಾತೀಯತೆ ಎಲ್ಲಿಂದ ಆರಂಭವಾಯಿತು? ಅದು ರಾಜರ ಕಾಲದಿಂದ ಆರಂಭವಾಯಿತು. ಅಲ್ಲಿ ಸಮಾನತೆ ಎಂಬುವುದು ಇಲ್ಲವೇ ಇಲ್ಲವಾಗಿತ್ತು. ಅಲ್ಲಿ, ರಾಜನು ಪ್ರಜೆಗಳಿಗೆ ತಾನೇ ಪ್ರತ್ಯಕ್ಷ ದೇವರೆಂದು ಹೇಳಿಕೊಂಡಿದ್ದಾನೆ. ಮತ್ತು ಅವರೊಂದಿಗೆ ಬ್ರಾಹ್ಮಣರೂ ಈ ಭೂಮಿಯ ದೇವತೆಗಳೆಂದೂ ಸ್ವಯಂ ಘೋಷಿಸಿಕೊಂಡರು. ಅಂದರೆ, ಈ ಭೂಮಿಯ ಸುರರು ಅಥವಾ ಭೂಸುರರು ಎಂದು ತಮ್ಮನ್ನು ತಾವೇ ಬಣ್ಣಿಸಿದರು! ಆಗ ಉಳಿದವರು ತಾವಾಗಿಯೇ ಅವರ ಭಕ್ತರಾಗಬೇಕಾಯಿತು!! ಈ ರೀತಿಯಲ್ಲಿ, ಈ ಸಾಮಾಜಿಕ ಅಪಸ್ವರಗಳ ಸೃಷ್ಟಿಯು ಆ ಹಿಂದಿನ ರಾಜರುಗಳು ಮತ್ತು ಅಂದಿನ ಧರ್ಮಪಂಡಿತರುಗಳ ಸೃಷ್ಟಿಯೆಂದು ನಮಗೆ ತಿಳಿಯುವುದು. ಇವರು, ತಮಗೆ ಮತ್ತು ತಮ್ಮ ಸ್ವಾರ್ಥಗಳಿಗೆ ತಕ್ಕಂತೆ ಸಮಾಜವನ್ನು ರೂಪಿಸಿದರೆಂದು ಮತ್ತು ಅದಕ್ಕೆ ಧರ್ಮದ ಹೆಸರನ್ನು ಕೊಟ್ಟರು ಎಂದು ಇದರಿಂದ ಸ್ಪಷ್ಟವಾಗುವುದು. ಪ್ರಾಚೀನ ವಾಮಾಚಾರವು ಮಾನವನಿಂದ ಮಾನವನನ್ನು ಬೇರ್ಪಡಿಸಲು ಹಲವು ರೀತಿಗಳಲ್ಲಿ ಪ್ರಯತ್ನಿಸುತ್ತಾ ಬಂದಿವೆ ಎಂಬುವುದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು.