ಜೀವನ ಮೌಲ್ಯಗಳು

ಕೆಲವರು ಜೀವನ ಮೌಲ್ಯಗಳು ವ್ಯಯಕ್ತಿಕ ಎಂದು ವಾದ ಮಾಡುವರು, ಆದರೆ ಜೀವನ ಮೌಲ್ಯಗಳು ಎಂದೂ ವ್ಯಯಕ್ತಿಕವಲ್ಲ, ಯಾಕೆಂದರೆ ಜೀವನ ಮೌಲ್ಯಗಳ ಉದ್ದೇಶವೇ ಸಾಮಾಜದ ಹಿತವಾಗಿದೆ! ಒಬ್ಬ ವ್ಯಕ್ತಿ ಒಬ್ಬನೇ ಕಾಡಲ್ಲಿ ಜೀವಿಸುವುದಾದರೆ ಅಲ್ಲಿ ಆತನಿಗೆ ಜೀವನದ ಮೌಲ್ಯಗಳ ಅಗತ್ಯ ಬರುವುದಿಲ್ಲ. ಇದರಿಂದ ಮಾನವನ ಜೀವನ ಮೌಲ್ಯಗಳು ಸಾಮಾಜಿಕ ಜೀವನದ ಸುಗಮ ದಾರಿಯನ್ನು ಉದ್ದೇಶಿಸಿದೆ ಎಂದು ತಿಳಿದುಕೊಳ್ಳಬಹುದು. ಅಂದರೆ, ನಾವು ನಮ್ಮಷ್ಟಕ್ಕೆ ಜೀವಿಸಿ ನಮ್ಮದೇ ರೀತಿಯ ಜೀವನ ಮೌಲ್ಯವನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಥ.

ಇನ್ನು, ಒಂದು ಧರ್ಮ ಅಥವಾ ಸಿದ್ಧಾಂತ ಕೆಲವೊಮ್ಮೆ ಬೇರೆ ಬೇರೆ ರೀತಿಗಳಲ್ಲಿ ಜೀವನದ  ಮೌಲ್ಯಗಳನ್ನು ವಿವರಿಸಿರಬಹುದು, ಆದರೆ ಅವೆಲ್ಲ ತಮ್ಮ ಸಮಾಜವು ಉತ್ತಮವಾಗಬೇಕೆಂಬ  ಉದ್ದೇಶವನ್ನು ಇಟ್ಟುಕೊಂಡಿರುವುದು ಎಂದು ತಿಳಿಯಬೇಕು. ಒಟ್ಟಿನಲ್ಲಿ, ಜೀವನ ಮೌಲ್ಯವನ್ನು  ಪೂರ್ಣವಾಗಿ ತ್ಯಜಿಸಿದಲ್ಲಿ ಆ ಸಮಾಜವು ಉಳಿಯಲಾರದು ಎಂಬುವುದು ಸತ್ಯ. ಹಿಂದೆ ಚಾರ್ವಕರ ಸಮಾಜವು ಮೌಲ್ಯ ಜೀವನದ ವಿರುದ್ಧ ಸ್ವಾರ್ಥ ಜೀವನವನ್ನು ಎತ್ತಿ ಹಿಡಿಯಲು ಪ್ರಯತ್ನಿಸಿತ್ತು, ಆದರೆ ಆ ಸಮಾಜವು ಮುಂದೆ ಸಾಗದೆ ಸಂಪೂರ್ಣವಾಗಿ ನಾಶವಾಯಿತು. ಆದರೆ ಆ ಪ್ರಾಚೀನ ವಾಮಾಚಾರಕ್ಕೆ ಆ ರೀತಿಯಲ್ಲಿ ಮೌಲ್ಯಗಳು ಇಲ್ಲವಾಗುವುದು ಇಷ್ಟವಿಲ್ಲ, ಕಾರಣ ಅಲ್ಲಿ ದೇವರು, ಧರ್ಮ ಇಲ್ಲ! ಅಂದರೆ, ಅವುಗಳ ಉದ್ದೇಶವು ದೇವರುಗಳು ಮತ್ತು ಧರ್ಮಗಳು ಇದ್ದೇ ಅದರೊಳಗಿಂದ ಈ ಚಾರ್ವಕರನ್ನು ಸೃಷ್ಟಿಸುವುದು ಆಗಿದೆ!! ಹೀಗಾದರೆ, ಆಮೇಲೆ ಒಂದು ಉತ್ತಮ ಸಮಾಜವನ್ನು ಸೃಷ್ಟಿಸುವವರು ಯಾರೂ ಇರುವುದಿಲ್ಲ, ಮತ್ತು ಒಂದು ವೇಳೆ ಇದ್ದರೂ ಎಲ್ಲಾ ಜನರು ಸೇರಿ ಆತನನ್ನೇ ಅತ್ಯಂತ ಪಾಪಿಯ ತರ ನೋಡುವರು!!! ಇದೇ ಆ ಪ್ರಾಚೀನ ವಾಮಾಚಾರದ ಅಂತಿಮ ಗುರಿ, ಇಲ್ಲಿ ದೇವರೂ ಇಲ್ಲ, ಧರ್ಮವೂ ಇಲ್ಲ, ಎಲ್ಲವನ್ನೂ ಅಯಾ ಗ್ರಂಥದೊಳಗೆ ಸೇರಿಸಿ ಬೀಗಹಾಕಿಬಿಡುವುದು. ನಂಬಿಕೆ, ಆಚಾರಗಳಲ್ಲಿ, ಮಾತ್ರ ತೊಡಗಿಸಿಕೊಂಡಲ್ಲಿ, ಆ ಪ್ರಾಚೀನ ವಾಮಾಚಾರವು ಆ ಸಾರ್ವತ್ರಿಕ ಚಾರ್ವಕರನ್ನು ಈ ಜಗತ್ತಲ್ಲಿ ಧರ್ಮ, ಪಂಥಗಳ ಅಡಿಯಲ್ಲೇ ಸಹಜವಾಗಿ ಸೃಷ್ಟಿಸುವುದು ಖಂಡಿತವೆಂಬುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಅದು ಐವತ್ತು ಶೇಖಡವಾದರೂ ಈ ಶಾಶ್ವತ ಚಾರ್ವಕರನ್ನು ಧರ್ಮ, ದೇವರಡಿಯಲ್ಲಿ ಸಹಜವಾಗಿ ಸೃಷ್ಟಿಸಿದೆ. ಇನ್ನು, ಈ ಹಿನ್ನೆಲೆಯ ಬಲವನ್ನು ಬಳಸಿ, ಬಹುಬೇಗನೆ ಇನ್ನುಳಿದ ಐವತ್ತು ಶೇಖಡವನ್ನು ನುಂಗಿಬಿಡುವುದು!!

ಜೀವನ ಮೌಲ್ಯಗಳೆಂದರೇನು? ಇದಕ್ಕೆ ಉತ್ತರ ಬಹಳ ಚುಟುಕಾಗಿ ಹೇಳುವುದಾದರೆ, ‘ತನ್ನ ಸ್ವಾರ್ಥವನ್ನು ಸ್ವಲ್ಪಮಟ್ಟಿಗಾದರೂ ಬದಿಗೊತ್ತಿ ಇತರರ ಹಿತದ ಕಡೆಗೂ ಗಮನಿಸುವುದು, ಮತ್ತು ಆ ನಿಟ್ಟಿನಲ್ಲಿ ತನ್ನ ಕರ್ತವ್ಯ ಬೋಧವನ್ನು ಹೆಚ್ಚಿಸುವುದು’ ಆಗಿದೆ. ಈ ರೀತಿಯ ಸದ್ಗುಣಗಳು ಜೀವನ ಮೌಲ್ಯಗಳಾಗುವವು.

ಇಲ್ಲಿ, ನಮಗೆ ಒಂದು ಅಚ್ಚರಿ ಎದುರಾಗಿದೆ! ಅದೇನೆಂದರೆ ಚಾರ್ವಕ ಸಮಾಜದಂತೆ ಜಗತ್ತಿಗೆ ತನ್ನ ಮೌಲ್ಯ ರಹಿತ ನಿಲುವನ್ನು ಘೋಷಿಸಿ ಹೊರಟಿರುವ ಲೌಕಿಕಜೀವನ ಸಿದ್ಧಾಂತಗಳು ಬೇರೆಯೂ ಇವೆ. ಆದರೆ, ಅವುಗಳ ಆ ನಿಲುವು ಜಗತ್ತಿನ ಸರ್ವರಿಗೂ ಸ್ಪಷ್ಟವಾಗಿ ಕಾಣಿಸುವಂಥದ್ದು ಮತ್ತು ಆ ಹಿನ್ನೆಲೆಯಲ್ಲಿ ಅವನ್ನು ತ್ಯಜಿಸುವವರಿಗೆ ತ್ಯಜಿಸಲು, ಮತ್ತು ಸ್ವೀಕರಿಸುವವರಿಗೆ ಸ್ವೀಕರಿಸಲು ಅವು ಮುಕ್ತ ಅವಕಾಶವನ್ನು ಕೊಡುವವು, ಮತ್ತು ಅವು ಬಲವಂತಪಡಿಸುವುದಿಲ್ಲ. ಆದರೆ ಜೀವನ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಿದ್ಧಾಂತಗಳೆಂದು ಹೇಳಿಕೊಳ್ಳುವ ಧರ್ಮ, ಪಂಥಗಳು, ತಮ್ಮದೇ ಧರ್ಮ, ಪಂಥಗಳ ‘ನಂಬಿಕೆ’ ಎಂಬ ರೀತಿಯನ್ನು ಉಪಯೋಗಿಸಿ ಎಷ್ಟೋ ಜೀವನ ಮೌಲ್ಯಗಳನ್ನು  ಆರಂಭದಿಂದಲೇ  ಧ್ವಂಸ ಮಾಡುತ್ತಾ ಬಂದಿರುವವು. ಇಲ್ಲಿ ಯಾರಿಗೂ ಆ ಜೀವನ ಮೌಲ್ಯಗಳ ಧ್ವಂಸ ಮಾಡುವಿಕೆಯನ್ನು ನಿಲ್ಲಿಸುವಂತೆ ಹೇಳುವ ಧೈರ್ಯವೂ ಇಲ್ಲ. ಯಾಕೆಂದರೆ ಹಾಗೆ ಪ್ರಶ್ನಿಸಲು ಸಾಧ್ಯವಾಗದಂತೆ ಅವನ್ನು ‘ದೈವ ನಿಂದನೆ’ ಎಂದು ಹೇಳುತ್ತಾ ಜನರನ್ನು ಹೆದರಿಸಿ ಇಟ್ಟಿರುವುದು ಭಯಾನಕ ಬಂಧನ ಮತ್ತು ಬಲವಂತಪಡಿಸುವಿಕೆಯಾಗಿದೆ.

ಸಾವಿರಾರು ನಂಬಿಕೆಯ ಸಾವಿರಾರು ಆಚಾರಗಳನ್ನು ಅನುಷ್ಠಾನ ಮಾಡಿದರೂ ಅವುಗಳಲ್ಲಿ ಯಾವುವೆಲ್ಲಾ ಮಾನವನ ಜೀವನಮೌಲ್ಯವನ್ನು ನಾಶಪಡಿಸುವವು, ಅವೆಲ್ಲಾ ಅಧರ್ಮವಾಗುವವು. ಆದುದರಿಂದ ಎಲ್ಲಾ ಧರ್ಮಗಳಲ್ಲಿರುವ ಅಂಧ ನಂಬಿಕೆ, ಆಚಾರಗಳನ್ನು ಆಯಾ ಧರ್ಮ ಪಂಥದವರು ಪತ್ತೆ ಹಚ್ಚಿ ಅವುಗಳು ಜೀವನಮೌಲ್ಯಗಳನ್ನು ನಾಶ ಮಾಡದ ರೀತಿಯಲ್ಲಿ ಬದಲಾಯಿಸುವುದಾದರೆ ಅವೆಲ್ಲವೂ ಒಂದು ರೀತಿಯಲ್ಲಿ ಶುದ್ಧೀಕರಿಸಲ್ಪಡುವವು, ಮತ್ತು ಜಗತ್ತಿಗೆ  ಶಾಂತಿ ನೆಮ್ಮದಿಯನ್ನು ತರುವಲ್ಲಿ ತಡೆಯಾಗಲಾರವು.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||