ಒಂದು ಧರ್ಮವು ತನ್ನಾಯ್ಕೆ [ಫ್ರೀ ವಿಲ್] ನ್ನು ಎತ್ತಿ ಹಿಡಿಯುವುದಾದರೆ, ಅದೇ ಧರ್ಮವು ಅದರಲ್ಲಿ ದೇವರು ಹೇಳಿರುವ ಭವಿಷ್ಯವಾಣಿಗಳಯನ್ನೂ ಎತ್ತಿ ಹಿಡಿಯಲು ಸಾಧ್ಯವಾಗದು. ಇದಕ್ಕೆ ಕಾರಣ ಏನೆಂದರೆ ಹಾಗೆ ಹೇಳಿದಲ್ಲಿ ಅವುಗಳು ತಮ್ಮ ತಮ್ಮ ಧರ್ಮಗಳನ್ನೇ ವಿರೋಧಿಸುವುವು! ನಾವು ತನ್ನಾಯ್ಕೆಯನ್ನು ದೇವರು ಮಾನವನಿಗೆ ಕೊಟ್ಟಿರುವುದೆಂದು ಎತ್ತಿ ಹಿಡಿಯುವುದಾದರೆ, ದೇವರೂ ಸೇರಿದಂತೆ ಯಾರಿಗೂ ಭವಿಷ್ಯವನ್ನು ಹೇಳಲು ಸಾಧ್ಯವಾಗಲಾರದು, ಯಾಕೆಂದರೆ, ಅದು ಮಾನವನ ಮುಕ್ತ ಜೀವನದ ಆಯ್ಕೆಯ ಪರಿಣಾಮ ಮತ್ತು ಅದು ಹರಿದು ಅದರ ರೀತಿಯಲ್ಲಿ ಮಾತ್ರ ಮುಂದೆ ಹೋಗಬೇಕಾಗಿದೆ. ತನ್ನಾಯ್ಕೆಯಲ್ಲಿ, ದೇವರು ಮಾನವನಿಗೆ ಆತನ ಇಷ್ಟದಂತೆ ಜೀವಿಸಲು ಅನುಮತಿ ಕೊಟ್ಟಿದ್ದಾನೆ. ಅಂದರೆ, ಆತನು ಸ್ವರ್ಗವನ್ನು ಬಯಸುವುದಾದರೆ ಆತನೇ ಅದನ್ನು ಕಷ್ಟಪಟ್ಟು ಪಡೆದುಕೊಳ್ಳಬೇಕು, ಅದಲ್ಲ ಕೆಟ್ಟದನ್ನು ಮಾಡುತ್ತಾ ನರಕ ಬಯಸುವುದಾದರೆ, ಅದಕ್ಕೆ ಆತನೇ ಜವಾಬ್ಧಾರ ಎಂದು ಅದು ಹೇಳುವುದು. ಹೀಗಿರಲು, ದೇವರಿಗೆ ಜಗತ್ತಿನಲ್ಲಿ ಕೊನೆಯವರೆಗೂ ಅದನ್ನು ಮಾತ್ರ ನೋಡುತ್ತಾ ಇದ್ದು, ಕೊನೆಗೆ, ಸ್ವರ್ಗ ಮತ್ತು ನರಕಕ್ಕೆ ಜನರನ್ನು ಕೊಂಡೊಯ್ಯುವುದು ಮಾತ್ರ ಕೆಲಸವಾಗುವುದು. ಹೆಚ್ಚೆಂದರೆ, ಉಪದೇಶ ಮಾಡುವ ರೀತಿಯನ್ನು ಮಾತ್ರ ಅನುಸರಿಸಬಹುದು ಅಷ್ಟೆ. ಈ ರೀತಿಯಲ್ಲಿ ಹೇಳುವಾಗ, ಜಗತ್ತಿನಲ್ಲಿ ಕಾಲ ಹೋದಂತೆ ಮಾನವನು ಇದೇ ರೀತಿ ವರ್ತಿಸುವನು ಎಂದು ಮೊದಲಲ್ಲೇ ಭವಿಷ್ಯವಾಣಿಯನ್ನು ನುಡಿಯಲು ಸಾಧ್ಯವಾಗಲಾರದು, ಮೊದಲೇ ತಿಳಿಸಿದಂತೆ, ಹಾಗೆ ಮಾಡಿದಲ್ಲಿ, ಅದು ದೇವರು ಒಂದು ಆತ್ಮದ ಹುಟ್ಟಿನ ಮೊದಲೇ ಅದರ ತಲೆಬರಹ ಬರೆದ ಆ ‘ವಿಧಿ’ ಯ ರೀತಿಯೇ ಆಗುವುದು. ಅದು ತನ್ನಾಯ್ಕೆ ರೀತಿ ಆಗುವುದಿಲ್ಲ!
ಎಲ್ಲಾ ಧರ್ಮಗಳೂ ಕೊನೆಯ ಕಾಲದಲ್ಲಿ ಮಾನವನ ಸ್ವಭಾವವು ಕೆಟ್ಟದಾಗುವುದೆಂದು ಭವಿಷ್ಯ ನುಡಿದಿವೆ! ಹೀಗಿರುವಾಗ, ಈ ಕೆಟ್ಟ ಸ್ವಭಾವವು ಆ ಒಂದೇ ಜನ್ಮ ಇರುವ ಆ ಎಲ್ಲಾ ಆತ್ಮಗಳಿಗೆ ಆ ಕೊನೆಯ ಕಾಲದಲ್ಲಿ ಯಾಕೆ ಬರಬೇಕು? ಅದರ ಅಗತ್ಯವೇನು? ಅಂದರೆ, ಆದಿ ಕಾಲದಲ್ಲಿ ಹುಟ್ಟಿದ ಆತ್ಮಗಳಿಗೆ ಈ ತೊಂದರೆಗಳು ಬಹಳ ಕಡಿಮೆ ಇದ್ದು, ಮತ್ತು ಕೊನೆ ಕೊನೆಯಲ್ಲಿ ಬರುವ ಆತ್ಮಗಳಿಗೆ ಕೆಟ್ಟವರಾಗುವ ಸಾಧ್ಯತೆಯು ಹೆಚ್ಚಿಸಿದುದರ ಕಾರಣವೇನು ಎಂಬ ಪ್ರಶ್ನೆ ಬರುವುದು. ಅವುಗಳಿಗೆಲ್ಲಾ ಆದಿಯಲ್ಲಿ ಹುಟ್ಟಿ ಬಂದ ಆತ್ಮಗಳ ರೀತಿಯಲ್ಲಿ ಒಳ್ಳೆಯವರಾಗುವ ಸಮಾನ ಅವಕಾಶವಿರಬೇಕಲ್ಲಾ? ಇವೆಲ್ಲ, ಮೊದಲೇ ನಿಶ್ಚಯಿಸಲ್ಪಟ್ಟ ಆ ’ವಿಧಿ’ಯ ರೀತಿಯನ್ನು ಮಾತ್ರ ತೋರಿಸುತ್ತವೆ ಹೊರತು ‘ತನ್ನಾಯ್ಕೆ’ ರೀತಿಯನ್ನು ತೋರಿಸುವುದಿಲ್ಲ!! ಹೀಗಿರುವಾಗ, ಈ ಅಂತ್ಯಕಾಲದ ಮಾನವನ ಅತಿಕೆಟ್ಟ ಸ್ವಭಾವದ ಆ ಭವಿಷ್ಯವಾಣಿಯನ್ನು ಎಲ್ಲಾ ಧರ್ಮಗಳಲ್ಲೂ ಒಂದೇ ರೀತಿಯಲ್ಲಿ ತುರುಕಿಸಿದವರು ಯಾರು?
ಉಳಿದೆಲ್ಲಾ ಕಡೆ ಧರ್ಮಗಳು ತಮ್ಮೊಳಗೆ ಆಚಾರ, ನಂಬಿಕೆಗಳ ವಿಷಯಗಳಲ್ಲಿ ಬಹಳವಾಗಿ ವಿರೋಧಿಸಿ ರಕ್ತಪಾತ ಮಾಡಿಕೊಂಡರೂ, ಈ ಎಲ್ಲಾ ಧರ್ಮಗಳು, ಆ ಕೊನೆಯ ಕಾಲದ ಮಾನವನ ಸ್ಬಭಾವ ನಾಶದ ಭವಿಷ್ಯವಾಣಿಗಳನ್ನು ಒಂದೇ ರೀತಿಯಲ್ಲಿ ಮೊದಲಲ್ಲೇ ಬರೆಯಲು ಯಾರು ಸ್ಪೂರ್ತಿಯನ್ನು ನೀಡಿದರು ಎಂಬ ಪ್ರಶ್ನೆಗೆ ಉತ್ತರ “ಆ ಪ್ರಾಚೀನ ವಾಮಾಚಾರದ ಕೈವಾಡ” ಎಂಬುವುದು ಇಲ್ಲಿ ಮತ್ತೂ ಸ್ಪಷ್ಟತೆಯನ್ನು ಪಡೆಯುವುದು.