ದೇವರು ಸೈತಾನ ಮತ್ತು ಮಹಾತ್ಮ

ಮೊದಲು ನಾವು ದೇವರು ಮತ್ತು ಸೈತಾನ ಎಂದರೆ ಏನು ಎಂಬುವುದನ್ನು ತಿಳಿಯಬೇಕು. ದೇವರು ಮತ್ತು ಸೈತಾನ ಇಬ್ಬರಿಗೂ ಶಕ್ತಿ ಇವೆ. ದೇವರ ಶಕ್ತಿ ಬಹಳ ಹೆಚ್ಚು ಎಂದು ಹೇಳಬಹುದೇ ಹೊರತು ಮಾನವನ ಜೀವನದಲ್ಲಿ ಭಕ್ತರ ಕಷ್ಟಗಳನ್ನು ಪರಿಹರಿಸುವಲ್ಲಿ ದೇವರ ಆ ನೇರ ಪ್ರಭಾವವು ಕಾಣಿಸದಾದಾಗ ಮತ್ತು ಇತರ ದುಷ್ಟಶಕ್ತಿಗಳೂ ಬಹಳ ತೊಂದರೆಗಳನ್ನು ಭಕ್ತರಿಗೆ ನೀಡುವಾಗ, ಆ ದೇವರು ಸರ್ವಶಕ್ತನೆಂಬ ಮಾತಿಗೆ ಮಾನವನಿಗೆ ನೇರ ಸಾಕ್ಷ್ಯಾಧಾರಗಳು ಇಲ್ಲವಾಗಿಬಿಡುವವು. ಇನ್ನು,  ಇವುಗಳು ತಮ್ಮೊಳಗಿನ ವ್ಯತ್ಯಾಸವನ್ನು ಮಾತ್ರ ನಾವು ನೋಡುವುದಾದರೆ, ದೇವರು ಶ್ರೇಷ್ಠ ಸ್ವಭಾವವನ್ನು ಹೊಂದಿರಲೇಬೇಕು ಎಂದು ತಿಳಿಯುವುದು. ಕ್ರೂರಿಯಾಗಿರುವುದು ಅಥವಾ ಇನ್ನಿತರ ಭಯಾನಕ ಸ್ವಭಾವಗಳು ಅವು ಸೈತಾನನ ಸ್ವಭಾವ ಎಂದೂ ಹೇಳಬೇಕಾಗುವುದು. ಆದುದರಿಂದ, ಯಾರಾದರೂ ದೇವರಲ್ಲೂ ಆ ದುಷ್ಟ ಸ್ವಭಾಗಳು ಇವೆ ಎಂದು ವಿವರಿಸುವುದು ಮತ್ತು ಆ ಎರಡು ಶಕ್ತಿಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲವೆಂದು ವಿವರಿಸುವುದೂ ಒಂದೇ ಆಗುವುದೆಂದು ಹೇಳಬಹುದು.

ಮಾನವರಲ್ಲೂ ದೈವೀಕ ಸ್ವಭಾವ ಎಂದು ಹೇಳುವ ಆ ಮಹತ್ತಾದ ಸ್ವಭಾವಗಳು ಇದ್ದಲ್ಲಿ, ಅವರನ್ನು ಜಗತ್ತು ‘ಮಹಾತ್ಮ’ ಎಂದು ಗುರುತಿಸಿರುವುದನ್ನು ನಾವು ಕಾಣುತ್ತೇವೆ. ಅಂದರೆ, ಈ ಮಹಾತ್ಮರು ನಿಸ್ವಾರ್ಥಿಗಳಾಗಿರುವವರು ಮತ್ತು ಅವರು ಸತ್ಯವಾದಿಗಳಾಗಿರುವರು, ಅಂದರೆ, ಯಾವುದಾದರೂ ಒಂದನ್ನು ಕಣ್ಣು ಮುಚ್ಚಿ ನಂಬುವವರೋ ಅಥವಾ ಪ್ರೋತ್ಸಾಹಿಸುವವರೋ ಆಗಿರುವುದಿಲ್ಲ ಎಂದು ಅರ್ಥ. ಸತ್ಯ, ನ್ಯಾಯ ಎಲ್ಲಿದ್ದರೂ ಅವನ್ನು ಹಿಡಿದೆತ್ತುವವರು ಈ ಮಹಾತ್ಮರುಗಳು. ಆದರೆ, ನಂಬಿಕೆಯವರು ಎಲ್ಲಾ ಧರ್ಮಗಳಲ್ಲೂ ತಮ್ಮ ತಮ್ಮದನ್ನು ಮಾತ್ರ ಕಣ್ಣು ಮುಚ್ಚಿ ನಂಬುತ್ತಾ, ಇತರರ ನಂಬಿಕೆ, ಆಚಾರ, ಗ್ರಂಥಗಳಲ್ಲಿ ತಪ್ಪನ್ನು ಮಾತ್ರ ತೋರಿಸುತ್ತಾ ಮತಾಂತರದ ವರೆಗೆ ಮುಂದುವರಿಯುವರು ಮತ್ತು ಅದರಲ್ಲೇ ತಮ್ಮ ಎಲ್ಲಾ ಶ್ರದ್ಧೆಯನ್ನು ಇಟ್ಟು ಜೀವಿಸುವರು!! ಇದರಿಂದಲೇ ಪ್ರೀತಿಯ ಕಡಲು ಆಗಿರುವ ಹಿಂದಿನ ಹಲವು ಆಧ್ಯಾತ್ಮ ವ್ಯಕ್ತಿಗಳನ್ನು ಇತರ ಧರ್ಮದ ಹಲವು ಧರ್ಮ ಪಂಡಿತರುಗಳು ಸೈತಾನ ಎಂದು ಕರೆದಿರುವುದು!! ಇದರ ಅರ್ಥ ಇಷ್ಟೆ, ದೇವರಿಗೆ ಸೈತಾನನಗಿಂತ ಬೇರೆ ಇರುವ ಆ ಒಂದೇ ಒಂದು ಮತ್ತು ಆ ಮುಖ್ಯ ವ್ಯತ್ಯಾಸವನ್ನೂ ಮಾನವನು ನೋಡದೆ, ಬರೇ ತಮ್ಮ ಧರ್ಮ ಪುಸ್ತಕದಲ್ಲಿರುವ ಎಲ್ಲವನ್ನೂ ಸರಿ ಮತ್ತು ಶ್ರೇಷ್ಠ ಎಂದು ವಾದಿಸುವ ರೀತಿ ಇವರದು!! ತಮ್ಮದೇ ದೇವರು ಆಗ ಭಯಾನಕವಾಗಿ ಕಾಣಿಸಿದರೂ ಅದು ಅವರಿಗೆ ಚಿಂತೆಯ ವಿಷಯವೇ ಅಲ್ಲ! ದೇವರನ್ನು ಆ ಪವಿತ್ರ ಸ್ವಭಾವದ ಹಿನ್ನೆಲೆಯಲ್ಲಿ ನೋಡಿರುತ್ತಿದ್ದರೆ, ಈ ರೀತಿಯಲ್ಲಿ, ತಮ್ಮ ಧರ್ಮದವರಲ್ಲದ ಇತರ ಧರ್ಮಗಳ ಮಹಾತ್ಮರನ್ನು ಯಾವ ಕಾಲಕ್ಕೂ ಸೈತಾನ ಅಥವಾ ದಾರಿ ತಪ್ಪಿದ ಆತ್ಮಗಳು ಎಂದೆಲ್ಲಾ ಹೇಳಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ.

ಒಂದು ವಿಚಾರವನ್ನು ಇಲ್ಲಿ ನಾವು ಅರಿತಲ್ಲಿ ಅದು ಹಲವು ಗೊಂದಲಗಳನ್ನು ಇಲ್ಲವಾಗಿಸುವುದು. ಅದೇನೆಂದರೆ, ಸೈತಾನನಿಗೆ ಎಂದಿಗೂ ಉತ್ತಮನಾಗಿರಲು ಸಾಧ್ಯವಿಲ್ಲ ಎಂಬುವುದೇ ಆ ವಿಚಾರವಾಗಿದೆ. ಅಂದರೆ, ಉದಾಹರಣೆಗೆ ಸೂರ್ಯನಿಗೆ ಎಂದಿಗೂ ಕತ್ತಲೆಯನ್ನು ಸೃಷ್ಟಿಸಲು ಸಾಧ್ಯವಾಗಲಾರದು, ಅದೇ ರೀತಿ, ಕತ್ತಲೆಗೆ ಎಂದಿಗೂ ಬೆಳಕನ್ನೂ ಸೃಷ್ಟಿಸಲು ಸಾಧ್ಯವಾಗಲಾರದು. ಹಾಗೆ ಸೃಷ್ಟಿಸಿದಲ್ಲಿ ಅವುಗಳು ತಮ್ಮ ಅಸ್ತಿತ್ವವನ್ನೇ ಕಳಕೊಳ್ಳುವವು. ಅದೇ ರೀತಿ, ಸೈತಾನನಿಗೆ ಈ ಜಗತ್ತಲ್ಲಿ ಒಳಿತನ್ನು ಸೃಷ್ಟಿಸಲು ಸಾಧ್ಯವಾಗಲಾರದು. ಆದರೆ ಆತನಿಗೆ ಒಳಿತಿನ ಅಥವಾ ಉತ್ತಮನ ತರ ನಟಿಸಲು ಮಾತ್ರ ಸಾಧ್ಯವಾಗುವುದು ಅಷ್ಟೆ. ಇದರ ಅರ್ಥ, ಯಾವ ಸೈತಾನನಿಗೂ ನಿಜವಾಗಿಯೂ ಜೀವನ ಪರ್ಯಂತ ಉತ್ತಮನಾಗಿದ್ದು ಮತ್ತು ಜಗತ್ತಿಗೆ ಮಾದರಿಯಾಗಿದ್ದು ಜೀವಿಸಲು ಸಾಧ್ಯವಾಗಲಾರದು ಎಂದಾಗಿದೆ, ಯಾಕೆಂದರೆ ಹಾಗೆ ಮಾಡಿದಲ್ಲಿ ಸೈತಾನನು ತನ್ನ ಅಸ್ತಿತ್ವವನ್ನೇ ಕಳಕೊಳ್ಳುವನು!! ಆದುದರಿಂದ ಜೀವನ ಪರ್ಯಂತ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯಲ್ಲಿಯೇ, ನಿಸ್ವಾರ್ಥದಿಂದ, ಇತರ ಮಾನವರಿಗಾಗಿ ಜೀವಿಸಿ ಹೋದ ಆ ಅದ್ಭುತ ಮಹಾತ್ಮರುಗಳನ್ನು ಸೈತಾನರು ಎನ್ನುವುದು, ಅದು ನಿಜವಾಗಿಯೂ, ಅತಿ ಭಯಾನಕ ದೈವ ನಿಂದನೆ ಮಾತ್ರ ಆಗುವುದು ಎಂದು ನಾವು ತಿಳಿಯಬೇಕು.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||