ದೇವರ ಪರೀಕ್ಷೆ

ದೇವರ ಪರೀಕ್ಷೆ-[1]

ಪುರಾಣಗಳು, ತಮಗೆ ಉತ್ತರಕೊಡಲು ಸಾಧ್ಯವಾಗದಾಗ ಎಲ್ಲವೂ ‘ದೇವರ ಪರೀಕ್ಷೆ’ ಅಥವಾ ‘ಲೀಲೆ’ ಎಂಬಲ್ಲಿಗೆ ಬಂದು ನಿಲ್ಲುವವು. ದೇವರು ಎಂದರೆ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ ಎಂದು, ಕೆಲವು ಕಡೆ, ಪುರಾಣಗಳೇ ವಿವರಿಸುವಾಗ, ಆ ದೇವರು ಮಾನವನಿಗೆ ಕೊಡುವ ಭಯಾನಕ ಪರೀಕ್ಷೆಗಳು ಅಲ್ಲಿ ಸರಿಹೊಂದುವುದಿಲ್ಲ. ದೇವರು ಕರುಣಾಮಯ ಎಂದು ಪುರಾಣಗಳು ಹೇಳುತ್ತಾ, ದೇವರನ್ನು ಭಕ್ತಿಯಿಂದ ಪ್ರಾರ್ಥಿಸುವ ಅದೇ ಮಾನವನಿಗೆ ಆ ದೇವರು ಅತ್ಯಂತ ಹೃದಯ ಹಿಂಡುವ ಪರೀಕ್ಷೆಯನ್ನು ಎಲ್ಲೆಡೆಯೂ ಕೊಡುತ್ತಿರುತ್ತಾನೆ ಎಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ, ಹಾಗಿದ್ದರೆ, ಕೆಟ್ಟ ತನದ ಪರಮಾವಧಿ ಮತ್ತು ಮಾನವರಿಗೆ ತೊಂದರೆ ಕೊಡುವ ಶಕ್ತಿಯೆಂದು ಅದೇ ಪುರಾಣಗಳು ಹೇಳುವ ಆ ಸೈತಾನನಿಗೆ ಕೆಲಸ ಇಲ್ಲವಾಗುವುದು. ಆದುದರಿಂದ ಮಾನವರಿಗೆ ಭಯಾನಕ ಹಿಂಸೆ, ದುಃಖ, ಅಕಾಲ ಮರಣದಂಥ ದುರಂತಗಳನ್ನು ತರುವುದು ದೇವರೆಂದು ನಾನು ಹೇಳಲು ತಯಾರಿಲ್ಲ. ಇದು ಯಾಕೆ ಹೇಳಿದೆ ಎಂದರೆ, ಉತ್ತಮರು, ಅವರಿಗೆ ದೇವರಿಂದ ಕೊಡಲ್ಪಟ್ಟದ್ದು ಎಂದು ಹೇಳುವ ಆ ಮುಕ್ತ ಮನಸ್ಸನ್ನು ಅಷ್ಟು ಚೆನ್ನಾಗಿ ಉಪಯೋಗಿಸಿರುವರು, ಹೀಗೆ ಮಾಡಿಯೂ ಇನ್ನೂ ಅವರನ್ನೇ ಆ ದೇವರು ಮತ್ತೂ ತೊಂದರೆ, ನೋವು ಕೊಟ್ಟು ಪರೀಕ್ಷಿಸುತ್ತಾನೆ ಎಂಬುವುದನ್ನು ನಾನು ಕನಸಲ್ಲೂ ಒಪ್ಪಲಾರೆ. ದುಷ್ಟರಿಗೆ ಯಾಕೆ ಅಷ್ಟೇ ತೀವ್ರತೆಯಿಂದ ಪರೀಕ್ಷೆ ದೇವರು ಮಾಡುವುದಿಲ್ಲ ಎಂಬುವುದಕ್ಕೂ ಉತ್ತರ ಸಿಗುವುದಿಲ್ಲ. [ಇಲ್ಲಿ, “ಅವರವರ ಕರ್ಮಫಲ” ಎನ್ನುವವರು, ದೇವರ ಪರೀಕ್ಷೆ ಎಂಬುವುದನ್ನು ಹೇಳುವಹಾಗಿಲ್ಲ, ಅದನ್ನು ಬಿಡಬೇಕಾಗುವುದು. ಇನ್ನು ಕರ್ಮಫಲವನ್ನು ವಾದ ಮಾಡುವವರು ದೇವರ ಅನುಗ್ರಹಕ್ಕಾಗಿ ಪ್ರಯತ್ನಿಸುವುದು ನಿಶ್ಪಲ. ಇನ್ನು, “ಕೆಲವು ಕರ್ಮಗಳನ್ನು ಪರಿಹರಿಸಿಕೊಳ್ಳಬಹುದು, ಆದರೆ ಇನ್ನು ಕೆಲವು ಕರ್ಮಗಳನ್ನು ಪರಿಹರಿಸಲು ಸಾಧ್ಯವಿಲ್ಲ” ಎನ್ನುವ ವಾದವು ವೈಜ್ಞಾನಿಕ ತರ್ಕವಲ್ಲದ ಬರೇ ನಂಬಿಕೆ ಮಾತ್ರವಾಗುವುದು.] ಆದರೆ,  ಮಾನವನಿಗಾಗುವ  ಈ ಎಲ್ಲಾ ತೊಂದರೆಗೆಗಳಿಗೆ ನಾನು ಸೈತಾನ {ದುಷ್ಟಶಕ್ತಿ} ನನ್ನು ಮಾತ್ರ ಜವಾಬ್ಧಾರನನ್ನಾಗಿ ಮಾಡುವೆನು. ಇಲ್ಲವಾದರೆ, ಅದು ಆ ಪವಿತ್ರ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ದೇವಸಂಕಲ್ಪಕ್ಕೆ ಕ್ರೌರ್ಯವನ್ನು ಆರೋಪಿಸುವ ಆ ಭೀಕರ ಅಪಚಾರ ಮತ್ತು ದೈವ ನಿಂದನೆ ಆಗಿಬಿಡುವುದು. ಈ ಕಾರಣಗಳಿಂದಾಗಿ “ದೇವರ ಪರೀಕ್ಷೆ” ಎಂಬ ರೀತಿಯ ವಿವರಣೆಯು ದೇವರ ಸಂಕಲ್ಪಕ್ಕೆ ಸರಿಹೊಂದುವುದಿಲ್ಲ.

ನಿಜವಾಗಿಯೂ ಯಾರೂ ಯಾರನ್ನೂ ಪರೀಕ್ಷಿಸುವುದಿಲ್ಲ, ಬದಲು ಎಲ್ಲಾ ಕಷ್ಟ ತೊಂದರೆಗಳಿಗೂ ಆ ಪ್ರಾಚೀನ ವಾಮಾಚಾರವೇ ಕಾರಣ ಎಂದು ಸ್ಪಷ್ಟವಾಗಿ ತಿಳಿದಿದ್ದೇನೆ. ಅವುಗಳೇ ಸರ್ವರ ಹಣೆಬರಹವನ್ನು ಬರೆದಿರುವುದು ಮತ್ತು ಬರೆಯುತ್ತಿರುವುದು. ಯಾರೂ “ದೇವರೇ ಬರೆದ ಹಣೆ ಬರಹವನ್ನು ದೇವರಿಗೇ ಅಳಿಸಲು ಸಾಧ್ಯವಿಲ್ಲ” ಎಂಬೆಲ್ಲಾ ಬಾಲಿಶ ನೆಪಗಳನ್ನು ಹೇಳುತ್ತಾ ಮಾನವನ ಶ್ರೇಷ್ಠ ವ್ಯಕ್ತಿತ್ವದ ಆ ದೊಡ್ಡ ಆದರ್ಶವಾಗಿರುವ ದೇವಸಂಕಲ್ಪವನ್ನು ಕಲುಷಿತಗೊಳಿಸುವುದು ಬೇಡ.

ದೇವರ ಪರೀಕ್ಷೆ-[2]

ಒಬ್ಬ ಮಾನವನು, ಒಬ್ಬ ತಂದೆಯಾಗಿ, ತನ್ನ ಮಕ್ಕಳನ್ನು ಸರಿಪಡಿಸಲು, ಕಠಿಣ ಕಷ್ಟಗಳನ್ನು ಕೊಟ್ಟು ಪರೀಕ್ಷಿಸುವನೇ? ಇಲ್ಲ, ಆತನು ತನ್ನ ಮಕ್ಕಳಿಗೆ ಯಾವ ಕಷ್ಟಬಾರದ ಹಾಗೆ ರಕ್ಷಿಸಲು ಸಕಲ ಪ್ರಯತ್ನವನ್ನು ಮಾಡುವನು. ತನ್ನ ಮಕ್ಕಳು ಕಷ್ಟಕ್ಕೆ ತುತ್ತಾಗುವುದನ್ನು ಯಾವ ಕಾಲಕ್ಕೂ ಸಹಿಸನು. ಪ್ರೀತಿ ಎಂದರೆ ಇದು. ಈ ತ್ಯಾಗದ ಭಾವನೆ ಇಲ್ಲವಾದರೆ ಆತನು ಕ್ರೂರಿಯಾಗುವನು. ಅಂಥ ತಂದೆಯಂದಿರನ್ನು ಅಪರೂಪವಾಗಿ ದಿನ ಪತ್ರಿಕೆಗಳಲ್ಲಿ ನಾವು ನೋಡುತ್ತೇವೆ. ಆ ತಂದೆಯು ತನ್ನ ಮಕ್ಕಳನ್ನು ಕಷ್ಟಕ್ಕೆ ಗುರಿಪಡಿಸುವನು, ಅದೇ ರೀತಿ ಕೊಚ್ಚಿ ಕೊಲ್ಲುವನು, ಇಲ್ಲಿ, ಆ ತಂದೆಯ ಕ್ರೌರ್ಯವನ್ನು ಮಾತ್ರ ಎಲ್ಲರೂ ಅಚ್ಚರಿಯಿಂದ ಎತ್ತಿ ಹೇಳುವರು. ನಿಮ್ಮನ್ನು ಸೃಷ್ಟಿಸಿದ ದೇವರು ಯಾವ ರೀತಿಯ ತಂದೆಯ ತರ ಇರಬಹುದು? ಗಂಡನನ್ನು ಕೊಂದು ಹೆಂಡತಿಯನ್ನು ಪರೀಕ್ಷೆ ಮಾಡುವವನು ಮತ್ತು ಮಕ್ಕಳನ್ನು ಕೊಂದು ತಂದೆ, ತಾಯಂದಿರನ್ನು ಪರೀಕ್ಷೆ ಮಾಡುವವನೆಂದೆಲ್ಲಾ ಹೇಳುವಾಗ ಆ ಸೃಷ್ಟಿಕರ್ತನು ಎರಡನೇ ತರದ ತಂದೆಯಂತೆ ಒಬ್ಬ ಕ್ರೂರಿ ಸೃಷ್ಟಿಕರ್ತನಾಗುವನೆಂಬುವುದರಲ್ಲಿ ಸಂಶಯವಿಲ್ಲ. ಅಲ್ಲಿ ಸಾರ್ವತ್ರಿಕ ಪ್ರೀತಿ, ಸತ್ಯ, ನೈತಿಕತೆಯ ಅಂಶವೂ ಕಾಣಿಸುವುದಿಲ್ಲ. ಮಾತ್ರವಲ್ಲ, ಆ ಭಯಾನಕ ಕ್ರೌರ್ಯದ ಭಾವನೆಗಳೆಲ್ಲವನ್ನೂ ತನ್ನಲ್ಲಿಟ್ಟುಕೊಂಡಂತೆ ಆಗುವುದು. ಹಾಗಿರುವಾಗ, ಇನ್ನು ಸೈತಾನನಿಗೆ ಕ್ರೌರ್ಯದ ಭಾವನೆಯನ್ನು ಬೇರೆ ಎಲ್ಲಿಂದ ತರುವುದು?

ನಾನಂತೂ ‘ದೇವರ ಪರೀಕ್ಷೆ’ ಎಂದು ಹೇಳಿ ಪಾಪ ಕಟ್ಟಿಕೊಳ್ಳುವುದಿಲ್ಲ. ಅದು ದೈವ ನಿಂದನೆ ಅಲ್ಲದೆ ಬೇರೇನೂ ಅಲ್ಲ ಎಂದು ನಾನು ತಿಳಿದಿದ್ದೇನೆ. ಆದರೆ ಏನುಮಾಡುವುದು, ನೀವು, ‘ದೇವರನ್ನು ನಂಬುವವರು’ ದೇವರನ್ನು ತಿಳಿಯುವವರಲ್ಲ!! ಆ ನಂಬಿಕೆ ಎಂಬ ಮಾತನ್ನು ಮುಂದಿಟ್ಟು ದೇವರನ್ನು ಹೇಗೆ ಬೇಕಾದರೂ ವಿವರಿಸುತ್ತೀರಿ, ಅಲ್ಲಿ ಸರಿ, ತಪ್ಪು ಮತ್ತು ಒಳಿತು ಕೆಡುಕಿನ ಚಿಂತನೆಯನ್ನು ಯಾರೂ ಮಾಡುವವರಿಲ್ಲ, ಹಾಗೆ ಮಾಡಿದಲ್ಲಿ, ಅದೇ ನಿಮ್ಮ ರೀತಿಯಲ್ಲಿ ದೈವ ನಿಂದನೆಯಾಗಿಬಿಡುವುದು!!!

ನಂಬಿಕೆಯನ್ನು ಹಿಡಿದು ಮಾಡುವ ಆ ಪ್ರಾಚೀನ ವಾಮಾಚಾರದ ಮೋಸವು ಅತ್ಯಂತ ಶಕ್ತಿಯುತವಾಗಿದೆ ಎಂಬುವುದನ್ನು ಇವು ಮತ್ತೂ ದೃಢಪಡಿಸುವವು.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||