ಹೆಚ್ಚಿನವರು ಧರ್ಮದ ಹೆಸರಲ್ಲಿ ಮಾಡುವ ತಪ್ಪು ಅದು ಧರ್ಮಕ್ಕೆ ಸಂಬಂಧಿಸಿಲ್ಲ ಎನ್ನುವರು. ಈಗ ಧರ್ಮ ಎಂದರೇನು? ಅದು, ತಾನೂ ಚೆನ್ನಾಗಿದ್ದು ಇತರರೂ ಚೆನ್ನಾಗಿರಬೇಕೆಂಬ ನಿಲುವು. ಇದು ವ್ಯಕ್ತಿಯಾದರೂ ಸಮಾಜವಾದರೂ ಇದೊಂದೇ ನಿಲುವು ಇರುವುದು. ತಮ್ಮ ಸ್ವಾರ್ಥದಿಂದಾಗಿ ಇತರರಿಗೆ ತೊಂದರೆಯಾಗುವ ಕಳ್ಳರು ಇತ್ಯಾದಿ ಕಿಡಿಗೇಡಿಗಳನ್ನು ಶಿಕ್ಷಿಸುವುದು ಮತ್ತು ಉತ್ತಮರನ್ನು ರಕ್ಷಿಸುವುದು ಧರ್ಮದ ಕೆಲಸ ಅಷ್ಟೆ. ಹೆಚ್ಚು ವಿವರಿಸದೆ, ಒಂದೇ ವಾಕ್ಯದಲ್ಲಿ ಅದನ್ನು ತಿಳಿಯಬಹುದು. ಧರ್ಮದೊಳಗೆ ಕೆಡುಕು ಮಾಡುವಾಗ ಅದು ಧರ್ಮಕ್ಕೆ ಸಂಬಂಧಿಸಿದುದಲ್ಲವಾದರೆ, ಇನ್ನು, ನಿಮ್ಮ ಧರ್ಮದೊಳಗಿದ್ದ ಮತ್ತು ಇರುವ, ನಿಮ್ಮ ಧರ್ಮದ ಬೆನ್ನೆಲುಬು ಆಗಿರುವ, ಆ ಮಹಾ ವ್ಯಕ್ತಿಗಳು ಎಲ್ಲರೂ ನಿಮ್ಮ ಧರ್ಮಕ್ಕೆ ಸಂಬಂಧಿಸಿದವರಲ್ಲ ಎಂದು ಹೇಳಬೇಕಾಗುವುದು, ಯಾಕೆಂದರೆ ಎರಡು ವರ್ಗದವರೂ ಧರ್ಮವು ಮಾಡುತ್ತಿರುವ ಆ ಒಂದೇ ಪರೀಕ್ಷೆಗೆ ಹಾಜರಾದವರಾಗಿರುವರು. ಇನ್ನು, ಬೇರೆ ರೀತಿಯಲ್ಲಿ ನೋಡುವಾಗ, ನಿಮ್ಮ ಧರ್ಮದ ಮಹಾತ್ಮರಿಗೆ ಮತ್ತು ನಿಮ್ಮ ದೇವರಿಗೆ ಅಥವಾ ಪ್ರವಾದಿಗಳಿಗೆ ಸ್ವಲ್ಪವೂ ಅಪಮಾನವಾಗುವಂತೆ ಯಾರಾದರೂ ವರ್ತಿಸಿದರೆ, ನೀವು ಸುಮ್ಮನೆ ಇರುವುದಿಲ್ಲ ಅಲ್ಲವೇ? ಆದರೆ ನಿಮ್ಮ ಧರ್ಮದಲ್ಲಿ ಇಷ್ಟೆಲ್ಲಾ ಅನ್ಯಾಯದ ಪಾಪಕರ್ಮಗಳ ಸುರಿಮಳೆ ನಡೆವಾಗ ನಿಮಗೆ ಏನೂ ಅನಿಸುವುದಿಲ್ಲ, ಅಪಮಾನವಾಗುವುದಿಲ್ಲ, ಇದು ಆಶ್ಚರ್ಯಗಳಲ್ಲಿ ಅತಿ ದೊಡ್ಡದು! ದಿನ ನಿತ್ಯ ಧರ್ಮವನ್ನು ಅತ್ಯಂತ ನೀಚವಾಗಿ ಚಿತ್ರಿಸುವ ಮತ್ತು ಆ ಹೆಸರಲ್ಲಿ ಶೋಷಣೆ, ರಕ್ತಪಾತ ಮಾಡುವಾಗ ನಿಮ್ಮ ಧಾರ್ಮಿಕ ಬೋಧ ಮತ್ತು ಆ ಆವೇಶ ಎಲ್ಲಿ ಹೋಯಿತು? ಜಗತ್ತೇ ಯಾಕೆ ಎದ್ದು ನಿಂತು ಪ್ರಭಲವಾಗಿ ಖಂಡಿಸುವುದಿಲ್ಲ? ಆ ಜಾತೀ ಶೋಷಣೆ, ಅನಾಚಾರಗಳು, ಧರ್ಮಾಂಧರ ಹಿಂಸೆ, ರಕ್ತಪಾತ ಇವೆಲ್ಲಾ ಧರ್ಮವನ್ನು ಎತ್ತಿ ಹಿಡಿಯುವ ಚಟುವಟಿಕೆಯೇ? ಯಾರಾದರೂ ಮಾತನಾಡುವಾಗ, ಬರೆಯುವಾಗ ಒಂದು ಶಬ್ಧ ಹೆಚ್ಚು ಆದರೆ ಆಗ ಮಾತ್ರ ಜಗತ್ತೇ ಎದ್ದು ನಿಂತು ಧರ್ಮ ನಿಂದನೆ ಎಂದು ಇರುವ ಆವೇಶವನ್ನೆಲ್ಲಾ ಅಲ್ಲಿಗೆ ಹಾಕಿ, ನಿಮ್ಮ ಧರ್ಮವನ್ನು ರಕ್ಷಿಸುವ ಕ್ರಿಯೆಯನ್ನು ಅಲ್ಲಿಗೆ ಮುಕ್ತಾಯ ಮಾಡುವಿರಿ. ಅದೇ ವೇಳೆ ತಮ್ಮ ತಮ್ಮ ಧರ್ಮದೊಳಗೆ ಕೆಟ್ಟತನ ಆಕಾಶದೆತ್ತರಕ್ಕೆ ಬೆಳೆದರೂ ಯಾರಿಗೂ ಅದು ಧರ್ಮ ನಿಂದನೆ ಆಗುವುದೇ ಇಲ್ಲ, ಧರ್ಮದ ಮೇಲಿನ ಪ್ರೀತಿ, ಆ ಆವೇಶ ಅಲ್ಲಿ ಕಾಣಿಸುವುದು ಕೂಡಾ ಇಲ್ಲ! ನಿಜವಾಗಿಯೂ ಧರ್ಮ ಯಾರಿಗೆ ಬೇಕು? ಎಲ್ಲವೂ ಸ್ವಾರ್ಥ. ಈ ಸ್ವಾರ್ಥದಿಂದ ಇನ್ನು ಎಷ್ಟು ಕಾಲ ಈ ಯಾಂತ್ರಿಕ ಧರ್ಮವನ್ನು ಕಾಪಾಡಲು ಸಾಧ್ಯ? ಜಗತ್ತಿನ ಎಲ್ಲೆಡೆಯೂ ಧರ್ಮವನ್ನು ತಮಗೆ ಹೇಗೆ ಬೇಕೋ ಹಾಗೆ ಚಿತ್ರಿಸಿಕೊಳ್ಳುತ್ತಾರೆ ಮತ್ತು ಅದರ ಲಾಭವನ್ನು ಪಡೆಯುತ್ತಾರೆ ಅಷ್ಟೆ. ಆ ಪ್ರಾಚೀನ ವಾಮಾಚಾರವು ಪೂರ್ತಿಯಾಗಿ ಈ ಜಗತ್ತನ್ನು ಗೆಲ್ಲಲು ಇನ್ನು ಬಹಳ ಕಡಿಮೆ ದೂರವೇ ಇರುವುದೆಂದು ಇದು ಸ್ಪಷ್ಟಪಡಿಸುವುದು!
ಆದುದರಿಂದ, ಧರ್ಮದ ಹೆಸರಲ್ಲಿ ಅಯಾ ಧರ್ಮದೊಳಗೆ ಮಾಡುವ ಅನಾಚಾರ,ಅನೈತಿಕತೆ, ಶೋಷಣೆ, ಹಿಂಸೆ, ರಕ್ತಪಾತಗಳೆಂಬ ಪಾಪಕರ್ಮಗಳು, ಇವೇ ನಿಜವಾದ ಮತ್ತು ಅತ್ಯಂತ ಭಯಾನಕವಾದ ದೈವ ನಿಂದನೆ ಮತ್ತು ಧರ್ಮನಿಂದನೆಯಾಗುವುದು. ಅದರ ಬಗ್ಗೆ ಕಾಳಜಿ ವಹಿಸದೆ, ಮತ್ತು ಅದು ತಮಗೆ ಸಂಬಂಧಿಸಿಲ್ಲ ಎಂದು ಹೇಳುವವರೇ ಆ ನಿಜವಾದ ನಾಸ್ತಿಕರು ಎನ್ನಬಹುದು.