ಧರ್ಮ ಎಂದರೆ ಒಂದು ಗ್ರಂಥವೇ? ಸ್ವಲ್ಪ ನಂಬಿಕೆಗಳ ಆಚರಣೆಗಳೇ? ದೇವರೇ? ಸ್ವರ್ಗವೇ? ಮೋಕ್ಷವೇ? ಇವುಗಳಲ್ಲಿ ಯಾವುದೂ ಧರ್ಮದ ಭಾಗವಲ್ಲ! ಜನರು ಈ ಎಲ್ಲಾ ಆಧ್ಯಾತ್ಮಿಕ ವಿಚಾರಗಳನ್ನೇ ಧರ್ಮ ಎಂದು ತಪ್ಪು ತಿಳಿದುಕೊಂಡಿರುವರು. ಅಂದರೆ, ಆಧ್ಯಾತ್ಮ ಮತ್ತು ಧರ್ಮವು ಬೇರೆ ಬೇರೆ ಎಂದು ಅರ್ಥ. ಆಧ್ಯಾತ್ಮ ಇಲ್ಲದೆ ಧರ್ಮಕ್ಕೆ ಅಸ್ತಿತ್ವ ಇದೆ, ಆದರೆ ಧರ್ಮ ಇಲ್ಲದೆ ಆಧ್ಯಾತ್ಮಕ್ಕೆ ಅಸ್ತಿತ್ವವಿರುವುದಿಲ್ಲ. ಯಾಕೆಂದರೆ ಧರ್ಮವು ಮಾನವನ ಸ್ವಭಾವ ಶುದ್ಧಿಯನ್ನು ಹೇಳುವುದು. ಈ ಸ್ವಭಾವ ಶುದ್ಧಿ ಇಲ್ಲದೆ ಯಾವ ಸ್ವರ್ಗ ಅಥವಾ ಮೋಕ್ಷಗಳು ಈ ಜಗತ್ತಿನ ಯಾವ ತರದ ಆಧ್ಯಾತ್ಮಕ್ಕೂ ಸಾಧ್ಯವಾಗದು!! ಇನ್ನು, ದೇವರೇ ಇಲ್ಲದ ಧರ್ಮಗಳೂ ಇವೆ, ಮಾತ್ರವಲ್ಲ ಒಂದೇ ಧರ್ಮದೊಳಗೆ ಹಲವು ದೇವರು ಮತ್ತು ಅವುಗಳ ಹಲವು ರೀತಿಯ ಮೋಕ್ಷಗಳು ಇವೆ, ಎಂದೆಲ್ಲಾ ಆಗುವಾಗ, ಒಂದು ಧರ್ಮವನ್ನು ಯಾರಿಗೂ ಸ್ಪಷ್ಟವಾಗಿ ನಿರ್ವಚಿಸಲು ಸಾಧ್ಯವಾಗದಷ್ಟು ಗೊಂದಲಮಯವಾಗಿ ಹೋಯಿತು. ಇನ್ನು, ಇಂದು, ಧರ್ಮಗಳು ನಿರ್ವಚಿಸಲ್ಪಟ್ಟಿರುವುದು “ಒಂದು ಧರ್ಮಗ್ರಂಥ ಮತ್ತು ಅದರ ನಂಬಿಕೆ ಮತ್ತು ಆಚರಣೆಗಳನ್ನಾಗಿದೆ” ಎಂದು ನಮಗೆ ಎಲ್ಲರಿಗೂ ತಿಳಿದಿದೆ!! ಇದು ಧರ್ಮದ ನಿಜವಾದ ನಿರ್ವಚನೆಯೇ?
ಧರ್ಮ ಮತ್ತು ಆಧ್ಯಾತ್ಮವು ಜಗತ್ತಿನ ಯಾವುದೇ ಧರ್ಮದ ಎರಡು ಬೇರೆ ಬೇರೆ ಭಾಗಗಳಾಗಿವೆ. ಎಲ್ಲೆಡೆಯೂ ಇವು ಎರಡೂ ಮಿಶ್ರವಾಗಿಯೇ ಇರುವುದು. ಆದುದರಿಂದಲೇ ಧರ್ಮ ಎಂದ ಕೂಡಲೇ ಆ ಆಚಾರ, ನಂಬಿಕೆಗಳ ನೆನಪು ಮಾತ್ರ ಬಂದು ಅವುಗಳ ವೈರುಧ್ಯಗಳ ಹಿನ್ನೆಲೆಯಲ್ಲಿ ಧ್ವೇಷ, ರಕ್ತಪಾತವಾಗುವುದು. ಆದರೆ, ನಿಜವಾಗಿಯೂ ಧರ್ಮವು “ಇತರರು ಮತ್ತು ತಾನು ಚೆನ್ನಾಗಿ ಜೀವಿಸಬೇಕು” ಎಂಬ ರೀತಿಯಲ್ಲಿ ಒಂದು ಸಮಾಜಕ್ಕೆ ಬೇಕಾಗಿರುವ ವ್ಯಕ್ತಿ ಮತ್ತು ಸಮಾಜಿಕ ನಿಯಮಗಳು ಮಾತ್ರವಾಗಿವೆ. ಈ ನಿಯಮಗಳು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಹಿನ್ನೆಲೆಯಲ್ಲೇ ಇರುವ ಕಾರಣ, ಮತ್ತು ಅಲ್ಲಿ ಆಚಾರಗಳು, ದೇವರು, ಸ್ವರ್ಗ ಇತ್ಯಾದಿಗಳ ವೈರುಧ್ಯಗಳು ಇಲ್ಲದ ಕಾರಣ, ಧರ್ಮದೊಳಗೆ ಧ್ವೇಷ, ರಕ್ತಪಾತ ನಡೆಯುವ ಸಾಧ್ಯತೆ ಇರುವುದಿಲ್ಲ. ಇನ್ನು, ಆಧ್ಯಾತ್ಮವನ್ನು ಬೇರೆಯಾಗಿ ನೋಡಿದಾಗ, ಆಧ್ಯಾತ್ಮವು ಅವರವರ ಆಯ್ಕೆ ಎಂದು ಮಾತ್ರ ಆಗುವ ಕಾರಣ, ಯಾರೂ ಅದರ ಹಿನ್ನೆಲೆಯಲ್ಲಿ ರಕ್ತಪಾತ ಮಾಡಲಾರರು. ಹೀಗೆ ಜಗತ್ತಿನಲ್ಲಿ ಶಾಂತಿಯು ನೆಲೆಯಾಗಲು ಸಾಧ್ಯವಾಗುವುದು. ಇದುವೇ ಇವೆರಡನ್ನು ಮಿಶ್ರ ಮಾಡದೆ, ಪ್ರತ್ಯೇಕವಾಗಿ ತಿಳಿಯುವುದರಿಂದ ಜಗತ್ತಿಗೆ ಸಿಗುವ ಲಾಭವಾಗಿರುವುದು.
ಧರ್ಮದ ಅಡಿಪಾಯದಿಂದ ನೋಡುವಲ್ಲಿ ಧರ್ಮದ ಅರ್ಥವು ತ್ಯಾಗದ ಜೀವನ ಎಂದಾಗಿದೆ. ಅಧರ್ಮ ಎಂದರೆ ಸ್ವಾರ್ಥದ ಜೀವನ ಎಂದು ಅರ್ಥ. ಧರ್ಮ ಅಥವಾ ತ್ಯಾಗದ ಜೀವನವನ್ನು ಬಹಳ ಸರಳವಾಗಿ ನಿರ್ವಚಿಸುವುದಾದರೆ, ಅದು, “ಇತರರೂ ಚೆನ್ನಾಗಿ ಜೀವಿಸಬೇಕು ಮತ್ತು ತಾನೂ ಚೆನ್ನಾಗಿ ಜೀವಿಸಬೇಕು ಎಂಬ ರೀತಿಯಲ್ಲಿನ ಸಾಮಾಜಿಕ ಮತ್ತು ವ್ಯಯಕ್ತಿಕ ನಿಯಮಗಳು” ಎಂದು ಹೇಳಬಹುದು. ಯಾವುದೋ ಒಂದು ದೇವರನ್ನು ನಂಬುವುದೋ, ಪುರಾಣ ಕಥೆಯನ್ನು ಪಠಿಸುವುದೋ, ಮತಾಂತರ ಮಾಡುವುದೋ, ಪ್ರಾಣಿಯನ್ನು ಕೊಂದು ತ್ಯಾಗವೆಂದು ಹೇಳಿ ಧರ್ಮ ಮಾರ್ಗಿಗಳಾಗುವುದೋ, ವರ್ಣಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಶೂದ್ರನನ್ನು ದೂರವಿರಿಸುವುದೋ, ಇವು ಯಾವುದೂ ಧರ್ಮವಲ್ಲ. ಅವು ಧರ್ಮದ ಹತ್ತಿರಕ್ಕೂ ಬರಲಾರದ ಸ್ವಾರ್ಥ ರೀತಿಯ ಶೋಷಣೆಗಳು ಮಾತ್ರ. ಇನ್ನು, ಧರ್ಮವು ಇತರರೂ ಮತ್ತು ತಾನೂ ಚೆನ್ನಾಗಿ ಇರಲು ಒಬ್ಬಾತನು ಏನೆಲ್ಲಾ ಮಾಡಲು ಸಾಧ್ಯ ಅದನ್ನು ಮಾಡಲು ಮಾನವನಿಗೆ ಸೂಚನೆ ನೀಡುವುದು ಅಷ್ಟೆ. ಇದಕ್ಕೆ ಗ್ರಂಥಗಳ ಅಗತ್ಯವಿಲ್ಲ, ಅದನ್ನು ಅರ್ಥ ಮಾಡಿಸಿ ಕೊಡುವ ಗುರುವಿನ ಅಗತ್ಯವಿಲ್ಲ. ಯಾಕೆಂದರೆ ಎಲ್ಲರಿಗೂ ಇತರರು ತನಗೆ ತೊಂದರೆ ಯಾವುದೆಲ್ಲಾ ರೀತಿಯಲ್ಲಿ ಕೊಡುವರು ಎಂದು ಸ್ಪಷ್ಟವಾಗಿ ಗೊತ್ತಿದೆ, ಮತ್ತು ಆ ತೊಂದರೆಗಳನ್ನು ತಾನು ಇತರರಿಗೆ ಮಾಡದಿದ್ದರೆ ಅದೇ ಧರ್ಮ ಆಗುವುದು. ಸಾರಧರ್ಮವು ಮಾನವರೆಲ್ಲರೂ ಸಮಾನರು ಎಂದು ಹೇಳುವುದು, ಆದರೆ ಯಾವಾಗ ತಾನು ಅಥವಾ ತಾವು, ವರ್ಣ, ಜಾತಿ, ಧರ್ಮಗಳಲ್ಲಿ ಇತರರಿಗಿಂತ ಮೇಲಿನವ ಅಥವಾ ಮೇಲಿನವರು ಎಂದು ಸಾಧಿಸಿ ಅದರಿಂದ ಲಾಭಪಡೆಯಬೇಕೋ, ಆಗ, ಮೊದಲಿಗೆ, ಇತರರ ಒಳಿತನ್ನು ಮುಖ್ಯವಾಗಿ ಕಾಣುವ ಆ ಸಾರಧರ್ಮದ ಹೃದಯವನ್ನೇ ನಾಶಮಾಡಬೇಕಾಗಿ ಬರುವುದು. ಹಾಗೆ ಮಾಡುವಾಗ, ಆ ಗುಟ್ಟು ಯಾರಿಗೂ ತಿಳಿಯದ ಹಾಗೆ ಮಾಡುವಲ್ಲಿ ಮಾತ್ರ ಧರ್ಮವನ್ನು ದೊಡ್ಡ ದೊಡ್ಡ ವಿವರಣೆಗಳೊಂದಿಗೆ ದೊಡ್ಡದಾಗಿ ಚಿತ್ರಿಸುವ ಅಗತ್ಯ ಬರುವುದು! ಆಗ ಅದಕ್ಕೆ ಗ್ರಂಥಾಲಯವೇ ಅಗತ್ಯವಾಗುವುದು. ಇನ್ನೊಂದು ವಿಷಯವನ್ನೂ ದಯವಿಟ್ಟು ತಿಳಿಯಲು ಪ್ರಯತ್ನಿಸಬೇಕು. ಧರ್ಮವು ಆಯಾ ಸಮಾಜ ಕಂಡುಹಿಡಿದಿರುವ ಶಾಸ್ತ್ರಗಳಿಕೆಗಳು ಅಲ್ಲ. ಎಲ್ಲಾ ಧರ್ಮಗಳಲ್ಲೂ ಆ ರೀತಿಯ ಶಾಸ್ತ್ರಗಳು ಹಲವು ಇವೆ. ಅವನ್ನು ಆ ಕಾಲದ ಜನರ ವೈಜ್ಞಾನಿಕ ಕಂಡುಹಿಡಿಯುವಿಕೆ ಎಂಬಲ್ಲಿ ಮಾತ್ರ ಹೇಳಬಹುದಷ್ಟೆ. ಉದಾಹರಣೆಗೆ, ಎಲ್ಲಾ ಧರ್ಮಗಳಲ್ಲೂ ಹಿಂದಿನಿಂದಲೇ ಅವರದೇ ಆದ ವೈದ್ಯರು ಮತ್ತು ಔಷದಿಗಳು ಎಲ್ಲಾ ಇದ್ದವು. ಇವೆಲ್ಲ ಧರ್ಮದೊಂದಿಗೆ ಸೇರಿಸಿಕೊಳ್ಳುವುದು ಸರಿಯಲ್ಲ. ಹಾಗಿದ್ದರೆ, ಪಾಶ್ಚಾತ್ಯ ದೇಶದವರು ಕಂಡು ಹಿಡಿದ ಸರ್ವವನ್ನೂ ಅವರ ಧರ್ಮದೊಂದಿಗೆ ಹೋಲಿಸಿದರೆ, ಇನ್ನಾವ ಧರ್ಮಕ್ಕೂ ಆ ಧರ್ಮದ ಮುಂದೆ ನಿಲ್ಲಲು ಸಾಧ್ಯವಾಗಲಾರದು!! ಹೀಗೆ, ಗ್ರಂಥವಿಲ್ಲದ, ಮತ್ತು ಮಂತ್ರ, ತಂತ್ರಗಳಿಲ್ಲದ, ಬರೇ ‘ಇತರರು ಮತ್ತು ತಾನೂ ಚೆನ್ನಾಗಿ ಜೀವಿಸುವ’ ಆ ಆದರ್ಶಗಳ ಅನುಷ್ಠಾನವಾದ ‘ಧರ್ಮ’ವು ಇಷ್ಟೆಲ್ಲಾ ಗೊಂದಲಗಳೊಳಗೆ ಹುದುಗಿ ಹೋಗಿರುವುದು ನಮಗೆ ಸ್ಪಷ್ಟವಾಗಿ ಕಾಣಿಸುವುದು. ನಿಜವಾಗಿಯೂ, ಧರ್ಮವು ಅತಿ ಸರಳವಾಗಿದೆ ಮತ್ತು ಚಿಕ್ಕ ಮಕ್ಕಳಿಗೂ ಅದನ್ನು ಪೂರ್ಣವಾಗಿ ಅನುಷ್ಠಿಸಲೂ ಸಾಧ್ಯವೆಂಬ ರೀತಿಯಲ್ಲಿ ಸ್ಪಷ್ಟವಾಗಿದೆ. ಇದನ್ನು ಸರ್ವ ಧರ್ಮಗಳಲ್ಲೂ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಲ್ಲಿ ಅದು ಒಂದು ಅದ್ಭುತ ಸತ್ಯಯುಗವನ್ನೇ ಸೃಷ್ಟಿಸುವುದು. ಎಲ್ಲರ ನಂಬಿಕೆ, ಆಚಾರಗಳು ಇದರಿಂದ ಇಲ್ಲವಾಗುವುದಿಲ್ಲ. ಆದರೆ ಅವನ್ನು ಪ್ರತ್ಯೇಕಿಸಿ ಆಧ್ಯಾತ್ಮವೆಂದು ಗುರುತಿಸಿ ಅವರವರ ಆಯ್ಕೆಯ ರೀತಿಯಲ್ಲಿ ಪಾಲಿಸಿಕೊಳ್ಳಬಹುದು. ಅಲ್ಲಿ, ಅವರು ಅವರ ದೇವರಿಂದ ಅವರ ರೀತಿಯಲ್ಲೇ ಅನುಗ್ರಹವನ್ನು ಪಡೆಯಬಹುದು. ಅದೇ ರೀತಿ, ಸತ್ತ ನಂತರ ಅವರವರ ದೇವರ ಲೋಕವನ್ನು ಸೇರುವುದೋ ಅಥವಾ ಇನ್ನಿತರ ಸ್ವರ್ಗಲೋಕಗಳನ್ನು ಸೇರುವುದೋ, ಅವೆಲ್ಲವನ್ನು ಅವರವರ ಇಷ್ಟದಂತೆ ಮಾಡಿಕೊಳ್ಳಬಹುದು.
ಇನ್ನು ಉಳಿದಿರುವುದು, ಈ ‘ಇತರರೂ ಚೆನ್ನಾಗಿರಬೇಕು ಮತ್ತು ತಾನೂ ಚೆನ್ನಾಗಿರಬೇಕು’ ಎಂಬಲ್ಲಿ ಆ ಆದರ್ಶವನ್ನು ಹೃದಯಕ್ಕೆ ತರಲು ಮಾನವರಿಗೆ ಸುಲಭದ ಸಾಧನೆ ಏನು ಎಂದಾಗಿದೆ. ಬರೇ ನಿಯಮಗಳಿದ್ದಲ್ಲಿ ಸಮಾಜವು ಉದ್ದಾರವಾಗಲಾರದು, ಅಲ್ಲಿ ರಹಸ್ಯವಾಗಿ ಮೋಸ, ವಂಚನೆಗಳು ತಾಂಡವವಾಡುವವು ಅಷ್ಟೆ. ಆದುದರಿಂದಲೇ ಈ ಧರ್ಮವು ಮಾನವನ ಹೃದಯದಲ್ಲಿ ಹುಟ್ಟಬೇಕು ಎನ್ನುವುದು. ಇದನ್ನು ಹೇಗೆ ಸಾಧಿಸಬಹುದು ಎಂದು ನೋಡೋಣ. ಇದನ್ನು ಅರಿಯುವುದು ಬಹಳ ಸುಲಭವಾಗಿದೆ. ಇತರರು ಚೆನ್ನಾಗಿರಬೇಕು ಎಂಬಲ್ಲಿ ಮಾನವನಿಗೆ ಯಾವ ಭಾವನೆ ಬೇಕು ಎಂದು ಆಲೋಚಿಸುವಾಗ ಅದು ನಿಸ್ವಾರ್ಥ ಭಾವನೆ ಎಂದು ಸ್ಪಷ್ಟವಾಗುವುದು. ಇನ್ನು, ಈ ನಿಸ್ವಾರ್ಥ ಭಾವನೆಯನ್ನು ಸುಲಭದಲ್ಲಿ ಹೇಗೆ ಬೆಳೆಸಬಹುದೆಂದು ನೋಡಬೇಕಾಗಿದೆ. ಬರೇ ಮಾತುಗಳು ಕಂಠಪಾಠದ ತರವಾಗಿ ಪ್ರಾಯೋಗಿಕವಾಗಲಾರದು, ಅದಕ್ಕೆ ಮಾನವನು ಈ ಭಾವನೆಯನ್ನು ಬೆಳೆಸುವ ದಾರಿಯನ್ನು ನೋಡಬೇಕಾಗಿದೆ. ತನಗೆ ತೊಂದರೆಗಳು ಬರಬಾರದು ಎಂದು ಆಗ್ರಹಿಸುವಲ್ಲಿ ಅವು ಇತರರಿಗೂ ಬರಬಾರದು ಎಂಬ ನಿಸ್ವಾರ್ಥ ಭಾವನೆಯನ್ನು ನಮಗೆ ಆ ಸಾರ್ವತ್ರಿಕ ಸತ್ಯ, ಸಾರ್ವತ್ರಿಕ ಪ್ರೀತಿ, ಮತ್ತು ಆ ಸಾರ್ವತ್ರಿಕ ನೈತಿಕತೆಯ ಹಿನ್ನೆಲೆಯಲ್ಲಿ ಮಾತ್ರ ಪಡೆಯಲು ಸಾಧ್ಯವಾಗುವುದು. ಇವುಗಳ ಹಿನ್ನೆಲೆ ಇಲ್ಲದೆ ಯಾವ ಕಾಲಕ್ಕೂ ನಾವು ನಿಸ್ವಾರ್ಥಿಗಳಾಗಲಾರೆವು. ಆದುದರಿಂದ ಈ ಮೂರು ಸ್ವಭಾವಗಳ ಹಿನ್ನೆಲೆಯಲ್ಲಿ ನಾವು ಗುಂಪು, ಗುಂಪುಗಳಾಗಿ ಮನೆ ಮನೆಗಳಲ್ಲಿ ಮತ್ತು ಆರಾಧನಾಲಯಗಳಲ್ಲಿ ಕುಳಿತು ಆಗಾಗ್ಗ ಸತ್ಯಚಿಂತನೆ ಎಂಬ ಆ ಧರ್ಮಜೀವನ ಅಥವಾ ಸತ್ಯಜೀವನವನ್ನು ಪಡೆಯುವ ಆ ತರ್ಕಚಿಂತನೆಯನ್ನು ಮಾಡಬೇಕಾಗಿದೆ. ಇದರೊಂದಿಗೆ, ಎಲ್ಲಾ ಧರ್ಮ, ಪಂಥದವರೂ ಸೇರಿರುವ ಆ ಸಾರ್ವಜನಿಕ ಸತ್ಯಚಿಂತನೆಯನ್ನೂ ಆಗಾಗ್ಗ ಮಾಡುವುದಾದರೆ, ಆ ಸತ್ಯಯುಗವು ನಮ್ಮೆಲ್ಲರ ಮನೆಬಾಗಿಲಿಗೆ ಬಂದೇಬಿಡುವುದು!!! ಸತ್ಯಯುಗವನ್ನು ಯಾವ ರಾಜರಿಗೂ ಸೃಷ್ಟಿಸಲು ಸಾಧ್ಯವಾಗುವುದಿಲ್ಲ, ಇದನ್ನು ಯಾವ ಸರಕಾರಕ್ಕೂ ಸೃಷ್ಟಿಸಲು ಸಾಧ್ಯವಾಗುವುದಿಲ್ಲ, ಮಾತ್ರವಲ್ಲ, ಇದನ್ನು ಯಾವ ಪಾಂಡಿತ್ಯದಿಂದಲೂ ಸೃಷ್ಟಿಸಲು ಸಾಧ್ಯವಿಲ್ಲ, ಆದರೆ ಇದನ್ನು ಮಾನವರ ಹೃದಯಗಳಿಗೆ ಮಾತ್ರ ಸೃಷ್ಟಿಸಲು ಸಾಧ್ಯವಾಗುವುದು ಎಂಬುವುದನ್ನು ನಾವು ಮರೆಯಬಾರದು.