ಸಾರ್ವತ್ರಿಕ ಸತ್ಯವೆಂಬುವುದು ಧರ್ಮ, ಪಂಥಗಳ ಉಸಿರು, ಅದಿಲ್ಲವಾದರೆ ಯಾವ ಧರ್ಮವೂ ಇರುವುದಿಲ್ಲ ಮಾತ್ರವಲ್ಲ, ಈ ಸತ್ಯದಿಂದಲೇ ಇತರ ಅವುಗಳ ಭಾಗಗಳ ಪ್ರೀತಿ, ನೈತಿಕತೆ ಇತ್ಯಾದಿ ಉದಯವಾಗಿರುವುದು. ಆಗ, ಎಲ್ಲಾ ಧರ್ಮ, ಪಂಥಗಳಲ್ಲೂ ಸಾರ್ವತ್ರಿಕವಾಗಿರುವ ಸತ್ಯವು ಇರಲೇಬೇಕು ಎಂದಾಯಿತು. ಇನ್ನು, ದೇವರು, ಮಹಾತ್ಮರು ಹಾಗೂ ಪ್ರವಾದಿ ಇತ್ಯಾದಿ ಮಧ್ಯವರ್ತಿಗಳು ಅದನ್ನು ಹುಡುಕಿ ಜನರಿಗೆ ಹೇಳುವುದೊಂದೇ ಕೆಲಸವಾಗುವಾಗ, ಧರ್ಮವನ್ನು ಸೃಷ್ಟಿಸುವ ಕೆಲಸವನ್ನು ಹೇಗೆ ಮಾಡಲು ಸಾಧ್ಯ? ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ಸಾರ್ವತ್ರಿಕ ಸತ್ಯವನ್ನು ಜಗತ್ತಿಗೆ ಕೊಟ್ಟಾಗ, ಯಾರೂ ಅದರ ಹಕ್ಕುಪತ್ರವನ್ನು ನಮ್ಮ ಧರ್ಮ, ಪಂಥ, ಗುರುಪರಂಪರೆ ಎಂಬ ರೂಪಗಳಲ್ಲಿ ಪಡೆಯಲೆಂದು ಜಗತ್ತಿನ ಮುಂದಿಡಲು ಸಾಧ್ಯವಿಲ್ಲ! ಹೀಗಿರುವಾಗ ಮಾನವನು ತಮ್ಮ ಧರ್ಮ, ಪಂಥಗಳಿಗೆ ನಾಮಕರಣ ಮಾಡಿ ಅದನ್ನು ತಮ್ಮದೇ ಎಂದು ಹೇಳಿಕೊಳ್ಳುವುದು ಶುದ್ಧ ಮೂರ್ಖತನವಾಗುವುದು. ಈ ರೀತಿಯಲ್ಲಿ ಧರ್ಮ, ಪಂಥ, ಪರಂಪರೆಯೆಂದು ಕೊಚ್ಚಿಕೊಳ್ಳುವವರು, ಮತಾಂಧತೆಯ ಅಪಾಯಕಾರಿ ಜನರು ಮಾತ್ರವಲ್ಲದೆ ಮೂರ್ಖರೂ ಆಗುವರು ಎಂದು ಸ್ಪಷ್ಟವಾಗುವುದು. ಇಲ್ಲೆಲ್ಲಾ ಬರೇ ಅವರವರ ಆ ಪ್ರತ್ಯೇಕ ಆಚಾರ, ನಂಬಿಕೆಗಳ ಸಾರರಹಿತ ಗೊಜ್ಜಿನ ಚೀಲಗಳನ್ನು ಮಾತ್ರ ಈ ಧರ್ಮ, ಪಂಥಗಳು ತಮ್ಮ ಪ್ರತ್ಯೇಕ ಧರ್ಮವೆಂದು ಹೆಸರಿಸಿರುವುದು ಎಂಬುವುದು ಮತ್ತೂ ಸ್ಪಷ್ಟವಾಗುವುದು!!!