ವಿಶಾಲ ಮನಸ್ಕತೆಯೇ ಧರ್ಮ, ಮತ್ತು ಆತ್ಮ ಪರಿಶೋಧನೆಯೇ ಅದನ್ನು ಪಡೆಯಲಿರುವ ದಾರಿಯಾಗಿದೆ. ನಾವು ಎಷ್ಟೇ ಕಷ್ಟ ಪಟ್ಟು ಬೇರೆ ರೀತಿಯಲ್ಲಿ ವಿವರಿಸಿದರೂ ಅಂತ್ಯದಲ್ಲಿ ಇಲ್ಲಿಗೆ ಬರಲೇಬೇಕು. ಅದರ ಬದಲು ಆ ಸಾರವನ್ನು ಮೊದಲಲ್ಲೇ ಅರಿಯುವುದು ಉತ್ತಮ [ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯು ವಿಶಾಲ ಮನಸ್ಕತೆಯ ಸ್ವಭಾವವಾಗಿದೆ, ಮತ್ತು ಸತ್ಯಚಿಂತನೆಯು ಆತ್ಮ ಪರಿಶೋಧನೆಯ ಉಪಕರಣವಾಗಿದೆ.] ಸಾವಿರಾರು ಧರ್ಮಗ್ರಂಥಗಳು ಮತ್ತು ಪಂಥಗ್ರಂಥಗಳು ಈ ಸತ್ಯವನ್ನು ಪೂರ್ತಿಯಾಗಿ ಗೊಂದಲದಲ್ಲಿ ಹೂತುಹಾಕಿವೆ!! ಆದರೆ ಅಲ್ಲಿ ನೋಡಿ, ಮಹಾತ್ಮರು ನಸುನಗುವರು, ಧರ್ಮದ ವಿಷಯವಾಗಿ, ಪಂಥ, ಪರಂಪರೆಗಳ ವಿಷಯವಾಗಿ ತಮ್ಮೊಳಗೆ ಜಗಳಾಡುವ ಜನರ ಮೂರ್ಖತನವೇ ಈ ನಸು ನಗುವಿಗೆ ಕಾರಣವಾಗಿದೆ. ಆ ನಿಜವಾದ ಧರ್ಮವೆಂಬ ‘ವಿಶಾಲ ಮನಸ್ಕತೆ’ಗೆ ಬೇಲಿ ಹಾಕುವಾಗಲೇ ಈ ಪ್ರತ್ಯೇಕ ಧರ್ಮ, ಪಂಥಗಳು ಹುಟ್ಟಿಕೊಳ್ಳುವವು. ಅಂದರೆ, ಆ ಸಾರ್ವತ್ರಿಕ ನಿಜ ಧರ್ಮವನ್ನು ನಾಶಮಾಡದೆ ಆ ಸಂಕುಚಿತ ಧರ್ಮ, ಪಂಥ, ಪರಂಪರೆಗಳಿಗೆ ಹುಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅರ್ಥ ಬರುವುದು!! ಆ ರೀತಿಯಲ್ಲಿ ಸೃಷ್ಟಿಯಾದವುಗಳು, ಸಾವಿರಾರು ವರುಷಗಳಲ್ಲಿ ಧರ್ಮಾಂಧತೆಯನ್ನು ಬೆಳೆಸಿರುವುದು ಅವುಗಳ ಸಹಜವಾದ ಕೆಲಸವೆಂದು ಮಾತ್ರ ಹೇಳಬೇಕಾಗಿದೆಯಷ್ಟೆ. ಇನ್ನು, ಸ್ವರ್ಗಕ್ಕಾದರೂ, ಮೋಕ್ಷಕ್ಕಾದರೂ, ಅಥವಾ ಜೀವನ ಧರ್ಮಕ್ಕಾದರೂ ನಮಗೆ ಬೇಕಾಗಿರುವುದು ಈ ನಮ್ಮ ಸ್ವಭಾವವನ್ನು ಪರಿಶುದ್ಧಗೊಳಿಸುವ ಆ ಆತ್ಮ ಪರಿಶೋಧನೆ ಮಾತ್ರವಾಗಿದೆ. ಅದಿಲ್ಲದೆ ಏನೂ ಸಿಗದು. ದಯವಿಟ್ಟು ಎಲ್ಲರೂ ಇಲ್ಲಿ ಸತ್ಯಸಂಧವಾಗಿ ಉತ್ತರಿಸಿರಿ, ನಿಜವಾಗಿಯೂ ಈಗ ಕಾಣಿಸುತ್ತಿರುವ ಧರ್ಮ, ಪಂಥ, ಮತ, ಪರಂಪರೆಗಳು ಯಾವುದರ ಮಹತ್ವವನ್ನು ಎತ್ತಿ ಹೇಳುತ್ತಿರುವವು? ಆತ್ಮ ಪರಿಶೋಧನೆಯನ್ನೇ ಅಥವಾ “ನಂಬಿಕೆ ಮತ್ತು ಆಚಾರಗಳನ್ನು ಅನುಷ್ಠಿಸಿ ಅವನ್ನೆಲ್ಲಾ ಗಳಿಸಬಹುದು” ಎಂಬ ರೀತಿಯನ್ನೇ? ತೊಂಬತ್ತು ಶೇಖಡ ಜನರೂ ಈ ಆಚಾರ ನಂಬಿಕೆಗಳೇ ಸರ್ವಸ್ವ ಎಂಬ ರೀತಿಯಲ್ಲಿ, ತಮ್ಮನ್ನು ತಾವು ಶುದ್ಧೀಕರಿಸದೆ, ತಾವು ಧಾರ್ಮಿಕರೆಂದು ವರ್ತಿಸುವುದನ್ನು ನಾವು ಕಾಣುತ್ತೇವೆ!! ಆ ಬೆರಳೆಣಿಕೆಯ ಮಹಾತ್ಮರು ಮಾತ್ರ ಆತ್ಮ ಪರಿಶೋಧನೆಯ ಮೂಲಕ ಆತ್ಮ ಶುದ್ಧೀಕರಣವನ್ನು ಹೇಳುವರು ಅಷ್ಟೆ. ಉಳಿದ ಸರ್ವರೂ ತಮ್ಮ ತಮ್ಮ ಧರ್ಮ, ಮತ, ಪಂಥ, ಪರಂಪರೆ ಇತ್ಯಾದಿಗಳನ್ನು ಹೊಗಳುತ್ತಾ, ಪ್ರಚಾರಮಾಡುತ್ತಾ ಅದನ್ನೇ ಧರ್ಮಪಾಲನೆ ಎಂದು ಹೇಳುತ್ತಾ ಬಂದಿರುವರು!! ಅಂದರೆ ಧರ್ಮಕ್ಕೆ “ನಮ್ಮದು” ಎಂಬ ಬೇಲಿಯನ್ನು ಹಾಕಲು ಸಾಧ್ಯವಿಲ್ಲ, ಹಾಗೆ ಹಾಕಿದ ಕ್ಷಣದಲ್ಲಿ ಅದರಲ್ಲಿನ ನಿಜವಾದ ಧರ್ಮವು ಸರ್ವನಾಶವಾಗುವುದು. ಇನ್ನು, ಉಳಿಯುವುದು ಸಂಕುಚಿತವಾದ ಆ ಬೇಲಿಯೊಳಗಿನ ಧರ್ಮಗಳು ಮಾತ್ರವಾಗುವುದು!! ದೌರ್ಭಾಗ್ಯವಶಾತ್, ನಮಗೆ ಇಂದು ಕಾಣಿಸುವ ಎಲ್ಲವೂ ಈ ಬೇಲಿಯೊಳಗಿನದ್ದು ಎಂದು ತಿಳಿದುಕೊಳ್ಳುವುದಕ್ಕೆ ಭಯವಾಗುವುದು. ಈ ರೀತಿಯ ಬೇಲಿಯೊಳಗಿನ ಧರ್ಮ, ಪಂಥಗಳು ನಿಜವಾದ ಧಾರ್ಮಿಕ ಜೀವನಕ್ಕೆ ಮಾರಕವಾಗಿದೆ ಎಂಬ ಸತ್ಯದ ಕಡೆಗೆ ಯಾರೂ ತಿರುಗಿಯೂ ನೋಡಲಿಲ್ಲ ಎಂಬುವುದು ಇನ್ನೊಂದು ಬಲು ಅಚ್ಚರಿಯ ವಿಷಯವಾಗಿರುವುದು!! ಮಾನವ ವಿಭಜನೆ ಮಾತ್ರವನ್ನು ಉದ್ದೇಶಿಸಿ ಕೆಲಸ ಮಾಡುತ್ತಿರುವ ಆ ಪ್ರಾಚೀನ ವಾಮಾಚಾರವು ಎಲ್ಲಾ ಕಾಲದಲ್ಲೂ ಜನರನ್ನು “ಮಾನವ ಒಗ್ಗಟ್ಟು” ಎಂಬ ಕಡೆಗೆ ಚಿಂತಿಸಿದಂತೆ ಬಹಳವಾಗಿ ಪ್ರಯತ್ನಿಸಿದೆ ಎಂದು ಇದರಿಂದ ಸ್ಪಷ್ಟವಾಗುವುದು. ಅದರ ಬದಲು “ಮಾನವ ಒಗ್ಗಟ್ಟು” ಆಗದಂತೆ ದೇವರೇ ಮಾನವನಿಗೆ ಬೇರೆ ಬೇರೆ ಬಾಷೆ ಇತ್ಯಾದಿಗಳನ್ನು ಸೃಷ್ಟಿಸಿ ಕೊಟ್ಟಿದ್ದಾನೆ ಎಂಬ ಭಯಾನಕ ಅಮಾನವೀಯ ಕಥೆಗಳನ್ನು ಧರ್ಮದ ಮೂಲಕವೇ ಹೇಳಿಸಿದೆ!! ಆ ಮೂಲಕ ಆ ಪ್ರಾಚೀನ ವಾಮಾಚಾರ ವ್ಯವಸ್ಥೆಗೆ ಬೇಕಾಗಿರುವ ಮಾನವ ಕುಲದಲ್ಲಿ ಚಿರ ದ್ವೇಷ, ರಕ್ತಪಾತವನ್ನು ಅದು ಸುಲಭದಲ್ಲಿ ಗಳಿಸಿಕೊಂಡಿದೆ. ಒಂದು ಮನೆಯಲ್ಲಿ ಎಲ್ಲರೂ ಒಗ್ಗಟ್ಟಾದರೆ ಅದು ಆ ಮನೆಯನ್ನು ಸರ್ವನಾಶ ಮಾಡುವುದೇ? ಅದೇ ರೀತಿ, ಈ ಜಗತ್ತಿನ ಜನರೆಲ್ಲರೂ ಒಗ್ಗಟ್ಟಾದಲ್ಲಿ ದೇವರ ಪಟ್ಟ ತಾನಾಗಿ ಇಲ್ಲವಾಗುವುದೇ? ಅದು ಎಂದಿಗೂ ಆಗದು, ಬದಲು ಜಗತ್ತಿನಲ್ಲಿ ದೇವರ ಧರ್ಮವು ಅತ್ಯಂತ ಬೆಳಗುವುದು ಅಷ್ಟೆ. ಆಗ ಎಲ್ಲರೂ ಸೇರಿ ಆ ಆದರ್ಶ ದೇವರನ್ನು ಹೊಗಳುವರು ಅಷ್ಟೆ, ಯಾಕೆಂದರೆ ಉತ್ತಮರಿಗೆ ಅಲ್ಪತನವಿಲ್ಲ, ಆದರೆ ಅಲ್ಪತನವಿರುವುದು ಧ್ವೇಷ, ಅಸೂಯೆ ತುಂಬಿ ಇತರರಿಂದ ತಾವು ಬೇರೆಯಾಗಿರಲು ಪ್ರಯತ್ನಿಸುವ ಅಸುರರಲ್ಲಿ ಎಂದು ನಮಗೆ ತಿಳಿದಿದೆ. ನಿಜವಾಗಿ, ಮಾನವರು ಒಗ್ಗಟ್ಟಾಗುವುದನ್ನು ವಿರೋಧಿಸುವ ಈ ಅಸುರ ಜನರೇ ದೇವರನ್ನು ಸರ್ವನಾಶ ಮಾಡುವ ಆ ದುಷ್ಟಶಕ್ತಿಗಳು. ಮಾನವರು ಒಗ್ಗಟ್ಟಾಗಬಾರದು ಎಂಬ ರೀತಿಯ ಧರ್ಮವಿರುದ್ಧ ಪುರಾಣ ಕಥೆಗಳನ್ನು, ಮತ್ತು ಸಮಾಜಿಕ ವ್ಯವಸ್ಥೆಗಳನ್ನು ಧರ್ಮದೊಳಗೆ ಯಾರು ಯಾಕಾಗಿ ಸೇರಿಸುತ್ತಾರೆ ಎಂಬುವುದು ಈಗ ಸ್ಪಷ್ಟವಾಗಬಹುದು ಎಂದು ಭಾವಿಸುವೆನು. ಎಲ್ಲವೂ ದೇವರಿಂದಲೇ ಬರುವುದು ಎಂದು ನಂಬುವ ಅಜ್ಞಾನಿ ಮಾನವನು ಅವೆಲ್ಲವನ್ನೂ ದೇವರ ಮಾತೆಂದು ಅತ್ಯಂತ ನಂಬಿ ತಮ್ಮೊಳಗೆ ಹೊಡೆದಾಡಿ, ರಕ್ತಪಾತ ಮಾಡಿ, ಗಳಿಸಿಕೊಂಡ ಕ್ರೌರ್ಯ ಮತ್ತು ರಕ್ತವನ್ನು ದೇವರ ಪಾದಗಳಿಗೆ ಅರ್ಪಿಸಿ ಅದನ್ನು ತನ್ನ ದೊಡ್ಡ ಧಾರ್ಮಿಕ ಸೇವೆಯೆಂದು ತಿಳಿದುಕೊಂಡಿರುವನು!!! ಧರ್ಮವೆಂದರೆ ಮಾನವನ ಮನೋ ಶುದ್ಧೀಕರಣವಾಗಿದೆ ಎಂದೂ, ಮತ್ತು ಜನರು ಪುರಾಣ ಕಥೆಗಳನ್ನು ಧರ್ಮದ ಸಾರವೆಂದು ಎಂದೂ ತಪ್ಪು ತಿಳಿದುಕೊಳ್ಳಬಾರದು ಎಂದೂ ಮಹಾತ್ಮರು ಎಚ್ಚರಿಸುತ್ತಾ ಬಂದಿರುವುದನ್ನು ಇಲ್ಲಿ ನಾವು ನೆನೆಯಬೇಕಾಗಿದೆ.