ಧಾರ್ಮಿಕ ನಂಬಿಕೆ

ಧಾರ್ಮಿಕ ಅಥವಾ ಆಧ್ಯಾತ್ಮಿಕ ಎಂದ ಕೂಡಲೆ ಅಲ್ಲಿ ‘ನಂಬಿಕೆ’ ಎಂಬ ಶಬ್ಧಕ್ಕೆ ಬೇರೆ ಅರ್ಥ ಬರುವುದಿಲ್ಲ. ಇದರ ಬಗ್ಗೆ ಮೊದಲೇ ಹೇಳಿದೆಯಾದರೂ ಇಲ್ಲಿ ಇನ್ನೂ ಸ್ವಲ್ಪ ವಿವರಣೆಯ ಮೂಲಕ ಸ್ಪಷ್ಟಪಡಿಸಬೇಕಾಗಿದೆ. ಸತ್ಯ ಗೊತ್ತಿಲ್ಲದಿರುವ ಸ್ಥಿತಿಯಲ್ಲಿ ನಂಬಿಕೆಯು ಹುಟ್ಟಿಕೊಳ್ಳುವುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಂಬಿಕೆಯು ಸಂಶಯದ ಸ್ಥಿತಿಯಲ್ಲಿದೆ ಎಂದು ತಿಳಿಯಬಹುದು. ಸತ್ಯ ಸ್ಪಷ್ಟವಾದಾಗ ನಂಬಿಕೆ ಹೊರಟುಹೋಗುವುದು. ಮೊದಲೇ ವಿವರಿಸಿರುವಂತೆ ಸೂರ್ಯನು ತಲೆ ಮೇಲಿರುವಾಗ ‘ನಾನು ಆ ಸೂರ್ಯನನ್ನು ನಂಬುತ್ತೇನೆ’ ಎಂದು ಕಣ್ಣಿದ್ದವರು ಯಾರೂ ಹೇಳುವುದಿಲ್ಲ. ಅದೇ ರೀತಿ ಸತ್ಯ ತಿಳಿದಿರುವಾಗ ಯಾರೂ ನಂಬಿಕೆಯೆಂಬ ಪದವನ್ನೇ ಬಳಸುವುದಿಲ್ಲ. ಹಾಗೆ ನೋಡುವಾಗ ದೇವರನ್ನು ನಂಬುವುದು ಎಂದರೆ ದೇವರ ಇರುವಿಕೆಯನ್ನು, ಅದು ಸತ್ಯ ಎಂದು ಹೇಳಿದಂತೆ ಆಗುವುದಿಲ್ಲ, ಸಂಶಯದಿಂದ ನೋಡಿದಂತಾಗುವುದು. ಇದು ಸರಿಯಾದ ರೀತಿಯೇ? ದೇವರನ್ನು ಜಗತ್ತಿನ ಸರ್ವರೂ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೆಂದು ಸಂಶಯವಿಲ್ಲದೆ ಅರಿತುಕೊಳ್ಳುವ ರೀತಿಯಲ್ಲವೆ ನಿಜವಾದ ರೀತಿಯಾಗಿರಬೇಕಾಗಿರುವುದು? ಈ ರೀತಿಯ ಅರಿತುಕೊಳ್ಳುವಿಕೆಯಲ್ಲೇ, ನಮಗೆ ಆತ್ಮೀಯ ಪ್ರೀತಿಯ ಆ ಕರುಣಾಮಯ ದೇವರು, ಆ ಸತ್ಯಸಂಧ ಭಕ್ತಿ, ಮತ್ತು ಸತ್ಯವಾದ ಆ ಧರ್ಮ, ಇವುಗಳು ಅತ್ಯಂತ ಪರಿಶುದ್ಧ ರೂಪದಲ್ಲಿ ದೊರಕುವುದಿಲ್ಲವೇ? ಇನ್ನು, ಆ ದೇವರ ಹೆಸರಲ್ಲಿ ತಮ್ಮೊಳಗೆ ವಿರೋಧಿಸುವ ನಂಬಿಕೆಗಳ ಮತ್ತು ಆಚಾರಗಳ ಹಿನ್ನೆಲೆಯಲ್ಲಿ ಧರ್ಮವನ್ನು ವಿವರಿಸುವ ಅಗತ್ಯವಿದೆಯೇ? ಈಗ, ನಂಬಿಕೆಗಳು ಇದುವರೆಗೂ ನಮಗೆ ಏನಾದರೂ ಒಳಿತನ್ನುಂಟುಮಾಡಿರುವುದೇ ಎಂದು ನೋಡಿದಾಗ ಅದರ ಉತ್ತರ  ಅದು ಸಮಾಜಕ್ಕೆ ಒಳಿತನ್ನುಂಟುಮಾಡುವಲ್ಲಿ ಏನೂ ಮಾಡಿಲ್ಲ ಆದರೆ ಅದನ್ನು ಒಡೆಯುವಲ್ಲಿ ಮತ್ತು ತಮ್ಮ ತಮ್ಮೊಳಗೆ ಹಿಂಸಿಸುವಲ್ಲಿ ಕೆಲಸ ಮಾಡಿದೆ ಎಂದಾಗುವುದು. ಇದು ಎಲ್ಲರಿಗೂ ತಿಳಿದಿರುವ ಸತ್ಯವೂ ಆಗಿರುವುದು. ಶಾಂತಿಗಾಗಿ ಹುಟ್ಟಿಕೊಂಡಿರುವ ಈ ನಂಬಿಕೆಯ ಧರ್ಮ, ಪಂಥಗಳು ಸಾವಿರಾರು ವರುಷಗಳ ಹಿಂದಿನಿಂದಲೇ ಭೀಕರ ಧರ್ಮಾಂಧತೆಯ ಯುದ್ಧ, ಹಿಂಸಾಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವು. ಇತರ ಯುದ್ಧಗಳಿಗಿಂತಲೂ ಭಿನ್ನವಾಗಿ ಈ ನಂಬಿಕೆಯ ಧರ್ಮಾಂಧತೆಯ ಭ್ರಮೆಯು, ಸಣ್ಣ, ಪುಟ್ಟ ಮಕ್ಕಳನ್ನೂ ಬಿಡದೆ, ಹೆಂಗಸರು ವೃದ್ದೆಯರೆಂದೂ ನೋಡದೆ ಎಲ್ಲರನ್ನೂ ಕೊಂದು ಹಾಕಿದವು. ಎಷ್ಟೋ ತಾಯಂದಿರು ಅತ್ಯಾಚಾರಕ್ಕೆ ಬಲಿಯಾಗಿ ಹೋದರು, ಆದರೂ ಕರುಣೆಯ ದೇವರೆಂದು ತಾವು ಹಾಡಿ ಹೊಗಳುವ ಈ ನಂಬಿಕೆಗಳ ಧರ್ಮ, ಪಂಥಗಳನ್ನು ಅನುಸರಿಸುವ ಮನುಷ್ಯ ಜೀವಿಗಳಿಗೆ ಸ್ವಲ್ಪವೂ ಕರುಣೆ ಬರಲಿಲ್ಲ, ಬದಲು ಕ್ರೌರ್ಯದ ಅಟ್ಟಹಾಸ ಮಾಡಿದವು! ಇದೇ ರೀತಿ ಇನ್ನೆಷ್ಟೋ ನಂಬಿಕೆಗಳು ಸಮಾಜವನ್ನು ನುಚ್ಚುನೂರು ಮಾಡಿವೆ! ಆದರೂ ನಂಬಿಕೆಯ ಸ್ವಾರ್ಥಿ ಜನಗಳು ಇನ್ನೂ ಏನನ್ನು ಹೇಳುತ್ತಿರುವರು ಎಂದು ಆಲಿಸಿರಿ, ಅವರು ಮತ್ತೂ ಹೇಳುವುದು ಅದನ್ನೇ, “ದೇವರು,ಧರ್ಮಗಳು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ ಮತ್ತು ಆ ನಂಬಿಕೆಗಳಿಂದ ಮಾತ್ರ ದೇವರನ್ನು ಸೇರಲು ಮತ್ತು ಧಾರ್ಮಿಕ ಜೀವನವನ್ನು ನಡೆಸಲು ಸಾಧ್ಯ” ಎಂದಾಗಿದೆ!! ನಂಬಿಕೆಯ ನಿಜವಾದ ಅರ್ಥ “ಸಂಶಯ” ಎಂಬ ಹಿನ್ನೆಲೆಯಲ್ಲಿ ಅವರ ಅದೇ ವಾಕ್ಯವನ್ನು ಇನ್ನೊಮ್ಮೆ ಓದುವಾಗ ಅಚ್ಚರಿಯಾಗುವುದು!

ಆದರೆ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೇ ದೇವರು ಮತ್ತು ಧರ್ಮ ಎಂದು ಅರಿತುಕೊಳ್ಳುವ ವಿಧಾನವನ್ನು ಈ ಜಗತ್ತಿನ ಎಲ್ಲರೂ ಅನುಸರಿಸುತ್ತಾ ಬಂದಿದ್ದರೆ, ಎಂದೋ ಈ ಭೂಮಿ ಶಾಂತಿಯ ಸಾಗರದಲ್ಲಿ ತೇಲಾಡುತ್ತಿತ್ತು. ಆ ಜಾತೀ ಶೋಷಣೆ, ಧರ್ಮಾಂಧರ ರಕ್ತಪಾತಗಳು ಉಂಟಾಗುತ್ತಿರಲಿಲ್ಲ. ಮಾತ್ರವಲ್ಲ, “ಧರ್ಮ[ಶಾಂತಿ] ಸ್ಥಾಪನೆ’ ಎಂಬ ಅದರ ಆ ಮುಖ್ಯ ಗುರಿಯನ್ನು, ಆದಿಕಾಲದಲ್ಲೇ, ಜನಸಾಮಾನ್ಯರಿಂದಲೇ, ಶಾಶ್ವತವಾಗಿ, ಈ ಧರೆಯಲ್ಲಿ ನಿರ್ವಹಿಸಿ ಆಗುತ್ತಿತ್ತು!

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||