ಮನುಷ್ಯರ ತಪ್ಪು – ಧರ್ಮದ ತಪ್ಪು

ಧರ್ಮ, ಪಂಥಗಳಲ್ಲಿ ಒಳ್ಳೆಯವರು ಯಾರೂ ಜೀವಿಸಿಲ್ಲ ಎಂದು ಯಾರೂ ಹೇಳುವುದಿಲ್ಲ. ಎಷ್ಟೊ ಮಹಾತ್ಮರು ಧರ್ಮ, ಪಂಥಗಳೊಳಗಿದ್ದು ಜೀವಿಸಿರುವರು. ಅವರಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡಿರುವ ಎಷ್ಟೋ ಮಹಾತ್ಮರನ್ನೂ ನಮಗೆ ತಿಳಿದಿದೆ. ಆದರೆ ನೆನಪಿರಲಿ, ಒಂದು ಧರ್ಮವೆಂದರೆ ಅದು ಬೆರೆಳೆಣಿಕೆಯ ಮಹಾತ್ಮರು ಮಾತ್ರವಲ್ಲ, ಅದು, ಆ ಧರ್ಮ, ಪಂಥಗಳಲ್ಲಿ ಜೀವಿಸುವ ಎಲ್ಲಾ ಜನರನ್ನು ಪ್ರತಿನಿಧೀಕರಿಸುವುದು.

ಮೊದಲು ಧರ್ಮ ಎಂದರೇನು ಎಂಬುವುದನ್ನು ತಿಳಿಯಬೇಕಾಗಿದೆ. ಧರ್ಮವು ಒಂದು ಗ್ರಂಥವಲ್ಲ. ಅದು ಒಂದು ಶಿಲ್ಪ ಕಲಾಕೃತಿಯೋ ಅಥವಾ ಕವಿತೆಯೋ ಆಗಿದ್ದಲ್ಲಿ, ಅದನ್ನು ನೋಡಿ ಅಥವಾ ಕೇಳಿ ಚೆನ್ನಾಗಿದ್ದರೆ ಸಂತೋಷಪಟ್ಟುಕೊಳ್ಳಬಹುದಾಗಿತ್ತು, ಆದರೆ ಧರ್ಮವು ನೋಡಿ ಅಥವಾ ಕೇಳಿ ಸಂತೋಷಪಟ್ಟುಕೊಳ್ಳುವ ರೀತಿಯದ್ದಲ್ಲ, ಅದು ಮಾನವನ ಅನುಷ್ಠಾನವನ್ನು ನೇರ ಅವಲಂಬಿಸಿದುದಾಗಿದೆ.

ಮಾನವರು ಇಲ್ಲವಾಗಿದ್ದರೆ ಧರ್ಮಗಳೂ ಈ ಭೂಮಿಯಲ್ಲಿ ಇರುತ್ತಿರಲಿಲ್ಲ. ದೇವರು ಇಲ್ಲದ ಧರ್ಮಗಳೂ ಇವೆಯೆಂಬಲ್ಲಿ ಮಾನವರ ನಡತೆಯನ್ನು ಸರಿಪಡಿಸುವುದೇ ಧರ್ಮಗಳ ಮುಖ್ಯ ಉದ್ದೇಶವಾಗಿದೆ ಎಂಬುವುದು ಸ್ಪಷ್ಟವಾಗುವುದು. ಹೀಗಿರುವಾಗ ಮನುಷ್ಯರು ಒಂದು ಧರ್ಮ ಅಥವಾ ಪಂಥದೊಳಗೆ ಯಾವ ರೀತಿಯಲ್ಲಿ ಜೀವಿಸುವರೋ ಅದು ಆ ಧರ್ಮ, ಪಂಥಗಳ ಶ್ರೇಷ್ಠತೆಯನ್ನು ನಿರ್ಧರಿಸುವುದು, ಪುಸ್ತಕ ಅಥವಾ ಗ್ರಂಥಗಳು ನಿರ್ಧರಿಸಲಾರವು. ಇದಕ್ಕೆ ಒಂದು ಉದಾಹರಣೆಯು, ವಿಜ್ಞಾನಿಗಳು “ನಾವು ಪುಸ್ತಕದಲ್ಲಿ ಸರಿಯಾಗಿ ಬರೆದಿದ್ದೇವೆ ಆದರೆ ಅದು ಪ್ರಾಯೋಗಿಕ ತಲದಲ್ಲಿ ಕೆಲಸ ಮಾಡಲಾರದು” ಎಂದು ಹೇಳಿದರೆ ಯಾರಾದರೂ ಒಪ್ಪುವರೇ? ಇಲ್ಲ. ಯಾರು ಒಪ್ಪುವುದಿಲ್ಲ. ಯಾಕೆಂದರೆ ಪ್ರಾಯೋಗಿಕ ತಲದಲ್ಲಿ ಎಲ್ಲೆಡೆಯೂ ಒಂದೇ ರೀತಿಯಲ್ಲಿ ಕೆಲಸಮಾಡಲು ಸಾಧ್ಯವಾದರೆ ಮಾತ್ರ ಅದು ವಿಜ್ಞಾನವಾಗುವುದು ಎಂದು ನಾವು ಹೇಳುವೆವು. ಪುಸ್ತಕದಲ್ಲಿ ಏನು ಬರೆದಿದ್ದರೂ ಅದು ಪ್ರಾಯೋಗಿಕ ತಲದಲ್ಲಿ ಕೆಲಸಮಾಡಲು ಸಮರ್ಥವಾಗದಿದ್ದಲ್ಲಿ ಅದನ್ನು ವಿಜ್ಞಾನವೆಂದು ಹೇಳಲು ಯಾರೂ ತಯಾರಾಗುವುದಿಲ್ಲ ಎಂದು ನಮಗೆ ತಿಳಿದಿದೆ. ಅದೇ ರೀತಿ ಧರ್ಮಗಳೂ ಆಗಿವೆ. ಆದುದರಿಂದ ತಮ್ಮ ಧರ್ಮ ಗ್ರಂಥಗಳನ್ನು ಮಾತ್ರ ಹೊಗಳಿ ಧರ್ಮದ ಶ್ರೇಷ್ಠತೆಯನ್ನು ಮೆರೆಸಲು ಯಾರಿಂದಲೂ ಸಾಧ್ಯವಿಲ್ಲ, ಬದಲು ತಮ್ಮ ತಮ್ಮ ಧರ್ಮಗಳಲ್ಲಿರುವ ಜನರ ಜೀವನದಲ್ಲಿ ಸತ್ಯ, ಪ್ರೀತಿ, ನೀತಿಯನ್ನು ಎಷ್ಟರ ಮಟ್ಟಿಗೆ ಒಂದು ಧರ್ಮಕ್ಕೆ ಬೆಳೆಸಿ ತರಲು ಸಾಧ್ಯವಾಯಿತು, ಅಷ್ಟು ಮಾತ್ರ ಆ ಧರ್ಮದ ಶ್ರೇಷ್ಠತೆಯಾಗುವುದು. ಇದು ಒಂದು ಪರಮ ಸತ್ಯವಾಗಿದೆ. ಆ ರೀತಿಯಲ್ಲಿ ಜೀವಿಸುವ ಜನರನ್ನು ಎಲ್ಲಾ ಧರ್ಮ, ಪಂಥಗಳು ಮೊದಲು ಲೆಕ್ಕಹಾಕಿ ನೋಡಲಿ. ಮತ್ತು ಈ ಹಿನ್ನೆಲೆಯಲ್ಲಿ ತಮ್ಮ ಧರ್ಮ, ಪಂಥಗಳ ಶ್ರೇಷ್ಠತೆಯನ್ನು ತುಂಬಾ ಮೆರೆಸಲಿ. ಆಗ ಜಗತ್ತು ಸ್ವರ್ಗವಾಗುವುದು. ಜಗದಲ್ಲಿ ಪ್ರೀತಿ ನಲಿದಾಡುವುದು. ನೈತಿಕತೆಯು ಅದ್ಭುತಕರವಾಗಿ ಗೌರವಿಸಲ್ಪಡುವುದು. ಮಹಾತ್ಮರ ಮತ್ತು ಸಜ್ಜನರ ಕೈಗೆ ಧರ್ಮಗಳು ಹಿಂತಿರುಗಿಸಲ್ಪಡುವವು. ಆದರೆ ನಿಜವಾಗಿ ನೋಡುವುದಾದರೆ, ನಮಗೆಲ್ಲರಿಗೂ ತಿಳಿದಂತೆ, ಈ ಜಗತ್ತಿನಲ್ಲಿ, ತಮ್ಮ ತಮ್ಮ ಗ್ರಂಥಗಳನ್ನು ಬೇಕಾದಂತೆ ವಾದಿಸುತ್ತಾ ಜನರನ್ನು ತಮ್ಮಲ್ಲಿಗೆ ಆಕರ್ಷಿಸಿಕೊಳ್ಳುವ ಕೆಲಸವು ನಿರಂತರ ನಡೆಯುತ್ತಾ ಬಂದಿದೆ. ನಿಸ್ವಾರ್ಥ ಧರ್ಮದ ಪ್ರಚಾರವನ್ನು ಬೆರೆಳೆಣಿಕೆಯ ಕೆಲವು ವಿಶೇಷ ಮಹಾತ್ಮರು ಮಾತ್ರ ಮಾಡುವರಷ್ಟೆ. ಈ ಕಾರಣದಿಂದಾಗಿಯೇ, ಜಗತ್ತಿನ ಶಾಂತಿಗಾಗಿ ಮಾತ್ರ ಇರಬೇಕಾದ ಧರ್ಮ, ಪಂಥಗಳು, ಭಯಾನಕ ಹಿಂಸೆ, ಕ್ರೌರ್ಯಗಳನ್ನು ತಮ್ಮಲ್ಲಿ ಬೆಳೆಸುವಂತಾಗಿರುವುದು. ತಮ್ಮ ಧರ್ಮದಲ್ಲಿರುವವರ ಸ್ವಭಾವ ಶುದ್ಧೀಕರಣವು ಧರ್ಮದ ಮುಖ್ಯ ಉದ್ದೇಶವಾಗದಿದ್ದಲ್ಲಿ, ಅದು, ಹಿಂದಿನಂತೆ, ತಮ್ಮ ತಮ್ಮ ಧರ್ಮದೊಳಗಿನ ಜನಸಂಖ್ಯೆಯ ವರ್ಧನೆಯನ್ನು ಮಾತ್ರ ನೋಡುವವು. ಆಮಿಷ ರೀತಿ, ಬಲವಂತದ ರೀತಿ, ಅಥವಾ ಇನ್ನು ಬೇರೆ ಏನಾದರೂ ರೀತಿಗಳನ್ನು ಉಪಯೋಗಿಸಿ ಜಗತ್ತಿನ ಜನರೆಲ್ಲರನ್ನು ತಮ್ಮಲ್ಲಿ ಸೇರಿಸಿಕೊಳ್ಳುವ, ಧಾರ್ಮಿಕ ಕಾರ್ಯವೆಂದು ಹೇಳಿಕೊಳ್ಳುವ, ಆ ಕೆಲಸಗಳಲ್ಲಿ ನಿರತವಾಗುವವು. ಇದನ್ನೇ ದೇವರ ಸೇವೆ ಮತ್ತು ಧರ್ಮದ ಸೇವೆಯೆಂದೂ ಪ್ರಚಾರ ಮಾಡುವವು. ಈ ರೀತಿಯಲ್ಲಿ ಧರ್ಮ, ದೇವರುಗಳ ಭಯಾನಕ ವ್ಯಾಖ್ಯಾನಗಳಿಂದಾಗಿ ಈ ಜಗತ್ತು ಸರ್ವನಾಶದೆಡೆಗೆ ಮುನ್ನುಗ್ಗುತ್ತಿರುವುದು! ಇನ್ನಾದಾರೂ ಧರ್ಮ, ಪಂಥಗಳು, ಅವುಗಳ ನಿಜ ಸಾರವಾದ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ, ಶಾಂತಿಗಳನ್ನು ಅಳವಡಿಸಿಕೊಂಡು ಈ ಜಗತ್ತನ್ನು ರಕ್ಷಿಸುವ ವಿಶಾಲಮನಸ್ಕತೆಯನ್ನು ಬೆಳೆಸಿಕೊಳ್ಳುವಂತಾಗಲಿ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||