ಮಹಾತ್ಮರ ಎರಡು ರೀತಿಯ ಜೀವನ ಆನಂದ

ಈ ಮಾನವ ಜೀವನವನ್ನು ಪರಿಶೀಲಿಸಿದಾಗ ನಮಗೆ ಅದರಲ್ಲಿ ಎರಡು ಭಾಗಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಒಂದು ವ್ಯಕ್ತಿಜೀವನ ಮತ್ತು ಇನ್ನೊಂದು ಸುಖಜೀವನ. ವ್ಯಕ್ತಿಜೀವನದಲ್ಲಿ ಆತನು ಆತ್ಮೀಯ ಸಂಬಂಧವನ್ನು ಹೆಚ್ಚಿಸಿ ಮತ್ತು ಶಾಂತಿಯನ್ನು ಹೆಚ್ಚಿಸಿ, ತನ್ನ ಜೀವನದ ಹೆಚ್ಚಿನ ಕಾಲವನ್ನೂ ಆನಂದದಲ್ಲಿ ಜೀವಿಸುವನು. ಆದರೆ, ಇನ್ನೊಂದು ಭಾಗದ ಜೀವನವಾದ ಆ ಸುಖಜೀವನದಲ್ಲಿ ಮಾನವನು ಸುಖ ಸೌಕರ್ಯದ ಜೀವನವನ್ನು ಅನುಭವಿಸುವನು.

ಈಗ, ಈ ಮೇಲಿನ ಎರಡು ರೀತಿಯ ಜೀವನವು ಸಾಮಾನ್ಯರಲ್ಲಿ ಮತ್ತು ಮಹಾತ್ಮರಲ್ಲಿ ಹೇಗೆ ಉಪಯೋಗಿಸಲ್ಪಡುವುದು ಎಂಬುವುದನ್ನು ನಾವು ನೋಡೋಣ. ಮೊದಲು ಸಾಮಾನ್ಯ ಮಾನವನ ಜೀವನವನ್ನು ಪರಿಶೀಲಿಸೋಣ. ಸಾಮಾನ್ಯನ ಜೀವನದಲ್ಲಿ, ಆತನು, ತನ್ನ ಜೀವನವನ್ನು ಸುಖಜೀವನದಲ್ಲೇ ಪೂರ್ತಿ ಮುಳುಗಿಸಿ ಬಿಡುವನು. ಅಂದರೆ, ಆತನು ತನ್ನ ಸುಖ, ಸೌಕರ್ಯಗಳ ವರ್ಧನೆಯೇ ಜೀವನ ಎಂದು ತಿಳಿದು ಜೀವಿಸುವವನಾಗುವನು. ಆಗ, ಆತನಿಗೆ ಯಾರಲ್ಲೂ ಆತ್ಮೀಯತೆಯನ್ನು ಇರಿಸಿಕೊಳ್ಳುವ ಜೀವನ ಮತ್ತು ಶಾಂತಿ ನೆಮ್ಮದಿಯ ಜೀವನವು ನಷ್ಟವಾಗುವುದು. ಮಾತ್ರವಲ್ಲ, ಆತನಿಗೆ ಇನ್ನೊಂದು ಶಾಪವೂ ಬರುವುದು! ಅದುವೇ ‘ಇನ್ನೂ ಬೇಕು ಮತ್ತು ಇನ್ನೂ ಬೆಳೆಯಬೇಕು’ ಎಂಬ ಆಸೆಯ ‘ಕಾಡುವಿಕೆ’ ಆಗಿದೆ. ಈ ಆಸೆಯ ಕಾಡುವಿಕೆಯಿಂದಾಗಿ ಆತನಿಗೆ ಆಗಲೇ ತನ್ನಲ್ಲಿರುವ ಆ ಸುಖ, ಸೌಕರ್ಯಗಳೂ ಆನಂದವನ್ನು ತಾರದೆಹೋಗುವವು! ಒಟ್ಟಿನಲ್ಲಿ, ಆತನು ಈ ಜಗತ್ತಿನ ಏನನ್ನೂ ಹೆಚ್ಚು ಕಾಲ ಆನಂಧಿಸುವುದಿಲ್ಲ ಮತ್ತು ಮಾನಸಿಕವಾಗಿ ಸಾಯುವ ತನಕವೂ ಹಿಂಸಿಸಲ್ಪಡುವನು. ಈ ರೀತಿ, ಸಾಮಾನ್ಯನ ಜೀವನವು ಜೀವನವೇ ಅಲ್ಲದ ಆ ಭಯಾನಕ ಕೊರಗುವಿಕೆ ಮಾತ್ರವಾಗುವುದು.

ಇನ್ನು, ಮಹಾತ್ಮರ ಜೀವನವನ್ನು ಪರಿಶೀಲಿಸೋಣ. ಮಹಾತ್ಮರು ತಮ್ಮ ಸಾಧನೆಯ ಮೂಲಕ ಆ ಮನಶ್ಯಾಂತಿ, ಮನೆ ಶಾಂತಿಯನ್ನು ಪಡೆದಿರುತ್ತಾರೆ. ಅಂದರೆ, ಅವರಿಗೆ ಆತ್ಮೀಯ ಸಂಬಂಧವನ್ನು  ಬೇಕಾದಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುವುದು. ಮತ್ತು ಶಾಂತಿಯಿಂದ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುವುದು. ಆಗ ಅವರಿಗೆ ವ್ಯಕ್ತಿಜೀವನವು ಪೂರ್ತಿಯಾಗಿ ದೊರಕುವುದು. ಮಾತ್ರವಲ್ಲ, ಅವರಲ್ಲಿ, ಇನ್ನೂ ಬೇಕೆಂಬ ಕಾಡುವಿಕೆ ಇಲ್ಲವಾದುದರಿಂದ, ಅವರಿಗೆ ತಮ್ಮ ಜೀವನದಲ್ಲಿ, ಸುಖ, ಸೌಕರ್ಯವನ್ನು ಅವರ ಅರ್ಹತೆಗೆ ಬರುವಷ್ಟು, ತೃಪ್ತಿಯಿಂದ, ಆನಂದಿಸಲೂ ಸಾಧ್ಯವಾಗುವುದು!! ಹೀಗಿರುವಾಗ, ಮಹಾತ್ಮರು ಮಾನವ ಜೀವನದ ಎರಡು ಭಾಗಗಳನ್ನೂ ಪೂರ್ತಿಯಾಗಿ ಮತ್ತು ಆನಂದದಿಂದ ಅನುಭವಿಸುವವರಾಗುವರು. ಈ ರೀತಿಯಲ್ಲಿ ನೋಡುವಾಗ, ಮಹಾತ್ಮರು ಜೀವನದ ಎರಡು ಭಾಗಗಳನ್ನೂ ಆನಂದಿಸುವವರೆಂದೂ, ಜನಸಾಮಾನ್ಯರು ಮಾನವ ಜೀವನದ ಎರಡೂ ಭಾಗಗಳನ್ನೂ ಕಳಕೊಳ್ಳುವವರು ಎಂದೂ ತಿಳಿದುಕೊಳ್ಳಬಹುದು. ಮನಸ್ಸು ಸುಖವನ್ನು ಅನುಭವಿಸುವ ಸ್ಥಳವಾದರೆ, ಹೃದಯವು ಮಾನವ ಜೀವನದ ಸಾರವಾದ ಆ ಆತ್ಮೀಯತೆಯನ್ನು ಅನುಭವಿಸುವ ಸ್ಥಳವಾಗಿದೆ. ಈ ಎರಡು ಸೇರಿದಾಗ ಮಾತ್ರ ಮಾನವ ಜೀವನವಾಗುವುದು. ಈ ರೀತಿಯಲ್ಲಿ, ಈ ಎರಡೂ ನದಿಗಳು ಸಂಗಮಿಸುವ ಜೀವನದ ಅತ್ಯಂತ ಆನಂದದ ನೆಲೆಯೇ, ‘ಮಹಾತ್ಮರ ಜೀವನ’ ಎಂಬ ಆ ಆನಂದ ಸಾಗರವಾಗಿರುವುದು.

ಈ ಆನಂದ ಸಾಗರವನ್ನು ಸೇರಲು ಸಾಧ್ಯವಾಗುವ ಆ ಸತ್ಯಜೀವನವನ್ನು, ಸರ್ವ ಧರ್ಮ, ಪಂಥದ ಜನರೂ ಪಡೆಯುವಂತಾಗಲಿ, ಮತ್ತು ಅದರಿಂದ ಹುಟ್ಟಿಬರುವ ಮಹಾತ್ಮರುಗಳು ಅನಂತ ಸತ್ಯಯುಗವನ್ನೇ ಈ ಧರೆಯಲ್ಲಿ ಸೃಷ್ಟಿಸಲಿ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||