ಯಾವುದು ಇದೆಯೋ ಅದು ಸತ್ಯ. ಯಾವುದು ಬದಲಾವಣೆಗೆ ಒಳಗಾಗುವುದಿಲ್ಲವೋ ಅದು ಸತ್ಯ, ಯಾವುದು ಇದ್ದದ್ದು ಇದ್ದ ಹಾಗೆ ಗೋಚರಿಸುವುದೋ ಅದು ಸತ್ಯ. ಇಲ್ಲದರ ಪುಟಗಟ್ಟಲೆ ವಿವರಣೆಯೂ ಸತ್ಯವಾಗಲಾರದು. ಅದೇ ರೀತಿ ಇದ್ದದ್ದನ್ನು ಬೇರೆ ರೀತಿಯಲ್ಲಿ ವಿವರಿಸುವುದೂ ಸತ್ಯವಾಗಲಾರದು. ತಮ್ಮ ತಮ್ಮ ಅಜ್ಞಾನವೆಂಬ ಬಣ್ಣದ ಗಾಜುಗಳ ಮೂಲಕ ನೋಡಿ ತಮಗೆ ಕಾಣಿಸುವ ಬಣ್ಣವೇ ಸರಿಯೆಂದು ವಾದ ಮಾಡುವ ಈ ಚಾಳಿ ನಿಲ್ಲುವ ತನಕ ಸತ್ಯವೆಂಬ ಆ ದಿವ್ಯ ಬೆಳಕು ಅವರಿಂದ ದೂರ ಸರಿಯುತ್ತಲೇ ಇರುತ್ತದೆ. ಇದೇ ಮನೆ ಜಗಳ, ಜಾತೀಯತೆ, ಮತಾಂಧತೆಗಳ ಹಿಂಸೆಯ ಪಾಪ ಕರ್ಮಗಳಿಗೆ ಕಾರಣವಾಗಿರುವುದು.
ಸತ್ಯಕ್ಕೆ ಜಗತ್ತಿನಲ್ಲಿ ಬಹಳ ದೊಡ್ಡ ಸ್ಥಾನವಿದೆ. ಅದು ಇಲ್ಲವಾದಲ್ಲಿ ಎಲ್ಲವೂ ಅನ್ಯಾಯದಲ್ಲಿ ಬೆಳೆಯುವುದು. ದುಃಖ, ನೋವುಗಳಿಗೆ ಕಾರಣವಾಗುವುದು. ಆದರೆ ಸತ್ಯವು ಹೆಚ್ಚಾಗಿ ಅಡಗಿ ಕುಳಿತಿರುತ್ತದೆ. ಅದನ್ನು ಹೊರತರಬೇಕಾಗಿದೆ. ಬಣ್ಣದ ಗಾಜಿನ ದೃಷ್ಟಿಯನ್ನು ಬಿಟ್ಟು ವೈಜ್ಞಾನಿಕ ದೃಷ್ಟಿಯನ್ನು ಬಳಸಿದರೆ ಮಾತ್ರ ಅದು ಸಾಧ್ಯವಾಗುವುದು. ಇಲ್ಲವಾದಲ್ಲಿ ಹುಸಿಯ ಹಸಿಯಾದ ವಿಷದ ದುರ್ಗಂಧ ಸಮಾಜವನ್ನೆಲ್ಲಾ ಆವರಿಸಿ ನಾಶಪಡಿಸುವುದು. ತಮ್ಮ ತಮ್ಮ ನಂಬಿಕೆಗಳಿಗೆ ಬಿಟ್ಟ ವಿಚಾರವೆಂದು ಯಾರು ತರ್ಕವನ್ನು ಆರಂಭಿಸುವರೋ ಅವರು ಎಂದೂ ಸತ್ಯವನ್ನು ಕಾಣಲಾರರು. ನಂಬಿಕೆ ಎಂದರೆ ಸತ್ಯವೆಂದಲ್ಲ. ಮೇಲೆ ಸೂರ್ಯನಿರುವಾಗ ‘ಮೇಲೆ ಸೂರ್ಯನಿದ್ದಾನೆಂದು ನಂಬುತ್ತೇನೆ’ ಎಂದು ಕಣ್ಣಿದ್ದವರು ಯಾರೂ ಹೇಳುವುದಿಲ್ಲ. ಯಾಕೆಂದರೆ ಸೂರ್ಯನಿದ್ದಾನೆ ಎಂಬುವುದು ಒಂದು ಸತ್ಯ. ಅದು ನಂಬಿಕೆಯಲ್ಲ. ಈ ರೀತಿ ನೋಡಿದಾಗ ನಂಬಿಕೆ ಎಂಬಲ್ಲಿ ಸಂಶಯದ ನೆರಳು ಇದ್ದೇ ಇರುತ್ತದೆ ಎಂದು ತಿಳಿದು ಬರುವುದು. ಆದುದರಿಂದ ಸತ್ಯವನ್ನು ಕಾಣಲು ಮುಕ್ತ ನಿಲುವಿನ ದೃಷ್ಟಿಯಿಂದ ಮಾತ್ರ ಸಾಧ್ಯ, ಹೊರತು ನಂಬಿಕೆಗಳಿಂದ ಎಂದೂ ಸಾಧ್ಯವಿಲ್ಲ. ಸತ್ಯವು ನಿಜವಾಗಿಯೂ ಇರುವುದರ ಬಗ್ಗೆ ಹೇಳುವುದು, ಆದರೆ ನಂಬಿಕೆಯು ಸತ್ಯವನ್ನು ಸ್ಪಷ್ಟವಾಗಿ ತಿಳಿಯದಿರುವ ಸ್ಥಿತಿಯನ್ನು ಮಾತ್ರ ಹೇಳುವುದು. ಆದುದರಿಂದ ಆ ಸತ್ಯದ ದೇವರನ್ನು ಮತ್ತು ಸತ್ಯದ ಧರ್ಮವನ್ನು ನಂಬಿಕೆ ಅಥವಾ ಸಂಶಯದ ಮೂಲಕ ಕಾಣಲು ಎಂದಿಗೂ ಸಾಧ್ಯವಾಗಲಾರದು ಎಂಬುವುದು ಸ್ಪಷ್ಟವಾಗುವುದು.