ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಅನುಷ್ಠಾನವೇ ಧರ್ಮ

ನಮಗೆ ಎಲ್ಲರಿಗೂ ಧರ್ಮದ ಉದ್ದೇಶವೇನೆಂದು ತಿಳಿದಿದೆ. ಧರ್ಮದ ಕಾರ್ಯವನ್ನು, ಮುಖ್ಯವಾಗಿ, ಎರಡಾಗಿ ವಿಭಾಗಿಸಬಹುದು. ಅವುಗಳು ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿವೆ. ಸಾಮಾಜಿಕವಾಗಿ ಧರ್ಮದ ಕೆಲಸವು, ಸಮಾಜದಲ್ಲಿ ಒಳಿತು ಮಾಡುವವರನ್ನು ಪ್ರೋಹ್ಸಾಹಿಸುವುದು ಮತ್ತು ಕಿಡಿಗೇಡಿಗಳನ್ನು ನಿಯಂತ್ರಿಸುವುದು, ಆಧ್ಯಾತ್ಮಿಕವಾಗಿ ಅದರ ಕೆಲಸವು ಸದ್ಗತಿ, ಮೋಕ್ಷ ಮಾರ್ಗಗಳನ್ನು ತಿಳಿಸಿಕೊಡುವುದು ಆಗಿದೆ. ಅಂದರೆ ಎರಡು ಕಡೆಯೂ ಅದು ಮಾನವರ ಶೋಷಣೆ ಮತ್ತು ಹಿಂಸಾಚಾರವನ್ನು ಹೇಳುವುದಿಲ್ಲ. ಆದರೆ ಈ ಸತ್ಯವನ್ನು ಜನರಿಗೆ ತಿಳಿಯದಂತೆ ಮಾಡಿ ಮೇಲು ಜಾತಿ, ಕೀಳು ಜಾತಿ ಎಂದು ಸಾವಿರಾರು ವರುಷ ಮುಗ್ಧ ಮಾನವರನ್ನು ಶೋಷಿಸಿ ಲಾಭ ಪಡೆದುಕೊಂಡರು. ಅದೇ ರೀತಿ ಸ್ವಾರ್ಥಿಗಳು ಈ ಧರ್ಮಾಂಧತೆಯನ್ನು ತಮ್ಮ ಪರವಾಗಿ ಉಪಯೋಗಿಸುತ್ತಾ ರಕ್ತಪಾತಮಾಡಿಸಿದರು. ಅವರವರ ‘ನಂಬಿಕೆ’ ಎಂಬ ಭಾವನೆಯನ್ನೇ ಇಲ್ಲೆಲ್ಲಾ ಆಯುಧವಾಗಿ ಬಳಸಿರುವುದು. ಒಬ್ಬನ ಕತ್ತು ಕೊಯ್ಯುವುದು ಇನ್ನೊಬ್ಬನ ಧಾರ್ಮಿಕ ನಂಬಿಕೆಯಾದಲ್ಲಿ ಆ ನಂಬಿಕೆ ಸರಿಯೆಂದು ನೀವು ಹೇಳುವಿರೇ? ಇಲ್ಲ, ಯಾಕೆಂದರೆ ಅದು ಕ್ರೌರ್ಯವೆಂದು ನಿಮಗನಿಸುವುದು. ಆದರೆ ಇಂಥಹ ಕ್ರೌರ್ಯವು, ದೇವರು ಮತ್ತು ಧರ್ಮದ ಹೆಸರಲ್ಲಿ, ಹಿಂದಿನಿಂದಲೂ ಹಲವು ಇತರ ರೂಪಗಳಲ್ಲಿ ಇವೆ ಎಂಬುವುದನ್ನು ನಾವು ಗಣನೆಗೆ ತೆಗೆದೇ ಇಲ್ಲ ಎಂಬುವುದು ಆಶ್ಚರ್ಯಕರವಾಗಿದೆ!

ಬೇರೆ ಬೇರೆ ರೀತಿಯಲ್ಲಿ ಹಲವು ನಂಬಿಕೆಗಳು, ಈ ಜಗತ್ತಿನ ಎಲ್ಲಾ ಧರ್ಮಗಳಲ್ಲೂ, ದೇವರು ಮತ್ತು ಧರ್ಮದ ಹೆಸರಲ್ಲಿ ತುಂಬಿಕೊಂಡಿವೆ. ಅವುಗಳಲ್ಲಿ ಕೆಲವನ್ನು, ಕೆಲವು ಸಮಾಜವು, ಚಿಂತಿಸಿ, ಅದು ಸರಿಯಲ್ಲವೆಂದು ಕಂಡು ಬಲವಂತವಾಗಿ ಇಲ್ಲವಾಗಿಸಿತು, ಆದರೆ ಇನ್ನೂ ಎಲ್ಲವೂ ಅಳಿದಿಲ್ಲ. ಆದರೆ ಇನ್ನು ಕೆಲವು ಕಡೆ ಅದು ನಡೆದಿಲ್ಲ, ಹಾಗಾಗಿ ಅವುಗಳು ಹಾಗೇ ಉಳಿದುಕೊಂಡಿವೆ. ಜನರು ಸ್ವತಃ ಆಲೋಚನೆ ಮಾಡದೆ, ಪರಂಪರಾಗತವಾಗಿ ಹೇಳುತ್ತಾ ಬಂದಿರುವ  “ದೇವರು, ಧರ್ಮಗಳು, ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ” ಎಂಬ ಆ ಮಾತನ್ನು ಎಲ್ಲರೂ ಗಿಳಿಯಂತೆ ಆವರ್ತಿಸುವುದನ್ನು ಮೊದಲು ನಿಲ್ಲಿಸಬೇಕಾಗಿದೆ, ಮತ್ತು ನಂಬಿಕೆ ಎಂದರೇನು ಎಂಬುವುದರ ಕುರಿತು ಆಲೋಚಿಸಬೇಕಾಗಿದೆ.

ಇನ್ನು, ಧರ್ಮವು ಅನುಷ್ಠಾನದಲ್ಲಿರುವುದು ಎಂಬುವುದರ ಕುರಿತು ನೋಡೋಣ. ಅಂದರೆ ಧರ್ಮಗ್ರಂಥಗಳಲ್ಲಿರುವುದು ಧರ್ಮವಾಗುವುದಿಲ್ಲ ಎಂದು ಇದರ ಅರ್ಥ, ಅದು ಆ ಧಾರ್ಮಿಕ ಜೀವನ ದಾರಿಯತ್ತ ಬೊಟ್ಟುಮಾಡಿ ತೋರಿಸುವ ಚಿಹ್ನೆಮಾತ್ರ ಆಗುವುದು. ಆದರೆ ಜನರು ತಮ್ಮ ಜೀವನದಲ್ಲಿ ಧರ್ಮದ ಸಾರವಾದ ಒಳಿತನ್ನು ಬೆಳೆಸದೆ ಬರಿಯ ಚಿಹ್ನೆಗಳಿಗಾಗಿ ರಕ್ತಪಾತಮಾಡುತ್ತಿರುವರು!! ಮಕ್ಕಳು ಸೈಕಲು ಸವಾರಿಯನ್ನು ಮೊದಲು ಕಲಿಯುವಾಗ ಅದರ ಕೆಲವು ರೀತಿಯನ್ನು ಇತರರಿಂದ ಕೇಳಿ ತಿಳಿದುಕೊಳ್ಳುತ್ತಾರೆ ಅನಂತರ ಏನು ಮಾಡುತ್ತಾರೆ? ಸೈಕಲನ್ನು ತುಳಿಯುತ್ತಾ ಅಭ್ಯಾಸ ಮಾಡಿ ಕಲಿತುಬಿಡುತ್ತಾರೆ ಅಷ್ಟೆ. ಈಗ ಒಂದು ಪ್ರಶ್ನೆ, ಮಕ್ಕಳಾಗಿರುವಾಗ, ಸೈಕಲು ಸವಾರಿಯನ್ನು ಕಲಿಯುವಲ್ಲಿ, ನೀವು ಎಷ್ಟು ಸಮಯ ಅದರ ಕುರಿತು ಕೇಳಿ ತಿಳಿಯಲು ಸಮಯವನ್ನು ವ್ಯಯಮಾಡಿದ್ದೀರಿ? ಕೆಲವು ನಿಮಿಷಗಳು ಮಾತ್ರ ಅಲ್ಲವೇ? ಆಮೇಲೆ ಅದರ ಬಗ್ಗೆ ವಾದ ಮಾಡುತ್ತಾ ಅಥವಾ ಅದನ್ನು ಹೊಗಳುತ್ತಾ ಕೂತಿಲ್ಲ, ಅದನ್ನು ನಿಮ್ಮ ಜೀವನದಲ್ಲಿ ಲೀನಮಾಡುವಂಥ ಅನುಷ್ಠಾನಕ್ಕೆ ತಯಾರಾಗಿದ್ದೀರಿ, ಮತ್ತು ನೀವು ಅದನ್ನು ಸಾಧಿಸಿದ್ದೀರಿ. ಇದೇ ರೀತಿ ತನ್ನ ತನ್ನ ಧರ್ಮವನ್ನು ಹೊಗಳುತ್ತಾ ಕೂರುವುದು ಅತ್ಯಂತ ಮೂರ್ಖತವಾಗುವುದು. ಧರ್ಮವನ್ನು ಅನುಷ್ಠಿಸಿ ನಿಮ್ಮ ಜೀವನದಲ್ಲಿ ಅದನ್ನು ಲೀನವಾಗಿಸಿ, ನೀವು ಸಮಾಜದಲ್ಲಿ ಮಹತ್ ವ್ಯಕ್ತಿತ್ವವಾಗಿ ಪರಿಣಮಿಸುವಾಗ ಮಾತ್ರ ನಿಮ್ಮ ಮೂಲಕ ಧರ್ಮವು ಪ್ರಕಟವಾಗುವುದು. ನೆನೆಪಿರಲಿ, ಮಾನವನ ಜೀವನದಲ್ಲಿ ಏನು ಪ್ರತಿಫಲಿಸುವುದೋ ಅದಕ್ಕನುಸರಿಸಿ, ಅದು ಧರ್ಮವಾದರೆ ನಮಗೆ ಧರ್ಮವನ್ನು ಮತ್ತು, ಅಧರ್ಮವಾದರೆ ನಮಗೆ ಅಧರ್ಮವನ್ನು, ಅವು ಕೊಡುವವು. ಗ್ರಂಥಗಳು ಪುಸ್ತಕಗಳ ಕೆಲಸವನ್ನು ಮಾತ್ರ ಮಾಡುವವು. ಅವನ್ನು ಪೂಜಿಸಿದರೂ, ಕಂಠಪಾಠಮಾಡಿದರೂ ಆ ಶಬ್ಧಗಳು ಅಲ್ಲಿರುವವು ಅಷ್ಟೆ! ಎಲ್ಲರೂ ಉತ್ತಮರಾಗಬೇಕೆಂಬ ಒಂದು ಪುಸ್ತಕವನ್ನು ಯಾರಿಗೂ ಬರೆಯಬಹುದು, ಆದರೆ ಈ ಭೂಮಿಯಲ್ಲಿ ಅದರಿಂದಾಗಿ ಎಷ್ಟು ಜನ ಉತ್ತಮರು ಸೃಷ್ಟಿಯಾದರು ಅಷ್ಟು ಮಾತ್ರ ಅದು ಧರ್ಮವಾಗುವುದಷ್ಟೆ. ಈಗ ಜನರು, “ಉತ್ತಮರಾದ ವ್ಯಕ್ತಿಗಳು ನಿಜವಾದ ಧಾರ್ಮಿಕರು” ಎಂಬ ಹಿನ್ನೆಲೆಯಲ್ಲಿ, ಎಲ್ಲಾ ಧರ್ಮಗಳಲ್ಲೂ, ಅದನ್ನು ಅನುಷ್ಠಿಸಿ ಜೀವಿಸುವ ಆ ಧಾರ್ಮಿಕ ಜನರ ಸಂಖ್ಯೆಯನ್ನು ಒಮ್ಮೆ ಲೆಕ್ಕಹಾಕಿ ನೋಡಲಿ, ಆಗ ಪ್ರತಿಯೊಂದರಲ್ಲೂ ಬೆರಳೆಣಿಕೆಯ ಜನರು ಮಾತ್ರ ಸಿಗುವರು, ಮತ್ತು ಆಗ ಮಾತ್ರ ತಮ್ಮ ತಮ್ಮ ಧರ್ಮದ ನಿಜವಾದ ಗಾತ್ರ ಎಲ್ಲರಿಗೂ ತಿಳಿಯುವುದು!! ಈ ರೀತಿಯಲ್ಲಿ,  ದಿಕ್ಸೂಚಿಯಂತಿರುವ ಈ ಗ್ರಂಥಗಳೆಂಬ ಚಿಹ್ನೆಗಳನ್ನೇ ಧರ್ಮವೆಂದು ಹೊಗಳುತ್ತಾ, ತಮ್ಮ ಧರ್ಮವೇ ಶ್ರೇಷ್ಠಧರ್ಮ ಎಂದು ವಾದಿಸುತ್ತಾ, ಧ್ವೇಷ, ರಕ್ತಪಾತಮಾಡಿಸುವುದು ಅತ್ಯಂತ ಮೂರ್ಖತನ ಮತ್ತು ಭಯಾನಕ ನರಕದ ದಾರಿಯೆಂದು ಸ್ಪಷ್ಟಪಡಿಸಬಹುದು.

ಇನ್ನಾದರೂ, ಜಗತ್ತಿನ ಸರ್ವ ಧರ್ಮ, ಪಂಥಗಳು, ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೇ ಧರ್ಮ ಹಾಗೂ ದೇವರು ಎಂಬ ಸರಳವಾದ ಸತ್ಯವನ್ನು ತಿಳಿಸಿಕೊಡಲಿ, ಮತ್ತು ಅದರ ಅನುಷ್ಠಾನದಿಂದ,  ಮಾನವರು, ಅವರವರ ಧರ್ಮದೊಳಗಿದ್ದು ಬೆಳೆದು ಬರುವ ಆ ಆತ್ಮೀಯ ಪ್ರೀತಿಯೆಂಬ ಬೆಳಕನ್ನು ಚೆಲ್ಲುವ ಮಾನವ-ಮುತ್ತುಗಳಾಗಲಿ ಎಂದು ಆಶಿಸೋಣ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||