ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಸತ್ಯದ ವೈಜ್ಞಾನಿಕ ನಿರ್ವಚನೆಯಾಗಿದೆ. ಯಾವುದು ಇದೆಯೋ ಅದು ಮಾತ್ರ ಸತ್ಯವಾಗಲು ಸಾಧ್ಯವೆಂದು ಮೊದಲೇ ನಮಗೆ ತಿಳಿದಿದೆ. ಸತ್ಯವೆಂದರೆ ಇದ್ದದ್ದನು ಇದ್ದ ಹಾಗೆ ನೋಡುವುದು, ಹೇಳುವುದು, ಮಾಡುವುದು ಇವೆಲ್ಲಾ ಆಗುವುದು ಎಂದೂ ಹೇಳುತ್ತೇವೆ. ಅಂದರೆ, ಸೃಷ್ಟಿಕರ್ತ ದೇವರು ಇದ್ದಲ್ಲಿ ಆತನು ಒಂದು ಜಾತಿ ಹಣ್ಣನ್ನು ತಯಾರು ಮಾಡಿ ಇನ್ನೊಂದು ಜಾತಿ ಹಣ್ಣನ್ನು ಅದೇ ಸಂಕಲ್ಪದಲ್ಲೇ ತಯಾರು ಮಾಡಲು ಸಾಧ್ಯವಿಲ್ಲ, ಇನ್ನೊಂದು ಜಾತಿ ಹಣ್ಣಿನ ಸೃಷ್ಟಿ ಆಗ ಬೇಕಿದ್ದರೆ ಅದನ್ನು ಪ್ಯತ್ಯೇಕವಾಗಿ ಸಂಕಲ್ಪಿಸಿ ಸೃಷ್ಟಿಸಬೇಕಾಗುವುದು. ಮೊದಲಿನ ಹಣ್ಣಿನ ಸಂಕಲ್ಪದ ಮೇಲೆ ಸೃಷ್ಟಿಸಿದರೆ ಎರಡು ಹಣ್ಣುಗಳು ತಮ್ಮ ಅಸ್ತಿತ್ವವನ್ನು ಕಳಕೊಳ್ಳುವವು. ಹೀಗೆ, ಸೃಷ್ಟಿಕರ್ತನು ಆ ರೀತಿಯನ್ನು ಮಾತ್ರ ಅವಲಂಭಿಸುವನು. ದೇವರು ಆರು ದಿವಸಗಳಲ್ಲಿ ಒಂದೊಂದಾಗಿ ಸೃಷ್ಟಿಸುತ್ತಾ ಬಂದನು ಎಂದು ಕೆಲವು ಪುರಾಣಗಳು ಹೇಳುವಾಗ ಇದೇ ಅರ್ಥ ಅಲ್ಲಿ ಬರುವುದು. ಇಲ್ಲವಾದರೆ ದೇವರಿಗೆ ಒಂದೇ ದಿನದಲ್ಲಿ ಮತ್ತು ಒಂದೇ ಸಂಕಲ್ಪದಲ್ಲಿ ಎಲ್ಲವನ್ನೂ ಸೃಷ್ಟಿಸಬಹುದಿತ್ತು!! ಅಂದರೆ ಆತನೂ ಆತನಲ್ಲದ ಒಂದು ನಿಯಮಕ್ಕೆ ಬದ್ಧನಾಗಿ ಸೃಷ್ಟಿಸಬೇಕಾಯಿತು ಎಂಬ ಸತ್ಯವು ನಮಗೆ ದೊರಕುವುದು. ಆದುದರಿಂದಲೇ ಸೃಷ್ಟಿಕರ್ತ ದೇವನು ಇದ್ದಲ್ಲಿ ಆತನಿಗೆ ಮೂಲದ ಸತ್ಯದ ನಿಯಮಗಳನ್ನು ಅಥವಾ ಮೂಲಸತ್ಯವನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ, ಬದಲು ಆ ಮೊದಲೇ ಇದ್ದ ಆ ಮೂಲದ ಸತ್ಯದ ನಿಯಮದ ಸಹಾಯದಿಂದ ಮಾತ್ರ ಇತರ ಸತ್ಯಗಳ ಸೃಷ್ಟಿಯನ್ನುಮಾಡಿದನು ಎಂದು ಹೇಳಬೇಕಾಗುವುದು. ಅಂದರೆ, ಯಾವುದು ಅತ್ಯಂತ ಮೂಲದಲ್ಲಿರುವುದೋ ಅದುವೇ ಮೂಲ ಸತ್ಯವಾಗುವುದು. ಇಲ್ಲಿ, ಮೂಲ ಸತ್ಯವು ಆ ಮೂಲದ ಪ್ರಕೃತಿಯ ನಿಯಮಗಳಾಗಿವೆ. ಈ ಹಿನ್ನೆಲೆಯಲ್ಲೇ, ಇತ್ತ ದೇವರ ವ್ಯಕ್ತಿತ್ವದ ಮೂಲದ ಸತ್ಯದ ಬಗ್ಗೆ ಹೇಳುವಾಗ, ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೈತಿಕತೆಯು ದೇವರ ಅಸ್ತಿತ್ವದ[ವ್ಯಕ್ತಿತ್ವದ]ಸಾರ ಅಥವಾ ‘ದೇವತ್ವ’ದ ಮೂಲ ನಿಯಮವಾಗುವುದು ಎನ್ನುವುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅದನ್ನು[ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ ಗುಣಗಳನ್ನು], ದೇವರನ್ನೇ ಸೃಷ್ಟಿಸುವ ಆ ಮೂಲದೇವರು ಅಥವಾ ದೇವರ ಕಾರಣ ಎನ್ನಬಹುದು. ಈ ಮೂಲ ಕಾರಣವನ್ನು ಹೊತ್ತ ಶಕ್ತಿಯು ಮಾತ್ರ ದೇವಶಕ್ತಿಯಾಗಲು ಸಾಧ್ಯ, ಮತ್ತು ಅವುಗಳು ಇಲ್ಲದ ಶಕ್ತಿಯು ಇತರ ಅಥವಾ ಅಸುರ ಶಕ್ತಿಯಾಗುವುದು ಎಂಬಲ್ಲಿ ಪುರಾಣಗಳ ರೀತಿಯಲ್ಲೂ ದೇವರು ಹುಟ್ಟಿಕೊಂಡಿರುವುದು ಈ ಪವಿತ್ರ ಮೂಲ ಸ್ವಭಾಗಳಿಂದ ಎಂದೂ ಹೇಳಬಹುದು.
ಈ ಜಗತ್ತನ್ನು ಮೇಲೆತ್ತಲು ಸಾಧ್ಯವಾಗುವ ಅತ್ಯಂತ ಸುಲಭದ ದಾರಿಯನ್ನು ಒಂದೇ ಶಬ್ಧದಲ್ಲಿ ಹೇಳಬಹುದು. ಅದುವೇ ‘ವಿಶಾಲ ಮನಸ್ಕತೆ.’ ಅದರಿಂದ ಈ ಜಗತ್ತಿನ ಸರ್ವ ತೊಂದರೆಗಳೂ ಬಗೆಹರಿಯುವುದು. ಆದರೆ ಇವನ್ನು ಬೆರಳೆಣಿಕೆಯ ಮಹಾತ್ಮರನ್ನು ಬಿಟ್ಟಲ್ಲಿ ಬೇರೆಲ್ಲೂ ನಮಗೆ ಕಾಣಲು ಸಾಧ್ಯವಾಗುವುದಿಲ್ಲ! ಧರ್ಮ, ಪಂಥಗಳಲ್ಲಿ ಈ ವಿಶಾಲ ಮನಸ್ಕತೆಯ ಸೃಷ್ಟಿಯು, ಕೈಗಾರಿಕಾ ರೀತಿಯಲ್ಲಿ, ಆ ದೊಡ್ಡ ಪ್ರಮಾಣದಲ್ಲಿ ಆಗಬೇಕಾಗಿತ್ತು. ಆದರೆ ದೌರ್ಭಾಗ್ಯವಶಾತ್, ಅವುಗಳಲ್ಲಿ ಅವುಗಳು ಸೃಷ್ಟಿಯಾಗುವ ಬದಲು ಕೈಗಾರಿಕಾ ರೀತಿಯಲ್ಲಿ ಸಂಕುಚಿತ ಮನೋಭಾವ ಮತ್ತು ಅವುಗಳ ಮಕ್ಕಳಾದ ಆ ದ್ವೇಷ, ರಕ್ತಪಾತಗಳು ಸೃಷ್ಟಿಯಾಗುತ್ತಿವೆ!
ನೀವು ಎಲ್ಲೇ ಹೋಗಿ ಈ ‘ನಮ್ಮ’ ಎಂಬುವುದು ಇದ್ದೇ ಇದೆ. ಮನೆತನ, ಜಾತಿ, ಭಾಷೆ, ಧರ್ಮ, ಪಂಥ, ರಾಜ್ಯ, ದೇಶ, ಇವೆಲ್ಲಾ ನಮ್ಮನ್ನು ಒಗ್ಗೂಡಿಸಲು ಮಾಡುವ ಯತ್ನಗಳಾದರೂ ಅವೆಲ್ಲಾ ನಿಜವಾಗಿಯೂ ನಮ್ಮನ್ನು ತಮ್ಮೊಳಗೆ ದೂರ ಮಾಡುವಲ್ಲಿ ಹೆಚ್ಚು ಕೆಲಸ ಮಾಡುವವು!! ಮೇಲಿನ ಪ್ರತಿಯೊಂದನ್ನು ನೋಡಿದಾಗಲೂ ಅವುಗಳು ಭಯಾನಕ ಹಿಂಸೆಗಳನ್ನು ಈ ಜಗತ್ತಲ್ಲಿ ಸೃಷ್ಟಿಸಿದೆ ಎಂದು ತಿಳಿಯುವುದು. ನಿಜವಾಗಿಯೂ ನಮಗೆ ಆ ವಿಶಾಲ ಮನಸ್ಕತೆ ಇದ್ದಲ್ಲಿ ಇವುಗಳಿಗೆ ಒತ್ತುಕೊಡದೆಯೇ ಒಗ್ಗೂಡಿ ಜೀವಿಸಬಹುದು ಎಂಬುವುದು ಸತ್ಯ. ಆ ಮಹಾತ್ಮರು ನಮಗೆ ಇದನ್ನು ಮೊದಲೇ ಸೂಚಿಸಿದ್ದಾರೆ, ಆದರೆ ಜನರು ತಮ್ಮ ಸ್ವಾರ್ಥವನ್ನು ಬಿಡಲು ತಯಾರಾಗುವರೇ? ಚುಟುಕಾಗಿ ಹೇಳುವುದಾದರೆ, ನಿಜವಾದ ದೇವರು ಮತ್ತು ಧರ್ಮ ಯಾರಿಗೂ ಬೇಕಾಗಿಲ್ಲ ಬದಲು ಅವುಗಳ ಹೆಸರು ಮತ್ತು ಗ್ರಂಥದ ವಾಕ್ಯಗಳು ಹಾಗೂ ಸ್ವಲ್ಪ ಆಚರಣೆಗಳು ಬೇಕಾಗಿದೆ ಅಷ್ಟೆ! ಮಹಾತ್ಮರ ಮಾತನ್ನು ಲೆಕ್ಕಿಸದಿರಲು ಮಾನವನ ಸ್ವಾರ್ಥವೇ ಕಾರಣವಾಗಿದೆ.
ಮಹಾತ್ಮರು ಈ ಭೂಮಿಯೇ ಒಂದು ಕುಟುಂಬ ಎಂದು ಆ ವಿಶಾಲ ಮನಸ್ಕತೆಯನ್ನು ಕೊಟ್ಟರು. ಮತ್ತು ‘ನೀವು ಯಾರೂ ಜಾತಿ ಶೋಷಣೆ ಮಾಡಬೇಡಿ, ಪಂಥ, ಧರ್ಮವೆಂದು ಹೊಡೆದಾಡಿ ಅವುಗಳ ನಿಜವಾದ ಉದ್ದೇಶವನ್ನೇ ಧ್ವಂಸ ಮಾಡಬೇಡಿ’ ಎಂದು ಒತ್ತಿ ಹೇಳಿದರು, ಆದರೆ ಅಲ್ಪನಾದ ಮಾನವ, ಆ ತನ್ನ ಅಲ್ಪತನದ ದೃಷ್ಠಿಯಿಂದ ಧರ್ಮ, ಪಂಥಗಳ ಶ್ರೇಷ್ಠತೆಯನ್ನು ವಿವರಿಸುವುದನ್ನು ಇನ್ನೂ ನಿಲ್ಲಿಸಲಿಲ್ಲ! ನಿಲ್ಲಿಸಿದರೆ, ‘ನಾವು ಮೇಲು ಜಾತಿಯವರು’ ಎಂದು ಹೇಳಿಕೊಳ್ಳುವುದು ಸಾಧ್ಯವಾಗುವುದೇ? ಮತ್ತು ‘ನಾವು ಶ್ರೇಷ್ಠ ಧರ್ಮದವರು’ ಎಂದು ಕೊಚ್ಚಿಕೊಳ್ಳುವುದು ಸಾಧ್ಯವಾಗುವುದೇ? ಈ ರೀತಿಯಲ್ಲಿ, ಈ ಜಗತ್ತಲ್ಲಿ, ಬಹಳ ಹಿಂದಿನಿಂದಲೇ, ಧರ್ಮ, ಪಂಥಗಳನ್ನು ದುರುಪಯೋಗ ಮಾಡಿರುವುದು ನಮಗೆ ಕಾಣಿಸುವುದು.
ಆಡಳಿತಾ ಸೌಕರ್ಯುಕ್ಕಾಗಿ ನಾವು ರಾಜ್ಯ, ರಾಷ್ಟ್ರಗಳಾಗಿದ್ದೇವೆ. ಆದರೆ ನಾವೆಲ್ಲಾ ಆ ಮಹಾತ್ಮರು ಹೇಳುವಂತೆ ಈ ಭೂಮಿ ತಾಯಿಯ ಮಕ್ಕಳು. ನಾವು ಹುಟ್ಟಿದ ದೇಶವು, ಈ ಹಿನ್ನೆಲೆಯಲ್ಲಿ, ನಮ್ಮ ತಾಯಿಯಾಗುವುದಿಲ್ಲ ಬದಲು ನಮ್ಮ ಸಹೋದರಿ ಮಾತ್ರ ಆಗುವಳು. ಇನ್ನೂ ಹಲವು ನಮ್ಮ ಸಹೋದರಿಯರು ಈ ಭೂಮಿಯಲ್ಲಿರುವರು ಎಂಬ ಆ ವಿಶಾಲ ಮನಸ್ಕತೆಯ ಭಾವನೆಯು ಇದರಿಂದ ಸೃಷ್ಟಿಯಾಗುವುದು. ಮಾನವ ಕುಲವೆಂಬ ಈ ಕುಟುಂಬವು ನಿಂತಿರುವುದು ಒಂದು ದೇಶದಲ್ಲಿ ಅಲ್ಲ, ಬದಲು ಈ ಭೂಮಿ ತಾಯಿಯ ಮಡಿಲಲ್ಲಿ ಎಂಬುವುದನ್ನು ಮರೆಯಬಾರದು. ಚಿಕ್ಕ ಪುಟ್ಟ ನಂಬಿಕೆ, ಆಚಾರಗಳೂ ಈ ಭೂಮಿಯಲ್ಲಿ ಎಷ್ಟು ಧ್ವೇಷವನ್ನು ಮತ್ತು ಅಪಾಯವನ್ನು ಸೃಷ್ಟಿಸಿದೆ ಎಂದು ನಮಗೆಲ್ಲರಿಗೂ ಗೊತ್ತು, ಅದಕ್ಕಾಗಿ ಈ ಜಗತ್ತಿನ ಎಲ್ಲಾ ದೇಶಗಳೂ ಒಟ್ಟಾಗಿ ‘ಈ ಭೂಮಿ ತಾಯಿಯ
ಮಕ್ಕಳು ನಾವು’ ಎಂಬ ಭಾವನೆಯನ್ನು ಬೃಹತ್ತಾಗಿ ಬೆಳೆಸಬೇಕಾಗಿದೆ, ಆಗ ಮಾತ್ರ ಅಲ್ಪರಾದ ಜನರು ಅದನ್ನು ಕೇಳಿ, ತನ್ನ ಭಾಷೆ, ಮನೆತನ, ಜಾತಿ, ಧರ್ಮ, ದೇಶ, ಇತ್ಯಾದಿಗಳ ಬಗ್ಗೆ ಕೊಚ್ಚಿಕೊಳ್ಳುವುದನ್ನು ನಿಲ್ಲಿಸುವರು! ಈ ಜಾಗತಿಕ ಒಕ್ಕೂಟದ ಚಿಂತನೆ ಮುಂದುವರಿಯುವುದಾದರೆ ಜಗತ್ತಲ್ಲಿ ಶಾಂತಿ ನೆಲೆಯಾಗುವುದು ಖಂಡಿತ.
ಇದು ಬರೇ ಕಾಲ್ಪನಿಕವಲ್ಲ, ಸಾಧ್ಯವಾಗಬಹುದು! ಇದಕ್ಕಾಗಿ, ನಂಬಿಕೆ ಎಂಬ ಆ ಬಂಧನಗಳಿಂದ ಕೋಟಿ ಪಾಲು ಮಹತ್ವದ ‘ಸತ್ಯ’ ಎಂಬ ಆ ನಿತ್ಯ ಸ್ವಾತಂತ್ರ್ಯದೆಡೆಗೆ ನಾವು ಸ್ವಲ್ಪ ಸರಿದರೆ ಸಾಕಾಗುವುದು! ಯಾರಾದರೂ “ದೇವರು ಸತ್ಯ” ಎಂದು ಅರ್ಥಮಾಡಿಕೊಂಡಾಗ “ಅದು ಪ್ರಾಯೋಗಿಕವಲ್ಲ” ಎಂದು ಹೇಳಿದರೆ, ಹಾಗೆ ಹೇಳುವ ನಂಬಿಕೆಯವನು ಒಬ್ಬ ಆಸ್ತಿಕನೇ ಆಗುವುದಿಲ್ಲ, ಯಾಕೆಂದರೆ ಆಗ ಆತನು ತನ್ನ ದೇವರ ಸತ್ಯದ ಸಂಕಲ್ಪವನ್ನೇ ಧ್ವಂಸಮಾಡಬಯಸುವ ಸೈತಾನನಾಗುವನು!!!