1. ಜಗತ್ತಿನ ಎಲ್ಲಾ ಧರ್ಮ, ಪಂಥಗಳ ಜನರ ನಂಬಿಕೆಯ ಬಗ್ಗೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಇರುವ ವಿಚಾರಗಳ ಬಗ್ಗೆ ಇನ್ನೂ ಸ್ವಲ್ಪ ಹೆಚ್ಚು ವಿವರಿಸಬಹುದೇ?
ಉತ್ತರ- ನಾನು ಈ ಮೊದಲೇ ಇದರ ಬಗ್ಗೆ ಅಲ್ಲಲ್ಲಿ ಹೇಳಿರುವೆನು. ಈಗ ಚುಟುಕಾಗಿ ಇನ್ನೊಮ್ಮೆ ಹೇಳುವೆನು ಅಷ್ಟೆ. ಮೊದಲಿಗೆ, ‘ನಂಬಿಕೆ’ಯ ಬಗ್ಗೆ ನಾನು ಮಾತನಾಡುವುದೆಂದರೆ, ಅದು “ನಂಬಿಕೆ, ಆಚಾರಗಳು ಯಾರಿಗೂ ಬೇಕಾಗಿಲ್ಲ, ಅದರ ಅಗತ್ಯವಿಲ್ಲ” ಇತ್ಯಾದಿ ರೀತಿಯಲ್ಲಿ ಅಲ್ಲವೇ ಅಲ್ಲ ಎಂಬುವುದನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಆದರೆ, ನಾನು ವಿವರಿಸುತ್ತಿರುವುದು, ನಂಬಿಕೆ, ಆಚಾರಗಳಿಗೆ ಈ ಜಗತ್ತಿನ ಎಲ್ಲಾ ಧರ್ಮ, ಪಂಥಗಳಲ್ಲಿಯೂ ಕೊಟ್ಟಿರುವ ಸ್ಥಾನ, ಮತ್ತು ನಿಜವಾಗಿಯೂ ಅವುಗಳ ಲಾಭ,ತೊಂದರೆ, ಇತ್ಯಾದಿಗಳ ಬಗ್ಗೆ, ನಾನು ಕಂಡ ಪ್ರಾಚೀನ ವಾಮಾಚಾರದ ರಹಸ್ಯ ಸತ್ಯಗಳ ಆ ನನ್ನ ಅರಿವಿನ ಹಿನ್ನೆಲೆಯಲ್ಲಿ, ತಿಳಿಸಲು ಮಾತ್ರವಾಗಿದೆ. ಆ ಪ್ರಾಚೀನಾ ವಾಮಾಚಾರದ ರಹಸ್ಯಗಳ ಹಿನ್ನೆಲೆಯನ್ನು ಈ ಹಿಂದೆ ಹೆಚ್ಚು ವಿವರಿಸಿದ್ದರಿಂದ, ಅದನ್ನು ಇಲ್ಲಿ ಹೊರತು ಪಡಿಸಿ, ನಂಬಿಕೆ ಮತ್ತು ಸತ್ಯದ ವ್ಯತ್ಯಾಸವನ್ನು ಮಾತ್ರ ಸ್ವಲ್ಪ ಹೆಚ್ಚು ಜನರ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುವೆನು.
ಈ ಮೊದಲೇ ಹೇಳಿರುವಂತೆ, ಇತರರ ವಿಚಾರ ಅಥವಾ ಅನುಭವಗಳನ್ನು ತರ್ಕ ಮಾಡದೆ ಒಪ್ಪಿಕೊಳ್ಳುವುದನ್ನು ನಂಬಿಕೆ ಎನ್ನುವರು. ಆದರೆ, ‘ಸತ್ಯ’ ಎಂದಾಗ, ಅಲ್ಲಿ ವಿಚಾರ ಅಥವಾ ಅನುಭವವನ್ನು ಹಲವು ಬೇರೆ ಬೇರೆ ರೀತಿಗಳಲ್ಲಿ ತರ್ಕದ ಹಿನ್ನೆಲೆಯಲ್ಲಿ ವಿವರಿಸಬೇಕಾಗುವುದು, ಮತ್ತು ಆ ಎಲ್ಲಾ ಕಡೆಗಳಲ್ಲೂ, ಅವು ‘ಒಂದೇ ರೀತಿಯಲ್ಲಿ’ ಉತ್ತರವನ್ನು ನೀಡಬೇಕಾಗುವುದು. ವಿಜ್ಞಾನಿಗಳು ಸತ್ಯವನ್ನು ಕಾಣಲು ಅನುಸರಿಸುವ ಮಾರ್ಗವೂ ಇದೇ ರೀತಿಯದ್ದಾಗಿದೆ. ಅಲ್ಲಿ ತರ್ಕವು,ಸಾರ್ವತ್ರಿಕವಾಗಿ ಅದರಲ್ಲಿ ಹುದುಗಿರುವ, ಆ ಸತ್ಯತೆಯನ್ನು ಜಗತ್ತಿಗೆ ಪ್ರದರ್ಶಿಸಿ ಸ್ಪಷ್ಟಪಡಿಸುವುದು. ಧರ್ಮ, ಪಂಥಗಳು ನಿಜವಾಗಿಯೂ ಈ ರೀತಿಯಲ್ಲಿ ಸತ್ಯವನ್ನು ಮಾತ್ರ ಪ್ರತಿಪಾದಿಸಬೇಕಾಗಿತ್ತು, ಆದರೆ, ದುರದೃಷ್ಟವಶಾತ್, ಅವುಗಳು ಆ ರೀತಿಯಲ್ಲಿ ಸತ್ಯವನ್ನು ಹೇಳುವುದನ್ನು ಬಿಟ್ಟು, ‘ತಮ್ಮ ಧರ್ಮದ ನಂಬಿಕೆ, ಆಚಾರಗಳೇ ಸರಿ’ ಎಂದು ನಂಬುವ ಆ ನಂಬಿಕೆ ರೀತಿಯನ್ನು ಅನುಸರಿಸುತ್ತಿರುವವು! ಆ ಎಲ್ಲಾ ಧರ್ಮ, ಪಂಥ, ದರ್ಶನ ಇತ್ಯಾದಿಗಳಿಗೆ, ತಮ್ಮಲ್ಲಿ ಇವೆ ಎಂದು ಹೇಳುವ ಆ ಸತ್ಯಗಳನ್ನು, ಆ’ಸಾರ್ವತ್ರಿಕ ಸತ್ಯ’ ಎಂಬ ಆ ವೈಜ್ಞಾನಿಕ ರೀತಿಯಲ್ಲಿ ತೋರಿಸಿ ಕೊಡಲು ಸಾಧ್ಯವಾಗುವುದಿಲ್ಲ ಎಂಬುವುದೇ ಅವು ನಂಬಿಕೆಯ ರೀತಿಯವುಗಳು ಎನ್ನಲು ಕಾರಣವಾಗಿರುವುದು. ಇನ್ನು, ಇವು ಎಲ್ಲವೂ ತಮ್ಮದು ಮಾತ್ರ ‘ಸತ್ಯ’ ಎಂದು ಮಂಡಿಸಿ, ಇತರರ ಮಂಡನೆಗಳು ‘ಸತ್ಯವಲ್ಲ’ ಎಂದು ಖಂಡಿಸುವ ರೀತಿಯನ್ನು ಅನುಸರಿಸುತ್ತಾ ಸಾವಿರಾರು ವರುಷಗಳನ್ನು ಅದಕ್ಕಾಗಿ ವ್ಯಯ ಮಾಡುತ್ತಾ ಬಂದಿರುವವು. ಒಟ್ಟಿನಲ್ಲಿ ನಾವು ನೋಡುವಾಗ, ಯಾರದ್ದು ಇವುಗಳಲ್ಲಿ ಸತ್ಯ ಎಂದು ಯಾರಾದರೂ ನಿಮ್ಮಲ್ಲಿ ಕೇಳಿದರೆ, ಎಲ್ಲರೂ ತಮ್ಮೊಳಗೆ “ಇತರರದ್ದು ಸತ್ಯವಲ್ಲ, ನಮ್ಮದು ಮಾತ್ರ ಸತ್ಯ” ಎಂದು ಖಂಡಿಸಿರುವ ಹಿನ್ನೆಲೆಯಲ್ಲಿ, ನಿಮಗೆ, “ಯಾರದ್ದೂ ಸತ್ಯವಲ್ಲ” ಎಂಬ ಉತ್ತರವನ್ನು ಕೊಡಲು ಮಾತ್ರ ಸಾಧ್ಯವಾಗುವುದು! ಈ ರೀತಿಯಲ್ಲಿ, ನಂಬಿಕೆಗಳು ಆ ನಿಜವಾದ ಸತ್ಯವನ್ನು ಕೊಡುವಲ್ಲಿ ಅಸಮರ್ಥವಾಗಿರುವವು. ಜಗತ್ತಲ್ಲಿ ಎಲ್ಲಾ ಧರ್ಮ, ಪಂಥಗಳು, ತಮ್ಮ ತಮ್ಮ ಪ್ರವಾದಿ, ಗುರುಗಳು ಹೇಳಿರುವ ಆ ಮಾತುಗಳನ್ನು ಸಹಸ್ರ ವರುಷಗಳಿಂದ ಆವರ್ತಿಸುತ್ತಾ, ಇತರ ಧರ್ಮ, ಪಂಥಗಳೊಂದಿಗೆ ಖಂಡನೆ, ಮಂಡನೆಯ ವಾದಗಳನ್ನು ಮಾಡುತ್ತಾ ಬಂದಿರುವವು ಹೊರತು ಸಾರ್ವತ್ರಿಕವಾದ ಆ ಸತ್ಯವನ್ನು ಪಡೆಯಲು ಇಂದೂ ಪ್ರಯತ್ನವನ್ನು ಮಾಡುವುದಿಲ್ಲ ಎಂಬುವುದು ಅತ್ಯಂತ ಅಚ್ಚರಿಯನ್ನುಂಟುಮಾಡುವುದು!! ಅಂದರೆ, ಕಲ್ಪಾಂತ್ಯದವರೆಗೂ ಇವು, ಇದೇ ರೀತಿ,ಸತ್ಯವನ್ನು ಒಂದು ಬದಿಗಿಟ್ಟು, ಆವರ್ತನೆಯ ಆ ಹಳೆಯ ವಾದಗಳನ್ನು ಮುಂದುವರಿಸುತ್ತಾ ಅಂತ್ಯವಾಗುವವು ಎಂದು ಅರ್ಥ. ಒಂದು ಮುಖ್ಯ ವಿಷಯವೆಂದರೆ, ಸತ್ಯಕ್ಕೆ ವಾದದ ಅಗತ್ಯವಿಲ್ಲ! ಯಾಕೆಂದರೆ, ಸತ್ಯವಾದಲ್ಲಿ ಎಲ್ಲರೂ ಒಪ್ಪಲೇಬೇಕು, ಮತ್ತು ಆಗ ಅಲ್ಲಿ ವಾದದ ಅಗತ್ಯ ಬರುವುದಿಲ್ಲ.
ಎಲ್ಲಾ ಧರ್ಮ, ಪಂಥ, ಇತ್ಯಾದಿಗಳು ತಮ್ಮದು ಮಾತ್ರ ಸತ್ಯ ಎನ್ನುವವು, ಆದರೆ ಅವುಗಳು ಸತ್ಯವೇ ಆದಲ್ಲಿ, ಅವುಗಳಿಗೆ ಸಾರ್ವತ್ರಿಕತೆ ಇರಲೇಬೇಕಾಗುವುದು. ಸೂರ್ಯನು ಸಾರ್ವತ್ರಿಕವಾಗಿ ಎಲ್ಲರೂ ಒಪ್ಪುವ ಸತ್ಯವಾಗಿದೆ. ಆದರೆ, ಆ ರೀತಿ ಜಗತ್ತಲ್ಲಿ ಯಾವ ಧರ್ಮ, ಪಂಥ, ದರ್ಶನಗಳೂ ಇಲ್ಲ ಎಂಬುವುದನ್ನು ನೆನಪಿಡಬೇಕು. ಅಂದರೆ, ಹೆಚ್ಚಿನವು ತರ್ಕವನ್ನು ಮಾಡದೆ ತಮ್ಮ ತಮ್ಮ ಪುರಾಣ ಕಥೆಗಳನ್ನು ನಂಬಿಕೊಂಡಿದ್ದರೆ, ಇನ್ನೂ ಕೆಲವು ತಮ್ಮ ಬೇಲಿಯೊಳಗೆ ಮಾತ್ರ ಅನ್ವಯವಾಗುವ ಕೆಲವೊಂದು ತರ್ಕವನ್ನು ಎತ್ತಿ ಹಿಡಿದು ತಮ್ಮದೇ ಸರಿ ಎಂದು ವಾದಿಸುವವು ಅಷ್ಟೆ. ಈ ರೀತಿಯಲ್ಲಿ, ತಮ್ಮ ತಮ್ಮ ಬೇಲಿಯೊಳಗಿನ ತರ್ಕಕ್ಕಾಗಿ ಮಾತ್ರ ಎಲ್ಲ ಧರ್ಮ, ಪಂಥಗಳೂ, ವಕೀಲರ ತರ, ತರ್ಕವನ್ನು ಉಪಯೋಗಿಸುತ್ತಾ ಬಂದಿರುವವು ಹೊರತು ಸಾರ್ವತ್ರಿಕ ಸತ್ಯವನ್ನು ಕಾಣುಲು, ನ್ಯಾಯಾಧೀಶರು ತರ್ಕವನ್ನು ಬಳಸುವ ತರ, ತರ್ಕವನ್ನು ಬಳಸುವುದಿಲ್ಲ ಎಂದು ತಿಳಿಯಬೇಕು. ಹೀಗಿರುವಾಗ, “ನಮ್ಮ ಧರ್ಮ, ನಮ್ಮ ಪಂಥ, ನಮ್ಮ ಜಾತಿ, ನಮ್ಮ ದರ್ಶನ, ನಮ್ಮ ಪರಂಪರೆ, ನಮ್ಮ ಪ್ರವಾದಿ, ನಮ್ಮ ಗುರುಗಳು” ಮಾತ್ರ ಸರಿ ಅಥವಾ ಸತ್ಯ ಎಂದು ನಂಬಿಕೆ ಹಿನ್ನೆಲೆಯಲ್ಲಿ ಹೇಳುವಾಗ, ಅದಕ್ಕೆ, ಹಾಗೆ ಹೇಳುವವರ ಮನಸ್ಸಿನ ಅಲ್ಪತನಕ್ಕೆ, ಸಮಾಧಾನವನ್ನು ತಂದುಕೊಡಲು ಮಾತ್ರ ಸಾಧ್ಯವಾಗುವುದು. ಆದುದರಿಂದ, ಕಣ್ಣು ಮುಚ್ಚಿ ತಮ್ಮದೇ ಸರಿ ಎಂದು ನಂಬುವ ರೀತಿಯು ಸತ್ಯದ ರೀತಿಯಲ್ಲ, ಬದಲು, ಅವರವರ ಅಲ್ಪತನಕ್ಕೆ ಸಮಾಧಾನವಾಗಲು, ಕಣ್ಣು ಮುಚ್ಚಿ ತಿನ್ನುವ, ‘ನಂಬಿಕೆ-ಮಾತ್ರೆ’ ಮಾತ್ರ ಎಂದು ತಿಳಿಯಬೇಕು. ಇನ್ನು, ಸತ್ಯದ ರೀತಿಯು ಹೇಗಿದೆ ಎಂದರೆ, ಆ ಸಾರ್ವತ್ರಿಕ ಸತ್ಯವನ್ನು ಯಾರು ಹೇಳಿದರೂ,ವಿಜ್ಞಾನ ಸತ್ಯಗಳಂತೆ, ಅದನ್ನು ಸತ್ಯವೆಂದೇ ಒಪ್ಪುವ ರೀತಿ ಅದಾಗಿರುವುದು. ಇದುವೇ, ನಿಜವಾದ ದೇವರ ಹಾಗೂ ಧರ್ಮದ ರೀತಿ ಆಗಬೇಕಾಗಿರುವುದು. ಧರ್ಮವು ಹೇಳುವ ಮಾತುಗಳನ್ನು ಆಲಿಸಿರಿ. ಅದು “ದೇವರು ಸತ್ಯ”, “ಧರ್ಮವು ಸತ್ಯ”, ಹಾಗೂ”ಸತ್ಯಮೇವ ಜಯತೆ, ನಾನೃತಂ” ಎಂಬೆಲ್ಲಾ ಮಾತುಗಳನ್ನು ಹೇಳಿದೆ. ಅಂದರೆ ಸಾರ್ವತ್ರಿಕ ಸತ್ಯದ ಬಗ್ಗೆ ಮಾತ್ರ ಹೇಳಿದೆ, ಹೊರತು ಧರ್ಮವನ್ನು ನಮ್ಮ ನಮ್ಮ ನಂಬಿಕೆಗೆ ಬಿಟ್ಟ ವಿಚಾರ ಎಂದು ಹೇಳಿಲ್ಲ. ಆದುದರಿಂದ ಆ ಮಾತುಗಳೇ ಧರ್ಮದ ಮೊದಲ ಹಾಗೂ ಕೊನೆಯ ಪಾಠವಾಗಿದೆ, ಮತ್ತು ಆಗಬೇಕಾಗಿರುವುದು ಎಂದು ತಿಳಿಯಬಹುದು.
ಧರ್ಮಗಳು, ಕಾಡು ಜನಾಂಗದಿಂದ ಮಾನವನನ್ನು ಮೇಲೆ ತರುವಲ್ಲಿ ಹೆಚ್ಚು ಹೆಚ್ಚು ಸತ್ಯವನ್ನು ಕಂಡುಕೊಂಡು ಆ ಮೂಲಕ ಸಹಕರಿಸಿವೆ. ಆದರೆ, “ಭೂಮಿಯು ಚಪ್ಪಟೆ”, “ಸೂರ್ಯನು ಒಂದು ಗ್ರಹದಂತೆ ಭೂಮಿಯನ್ನು ಸುತ್ತುವನು”, ಎಂಬ ರೀತಿಯ ಹಲವು ಅಸತ್ಯಗಳನ್ನು ಎಲ್ಲಾ ಧರ್ಮ, ಪಂಥಗಳ ದೇವರು, ಪ್ರವಾದಿ, ಗುರು, ದರ್ಶನ, ಶಾಸ್ತ್ರ, ಇತ್ಯಾದಿಗಳು ಹೇಳಿರುವಾಗ, ಈ ಎಲ್ಲ ಧರ್ಮ, ಪಂಥಗಳು, ಸ್ಥೂಲ ಜಗತ್ತಿನ ಸತ್ಯಗಳ ವಿವರಣೆಯಲ್ಲೂ, ಪೂರ್ಣ ಸತ್ಯವನ್ನು ಹೇಳಿಲ್ಲ ಬದಲು ಕೆಲವು ಸತ್ಯಗಳನ್ನು ಮಾತ್ರ ಹೇಳಿರುವವು ಎಂದೂ ಸ್ಪಷ್ಟವಾಗುವುದು. ಹೀಗಿರುವಾಗ, ಇನ್ನಾದರೂ, ಸಾರ್ವತ್ರಿಕವಲ್ಲದ ಯಾವುದೂ ಸತ್ಯವಲ್ಲ, ಹಾಗೂ ‘ಸತ್ಯವು ತಮ್ಮ ಗ್ರಂಥ ಅಥವಾ ಶಾಸ್ತ್ರದೊಳಗೆ ಮಾತ್ರ ಇರುವುದು ಮತ್ತು ಇತರ ಕಡೆ ಇಲ್ಲ’ ಎಂಬ ಭ್ರಮೆಯ ನಂಬಿಕೆಗಳೊಂದಿಗೆ, ಮಕ್ಕಳ ತರ, ಪಟ್ಟು ಹಿಡಿದು ಕೂರುವ ಆ ಅಲ್ಪತನವನ್ನು ಬಿಟ್ಟು ಈ ಜಗತ್ತಿನ ಎಲ್ಲಾ ಧರ್ಮ, ಪಂಥಗಳು ಮೇಲೇರಬಹುದೆಂದು ಆಶಿಸೋಣ.
2. ನೀವು ಹೇಳುವ ರೀತಿಯೂ, ಇತರ ಎಲ್ಲಾ ಕಡೆಗಳಲ್ಲಿ ಮಾಡುವಂತೆ, ನಿಮ್ಮ ಪರ ವಿಚಾರಗಳನ್ನು ಸಮರ್ಥಿಸಿಕೊಳ್ಳುವ ಆ ವಾದ ರೀತಿಯಲ್ಲವೇ?
ಉತ್ತರ- ಈಗ, ಇದಕ್ಕೆ ಉತ್ತರವನ್ನು ನಾನು ಸ್ವಲ್ಪ ವಿವರವಾಗಿ ಹೇಳಬೇಕಾಗುತ್ತದೆ. ಅಂದರೆ ಹಲವು ಕಡೆಗಳಿಂದ ಉತ್ತರಿಸಬೇಕಾಗುತ್ತದೆ ಎಂದು ಅರ್ಥ.
ಮೊದಲ ಅಂಶ ಎಂದರೆ, ‘ನನ್ನ ಪರ’ ಎಂದು ಹೇಳುವ ಯಾವುದೂ ನನಗಿಲ್ಲ ಎಂಬುವುದಾಗಿದೆ. ನಾನು ಪ್ರತಿಪಾದಿಸುವ ವಿಚಾರಗಳು, ಎಲ್ಲಾ ಧರ್ಮ, ಪಂಥಗಳಲ್ಲಿ ಹೇಳಿರುವ ಆ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೈತಿಕತೆಗಳನ್ನು ಮಾತ್ರವಾಗಿದೆ. ಇವು ಅಲ್ಲದೆ ಹೊಸತಾಗಿ ನಾನೇನು ಹೇಳಿಲ್ಲ. ಹಾಗಾಗಿ ನನಗೆ ಯಾವುದೇ ಧರ್ಮ, ಪಂಥ, ಪರವಾಗಿ, ಅಥವಾ ಹೊಸತಾಗಿ ನನ್ನದೇ ರೀತಿಯ ಪರವಾಗಿ ವಾದಮಾಡಲು ಸಾಧ್ಯವಾಗಲಾರದು. ಆದರೆ, ಒತ್ತಿ ಹೇಳಬೇಕಾದ ಮತ್ತು ಧರ್ಮ, ಪಂಥಗಳ ಆ ಸಾರದ ಭಾಗವಾದ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯನ್ನು ಮುಚ್ಚಿಟ್ಟು, ಎಲ್ಲ ಧರ್ಮಗಳಲ್ಲೂ, ಆ ತಮ್ಮೊಳಗೆ ವಿರುದ್ಧ ಆಚಾರ, ನಂಬಿಕೆಗಳನ್ನೇ ‘ಧರ್ಮದ ಸರ್ವಸ್ವ’ ಎಂಬಂತೆ ಬಿಂಬಿಸುತ್ತಾ ಬಂದಿರುವರು! ನಂಬಿಕೆ, ಆಚಾರಗಳು ಏನೇ ಆದರೂ ಅವು ಅವರವರ ಆಯ್ಕೆ ಮಾತ್ರವಾಗಿದೆ. ಆದರೆ ಧರ್ಮದ ತಿರುಳು ಇರುವುದು ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಆಗುವುದು. ಈ ಜಗತ್ತಿನಲ್ಲಿ ಈ ಆಚಾರ, ನಂಬಿಕೆಗಳ ಹಿನ್ನೆಲೆಯಲ್ಲಿ ಇದುವರೆಗೂ ಜಾತೀ ಶೋಷಣೆ, ಧರ್ಮಾಂಧತೆಯ ರಕ್ತಪಾತಗಳು ಸಹಸ್ರ ಸಂಖ್ಯೆಯಲ್ಲಿ ನಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಮಾನವರು ಹಿಂಸೆ, ರಕ್ತಪಾತದಿಂದ ರಕ್ಷಣೆ ಪಡೆಯಲು ಮತ್ತು ಶಾಂತಿಯ ಜೀವನವನ್ನು ಪಡೆಯಲೆಂದು, ಆ ಧರ್ಮಗಳ ಜೀವಾಮೃತವನ್ನು ಪುನಃ ಎಲ್ಲರೂ ಎತ್ತಿ ಹಿಡಿಯಲು ಎಲ್ಲರಲ್ಲೂ ವಿನಂತಿಸುವ ಆ ಸೇವೆಯನ್ನು ಮಾತ್ರ ನಾನು ಮಾಡುತ್ತಿರುವುದು ಅಷ್ಟೆ. ಇಷ್ಟು ಮಾತ್ರವಲ್ಲದೆ ಬೇರೆ ಯಾವ “ಪರ” ವಾದವೂ ನನ್ನಲ್ಲಿ ಇಲ್ಲ ಎಂದು ತಿಳಿಯಬೇಕು.
ಇನ್ನು, ಎರಡನೆಯ ಅಂಶವು ನಾನು ಹೇಳುವ ಆ ಪ್ರಾಚೀನ ವಾಮಾಚಾರದ ಇರುವಿಕೆಯ ವಿಚಾರದ ಬಗ್ಗೆ ಆಗಿರುವುದು. ಈಗ, ಇಲ್ಲಿ ಬರುವ ಮಾನವನ ಸಂಶಯವನ್ನು ನಿವಾರಿಸಬೇಕಾಗುವುದು. ಇಲ್ಲಿ ಬರುವ ಮುಖ್ಯ ಸಂಶಯವೆಂದರೆ, “ಅ ಪ್ರಾಚೀನ ವಾಮಾಚಾರದ ವಿಚಾರವನ್ನು ನಾನೇ ಸ್ವತಃ ಸೃಷ್ಟಿಸಿ ಅದರಿಂದ ನಾನು ಲಾಭ ಮಾಡಿಕೊಳ್ಳುತ್ತಿದ್ದೇನೆ” ಎಂಬ ಸಂಶಯ ಆಗಿದೆ. ಅದರ ಸತ್ಯತೆಯನ್ನು ತಿಳಿಸಲು ಮಾತ್ರ ಒಂದೆರಡು ನನ್ನ ವ್ಯಯಕ್ತಿಕ ಜೀವನದ ರೀತಿಯನ್ನು ನಿಮ್ಮ ಮುಂದೆ ಇಡಬೇಕಾಗುವುದು.
ಮೊದಲಲ್ಲಿ ಆ ಪ್ರಾಚೀನ ವಾಮಾಚಾರದ ವಿಚಾರವು ನನ್ನ ಲಾಭಕ್ಕಾಗಿ ನಾನು ಮಾಡಿಕೊಂಡಿರುವುದಾದರೆ, ಆ ಕಥೆಯನ್ನು ಮೊದಲೇ ನನಗೆ ಸೃಷ್ಟಿಸಿ ಹೇಳಬಹುದಿತ್ತಲ್ಲಾ? ಅದಕ್ಕೆ ವ್ರತ, ನಿಷ್ಠೆಗಳ ಜೀವನದ ಅಗತ್ಯವಿರುವುದಿಲ್ಲ. ದೊಡ್ಡ ವಿಶೇಷವೇನೂ ಅಲ್ಲದಿದ್ದರೂ, ಐನೂರು ದಿವಸಗಳ ಅಖಂಡ ಮೌನವ್ರತ, ಮತ್ತು ಆಶ್ರಮಕ್ಕೆ ಬಂದ ನಂತರದಲ್ಲಿ ವಾರಕ್ಕೆ ಎರಡು ದಿನದ ಮೌನವ್ರತ ಆಚರಿಸುವ ಅಗತ್ಯ ಕಥೆ ಕಟ್ಟುವವರಿಗೆ ಇರಲಾರದು. ಅದೇ ರೀತಿ, ಉಪ್ಪನ್ನು ಹೊರತು ಪಡಿಸಿ ಉಳಿದ ಎಲ್ಲವನ್ನೂ ಸಾವಿರ ದಿವಸ ಉಪಯೋಗಿಸದೆ ಅತ್ಯಂತ ಸಾತ್ವಿಕ ಆಹಾರದಿಂದ ಸಾಧನೆ ಮಾಡುವ ಅಗತ್ಯವೂ ಕಥೆ ಕಟ್ಟುವವರಿಗೆ ಇರಲಾರದು ಎಂದು ಅನಿಸುವುದು. ಇನ್ನು, ಆಶ್ರಮಕ್ಕೆ ಬಂದ ನಂತರದಲ್ಲಿ, ಅನಿವಾರ್ಯ ಸಂದರ್ಭ ಒಂದೆರಡನ್ನು ಬಿಟ್ಟು, ಶ್ರದ್ದೆಯ ಹೆಚ್ಚಿಸುವಿಕೆಗಾಗಿ, ಭಕ್ತರು ಕರೆದಾಗ ಬೇರೆಲ್ಲಿಗೂ ಹೊರಗಡೆ ಆಶೀರ್ವಚನಕ್ಕೆ ಹೋಗದೆ, ಕುಟೀರದಲ್ಲಿದ್ದು ಅಷ್ಟು ವರುಷಗಳ ಕಾಲ ಸಾಧನೆ ಮಾಡುವ ಅಗತ್ಯವೂ ಕಥೆ ಕಟ್ಟುವವರಿಗೆ ಬೇಕಾಗಿಲ್ಲ. ಅಷ್ಟೆಲ್ಲಾ ಶ್ರದ್ದೆಯ ಸಾಧನೆ ಮಾಡಿರುವುದು, [ಅಂದಿನ ಅರಿವಿನ ಹಿನ್ನೆಲೆಯ ಪ್ರಕಾರದ] ಮೋಕ್ಷ ಸಾಧನೆಗಾಗಿ ಮಾತ್ರವಾಗಿತ್ತು. ಈಗ, ಆ ರೀತಿಯ ಮಾನಸಿಕ ಸ್ಥಿತಿ ಇರುವ ಒಬ್ಬ ವ್ಯಕ್ತಿಯು, ಒಮ್ಮಿಂದೊಮ್ಮೆಲೆ ಪ್ರಾಚೀನ ವಾಮಾಚಾರದ ಕಥೆ ಕಟ್ಟಿ, ಎಲ್ಲರ ಮುಂದೆ ಹೆಸರು ಗಳಿಸುವ ಪ್ರಯತ್ನವನ್ನು ಮಾಡಬಹುದೆಂದು ನಿಮ್ಮ ಬುದ್ಧಿಗೆ ಅನಿಸುವುದೇ ಎಂದು ನಾನು ಕೇಳುವೆನು.
ಆ ಪ್ರಾಚೀನ ವಾಮಾಚಾರವು ಒಮ್ಮೆಗೆ ನನ್ನೆದುರು ಪ್ರತ್ಯಕ್ಷವಾದುದೇನಲ್ಲ. ಹಲವು ವರುಷಗಳ ನಿರಂತರ ಬೇಹುಗಾರಿಕೆಯ ಕಾರಣದಿಂದ ಒಂದೊಂದೇ ರಹಸ್ಯ ಸತ್ಯಗಳು ಹೊರ ಬಂದಿರುವುದು. ಆ ಕಾರಣದಿಂದ ಮಾತ್ರ ನಾನು ನಿಧಾನವಾಗಿ ನನ್ನ ಬೇಹುಗಾರಿಕೆಯ ಅರಿವಿನ ಹಿನ್ನೆಲೆಯಲ್ಲಿ ಒಂದೊಂದೇ ಬದಲಾವಣೆಯನ್ನು ನನ್ನಲ್ಲಿ ಮತ್ತು ನನ್ನ ರೀತಿಗಳಲ್ಲಿ ಮಾಡಿರುವುದು. ಅಂದರೆ, ಯಾವುದೋ ಒಂದು ಪುಸ್ತಕವನ್ನು ಮೊದಲಲ್ಲೇ ಬರೆದು ಹಾಕಿ ‘ಹೊಸ ಸಿದ್ಧಾಂತ ಕಂಡುಹಿಡಿದೆ’ ಎಂದು ಒಂದು ಮುಹೂರ್ತದಲ್ಲಿ ಎಲ್ಲರ ಮುಂದೆ ಎಲ್ಲವನ್ನೂ ಒಮ್ಮೆಗೆ ಹೇಳಿದ್ದೇನೂ ಅಲ್ಲ ಎಂದು ಅರ್ಥ.
ಇನ್ನು, ಪ್ರಾಚೀನ ವಾಮಾಚಾರವು ಇದೆ ಎಂಬುವುದನ್ನು ನನಗೆ ಜನತೆಗೆ ಹೇಳದೆ ಇರಬಹುದಿತ್ತು, ಆದರೆ ಅದರಿಂದ ಆಗುವ ಭಯಾನಕ ತೊಂದರೆಗಳು ಮತ್ತು ಅವುಗಳ ಮುಂದಿನ ಯೋಜನೆ ಇತ್ಯಾದಿಗಳು ನನ್ನನ್ನು ಜನತೆಗೆ ಅದನ್ನು ತಿಳಿಸುವಂತೆ ಒತ್ತಾಯಿಸಿತು. ಒಬ್ಬ ವೈದ್ಯನು ರೋಗವನ್ನು ರೋಗಿಗೆ ತಿಳಿಸುವುದು ಆತನು ಅದರಿಂದ ಬೇಗನೆ ಗುಣಮುಖನಾಗಬೇಕೆಂಬ ಉದ್ದೇಶದಿಂದ ಹೊರತು ಆತನನ್ನು ಭಯಪಡಿಸುವ ಉದ್ದೇಶದಿಂದ ಅಲ್ಲ ಎಂದು ತಿಳಿಯಬೇಕು. ನನಗೂ, ಜನತೆಯು ಆ ಅಪಾಯಗಳಿಂದ ಪಾರಾಗಲಿ ಎಂಬ ಉದ್ದೇಶ ಮಾತ್ರ ಇರುವುದು ಮತ್ತು ಜನರನ್ನು ಭಯಪಡಿಸುವ ಉದ್ದೇಶವಿಲ್ಲ. [ಇನ್ನು, ಜನರನ್ನು ಭಯ ಪಡಿಸುವ ವಿಚಾರ ಮಾತ್ರ ಹೇಳುವುದಾದರೆ, ಆ ರೀತಿ ಭಯಪಡಿಸುವುದರಲ್ಲಿ ಎಲ್ಲಾ ಧರ್ಮಗಳ ನರಕಗಳ ವಿವರಣೆಗಳು ಅಗ್ರ ಸ್ಥಾನದಲ್ಲಿರುವವು!] ಇದು ಮಾತ್ರವಲ್ಲದೆ, ಎಲ್ಲಾದರೂ ಅದಕ್ಕೆ ಯಾವ ಪರಿಹಾರವೂ ಮಾನವರಿಂದ ಸಾಧ್ಯವಿಲ್ಲ ಎಂದಿದ್ದರೂ ನಾನು ಅದನ್ನು ತಿಳಿಸುತ್ತಿರಲಿಲ್ಲ. ಆದರೆ, ಮಾನವರು ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿದಲ್ಲಿ ಆ ಅಪಾಯಗಳಿಂದ ಮಾನವರಿಗೆ ರಕ್ಷಣೆ ಪಡೆಯುವ ಸಾಧ್ಯತೆಯನ್ನು ಕಂಡ ಹಿನ್ನೆಲೆಯಲ್ಲಿ ಮಾತ್ರ ನಾನು ಅದನ್ನು ಜಗತ್ತಿಗೆ ತಿಳಿಸಲು ತೀರ್ಮಾನಿಸಿರುವುದು ಎಂದೂ ತಿಳಿಯಬೇಕು. ನಿಜವಾಗಿಯೂ, ಅವುಗಳ ಎಲ್ಲಾ ರಹಸ್ಯಗಳನ್ನು ನಾನು ಇನ್ನೂ ಹೇಳಿಲ್ಲ, ಯಾಕೆಂದರೆ ಅವುಗಳನ್ನೆಲ್ಲಾ ಹೇಳಿ ಏನೂ ಪ್ರಯೋಜನವಿಲ್ಲ, ಆದರೆ, ಅನಿವಾರ್ಯವಾಗಿರುವವುಗಳನ್ನು ಮಾತ್ರ ಹೇಳಿದ್ದೇನೆ ಅಷ್ಟೆ.
ಇನ್ನು, ಆ ಪ್ರಾಚೀನ ವಾಮಾಚಾರ ಇದೆ ಎಂಬುವುದನ್ನು ತರ್ಕಬದ್ಧವಾಗಿ ಸಾಬೀತು ಪಡಿಸುವುದಾಗಿದೆ. ಬರೇ ಬಾಯಿಮಾತು ನಂಬಿಕೆಯ ರೀತಿ ಮಾತ್ರ ಆಗುವುದು. ಆದುದರಿಂದಲೇ, ನಾನು ನನ್ನ ಬರಹದ ಹೆಚ್ಚಿನ ಭಾಗವನ್ನೂ ಆ ಸಾಬೀತು ಪಡಿಸುವುದಕ್ಕಾಗಿ ಮೀಸಲಾಗಿಟ್ಟಿರುವುದು. ಪ್ರತಿ ಸಂದೇಶ ಅಥವಾ ಕಿರುಬರಹಗಳಲ್ಲಿ ಆ ಸಾಬೀತು ಪಡಿಸುವ ಪ್ರಯತ್ನವನ್ನು ಕಾಣಬಹುದಾಗಿದೆ. ಈ ರೀತಿ ಅಗತ್ಯದ ಎಲ್ಲಾ ರೀತಿಯಿಂದಲೂ ನಿಸ್ಪಕ್ಷ ತರ್ಕವನ್ನು ಮಾಡಿ ಆ ಪ್ರಾಚೀನ ವಾಮಾಚಾರದ ಇರುವಿಕೆಯನ್ನು ಸ್ಪಷ್ಟಪಡಿಸಿದ್ದೇನೆ. ನಾನು ಮಾಡಿರುವ ಎಲ್ಲಾ ತರ್ಕಗಳು ಕೂಡಾ ಆ ಪ್ರಾಚೀನ ವಾಮಾಚಾರದ ಇರುವಿಕೆಯನ್ನು ಸಾಬೀತುಪಡಿಸುವ ಆ ಒಂದು ಉದ್ದೇಶಕ್ಕಾಗಿ ಮಾತ್ರ ಹೊರತು ಯಾವುದೇ ಧರ್ಮ, ಪಂಥ, ದೇವರನ್ನು ನಿಂದಿಸುವ ಉದ್ದೇಶಕ್ಕಾಗಿ ಅಲ್ಲ ಎಂದು ನನ್ನ ಬರಹ ಎಲ್ಲವನ್ನೂ ಓದಿದವರಿಗೆ ಸ್ಪಷ್ಟವಾಗಿ ಅರಿವಾಗುವುದು.
ಈ ಎಲ್ಲಾ ಕಾರಣಗಳಿಂದ ನನ್ನ ತರ್ಕ ಮತ್ತು ವಿಚಾರಗಳು, ಅವು ‘ನನ್ನ ಪರವಾಗಿ ಮಾಡಿರುವ ವಾದವಲ್ಲ’ ಎಂದು ತಿಳಿದುಕೊಳ್ಳಬಹುದು.