ಸಜ್ಜನರನ್ನು ರಕ್ಷಿಸುವುದು ಮತ್ತು ದುಷ್ಟರನ್ನು ಶಿಕ್ಷಿಸುವುದು ಧರ್ಮ, ಎಂದು ಧರ್ಮ ಗ್ರಂಥಗಳು ಹೇಳುವವು.
ಇಲ್ಲಿ ಬಹಳ ಮುಖ್ಯ ವಿಚಾರ ಒಂದನ್ನು ನಾವು ತಿಳಿದಿರಬೇಕಾಗಿದೆ. ಸಜ್ಜನರನ್ನು ರಕ್ಷಿಸುವುದು ಅಥವಾ ಪ್ರೋತ್ಸಾಹಿಸುವುದು ಮತ್ತು ದುಷ್ಟರನ್ನು ಶಿಕ್ಷಿಸುವುದು, ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಮಾನದಂಡದ ಹಿನ್ನೆಲೆಯಲ್ಲೇ ನಡೆಯುವವು ಎಂದು ತಿಳಿಯಬೇಕಾಗಿದೆ. ಅಂದರೆ, [ಅಸತ್ಯ, ಧ್ವೇಷ, ಹಿಂಸೆ ಮತ್ತು ಅನೈತಿಕತೆಗಳ ಹಿನ್ನೆಲೆಯ] ಮಾನವನ ಕೆಟ್ಟ ಸ್ವಭಾವಗಳ ವಿರುದ್ಧ ತಕ್ಕ ಶಿಕ್ಷೆಯನ್ನು ವಿಧಿಸುವುದು ಮತ್ತು [ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಹಿನ್ನೆಲೆಯ] ಉತ್ತಮ ಸ್ವಭಾವವನ್ನು ಪ್ರೋತ್ಸಾಹಿಸುವುದು ಇವು ಎರಡು ರೀತಿಯೂ ಈ ಒಂದು ಮಾನದಂಡದ ಹಿನ್ನೆಲೆಯಲ್ಲಿ ನಡೆಯುವುದು ಎಂದರ್ಥ. ಒಟ್ಟಿನಲ್ಲಿ, ಧರ್ಮವು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವುದು.
- ಧರ್ಮವು ನೈತಿಕತೆಯ ವಿಜ್ಞಾನವಾಗುವುದು, ಆದುದರಿಂದ ಯಾವುದೇ ಧರ್ಮ ಅಥವಾ ಪಂಥವಾದರೂ ಅದರ ವಿವರಣೆಯು ವೈಜ್ಞಾನಿಕವಾಗಿಯೇ ಇರಬೇಕು, ನಂಬಿಕೆ ಆಧಾರಿತವಾಗಿ ಅಲ್ಲ.
- ದೇವರು ಮತ್ತು ದೇವರಿಗೆ ಸಂಬಂಧಿಸಿದ ಆಚಾರಗಳೂ ಇಲ್ಲದ ಧರ್ಮಗಳು ಈ ಜಗತ್ತಿನಲ್ಲಿವೆ. ಮಾತ್ರವಲ್ಲದೆ, ದೇವರು ಮತ್ತು ಆಚಾರಗಳು ಎಲ್ಲಾ ಧರ್ಮದಲ್ಲೂ ಬೇರೆ ಬೇರೆ ಆಗಿರುವ ಅಂಶಗಳಾಗಿವೆ, ಆದುದರಿಂದ ಅವನ್ನು ಧರ್ಮದೊಂದಿಗೆ ಬರೇ ಸೇರಿಸಲ್ಪಟ್ಟ ವಿಚಾರವಾಗಿ, ಮತ್ತು ಮಾನವರ ಒಂದು ಆಯ್ಕೆಯಾಗಿ ಮಾತ್ರ ಕಾಣಬೇಕಷ್ಟೆ.
- ಅಂದರೆ, ಒಟ್ಟಿನಲ್ಲಿ, ಸಮಾಜದಲ್ಲಿ ಜನರು ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯನ್ನು ಅಳವಡಿಸುವ ಮೂಲಕ ಇತರ ವ್ಯಕ್ತಿಗಳಿಗೆ ಹಾಗೂ ಸಮಾಜಕ್ಕೆ ಅಪಾಯಕಾರಿಗಳಾಗುವುದಿಲ್ಲ ಎಂಬ ಸತ್ಯವನ್ನೇ ‘ಧರ್ಮ’ ಎಂಬುವುದರಿಂದ ಜಗತ್ತು ಉದ್ದೇಶಿಸಿದೆ ಎನ್ನಬಹುದು.
- ಈ ಹಿನ್ನೆಲೆಯಲ್ಲಿ ಯಾರಿಗೂ ತಾನು ಅನೈತಿಕವಾಗಿ ನಡೆದುಕೊಳ್ಳುತ್ತಾ, ಧಾರ್ಮಿಕ ವ್ಯಕ್ತಿ ಎಂದು ಹೇಳಿಕೊಳ್ಳಲು ಸಾಧ್ಯವೇ ಇಲ್ಲವೆಂದಾಯಿತು.
- ಇಂದು, ಎಲ್ಲಿ ಹೋದರೂ ಆದರ್ಶಗಳನ್ನು ಅಥವಾ ಆದರ್ಶ ಜೀವನವನ್ನು ತೆಗಳುವವರೇ ಇರುವುದನ್ನು ಕಾಣುವೆವು. ಆದರೆ ನಿಜವಾಗಿಯೂ ಯಾರು ಆದರ್ಶಗಳನ್ನು ತೆಗಳುವರೋ ಅವರಿಗೆ ಧರ್ಮವೇ ಇಲ್ಲವಾಗುವುದು ಎಂಬುವುದನ್ನು ಅವರು ನೆನೆಯಬೇಕಾಗಿದೆ.
- ಸಮಾಜವು ಅಥವಾ ಸರಕಾರವು ಕಳ್ಳತನ, ಅನ್ಯಾಯ ಅನೈತಿಕತೆ ಇತ್ಯಾದಿಗಳನ್ನು ತಡೆಯಲು ಎಲ್ಲಾ ಸಮಾಜಗಳಲ್ಲೂ ಮಾಡಿದ ನಿಯಮಗಳು ಅದು ಧರ್ಮವಾಗುವುದು, ಅವು ನಂಬಿಕೆಗಳಲ್ಲ. ಈ ನಿಯಮಗಳೇ ಆದರ್ಶಗಳನ್ನು ಕಾಪಾಡುವ ಧರ್ಮವಾಗಿದೆ. ಆದುದರಿಂದ ಸಮಾಜದಲ್ಲಿ ನ್ಯಾಯ, ಶಾಂತಿಯನ್ನು ತರುವ ಈ ನಿಯಮಗಳು ನಂಬಿಕೆಗಳು ಆಗುವುದಿಲ್ಲ, ಬದಲು ಅವುಗಳು ಸತ್ಯಗಳಾಗುವವು. ಅಂದರೆ, ಜನರು ಧರ್ಮವನ್ನು ‘ನಂಬಿಕೆ’ ಎಂದು, ಆಚಾರಗಳಿಗೆ ಸೀಮಿತಗೊಳಿಸಿ, ಅದನ್ನು ಅವರವರ ಮನ ಬಂದಂತೆ ನಡೆದುಕೊಳ್ಳಬಹುದಾದ ವಿಚಾರ ಎಂದು ತಿಳಿದುಕೊಂಡಿರುವುದು ಭಯಾನಕ ತಪ್ಪಾಗುವುದು ಎಂದು ಅರ್ಥ.
ಮತ್ತು ಆದರ್ಶಗಳನ್ನು ಅದು ‘ವ್ಯಕ್ತಿಯ ದೃಷ್ಟಿಕೋನ’ ಎಂದು ಹೇಳಿ, ತಾವು ಅದರಿಂದ ಜಾರಿಕೊಳ್ಳಲು ಪ್ರಯತ್ನಿಸುವುದೂ ಘೋರ ಧರ್ಮ ನಿಂದನೆಯಾಗುವುದು ಎಂಬುವುದೂ ಈಗ ಸ್ಪಷ್ಟವಾಗುವುದು.