ಮಹಾತ್ಮರ ರೀತಿ

ನಂಬಿಕೆಯ ಆರಾಧನೆಗಳಲ್ಲಿ ಮತ್ತು ಧಾರ್ಮಿಕ ಅನುಷ್ಠಾನಗಳಲ್ಲಿ ಶ್ರೇಷ್ಠ ರೀತಿಯು ಯಾವುದು ಎಂದು ಕೇಳಿದರೆ, ಸಾಮಾನ್ಯವಾಗಿ ಎಲ್ಲರೂ ಇದಕ್ಕೆ “ನಮ್ಮದು” ಎಂದು ಉತ್ತರ ಕೊಡುವರು. ಹೇಗೆ ಎಂದು ಕೇಳಿದರೆ ಅದಕ್ಕೆ ಎಲ್ಲಾ ಧರ್ಮ, ಪಂಥಗಳ ಜನರೂ “ಅದು ನಮ್ಮ ನಮ್ಮ ನಂಬಿಕೆ” ಎಂದು ಹೇಳುವರು. ಮುಂದಿನ ಪ್ರಶ್ನೆ ನಿಂತು ಹೋಗುವುದು. ಈಗ ಮಹಾತ್ಮರ ಧಾರ್ಮಿಕ ರೀತಿಯನ್ನು ನೋಡೋಣ.

ಸರಿಯಾಗಿ ನೋಡಿರಿ, ಜಗತ್ತಿನ ಹೆಚ್ಚಿನ ಮಾನವನೂ ದೇವರ ಮತ್ತು ಧರ್ಮದ ಹೆಸರಲ್ಲಿ ಸ್ವಾರ್ಥಿ ಮಾತ್ರ ಆಗಿದ್ದಾನೆ ಅಷ್ಟೆ. ನಿಜವಾದ ದೇವಭಕ್ತ ಮತ್ತು ಧರ್ಮವನ್ನು ಅನುಷ್ಠಿಸುವವನನ್ನು ಅತ್ಯಂತ ಅಪರೂಪವಾಗಿ ಮಾತ್ರ ಧರ್ಮ, ಪಂಥಗಳಲ್ಲಿ ಕಾಣಲು ಸಾಧ್ಯವಾಗುವುದು. ಜಗತ್ತಿನ ದೇವರ ಭಕ್ತರಲ್ಲಿ ಹೆಚ್ಚಿನವರೂ ದೇವರಿಂದ ಅನುಗ್ರಹ ಬರುವುದೆಂಬ ನಂಬಿಕೆಯಿಂದ ಮಾತ್ರ ಆ ದೇವರನ್ನು ಪ್ರಾರ್ಥಿಸುವವರು, ಅನುಗ್ರಹ ಇಲ್ಲದ್ದಲ್ಲಿ ಜನರು ಆ ದೇವರ ಕಡೆಗೆ ಗಮನವೇ ಕೊಡುತ್ತಿರಲಿಲ್ಲ!! ಇನ್ನು, ಜನರು, ಸ್ವರ್ಗ, ನರಕ ಇತ್ಯಾದಿಗಳು ಇವೆ ಎಂಬಲ್ಲಿ ಮಾತ್ರ ಒಳಿತಿನ ದಾರಿಯಲ್ಲಿ ಇರಲು ತಯಾರಾಗುವರು, ಅದಿಲ್ಲವಾದರೆ “ಯಾಕೆ ಒಳಿತಿನ ದಾರಿಯಲ್ಲಿರಬೇಕು” ಎನ್ನುವರು! ಅಂತೂ ಇಂತೂ ಹೆಚ್ಚಿನವರೂ ಲಾಭಕ್ಕೆ ಬೇಕಾಗಿ ಮಾತ್ರ ಧಾರ್ಮಿಕರಾಗುವರು, ಅದಿಲ್ಲವಾದರೆ ಭಕ್ತರಾಗುವುದಿಲ್ಲ ಮತ್ತು ಧಾರ್ಮಿಕರಾಗುವುದಿಲ್ಲ!!!

ಆದರೆ ಒಂದು ಜನ ವಿಭಾಗ ಈ ಜಗತ್ತಿನಲ್ಲಿ ಆದಿಯಿಂದಲೇ ಇರುವರು, ಅವರು ಸೃಷ್ಟಿಕರ್ತನಿಲ್ಲ ಎಂದು ನೀವು ಹೇಳಿದ ಕೂಡಲೇ ಕೈತೊಳೆಯುವವರಲ್ಲ, ಅದೇ ರೀತಿ ಮೋಕ್ಷ ಎಂಬುವುದು ನಿಜವಾಗಿಯೂ ಇಲ್ಲ ಎಂದರೂ ಅವರು ಕೈತೊಳೆಯಲಾರರು. ಅವರ ಧಾರ್ಮಿಕ ಜೀವನವು ಪೂರ್ತಿಯಾಗಿಯೂ ಸ್ವಾರ್ಥರಹಿತವಾಗಿದೆ. ಅವರು, ತಮ್ಮ ದೇವರು ಎಂದಿಗೂ ಇಲ್ಲವಾಗುವುದಿಲ್ಲ ಎಂದು ಧೈರ್ಯವಾಗಿ ಹೇಳುವರು. ಯಾಕೆಂದರೆ, ಆ ದೇವರು ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೆಂಬ ಅವರದೇ ಸ್ವಭಾವದಲ್ಲಿರುವುದನ್ನು ಅವರು ನಮಗೆ ತಿಳಿಸುವರು, ಮತ್ತು ಅಲ್ಲಿಂದ ಆತನು ಹೇಗೆ ಹೋಗುವನು ಎಂದೂ ಕೇಳುವರು. ಅದೇ ರೀತಿ, ಹಿಂಸೆ, ಅನೈತಿಕತೆ, ಆಸೆಗಳ ಕಪಿಮುಷ್ಠಿ, ಇತ್ಯಾದಿಗಳಿಂದ ಬಿಡುಗಡೆಯಾಗಿ ಅತ್ಯಂತ ಅನಂದದ ಶಾಂತಿಯ ಆ ಜೀವನವನ್ನು ಪಡೆಯುವುದೇ ಜನರಿಗೆ ಈ ಭೂಮಿಯಲ್ಲಿ ಜೀವಿಸುತ್ತಿರುವಾಗಲೇ ಅನಿವಾರ್ಯವಾಗುವ ಮೋಕ್ಷವಾಗಿದೆ ಎಂದು ಹೇಳುವರು. ಮಾತ್ರವಲ್ಲ, ಅದನ್ನು ಅವರು ವ್ಯಯಕ್ತಿಕವಾಗಿಯೂ ಹಾಗೂ ಕುಟುಂಬದೊಳಗಿದ್ದು  ಸಾಧಿಸಿ ಆನಂದಿಸುವರು. ಇಂಥವರು ತಮಗೆ ತಾವೇ ಬೆಳಕಾಗುವ ಜೊತೆಗೆ ಇತರರಿಗೂ ಆನಂದದ  ದಾರಿ ದೀಪವಾಗುವರು. ಇಂಥವರ ಧಾರ್ಮಿಕ ಜೀವನ ಮತ್ತು ಇವರ ಆ ದೇವಭಕ್ತಿಯು  ನಿಜವಾಗಿಯೂ ಸರ್ವಶ್ರೇಷ್ಠ ಆಗುವುದು. ಇಂಥ ಜನರು ಯಾವ ಧರ್ಮದಲ್ಲಿದ್ದರೂ, ಪಂಥದಲ್ಲಿದ್ದರೂ ಅವರು ಹೊಳೆವ ರತ್ನಗಳೆಂದೇ ಹೇಳಬೇಕಾಗುವುದು. ಆ ಎಲ್ಲಾ ಮಹಾತ್ಮರುಗಳಿಗೂ ನನ್ನ ನಮನಗಳು.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||