ಸಾಮಾಜಿಕ ಜೀವನದಲ್ಲಿ ನಂಬಿಕೆಯು ದೊಡ್ಡ ಪಾತ್ರವಹಿಸುವುದೆಂದು ಹೆಚ್ಚಿನವರೂ ತಿಳಿದುಕೊಂಡಿರುವರು, ಆದರೆ, ಅದು ಯಾವ ಪಾತ್ರವೂ ವಹಿಸಿಲ್ಲ!! ಸಾಮಾಜಿಕ ಜೀವನದಲ್ಲಿ, ಪೊಲೀಸ್ ಅಧಿಕಾರಿಗಳಾಗಲೀ, ನ್ಯಾಯಾಧೀಶರಾಗಲೀ, ಯಾರ ಮಾತನ್ನು ನಂಬಿಕೆಯ ಹಿನ್ನೆಲೆಯಲ್ಲಿ ಸ್ವೀಕರಿಸುವುದಿಲ್ಲ. ಅವರು ತನಿಕೆ ಮತ್ತು ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಮಾತ್ರ ನಿಗಮನಕ್ಕೆ ಬರುವರು. ಇದು ಸಮಾಜದ ತೊಂಬತ್ತು ಶೇಕಡ ಭಾಗವನ್ನೂ ಹಬ್ಬಿರುವುದು. ಇನ್ನು ಯಾರಿಗೂ ತಿಳಿಯದ ಇತರ ಕೆಲವು ವಿಚಾರಗಳ ಕುರಿತು ಹೇಳುವುದಾದರೆ, ಅವುಗಳು ನಂಬಿಕೆಗಳಲ್ಲ, ಅವು ಸಾಧ್ಯತೆಗಳಾಗುವವು. ಇನ್ನು, ನಂಬಿಕೆಯಿಂದಲೇ ಜಗತ್ತಿನಲ್ಲಿ ಪ್ರೀತಿಯಿಂದಿರಲು ಸಾಧ್ಯವೆಂಬ ವಾದಕ್ಕೆ ಅರ್ಥವೇ ಇಲ್ಲ ಎಂದು ಹೇಳಬಹುದು. ಕಾರಣ, ಪ್ರೀತಿಯ ಮೂಲ ತ್ಯಾಗ ಭಾವನೆಯಾಗುವುದು. ಅದು ನಂಬಿಕೆಯಲ್ಲ. ಕೆಳಮಟ್ಟದ ಸ್ವಾರ್ಥ ಪ್ರೀತಿಯಲ್ಲಾದರೂ ತನಗೆ ಲಾಭ ಇಲ್ಲವಾದಾಗ ಪ್ರೀತಿಯೂ ಕಡಿಮೆಯಾಗುವುದನ್ನು ನಾವು ಕಾಣುತ್ತೇವೆ. ಅದೇ ರೀತಿ ತನ್ನ ಅಹಂಕಾರಕ್ಕೆ ದಕ್ಕೆಯಾಗುವಾಗಲೂ ಪ್ರೀತಿ ಹೊರಟು ಹೋಗಿ ದ್ವೇಷವು ಉಂಟಾಗುವುದನ್ನು ನಾವು ಕಾಣುತ್ತೇವೆ. ಇಲ್ಲೆಲ್ಲಾ ನಂಬಿ ಪ್ರೀತಿಯಿಂದಿರುವುದು ಕಾಣಿಸುವುದಿಲ್ಲ. ಆದುದರಿಂದ ಪ್ರೀತಿ ಮತ್ತು ನಂಬಿಕೆಗಳಿಗೆ ತಮ್ಮೊಳಗೆ ಯಾವ ಸಂಬಂಧವೂ ಇಲ್ಲ ಎಂಬುವುದಾಗಿ ಸ್ಪಷ್ಟವಾಗುವುದು. ನಂಬಿಕೆಯಿಂದಾಗಿ ಪ್ರೀತಿ ಹುಟ್ಟಿಕೊಂಡು, ಅದು ಸಮಾಜದಲ್ಲಿ ಎಲ್ಲರನ್ನೂ ಸಂತೋಷದಿಂದಿರುವಂತೆ ಮಾಡುವುದು ಎಂದು ಹೇಳುವುದು ತಪ್ಪು ಎಂದು ಇದರಿಂದ ಸ್ಪಷ್ಟವಾಗಿ ತಿಳಿದುಬರುವುದು.