ತಮಗೆ ಮಾತ್ರ ಹೆಚ್ಚು ತಿಳಿದಿರುವ ವಿಚಾರ

ನಾನು ಇಲ್ಲಿ ಒಂದು ಪ್ರತ್ಯೇಕ ಸತ್ಯಾಂಶವನ್ನು ತಿಳಿಸಲು ಇಷ್ಟಪಡುವೆನು. ಆದಿ ಕಾಲದಿಂದಲೇ ಜನರು ‘ತಮಗೆ ಮಾತ್ರ ತಿಳಿದ ವಿಚಾರ’ ಎಂದು ಹೇಳುತ್ತಾ ಬಂದಿರುವರು. ಹೊಸ ಧರ್ಮ, ಪಂಥಗಳೆಲ್ಲವೂ, ಆಯಾ  ಧರ್ಮ, ಪಂಥವು ಹುಟ್ಟುವುದಕ್ಕೆ ಹಿಂದಿನ ಇತರ ಧರ್ಮಗಳಲ್ಲಿ ಹಲವು ಕಡೆ ತಪ್ಪುಗಳಿವೆ ಎಂದು ಹೇಳುತ್ತಾ ಮತ್ತು ‘ತಮಗೆ ಮಾತ್ರ ಹೆಚ್ಚು ತಿಳಿದಿದೆ’ ಎಂದು ಹೇಳುವ ಅಂಶವನ್ನೇ ಎತ್ತಿ ಹಿಡಿದು ಹುಟ್ಟಿಕೊಂಡವು! ಆ ರೀತಿಯಲ್ಲಿ “ತಮಗೆ ಮಾತ್ರ ಹೆಚ್ಚು ತಿಳಿದಿದೆ” ಎಂದು ಹೇಳಿದ ಭಾಗವೇ ಅನಂತರದಲ್ಲಿ ಇನ್ನೊಂದು ಧರ್ಮ ಅಥವಾ ಪಂಥವಾಗಿರುವುದು! ಇದನ್ನು ಮೊದಲು ಗಮನದಲ್ಲಿರಿಸಬೇಕಾಗಿದೆ. ಇನ್ನು, ನಾನು ವಿವರಿಸುತ್ತಿರುವ ರೀತಿ ಮತ್ತು ಹಿಂದಿನ ಧರ್ಮ, ಪಂಥಗಳು ಹೇಳುತ್ತಿದ್ದ ರೀತಿಗಳ ವ್ಯತ್ಯಾಸವನ್ನು ಖಂಡಿತವಾಗಿಯೂ ತಿಳಿಯಲೇ ಬೇಕಾಗಿದೆ, ಆಗಲೇ ಎಲ್ಲಾ ಸಂಶಯವೂ ನಿವಾರಣೆಯಾಗುವುದು. ಮೊದಲಿಗೆ, ಇದುವರೆಗೂ ‘ತಮಗೆ ಮಾತ್ರ ಹೆಚ್ಚು ತಿಳಿದಿದೆ’ ಎಂದು ಎಲ್ಲಾ ಧರ್ಮ, ಪಂಥದವರು ಹೇಳಿರುವುದು ಯಾವ ವಿಚಾರವಾಗಿ? ಒಂದು ಹೊಸ ತಿಂಡಿಯನ್ನು ತಯಾರು ಮಾಡುವಲ್ಲಿ ಹಾಗೆ ಹೇಳುವುದಾದರೆ ಅದನ್ನು ಒಪ್ಪಬಹುದು ಯಾಕೆಂದರೆ ಅದು ಹೊಸತಾದ ಒಂದು ರುಚಿಯನ್ನು ಈ ಭೂಮಿಯ ಜನರಿಗೆ ಕೊಡುವುದು, ಆದರೆ ಈ ಧರ್ಮ, ಪಂಥಗಳು ಮಾತಾಡುತ್ತಿರುವುದು ಆ ‘ಏಕ ಸೃಷ್ಟಿಕರ್ತ’ನನ್ನು ಮತ್ತು ಅದೇ ಏಕ ಸೃಷ್ಟಿಕರ್ತನು ಹೇಳುವ ಸಾರ್ವತ್ರಿಕ ಸತ್ಯಗಳ ವಿಚಾರಗಳನ್ನು!! ಅದು ಸೂರ್ಯನಂತೆ ಎಂದೂ ಮತ್ತು ಜಗತ್ತಿನ ಯಾವ ಭಾಗದಲ್ಲಾದರೂ ಒಂದೇ ರೀತಿಯಲ್ಲಿ ಇರಲೇಬೇಕು ಎಂದು ಸತ್ಯವನ್ನು ಪ್ರತಿಪಾದಿಸುವ ನ್ಯಾಯವು ಹೇಳುವುದು. ಒಂದು ಕಡೆ ಒಂದು ರೀತಿ ಮತ್ತು ಇನ್ನೊಂದು ಕಡೆ ಇನ್ನೊಂದು ರೀತಿಯಲ್ಲಿ ಹೇಳುತ್ತಾ ದೇವರು ಜನರನ್ನು ಎಂದೂ ತಮ್ಮೊಳಗೆ ಹೊಡೆಸಿ ರಕ್ತಪಾತ ಮಾಡಿಸಲಾರ. ಅಂದರೆ, ಈ ವಿಚಿತ್ರ ಹಾಗೂ ಭಯಾನಕ ರಕ್ತಪಾತಕ್ಕೆ ಕಾರಣವಾಗುವ ಆ “ತಮಗೆ ಮಾತ್ರ ಹೆಚ್ಚು ಗೊತ್ತು” ಎಂಬ ರೀತಿಯೇ ಎಲ್ಲೆಡೆಯೂ ಅಡಗಿರುವುದು ಎಂದು ಸ್ಪಷ್ಟವಾಗುವುದು. ಇಷ್ಟೆಲ್ಲ ಆದರೂ, ಆ “ತಮಗೆ ಮಾತ್ರ ಹೆಚ್ಚು ತಿಳಿದಿರುವುದು” ಎಂಬ ರೀತಿಯು ಜಗತ್ತಿಗೆ ಸತ್ಯವನ್ನು ಕೊಟ್ಟಿತೇ ಎಂದು ಕೇಳಿದರೆ, ಈ ಸಾಮಾನ್ಯಜನರ ಆ ಒಂದು ಪ್ರಶ್ನೆಯು ಅದನ್ನು ಉತ್ತರಿಸುವುದು. ಆ ಪ್ರಶ್ನೆಯು ಹೀಗಿದೆ, “ಇಷ್ಟೆಲ್ಲಾ ಧರ್ಮ, ಪಂಥಗಳು ತಮ್ಮ ಸೃಷ್ಟಿಕರ್ತ ದೇವರೇ ಸರಿ, ಮತ್ತು ತಮ್ಮ ದೇವರ ಮಾತೇ ಸರಿ ಎನ್ನುವವು, ಆದರೆ ನಿಜವಾಗಿಯೂ ಇವುಗಳಲ್ಲಿ ಯಾವುದು ಸರಿ? ಯಾಕೆಂದರೆ ಸೃಷ್ಟಿಕರ್ತ ದೇವನು ಒಬ್ಬನೇ ಇರಲು ಸಾಧ್ಯ, ಮತ್ತು ಆ ಒಬ್ಬನ ಮಾತುಗಳು ಎಲ್ಲದರಲ್ಲೂ ಒಂದೇ ರೀತಿಯಲ್ಲಿರಬೇಕಿತ್ತು!” ಅಂದರೆ, ಜನರ ಈ ಸಂಶಯವೇ ಜಗತ್ತಿನ ಜನರು ದೇವರ ಹಾಗೂ ಧರ್ಮದ ಸತ್ಯತೆಯ ಬಗ್ಗೆ ಇನ್ನೂ ತೃಪ್ತರಾಗಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗುವುದು.

ಈಗ, ನಾನು ಹೇಳುತ್ತಿರುವ ಆ ‘ಸೂಕ್ಷ್ಮದ ಪ್ರಾಚೀನ ವಾಮಾಚಾರದ ಕುರಿತಾದ  ಹೆಚ್ಚು ತಿಳುವಳಿಕೆ’ಯ ವಿಚಾರವನ್ನು ನೋಡೋಣ. ಇಲ್ಲಿ ಹಲವು ಅಂಶಗಳಿವೆ. ಮೊದಲು, ಸೃಷ್ಟಿಕರ್ತನು ನನ್ನಲ್ಲಿ ಇತರ ಧರ್ಮ, ಪಂಥಗಳಿಂದ ವ್ಯತ್ಯಸ್ಥವಾದ ರೀತಿಯಲ್ಲಿ ಹೇಳಿದ್ದಾನೆ ಎಂದು ನಾನು ಹೇಳುವುದಿಲ್ಲ, ಅದೇ ರೀತಿ, ಹೊಸ ಪಂಥ ಅಥವಾ ಧರ್ಮವನ್ನು ಸೃಷ್ಟಿಸಲು ವಾದ ಮಾಡುವ ಅಥವಾ ಆ ನಿಟ್ಟಿನಲ್ಲಿ ದಿಗ್ವಿಜಯಕ್ಕಾಗಿ ನಾನು ಹೊರಡುವುದೂ ಇಲ್ಲ {ಆ ಒಂದು ದೇವರು ಇದ್ದಲ್ಲಿ, ಆತನನ್ನು ಎಲ್ಲರೂ ಅವರವರ ಧರ್ಮ, ಪಂಥಗಳಲ್ಲಿ ಬಂಧಿಸುವ ವ್ಯರ್ಥ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಮಾತ್ರ ನನಗನಿಸುವುದು.} ಅಂದರೆ, “ಸೂಕ್ಷ್ಮದ ವಿಚಾರವಾಗಿ ಹೆಚ್ಚು ತಿಳಿದಿದೆ” ಎಂಬ ನನ್ನ ರೀತಿಯು, ಯಾವ ಕಾರಣಕ್ಕೂ ಒಂದು ರಕ್ತಪಾತಕ್ಕೆ ಕಾರಣವಾಗುವುದಿಲ್ಲ ಎಂಬುವುದು ಜಗತ್ತಿಗೆ ಒಂದು ದೊಡ್ಡ ಲಾಭವಾಗಿದೆ. ಇನ್ನು, ಮುಖ್ಯವಾದ ವ್ಯತ್ಯಾಸ ಎಂದರೆ, ನಾನು ಹೇಳುತ್ತಿರುವುದು ಜಗತ್ತಿನ ಸರ್ವದರಲ್ಲೂ ಆದಿಯಿಂದಲೇ ಇದ್ದ ಆ ಪ್ರಾಚೀನ ವಾಮಾಚಾರದ ಕೈವಾಡದ ವಿಷಯ ಮಾತ್ರವಾಗಿದೆ. ಸೂಕ್ಷ್ಮದ ಆ ನನ್ನ ಅನುಭವ ಮತ್ತು ರಹಸ್ಯ ಭೇದಿಸುವಿಕೆಯ ಪರಿಣಾಮವಾಗಿ ಪಡೆದ ಸತ್ಯವನ್ನು ನಿಮ್ಮ ಮುಂದಿಡುವುದು ಮಾತ್ರ ನನ್ನ ಉದ್ದೇಶವಾಗಿರುವುದು. ಹಾಗೆ ಆ ಸತ್ಯವನ್ನು ಮುಂದಿಡುವಾಗ ಜನರಿಗೆ ಹಲವು ಸಂಶಯಗಳು ಬರುವವು, ಅವನ್ನು ನಿವಾರಿಸುವುದು ನನ್ನ ಕರ್ತವ್ಯವಾಗಿದೆ, ಇಲ್ಲವಾದರೆ ಜನರು ಸ್ವಲ್ಪವೂ ಈ ಸತ್ಯವನ್ನು ಗಮನಿಸದೆ ಆ ಮುಂಬರಲಿರುವ ಹಲವು ತರದ ಭಯಾನಕ ಆಪತ್ತುಗಳಿಗೆ ಗುರಿಯಾಗುವರು. ಈ ಆಪತ್ತಿನಿಂದ ಜನರು ಪಾರಾಗಲಿ ಎಂಬ ಒಂದು ಉದ್ದೇಶಕ್ಕಾಗಿ ಮಾತ್ರ ನಾನು ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದು ಎಂದು ಮಾತ್ರ ತಿಳಿಯಬೇಕು ಹೊರತು “ನನಗೆ ಮಾತ್ರ ಸೂಕ್ಷ್ಮದ ಹೆಚ್ಚಿನ ವಿಚಾರ ತಿಳಿದಿದೆ” ಎಂದು ಹೇಳುತ್ತಾ ಒಂದು ಗುಂಪು ಜನರನ್ನು ಸೃಷ್ಟಿಸಿ, ಅದರ ಲಾಭ ಪಡೆಯಲು ಇರುವ ಪ್ರಯತ್ನವಲ್ಲ ಎಂದು ತಿಳಿಯಬೇಕು. ಯಾವ ಧರ್ಮ, ಪಂಥಗಳನ್ನು ಅಥವಾ ದೇವರನ್ನು ನಿಂದಿಸಲು ನನಗೆ ಸಾಧ್ಯವಿಲ್ಲ, ಅವೆಲ್ಲಾ ನನಗೆ ಆ ಸಾರ್ವತ್ರಿಕ ಸತ್ಯ, ಪ್ರೀತಿ ಮತ್ತು ನೀತಿ ಆಗುವವು ಮತ್ತು ನಾನು ಆ ಭಾಗದಲ್ಲಿ ಮಾತ್ರ ಇರುವೆನು. ಆದರೆ, ರಕ್ತಪಾತಕ್ಕೆ ಕಾರಣವಾಗುವ ಧರ್ಮ, ಪಂಥಗಳ ನಂಬಿಕೆಗಳು ಮತ್ತು ಅವುಗಳ ಆಚಾರಗಳ ಭಾಗಗಳಲ್ಲಿ ನಾನೆಂದೂ ಇರುವುದಿಲ್ಲ ಎಂಬುವುದು ಖಂಡಿತ. ಯಾವ ಧರ್ಮದ ಆಚಾರ, ನಂಬಿಕೆಗಳ ಆ ಅಪಾಯಕಾರಿ ಚೀಲವನ್ನೂ ನಾನು ಎಂದೂ ನೋಡಲಾರೆ. ಆದುದರಿಂದ “ನಂಬಿಕೆ, ಆಚಾರಗಳನ್ನು ಜನರು  ಪಾಲಿಸುವುದಾದರೂ, ಅವುಗಳಿಗೆ ಹೆಚ್ಚಿನ ಮಹತ್ವವನ್ನು ಕೊಡದೆ ಮತ್ತು ಅವುಗಳ ಹೆಸರಲ್ಲಿ ತಮ್ಮೊಳಗೆ ಹೊಡೆದಾಡದೆ, ಪರಿಶುದ್ಧರಾಗುತ್ತಾ, ಈ ಜಗತ್ತಿಗೆ ಶಾಂತಿಯನ್ನು ತರುವಲ್ಲಿ ಪ್ರಯತ್ನಿಸಲಿ” ಎಂಬ ಆಗ್ರಹದ ಹಿನ್ನೆಲೆಯಲ್ಲಿ ಮಾತ್ರ ನಾನು ಮಾತನಾಡುವುದು ಎಂದು ತಿಳಿಯಬೇಕು.

ಇನ್ನು, “ನಮ್ಮ ನಂಬಿಕೆಗಳು ಶ್ರೇಷ್ಠವಾದವುಗಳು ಮತ್ತು ಅವನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ” ಎನ್ನುವವರು, ಧರ್ಮಗಳಲ್ಲಿ ಹೇಳಿರುವ, ‘ಸೂರ್ಯನು ಭೂಮಿಗೆ ಸುತ್ತುವನು’ ಎಂಬೆಲ್ಲಾ ರೀತಿಯ ಹಲವು ಅವೈಜ್ಞಾನಿಕ ನಂಬಿಕೆಗಳನ್ನೂ ಅವುಗಳೊಂದಿಗೆ ಎಂದೆಂದೂ ಹೊತ್ತುಕೊಳ್ಳಬೇಕಾಗುವುದು. ಯಾಕೆ ಅಲ್ಲಿ ಮಾತ್ರ ಧಾರ್ಮಿಕ ನಂಬಿಕೆಯನ್ನು ತಿದ್ದುಪಡಿ ಮಾಡಿದ್ದೀರಿ? ಅಂದರೆ, ಧಾರ್ಮಿಕ ನಂಬಿಕೆಗಳನ್ನು ಬೇಕಿದ್ದಲ್ಲಿ ತಿದ್ದುಪಡಿ ಮಾಡಬಹುದೆಂದು ನೀವೇ ಹೇಳಿದಹಾಗಾಯಿತು. ಹೀಗಿರುವಾಗ, ನಾವೆಲ್ಲಾ ನಮ್ಮ ಮುಗ್ಧ ಮಕ್ಕಳ, ಮರಿಗಳ ಜೀವ ಉಳಿಸುವುದಕ್ಕಾದರೂ ಈ ನಂಬಿಕೆಗಳಲ್ಲಿ ಅಲ್ಪ ತಿದ್ದುಪಡಿಗೆ ತಯಾರಾಗಿ, ಆ ಮುಂಬರಲಿರುವ ರಕ್ತಪಾತಗಳಿಂದ ಪಾರಾಗಲು ಮತ್ತು ಆ ಲೋಕ ಶಾಂತಿಯನ್ನು ಸೃಷ್ಟಿಸಲು ತಯಾರಾಗೋಣ. ಆ ದೇವರು ಬಯಸುವ ಈ ಜಗದ ಮಾನವರೆಲ್ಲರ ಒಂದಾಗುವಿಕೆಯನ್ನು, ಇನ್ನಾದರೂ ನಮ್ಮ ಪ್ರಥಮ ಕರ್ತವ್ಯವೆಂದು ತಿಳಿದು ಆ ನಿಟ್ಟಿನಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಗೆ ತೊಡಗೋಣ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||