ದೇವರ ಪರೀಕ್ಷೆ ಎಂದು ಹೇಳುವಾಗ ಅವರು ಏನನ್ನು ತಿಳಿದಿರುವರು ಎಂಬುವುದನ್ನು ಮೊದಲು ನೋಡಬೇಕು. ಅದು ಶಾಲೆಯಲ್ಲಿ ಮಕ್ಕಳು ಓದಿ ಕಲಿತು ಅನಂತರ ಮಾಡುವ ಪರೀಕ್ಷೆಯಲ್ಲ, ಅದು ದೇವರು ಮಾನವನಿಗೆ ಕೊಡುವ ನೋವು, ಹತ್ತಿರದ ಬಂಧುವಿನ ಸಾವು, ಅಂಗ ವೈಕಲ್ಯ, ಇತ್ಯಾದಿ ಸಹಿಸಲಸಾಧ್ಯವಾದ ಪರೀಕ್ಷೆಗಳಾಗಿವೆ! ಜನ್ಮವಿಡೀ ನರಳಾಡುವಂತೆ ಅಂಗಗಳನ್ನು ಕಳಕೊಂಡೇ ಹುಟ್ಟಿಸಿ ಮಾಡುವ ಪರೀಕ್ಷೆಯೂ ಅವುಗಳಲ್ಲಿ ಸೇರಿವೆ! ಏನೇ ಇರಲಿ, ಇವೆಲ್ಲವನ್ನೂ ದೇವರ ಲೋಕ ಸೇರಲು ಮಾನವನಿಗೆ ದೇವರು ಈ ಭೂಮಿಯಲ್ಲಿ ಕೊಡುವುದಾದರೆ, ಇನ್ನು, ಆತನು ಮಾನವನನ್ನು ಕಷ್ಟಪಡಲೆಂದೇ ಭೂಮಿಗೆ ಕಳುಹಿಸಿದಂತೆ ಆಗುವುದು. ಈ ರೀತಿ ಕಷ್ಟ ಕೊಡುವವನಲ್ಲಿ ಅನುಗ್ರಹವನ್ನು ಭಕ್ತರು ಹೇಗೆ ಬಯಸಲು ಸಾಧ್ಯ? ಭಕ್ತನು ಭಕ್ತಿಯಿಂದ ತನ್ನನ್ನು ಉತ್ತಮ ಮಾರ್ಗದಲ್ಲಿ ಜೀವಿಸುವಂತೆ ಅನುಗ್ರಹಿಸು ಎಂದು ದೇವರಲ್ಲಿ ಬೇಡುತ್ತಿದ್ದಂತೆ, ಆತನಿಗೆ ಕಷ್ಟದ ಪ್ರವಾಹವು ಬಂದೊದಗುವ ಆ ಸ್ಥಿತಿಯನ್ನು ಯಾರಿಗೂ ಊಹಿಸಲು ಕಷ್ಟವಾಗುವುದು. ಹಾಗಿದ್ದರೆ, ಈ ಅನುಗ್ರಹಕ್ಕಾಗಿ ಮಾಡುವ ಎಲ್ಲವೂ ಅರ್ಥ ಹೀನವಾಗುವುದು ಎಂದೇ ಹೇಳಬೇಕಾಗುವುದು. ದೇವರು ಕರುಣಾಮಯ ಎಂಬ ಶಬ್ದವನ್ನು, ಈ ಭೂಮಿಯಲ್ಲಿ ಹೇಗೆ ಉಚ್ಛರಿಸುವುದು?
ಇನ್ನೊಂದು ಸ್ಪಷ್ಟ ವಿರೋಧಾಭಾಸವನ್ನು ನೋಡೋಣ. ಉದಾಹರಣೆಗೆ, ಒಂದು ಸ್ಪರ್ಧೆ ಇದ್ದಲ್ಲಿ ಅದಕ್ಕೆ ಕೆಲವೊಮ್ಮೆ ಕಠಿಣ ನಿಯಮಗಳಿರಬಹುದು, ಆದರೆ ಅದು ಎಲ್ಲಾ ಸ್ಪರ್ಧಾಳುಗಳಿಗೆ ಒಂದೇ ತರವಾಗಿರುವುದು. ಆ ರೀತಿಯಲ್ಲಿ ನೋಡುವಾಗ, ದೇವರು ಭೂಮಿಯಲ್ಲಿ ಎಲ್ಲಾ ಮಾನವನಿಗೂ ಒಂದೇ ತರದ ಕಷ್ಟಗಳನ್ನು ಕೊಡಬೇಕಾಗುವುದು. ಆದರೆ ಹಾಗಿಲ್ಲ!! ಕೆಲವರು ಹುಟ್ಟು ಕುರುಡರು, ಕೆಲವರು ಕಾಲಿಲ್ಲದವರು, ಇನ್ನೂ ಕೆಲವರು ದರಿದ್ರರು, ಇನ್ನೂ ಕೆಲವರು ಮಕ್ಕಳನ್ನು ಕಳಕೊಂಡವರು, ಅದೇ ರೀತಿ ಅಕಾಲ ಮರಣವನ್ನು ಪಡೆದವರು ಹೀಗೆಲ್ಲಾ ಇವೆ. ಇತ್ತ, ಇತರರು ಶ್ರೀಮಂತಿಕೆ, ರೂಪ, ಸ್ಥಾನಮಾನ ಇತ್ಯಾದಿಗಳಿಂದ ಹಿಗ್ಗಿ ಜೀವಿಸುವುದನ್ನು ನಾವು ನೋಡುತ್ತೇವೆ, ಅವರಿಗೆ ಚಿಕ್ಕ ಪುಟ್ಟ ಸಾಮಾನ್ಯ ತೊಂದರೆಗಳು ಮಾತ್ರ ಇರುವುದು ಅಷ್ಟೆ. ಹೀಗಿರುವಾಗ, ‘ದೇವರ ಆ ಪರೀಕ್ಷೆ’ ಎಂಬಲ್ಲಿ ಅದು “ಕೆಲವರಿಗೆ ಮಾತ್ರ” ಎಂದೇ ಅರ್ಥ ಬರುವುದು. ಎಲ್ಲರಿಗೂ ಆಗಿದ್ದರೆ, ಜಗತ್ತಿನಲ್ಲಿ ಎಲ್ಲರಿಗೂ ಒಂದೇ ತೀವ್ರತೆಯ ಕಷ್ಟಗಳು ಇರುತ್ತಿತ್ತು, [ಕರ್ಮ ಸಿದ್ಧಾಂತವನ್ನು ನಾವು ಆಗಲೇ ನೋಡಿ ಆಗಿದೆ] ಈ ಕಾರಣದಿಂದಾಗಿ, ‘ದೇವರ ಪರೀಕ್ಷೆ’ ಎಂಬ ಜನರ ನಂಬಿಕೆಯು, ಸತ್ಯವೇ ದೇವರು, ಪ್ರೀತಿಯೇ ದೇವರು, ಎಂದು ಧರ್ಮ ಗ್ರಂಥಗಳು ಹೇಳುವ ಆ ನಿಜವಾದ ದೇವರ ಸಂಕಲ್ಪಕ್ಕೆ ವಿರುದ್ಧವಾದ ನಂಬಿಕೆ ಎನ್ನುವುದು.