ತನ್ನಾಯ್ಕೆ [ಫ್ರೀ ವಿಲ್] ಎಂಬ ನಂಬಿಕೆ

ದೇವರು ಮಾನವನಿಗೆ ಕೊಟ್ಟಿರುವುದು ಎಂದು ಎಲ್ಲಾ ಧರ್ಮಗಳೂ ಹೇಳುವ ಆ ‘ತನ್ನಾಯ್ಕೆ’ ಕುರಿತು ನೋಡೋಣ. ದೇವರು ಮಾನವನಿಗೆ ‘ತನ್ನಾಯ್ಕೆ’ ಯನ್ನು ಕೊಟ್ಟಿದ್ದಲ್ಲಿ, ಅನಂತರ ಮಾನವನ ಜೀವನದಲ್ಲಿ ಉಪದೇಶ ಬಿಟ್ಟು, ದೇವರು ಬೇರೆ ಏನೂ ಮಾಡುವ ಹಾಗಿಲ್ಲ. ನಾವು ಒಬ್ಬಾತನಿಗೆ ತನ್ನಾಯ್ಕೆಯಲ್ಲೇ ಯಾವ ತಡೆಯೂ ಇಲ್ಲದೆ ಕೆಲಸ ಮಾಡಲು ಹೇಳುತ್ತಾ, ಅದೇ ಸಮಯ ಆತನ ಕೆಲಸಗಳಿಗೆ ಹಲವು ನಿಬಂಧನೆಯನ್ನು ವಿಧಿಸಿದರೆ ಆಗ ಆತನಿಗೆ ಕೊಟ್ಟ ಸ್ವಾತಂತ್ರ್ಯವು ಸ್ವಾತಂತ್ರ್ಯವೇ ಅಲ್ಲವಾಗುವುದು! ಅಂದರೆ, ಮಾನವನು ಕೆಟ್ಟ ಕರ್ಮ ಮಾಡಿದರೆ ಆತನಿಗೆ ನರಕವನ್ನೂ, ಉತ್ತಮ ಕರ್ಮ ಮಾಡಿದರೆ ಆತನಿಗೆ ಸ್ವರ್ಗವನ್ನೂ ದೇವರು ಕೊಡುವನೆಂಬುವುದನ್ನು ಮೊದಲೇ ಗ್ರಂಥಗಳಲ್ಲಿ ಆತನೇ ತಿಳಿಸಿದ್ದಾನೆ. ಹೀಗಿರುವಾಗ, ಇತರ ಯಾವ ರೀತಿಯ ನಿಬಂಧನೆ, ಶಿಕ್ಷೆ, ಇತ್ಯಾದಿಗಳನ್ನು ಮಾನವನ ಮೇಲೆ ಭೂಮಿಯಲ್ಲಿ ಮತ್ತೂ ಹೇರಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ದೇವರೇ ಕೊಟ್ಟ ಆ ಸ್ವಾತಂತ್ರ್ಯಕ್ಕೆ ವಿರೋಧವಾಗುವುದು. ಆದರೆ, ದೇವರು ಈ ಭೂಮಿಯ ಜೀವನಕ್ಕಾಗಿ ಸರಿಯಾದ ರೀತಿ, ನಿಯಮಗಳನ್ನು ಬೋಧಿಸುವಾಗ, ಅವುಗಳನ್ನು ಮೀರಿ ತಪ್ಪು ಮಾಡಿದಲ್ಲಿ, ಮಾನವನಿಗೆ ಇದೇ ಭೂಮಿಯಲ್ಲಿ ಶಿಕ್ಷೆಯನ್ನು ವಿಧಿಸುವ ಹಲವು ನಿಯಮಗಳನ್ನೂ ದೇವರೇ ಉಂಟು ಮಾಡಿದನೆಂದರೆ ಮತ್ತು ಆ ರೀತಿಯಲ್ಲಿ ಶಿಕ್ಷಿಸಿದರೆ, ಅದು ‘ತನ್ನಾಯ್ಕೆ’ ಎಂಬ ದೇವರದೇ ನಿಯಮಕ್ಕೆ ವಿರೋಧವಾಗುವುದು ಎಂಬುವುದು ಸ್ಪಷ್ಟವಾಗುವುದು. ಯಾಕೆಂದರೆ, ತನ್ನಾಯ್ಕೆ ನಿಯಮ ಪ್ರಕಾರ, ಆ ಶಿಕ್ಷೆಯನ್ನು ಆ ಜೀವಕ್ಕೆ ನರಕದಲ್ಲಿ ದೇವರು ಕೊಡಬೇಕಾಗಿರುವುದಾಗಿದೆ.

ಇನ್ನೊಂದು ರೀತಿಯ ವಿರೋಧವೆಂದರೆ, ದೇವರಲ್ಲ ಮಾನವನೇ ಧರ್ಮದ ಸಮಾಜಿಕ ರಕ್ಷಣೆ ಮತ್ತು ಶಿಕ್ಷಣೆಯ ಹೊಣೆಯನ್ನು ಹೊತ್ತು, ನಿಯಮಗಳನ್ನು ಸೃಷ್ಟಿಸಿದನೆಂದು ಹೇಳುವಾಗ ಆಗುವುದು! ಯಾಕೆಂದರೆ, ಆಗ ಮಾನವನು ತಾನು ನಂಬುವ ಆ ಸೃಷ್ಟಿಕರ್ತ ದೇವರ ‘ತನ್ನಾಯ್ಕೆ’ ಎಂಬ ನಿಯಮವನ್ನು ಮೀರಿದ ಎಂದು ಆಗುವುದು! ಅಂದರೆ, ಮೊದಲದರಲ್ಲಿ ದೇವರೇ ಆತನ ‘ತನ್ನಾಯ್ಕೆ’ ನಿಯಮವನ್ನು ಮೀರಿದರೆ, ಎರಡನೆಯದರಲ್ಲಿ ಮಾನವನು ಅದನ್ನು ಮೀರಿದಂತೆ ಆಗುವುದು ಎಂದು ಅರ್ಥ.

ಇನ್ನು, ಈ ಭೂಮಿಯಲ್ಲಿ, ಒಂದೇ ಸಾಹಚರ್ಯದಲ್ಲಿ ಬೆಳೆದವರಲ್ಲಿ ಒಬ್ಬ ಉತ್ತಮ ಸ್ವಭಾವದ ಹುಡುಗ ಮತ್ತು ಇನ್ನೊಬ್ಬ ಕೆಟ್ಟ ಸ್ವಭಾವದ ಹುಡುಗನಾಗಿ ಆ ಚಿಕ್ಕ ವಯಸ್ಸಿಂದಲೇ ಕಾಣಿಸುವುದಕ್ಕೆ  ಕಾರಣವನ್ನು ಕೊಡಲು ‘ತನ್ನಾಯ್ಕೆ’ಯು ಸಮಾರ್ಥವಾಗುವುದಿಲ್ಲ ಎಂಬುವುದು ಇನ್ನೊಂದು ವಿಷಯವಾಗಿದೆ. ಅಂದರೆ, ತನ್ನಾಯ್ಕೆ ಮಾಡುವ ವಯಸ್ಸನ್ನು ಪಡೆಯುವ ಮೊದಲೇ, ಅಷ್ಟು ಚಿಕ್ಕ  ವಯಸ್ಸಲ್ಲಿ, ಆ ರೀತಿ ಬೇರೆ ಬೇರೆ ವ್ಯಕ್ತಿತ್ವವು ಪ್ರಕಟವಾಗಲು, ಅವರು ಹುಟ್ಟಿನಿಂದಲೇ ಬೇರೆ ಬೇರೆ ಸ್ವಭಾವವನ್ನು ಹೊತ್ತುಕೊಂಡು ಬಂದಿರುವುದನ್ನು ಮಾತ್ರ ಹೇಳುವುದು ಅಷ್ಟೆ! ಒಂದೇ ಜನ್ಮ ವಾದದಲ್ಲಿ, ದೇವರು ಆತ್ಮಗಳನ್ನು ಭೂಮಿಗೆ ಕಳಿಸಿಕೊಡುವಾಗ, ಈ ರೀತಿ ಒಳ್ಳೆಯ ಮತ್ತು ಕೆಟ್ಟ ಆತ್ಮಗಳನ್ನು ಸೃಷ್ಟಿಸಿ, ಈ ಪಕ್ಷಪಾತದ ರೀತಿಯಲ್ಲಿ, ಭೂಮಿಗೆ ಕಳಿಸಿಕೊಡುವನೇ? ಹಾಗಾದಲ್ಲಿ, ದೇವರು ಮೊದಲೇ ಕೆಲವರನ್ನು ಸ್ವರ್ಗಕ್ಕೆ ತಯಾರು ಮಾಡಿ ಕಳುಹಿಸಿದ ಮತ್ತು ಹಲವರನ್ನು ನರಕಕ್ಕೆ ತಯಾರು ಮಾಡಿದ ಕಳುಹಿಸಿದ ಎಂಬ ಅಪವಾದಕ್ಕೆ ಒಳಗಾಗುವನು!!

ಈ ಎಲ್ಲಾ ಗೊಂದಲಗಳಿಗೆ ಉತ್ತರವು ಕೊನೆಗೂ ಹೊರಬಿದ್ದಿದೆ! ಹೌದು, ಧರ್ಮಗಳ ಹೆಸರಲ್ಲೂ ಮತ್ತು ಅವುಗಳು ಹೊರತಾಗಿರುವ ಕಡೆಗಳಲ್ಲೂ ಸೃಷ್ಟಿಯಾಗುವ ಆ ಭಯಾನಕ ಹಿಂಸೆ, ಅನೈತಿಕತೆಗಳು ಆ ಪ್ರಾಚೀನ ವಾಮಾಚಾರದ ರಹಸ್ಯ ಯೋಜನೆಯಾಗಿದೆ ಎಂಬುವುದು ಈಗ ಸಂಶಯಾತೀತವಾಗಿ ಸ್ಪಷ್ಟವಾಗಿದೆ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||