ಚುಟುಕಾಗಿ ಹೇಳುವುದಾದರೆ, ನಂಬಿಕೆ ಎಂಬ ಶಬ್ಧವು ‘ಸಂಶಯ’ ಎಂಬ ಅರ್ಥವನ್ನು ಕೊಡುವುದು ಎಂಬುವುದನ್ನು ಒಂದು ಬದಿಗಿರಿಸಿ ಮತ್ತೂ ನೋಡಿದರೂ ಈ ನಂಬಿಕೆಯು ಇನ್ನೊಂದು ರೀತಿಯಲ್ಲಿ ತನ್ನ ಅರ್ಥವನ್ನು ಕಳಕೊಳ್ಳುವುದನ್ನು ನೋಡಬಹುದು!! ಉದಾಹರಣೆಗೆ, ಒಬ್ಬನ ಕೈಯಲ್ಲಿ ಒಂದು ವಸ್ತುವಿದ್ದು ಅದನ್ನು ಅದುಮಿ ಹಿಡಿದಿದ್ದಾನೆ ಎಂದು ತಿಳಿಯೋಣ, ಆತನು ತನ್ನ ಇಬ್ಬರು ಗೆಳೆಯರಲ್ಲಿ ತನ್ನ ಕೈಯಲ್ಲಿರುವ ವಸ್ತುವಿನ ಬಣ್ಣವು ಕಪ್ಪು ಅಥವಾ ಬಿಳಿ ಈ ಎರಡರಲ್ಲಿ ಯಾವುದು ಎಂದು ಕೇಳುವಾಗ, ಒಬ್ಬನು “ಕಪ್ಪು ಎಂದು ನಂಬುತ್ತೇನೆ” ಎಂದನು, ಇನ್ನೊಬ್ಬನು ಅದು “ಬಿಳಿ ಎಂದು ನಂಬುತ್ತೇನೆ” ಎಂದನು. ಇಲ್ಲಿ, ಅವರ ನಂಬಿಕೆಯ ರೀತಿಯು ಸರಿಯಾಗಿದೆ, ಯಾಕೆಂದರೆ ಇಬ್ಬರಿಗೂ ಕಪ್ಪು ಮತ್ತು ಬಿಳಿಯು ‘ಏನೆಂದು ತಿಳಿದಿದೆ’ ಆದರೆ ಆ ಕೈಗಳಲ್ಲಿ ಯಾವ ಬಣ್ಣವು ಯಾವುದರಲ್ಲಿ ಇರುವುದು ಎಂಬ ವಿಷಯದಲ್ಲಿ ಮಾತ್ರ ಸಂಶಯ ಇತ್ತು ಅದಕ್ಕೆ ಹಾಗೆಂದರು. ಆದರೆ, ಧರ್ಮಗಳ ರೀತಿ ಹೇಗಿದೆ ನೋಡಿ, ಅಲ್ಲಿ “ದೇವರನ್ನು ನಂಬುವವ” ಮತ್ತು “ದೇವರನ್ನು ನಂಬದವ” ಎಂಬ ವರ್ಗೀಕರಣವು ಅರ್ಥಹೀನ ರೀತಿಯಲ್ಲಿವೆ. ಹಲವು ಧರ್ಮಗಳ ಜನರು ಈ ಜಗತ್ತಿನ ಆ ಏಕ ಸೃಷ್ಟಿಕರ್ತನನ್ನು ದೇವರು ಎಂದು ನಂಬುವುದನ್ನು ನಾವು ನೋಡುತ್ತೇವೆ. ಇಲ್ಲಿ, ನಂಬಿಕೆಯ ಆ ‘ಸಂಶಯ’ ಎಂಬ ಅರ್ಥಹೀನ ರೀತಿಯನ್ನು ಹೊರತುಪಡಿಸಿದರೆ ಆ ‘ಶಬ್ಧವು’ ಅದರದ್ದೇ ಆದ ‘ಒಪ್ಪುವುದು’ ಎಂಬ ಒಂದು ಅರ್ಥವನ್ನು ಪಡೆಯುವುದು. ಆದರೆ ಇನ್ನೊಬ್ಬನು ಅದೇ ಏಕ ಸೃಷ್ಟಿಕರ್ತನನ್ನು ಮೊದಲಿನವನ ಧರ್ಮವಲ್ಲದ ಆತನದ್ದೇ ಧರ್ಮದಲ್ಲಿ ನಂಬುವಾಗ ಅವನನ್ನು “ದೇವರನ್ನು ನಂಬದವ” ಎಂದು ಮೊದಲಿನವ ತೆಗಳುವನು!! ಅದು ಹೇಗೆ ಸಾಧ್ಯ? ತನ್ನ ಧರ್ಮದ ಬೇಲಿಯೊಳಗೆ ಮಾತ್ರ ಸೃಷ್ಟಿಕರ್ತ ದೇವನು ಕೈ ಕಾಲು ಮಡಚಿ ಇರಬೇಕೆಂದೇ? ಮಾತ್ರವಲ್ಲ, ಆ ಧರ್ಮಾಂಧತೆ, ತೆಗಳುವುದು, ಧ್ವೇಷಿಸುವುದು, ಕೊಲೆಮಾಡುವುದು, ಇತ್ಯಾದಿಗಳವರೆಗೂ ಹೋಗುವುದು!! ಇದು ಆ ನಂಬಿಕೆಯ ಅರ್ಥವನ್ನು ಪೂರ್ಣವಾಗಿ ಕಳಕೊಳ್ಳುವಂತೆ ಮಾಡುವುದು!! ಒಬ್ಬಾತನು, ಈ ಪ್ರಪಂಚದ ಸೃಷ್ಟಿಕರ್ತನನ್ನು ನಂಬುತ್ತೇನೆ ಎಂದು ಹೇಳುವಾಗ ಆತನು ತನ್ನ ಧರ್ಮವಲ್ಲದ ಇನ್ನೊಂದು ಧರ್ಮದಲ್ಲಿದ್ದರೆ ಆವನು ಹೇಗೆ “ಅವಿಶ್ವಾಸಿ” ಅಥವಾ ದೇವರನ್ನು ನಂಬದವನಾಗುವನು? ಅಂದರೆ ತಮ್ಮ ಧರ್ಮದಲ್ಲಿದ್ದರೆ ಮಾತ್ರ ಒಬ್ಬಾತನಿಗೆ ಈ ಪ್ರಪಂಚದ ಸೃಷ್ಟಿಕರ್ತನನ್ನು ನಂಬುವ ಅನುಮತಿ ಸಿಗುವುದೆಂದೇ? ಒಟ್ಟಿನಲ್ಲಿ, ತನ್ನ ಮನೆ ಮೇಲೆ ಮಾತ್ರ ಸೂರ್ಯನಿದ್ದಾನೆ ಎಂಬಂತೆ, ಅರ್ಥ ಹೀನ ರೀತಿಯಲ್ಲಿ ‘ಸೃಷ್ಟಿಕರ್ತನ’ ನಂಬಿಕೆಯನ್ನು ಪ್ರದರ್ಶಿಸುವರು!! ತನ್ನ ಧರ್ಮದ ಸೃಷ್ಟಿಕರ್ತನೇ ಸರಿ ಆದರೆ ಇತರ ಧರ್ಮಗಳ ಎಲ್ಲಾ ಸೃಷ್ಟಿಕರ್ತರುಗಳು ತಪ್ಪು ಎನ್ನುವ ಪಂಡಿತನಲ್ಲಿ, ಆತನ ಸೃಷ್ಟಿಕರ್ತನು, ಇತರ ಮಾನವರೆಲ್ಲರನ್ನು ಯಾಕೆ ಇತರ ಧರ್ಮಗಳಲ್ಲಿ ಹುಟ್ಟಿಸಿ, ಆ ಸರಿಯಾದ ಧರ್ಮವು ಅವರಿಗೆಲ್ಲರಿಗೂ ಸಿಗದಂತೆ ಪಕ್ಷಪಾತ ಮಾಡಿದನೆಂದು ಕೇಳಬೇಕಾಗುವುದು.