ಧರ್ಮಯುದ್ಧ, ಎಂಬುವುದು ನಿಜವಾಗಿಯೂ ಅರ್ಥವೇ ಇಲ್ಲದ ಶಬ್ಧವಾಗಿದೆ. ಯಾಕೆಂದರೆ ಯುದ್ಧ ಎಂದರೆ ಅದು ಶಾಂತಿಕಾಲದ ವಿರುದ್ಧ ಪದವಾಗಿದೆ. ಅದೇ ರೀತಿ, ಶಾಂತಿ ಎಂದರೆ ಅದು ಯುದ್ಧದ ಕಾಲವೂ ಅಲ್ಲ, ಹಾಗಾಗಿ, ಧರ್ಮಯುದ್ಧ ಎಂಬುವುದು, ನಿಜವಾಗಿ ನೋಡುವುದಾದರೆ, ‘ಬೆಳಕಿನ ಕತ್ತಲೆ’ ಎಂಬ ರೀತಿಯಲ್ಲಿ ಅರ್ಥ ಹೀನವಾಗುವುದು. ಆದುದರಿಂದ, ತಮ್ಮ ಧರ್ಮವು ಶಾಂತಿಯೆಂದು ಹೇಳುತ್ತಾ ಆ ತಮ್ಮ ಧರ್ಮವನ್ನು ಬೆಳೆಸಲು ಯಾರಾದರೂ ಯುದ್ಧ ಅಥವಾ ಹಿಂಸೆಯ ಮಾರ್ಗವನ್ನು ಹಿಡಿದರೆ ಅದು ನಿಜವಾಗಿಯೂ ಧರ್ಮದ ಹಾಗೂ ದೇವರ ದಾರಿಗೆ ವಿರುದ್ಧ ದಾರಿಯಾಗಿರುವುದು ಎಂದು ತಿಳಿಯಬೇಕಾಗಿದೆ. ಧರ್ಮಯುದ್ಧವನ್ನು ಹಲವು ರೀತಿಯಲ್ಲಿ ವಿವರಿಸಿದ್ದಾರೆ. ಜಗತ್ತಲ್ಲಿ ಎಲ್ಲೆಡೆಯೂ ತಮ್ಮ ಧರ್ಮವೇ ಬರಬೇಕೆಂಬ ಉದ್ದೇಶದಿಂದ ಮಾಡುವ ಆ ಮತಾಂತರದ ಧರ್ಮಯುದ್ಧ, ತಮ್ಮ ರಕ್ಷಣೆಗೆ ಬೇಕಾಗಿ ಮಾಡುವ ಧರ್ಮಯುದ್ಧ, ಅನ್ಯಾಯವಾದಾಗ ಮಾಡುವ ಧರ್ಮಯುದ್ಧ, ಮತ್ತು ಯುದ್ಧ ಭೂಮಿಯಲ್ಲಿ ಮೋಸದ ಯುದ್ಧ ಮಾಡದೆ ನಿಯಮಗಳನ್ನು ಅನುಸರಿಸಿ ಮಾಡುವ ಧರ್ಮಯುದ್ಧ, ಇವುಗಳು ಧರ್ಮಯುದ್ಧದ ವಿವಿಧ ರೀತಿಗಳಾಗಿವೆ.
ಮತಾಂತರದ ಧರ್ಮಯುದ್ಧವು ಎಷ್ಟು ಅರ್ಥಹೀನ ಎಂದರೆ ಅದನ್ನು ಕೇಳಿದರೆ ಒಂದು ಚಿಕ್ಕ ಮಗುವೂ ನಾಚುವುದು. ಎಲ್ಲಾ ಧರ್ಮಗಳಲ್ಲೂ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಬಗ್ಗೆ ಹೇಳಿದೆ ಎಂದು ಎಲ್ಲರಿಗೂ ತಿಳಿದಿದೆ. ಅಷ್ಟರಲ್ಲೇ ಶ್ರೇಷ್ಠ ಧರ್ಮದ ವಿವರಣೆ ಆಗಿಯಾಯಿತು. ಈ ಹಿನ್ನೆಲೆಯಲ್ಲಿ ಎಲ್ಲಾ ಧರ್ಮಗಳೂ ಶ್ರೇಷ್ಠವಾಗಿವೆ. ಹೀಗಿರುವಾಗ, ಧರ್ಮದ ಹಿನ್ನೆಲೆಯಲ್ಲಿ ಇನ್ನೊಂದು ಧರ್ಮಕ್ಕೆ ಯಾರಾದರೂ ಬದಲಾಗುವ ಅಗತ್ಯವಿಲ್ಲ, ಹಾಗೆ ಯಾರಾದರೂ ಮಾಡಿದರೆ ಅದು ತನ್ನ ಶರೀರವನ್ನು ಇನ್ನೊಂದು ಕಡೆ ಹುಡುಕುವಷ್ಟು ಅವಿವೇಕತನವಾಗುವುದು!! ಮಾತ್ರವಲ್ಲ, ಹಾಗೆ ಮಾಡಿದಲ್ಲಿ, ಆಗ ಆ ವ್ಯಕ್ತಿಯು ಬರೇ ರುಚಿ ಇಲ್ಲದ [ಸಾರವಿಲ್ಲದ] ಗೊಜ್ಜು ಆಚಾರಗಳ ವ್ಯತ್ಯಾಸವನ್ನು ಸವಿಯಲು ಮಾತ್ರ ಮತಾಂತರ ಆದಂತೆ ಆಗುವುದು!! ಆದರೆ, ಇದೇ ಅವಿವೇಕತನದ ಮತಾಂತರದ ಈ ಭಯಾನಕ ಧರ್ಮಯುದ್ಧವನ್ನು, ದೇವರಿಗಾಗಿ ಮಾಡುವ ಅತ್ಯುನ್ನತ ಸೇವೆ, ಅಥವಾ ತಮಗೆ ಸಂಬಂಧಿಸಿ ಸ್ವರ್ಗವನ್ನು ಪಡೆಯುವ ದಾರಿ ಎಂದು ನಂಬಿಸಿರುವುದು ಧರ್ಮದ ಹೆಸರಲ್ಲಿ ನಡೆವ ಅತ್ಯಂತ ಮೂರ್ಖತನದ ಕರ್ಮವಾಗುವುದು.
ಧರ್ಮಾಂಧರ ಕೈಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದೇ ಧರ್ಮಯುದ್ಧ ಎಂದು ಹೇಳುವಲ್ಲಿ, ಅದು ತಮ್ಮ ರಕ್ಷಣೆಯ ಕೆಲಸ ಮಾತ್ರವಾಗಿದೆ, ಅದನ್ನು ಧರ್ಮಯುದ್ದ ಎಂದು ಕರೆಯುವ ಪ್ರಯತ್ನವೂ ಅಗತ್ಯವಿಲ್ಲ. ಅದೇ ರೀತಿ, ಅನ್ಯಾಯವಾದಲ್ಲಿ ಯುದ್ಧವನ್ನು ಸಾರುವುದೂ ಇದೆ, ಇದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಆಗ, ಅದು ಕೂಡಾ ಸಾಧಾರಣ ಯುದ್ಧಮಾತ್ರವಾಗುವುದು. ಅವುಗಳನ್ನು ಧರ್ಮಯುದ್ಧ ಎನ್ನುವ ಅಗತ್ಯವಿಲ್ಲ. ಅನ್ಯಾಯವಾಗುವಲ್ಲೇ ಯುದ್ಧಗಳ ಆರಂಭ ಎಂದು ತಿಳಿದಿರುವಾಗ, ಮತ್ತು ಅದು ಕಾಡು ಜನಾಂಗದ ಯುದ್ಧದಿಂದ ಹಿಡಿದು ಇಂದಿನ ತನಕ ಎಲ್ಲಾ ಯುದ್ಧಗಳಿಗೂ ಕಾರಣವಾಗಿರುವುದು. ಅನ್ಯಾಯದ ವಿರುದ್ಧ ಮಾಡಿರುವ ಆ ಯುದ್ಧಗಳನ್ನೆಲ್ಲಾ ಧರ್ಮಯುದ್ಧಗಳು ಎಂದರೆ ಸಾಧಾರಣ ಯುದ್ಧ ಎಂಬವುದೇ ಇಲ್ಲವೆಂದು ಹೇಳಬೇಕಾಗುವುದು. ಆದುದರಿಂದ ಅನ್ಯಾಯದ ವಿರುದ್ಧ ಮಾಡಿರುವ ಯುದ್ಧಗಳು ಧರ್ಮಯುದ್ಧಗಳಲ್ಲ ಬದಲು ಯುದ್ಧ ಮಾತ್ರವೆಂದು ಎಂದು ತಿಳಿಯಬಹುದು.
ಧರ್ಮಯುದ್ಧಕ್ಕೆ ಇನ್ನೊಂದು ಅರ್ಥ ಕೊಟ್ಟಿರುವುದು, ಸತ್ಯಸಂಧವಾದ ಯುದ್ಧ ಎಂದು. ಸತ್ಯಸಂಧತೆಯಿಂದ ನಡೆದುಕೊಳ್ಳಲು ಹೆಚ್ಚಿನವರಿಗೂ ಶಾಂತಿಕಾಲದಲ್ಲೇ ಸಾಧ್ಯವಾಗದಿರುವಾಗ, ಇನ್ನು, ಯುದ್ಧಕಾಲಗಳಲ್ಲಿ ಅದು ಸಾಧ್ಯವೇ? ಸಾಧ್ಯವಾಗಿದೆಯೇ? ಅದು ಸಾಧ್ಯವಾಗಿಲ್ಲ ಎಂಬುವುದು ಪುರಾಣ ಇತಿಹಾಸಗಳಿಂದಲೂ ತಿಳಿದಿದೆ. ಹೀಗಿರುವಾಗ, ಧರ್ಮಯುದ್ಧದ ಆ ಅರ್ಥವೂ ಅರ್ಥಹೀನವಾಗಿಹೋಗುವುದು. ಹೀಗೆ, ಎಲ್ಲಾ ರೀತಿಗಳಲ್ಲೂ ‘ಧರ್ಮಯುದ್ಧ’ ಎಂಬ ಪದವು ಅರ್ಥಹೀನವಾಗಿದೆ ಎನ್ನಬಹುದು.
ಎಲ್ಲಾ ಧರ್ಮ, ಪಂಥಗಳಿಗೂ, ನಿಜವಾಗಿಯೂ ಧರ್ಮದ ಭಾಗವಲ್ಲದ, ಆದರೆ ಧರ್ಮದ ಭಾಗ ಎಂದು ಕರೆಯಲ್ಪಡುವ ಆ ಆಚಾರಗಳಿಗಾಗಿ ಹೊಡೆದಾಡಿ ಸಾಯುವ ದುರ್ಗತಿ ಬಂದಿದೆ ಎಂಬುವುದು ಅತ್ಯಂತ ದಯನೀಯವಾದ ವಿಚಾರವಾಗಿದೆ, ಯಾಕೆಂದರೆ ‘ಧರ್ಮ’ವು ಎಲ್ಲಾ ಧರ್ಮಗಳಲ್ಲೂ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ರೂಪದಲ್ಲಿ ಆದಿಯಿಂದಲೇ ನೆಲೆಯಾಗಿದೆ!! ಅದನ್ನು ಪ್ರತಿಯೊಬ್ಬನೂ ತನ್ನ ಮನೋಪರಿಶುದ್ಧಿಯ ಮೂಲಕ ಪಡೆಯಲು ಪ್ರಯತ್ನಿಸಬೇಕು. ಇನ್ನಾದರೂ ಆಚಾರಗಳು ಧರ್ಮವಲ್ಲ ಎಂಬುವುದನ್ನು ಜಗತ್ತಿಗೆ ತಿಳಿಸುತ್ತಾ, ಈ ಜಗತ್ತಿನ ಜನರನ್ನು ತಮ್ಮ ತಮ್ಮ ಧರ್ಮದ ಜೀವಸಾರದ ಕಡೆಗೆ, ಎಲ್ಲಾ ಧರ್ಮಗಳ ಧರ್ಮ ಪಂಡಿತರುಗಳು ಕೊಂಡೊಯ್ಯುವರು ಎಂದು ಆಶಿಸೋಣ.