ಧರ್ಮಗಳಲ್ಲಿನ ವಿರೋಧಾಭಾಸಗಳು

ಎಲ್ಲಾ ಧರ್ಮಗಳಲ್ಲೂ ವಿರೋಧಾಭಾಸಗಳು ಇವೆ. ಅವು ಈ ಪುರಾಣ ಕಥೆಗಳಿಂದ ಹೆಚ್ಚಾಗಿ ಬರುವುದು. ಹೆಚ್ಚಿನ ಮಹಾತ್ಮರೂ ಪುರಾಣ ಭಾಗವನ್ನು ಭಕ್ತಿಗೆ ಪ್ರೇರಣೆಯಾಗಿ ಮಾತ್ರ ಉಪಯೋಗಿಸಬೇಕು ಎಂದೂ ಅಕ್ಷರ ಪ್ರತಿ ಅದರ ಸತ್ಯತೆಯನ್ನು ಗಮನಿಸಬಾರದೆಂದೂ ಹೇಳಿರುವರು. ಆದರೆ ಇಂದೂ ಎಲ್ಲಾ ಪುರಾಣ ಕಥೆಗಳನ್ನು ಸತ್ಯ ಎಂದು ಸಾಧಿಸಲು ಚಡಪಡಿಸುವ ಜನರು ಬಹಳ ಇರುವರು! ಇದು ಇತರ ಧರ್ಮಗಳೊಂದಿಗಿರುವ ಭಿನ್ನತೆ, ಶತ್ರುತ್ವಗಳನ್ನು ಹೆಚ್ಚಿಸುವುದು ಮಾತ್ರವಲ್ಲ, ತಮ್ಮದೇ ಧರ್ಮಗಳ ಸತ್ಯತೆಯನ್ನು ಕುಗ್ಗಿಸಲು ಕಾರಣವೂ ಆಗುವುದು!

ಎಲ್ಲಾ ಧರ್ಮಗಳಲ್ಲೂ ಕೆಲವು ಪಂಡಿತರು ತಮ್ಮ ತಮ್ಮ ಧರ್ಮವು ವೈಜ್ಞಾನಿಕವಾಗಿದೆ ಎಂದು ತಿಳಿಸುವುದಕ್ಕೆ ಹಲವು ರೀತಿಯಲ್ಲಿ ಶ್ರಮವಹಿಸುವುದನ್ನು ನಾವು ಕಾಣುತ್ತೇವೆ. ಹಲವು ಕಡೆಗಳಲ್ಲಿ ಅವೈಜ್ಞಾನಿಕವಾದ ಮಾತುಗಳು ಇರುವಾಗ ಅವುಗಳಲ್ಲಿ ಕೆಲವೊಂದಕ್ಕೆ ತಮ್ಮ ರೀತಿಯಲ್ಲಿ ಏನೇನೋ ಸೇರಿಸಿ ವೈಜ್ಞಾನಿಕವೆಂದು ಹೇಳುವುದು ಬಹಳ ಬೇಸರದ ವಿಷಯವಾಗುವುದು. ಕೆಲವು ಶಬ್ಧ, ವಾಕ್ಯ, ಇತ್ಯಾದಿಗಳನ್ನು ಕಲ್ಪನೆಯ ಸಹಾಯದಿಂದ ಎಳೆದು ವಿವರಿಸುತ್ತಾ, ಅತ್ಯಾಧುನಿಕ ವಿಜ್ಞಾನವನ್ನೂ ತಮ್ಮ ಧರ್ಮದಲ್ಲಿ ಹೇಳಿವೆ ಎಂದು ವಾದಿಸುವರು! ಬರೇ ಒಂದು ಉದಾಹರಣೆಯನ್ನು ನೋಡೋಣ. ಧರ್ಮ ಗ್ರಂಥದಲ್ಲಿರುವ ಸೂರ್ಯನ ಚಲನೆಯನ್ನು ಇಂದಿನ ವಿಜ್ಞಾನಿಗಳ ವಿವರಣೆಯಾದ ಸೌರ ಮಂಡಲದ ಒಟ್ಟು ಚಲನೆ ಎಂದು ಇಂದಿನ ಧರ್ಮ ಪಂಡಿತರು ತಮ್ಮ ಗ್ರಂಥದ ತಪ್ಪನ್ನು ಸರಿಪಡಿಸಿಕೊಳ್ಳಲು ಚಡಪಡಿಸುವಾಗ, ದೇವರು ಆ ಸಾವಿರಾರು ವರುಷಗಳ ಹಿಂದೆ ಏನೂ ತಿಳಿಯದ ಪಾಮರ ಜನರಿಗೆ ಆ ಕಠಿಣ ಅರ್ಥವನ್ನು ಉದ್ದೇಶಿಸುವನೇ ಎಂದು ನಮ್ಮ ಸಾಮಾನ್ಯ ಬುದ್ಧಿಯಿಂದ ನಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು. ಹಾಗೆ ದೇವರು ಉದ್ದೇಶಿಸಿದ ಎಂದಾದರೆ, ದೇವರು ಒಂದನೇ ತರಗತಿಯ ಮಕ್ಕಳಿಗೆ ಸ್ನಾತಕೋತ್ತರ ಪದವಿಯ ವಿಚಾರಗಳನ್ನು ಪಾಠ ಮಾಡುವ ಮೂರ್ಖ ಅಧ್ಯಾಪಕನಾಗುವುದಿಲ್ಲವೇ? ಜಗತ್ತಿನ ಎಲ್ಲಾ ಧರ್ಮ ಗ್ರಂಥಗಳಲ್ಲೂ, ಅಂದಿನ ಜಿಜ್ಞಾಸುಗಳು ಕೇಳಿರುವ ಎಲ್ಲಾ ಪ್ರಶ್ನೆಗಳಿಗೂ, ಇಂದಿನ ವಿಜ್ಞಾನದಂತೆ ನೇರ ಉತ್ತರ ಕೊಟ್ಟಿಲ್ಲ, ಎಲ್ಲಾ ಕಡೆಯೂ ಕೊಟ್ಟಿರುವುದು ಸಾಹಿತ್ಯದ ರೀತಿಯ ವಿವರಣೆ ಆಗುವುದು. ಅವು ಯಾರಿಗೆ ಬೇಕಾದರೂ ಹೇಗೆ ಬೇಕಾದರೂ ವಿವರಿಸುವ ರೀತಿಯಲ್ಲಿ ಇರುವುದು. ಅವುಗಳನ್ನು, ಬೇಕಾದಲ್ಲಿ, ಅತ್ಯಾಧುನಿಕ ವಿಜ್ಞಾನವನ್ನು ವಿವರಿಸುವಲ್ಲಿಯ ತನಕ, ಕಲ್ಪನೆಗಳ ಸಹಾಯದಿಂದ ಎಳೆದು ವಿವರಿಸಬಹುದು!

ಇದೇ ರೀತಿ ಹಲವು ಇತರ ಗೊಂದಲಗಳು ಮತ್ತು ವಿರೋಧಾಭಾಸಗಳು ಧರ್ಮಗಳಲ್ಲಿ ಇವೆ. ಆದುದರಿಂದ ಎಲ್ಲಾ ಧರ್ಮಗಳನ್ನು ಮತ್ತು ದೇವರುಗಳನ್ನು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೆಂದು ವಿವರಿಸಿ, ನಾವು ಎಲ್ಲಾ ಧರ್ಮಗಳಿಗೂ ಅದೇ ರೀತಿ ದೇವರುಗಳಿಗೂ, ಎಲ್ಲರೂ ಆಸೆ ಪಡುವ, ಆ ನಿಜವಾದ ವೈಜ್ಞಾನಿಕ ರೀತಿಯನ್ನೇ ಸಮರ್ಪಿಸೋಣ. ಮಾತ್ರವಲ್ಲ, ಈ ವೈಜ್ಞಾನಿಕ ರೀತಿಯ ಹಿನ್ನೆಲೆಯಲ್ಲಿ, ಧರ್ಮ, ದೇವರನ್ನು ಎತ್ತಿ ಹಿಡಿದಿರುವ ಆ ಮಹಾತ್ಮರುಗಳ ದಾರಿಯನ್ನು ನಾವೆಲ್ಲಾ ಅನುಸರಿಸಿ, ಈ ಲೋಕಕ್ಕೆ ಅದ್ಭುತ ಶಾಂತಿಯನ್ನು ತರುವ ಪ್ರಯತ್ನವನ್ನು ಮಾಡೋಣ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||