ಇತರರಿಗೂ ಒಳ್ಳೆಯದಾಗುವ ರೀತಿಯಲ್ಲಿ ಮತ್ತು ತಮಗೂ ಒಳ್ಳೆಯದಾಗುವ ರೀತಿಯಲ್ಲಿ ಸಂತೋಷದಿಂದ, ಈ ಜಗತ್ತಿನಲ್ಲಿ ಜೀವಿಸುವಂತೆ ಧರ್ಮವು ನಮಗೆ ತಿಳಿಸುವುದು. ಅದಕ್ಕೆ, ಅದು ಸಮಾಜದಲ್ಲಿ ನೈತಿಕ ನಿಯಮ ಸಂಹಿತೆಯನ್ನು ಉಂಟು ಮಾಡಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಮತ್ತು ಉತ್ತಮರಿಗೆ ಪ್ರೊತ್ಸಾಹವನ್ನು ಅದು ಕೊಡುವುದು. ಆದರೆ ದೇವರು ಮತ್ತು ಮೋಕ್ಷವು ವ್ಯಯಕ್ತಿಕವಾದದ್ದು, ದೇವರಿಲ್ಲದ ಧರ್ಮಗಳು ಈ ಜಗತ್ತಿನಲ್ಲಿ ಇರುವಾಗ, ದೇವರು, ಧರ್ಮದ ಒಂದು ಮುಖ್ಯ ಭಾಗವಲ್ಲ ಎಂದು ಅದು ಸ್ಪಷ್ಟಗೊಳಿಸುವುದು. ಆದುದರಿಂದ, ಧರ್ಮವು ಸನ್ನಡತೆಯನ್ನು ಮಾತ್ರ ಉದ್ದೇಶಿಸಿದೆ ಎಂದು ಅದು ತಿಳಿಸುವುದು. ದುರಾದೃಷ್ಟವಶಾತ್, ಜಗತ್ತು ಹಿಂದಿನಿಂದಲೇ ಧರ್ಮವನ್ನು ಕಾಪಾಡುತ್ತಾ ಬಂದಿರುವುದು ಆಚಾರಗಳಲ್ಲಿ! ಅದು ಮಾತ್ರವಲ್ಲದೆ, ಆ ಆಚಾರಗಳು ವಿಚಾರಗಳ ನೇರ ಪ್ರಶ್ನೆಗಳಿಂದ ಸಡಿಲವಾಗಬಾರದೆಂದು ಅದಕ್ಕೆ ‘ನಂಬಿಕೆ’ ಎಂಬ ಆ ಸರ್ಪ ಬಂಧನವನ್ನೂ ಹಾಕಲಾಯಿತು, ಈ ಬಂಧನವು ಇಂದಿಗೂ ಅವನ್ನು ಕಾಪಾಡುತ್ತಾ ಬರುತ್ತಿವೆ. ನಂಬಿಕೆಯು ಸ್ವಲ್ಪವಾದರೂ ಕದಲಿದರೆ ಜಗತ್ತೇ ಅಲ್ಲೋಲ ಕಲ್ಲೋಲವಾಗುವಂತೆ ಅದನ್ನು ವಿನ್ಯಾಸಗೊಳಿಸಿರುವುದು ಇನ್ನೊಂದು ಅದ್ಭುತ ತಂತ್ರ ಜ್ಞಾನವಾಗಿರುವುದು. ನಿಜವಾಗಿ ನೋಡುವಾಗ, ಈ ಜಗತ್ತೇ ಧರ್ಮವನ್ನು ಅಪಹಾಸ್ಯ ಮಾಡುತ್ತಿದೆ. ಅವಕ್ಕೆಲ್ಲಾ ಕಾರಣ ಎಲ್ಲಾ ಧರ್ಮ, ಪಂಥಗಳಲ್ಲೂ ಹಿಂದೆ ಆ ಸ್ವಾರ್ಥಿಗಳು ಮಾಡಿಟ್ಟ ನಂಬಿಕೆಗಳು ಮತ್ತು ಆಚಾರಗಳು! ಪುಣ್ಯ ಕಟ್ಟಿಕೋ ಎಂದಾಗ ಅದಕ್ಕೆ ನಮ್ಮಲ್ಲಿ ಕೆಲವು ಬಾಹ್ಯ ಆಚಾರಗಳಿವೆ, ಪಾಪವನ್ನು ಕಳೆದುಕೋ ಅಂದರೂ ಅದಕ್ಕೂ ನಮ್ಮಲ್ಲಿ ಬಾಹ್ಯ ಆಚಾರಗಳಿವೆ! ನಿನ್ನಲ್ಲಿರುವ ಆ ಸೈತಾನನನ್ನು ಓಡಿಸು ಎಂದರೆ, ನಾವು ಅದಕ್ಕೂ ಬಾಹ್ಯ ಆಚಾರವನ್ನು ಮಾಡಿ ಆಗಿದೆ. ಅಂತೂ ಈ ಆಚಾರಗಳ ಮರೆಯಲ್ಲಿ ಮಾನವನು, ಧರ್ಮಕ್ಕೆ ವಿರುದ್ದವಾದ ರೀತಿಯಲ್ಲಿ, ತನ್ನ ನೀಚ ಬುದ್ಧಿಯನ್ನು ಆರಾಮವಾಗಿ ಕರ್ಚುಮಾಡುತ್ತಾ, ಮೋಸ, ಹಿಂಸೆ, ವ್ಯಭಿಚಾರ ಇತ್ಯಾದಿಗಳನ್ನು ಇನ್ನೂ ಸಮಾಜದಲ್ಲಿ ಬೆಳೆಸುತ್ತಾ ಬರುತ್ತಿದ್ದಾನೆ! ಈಗ ಶಾಲಾ ಕಾಲೇಜುಗಳಲ್ಲಿನ ಮಕ್ಕಳನ್ನು ನೋಡಿದರೇ ಸಾಕಾಗುವುದು, ಅವರ ನೈತಿಕ ಜೀವನದಲ್ಲಿ ಎಷ್ಟು ಬದಲಾವಣೆ ಬಂದಾಗಿದೆ ಎಂದು!! ಮಾತ್ರವಲ್ಲ, ಇನ್ನೂ ಮುಂದೆ ಇದೇ ನಿಟ್ಟಿನಲ್ಲಿ ಹೋದಲ್ಲಿ ತಮ್ಮ ಧರ್ಮ ಏನಾಗಬಹುದು ಎಂದು ನಂಬಿಕೆಯ ಆಚಾರ-ಧರ್ಮದವರು ಉತ್ತರ ಕೊಡಬೇಕಾಗುವುದು. ಈ ಜಗತ್ತಿನ ಜನಸಂಖ್ಯೆಯಲ್ಲಿ ಮಹಾತ್ಮರುಗಳ ಧರ್ಮವಾದ ಆ ಸತ್ಯ, ಆತ್ಮೀಯ ಪ್ರೀತಿ ಮತ್ತು ನೈತಿಕತೆಯನ್ನು ಮಾತ್ರ ಬಯಸುವ ಆ ಧರ್ಮನಿಷ್ಠರು ಎಷ್ಟು ಜನರಿಗಿರಬಹುದು? ಇದ್ದಲ್ಲಿ, ಅವರು ಬಹಳ ಅಲ್ಪ ಸಂಖ್ಯಾತರು ಮಾತ್ರ ಆಗುವರು! ಹೀಗಿರುವಾಗ, ಜಗತ್ತಿನ ಎಲ್ಲೆಡೆಯೂ, ಈ ನಂಬಿಕೆಯ ಆಚಾರ-ಧರ್ಮ ಮತ್ತು ಅವುಗಳ ಮರಿಗಳಾದ ಧರ್ಮ ಪ್ರಚಾರ, ಮತಾಂತರ, ಧರ್ಮದ ಮೇಲಿನ ದುರಭಿಮಾನ, ಧರ್ಮಾಂಧತೆ, ಧರ್ಮಕ್ಕಾಗಿ ರಕ್ತಪಾತ, ಇವೆಲ್ಲಾ ಒಬ್ಬಾತನು ಧರ್ಮಕ್ಕಾಗಿ ಮಾಡುವ ಮಹತ್ಕಾರ್ಯ ಎಂದು ಬಹಳ ಹಿಂದಿನಿಂದಲೇ ಜನರಿಗೆ ಹೇಳಿ ನಂಬಿಸಿದವರು ಯಾರೆಂದು ಸ್ಪಷ್ಟವಾಗುವುದು. ಅಂದರೆ, ಮಹಾತ್ಮರನ್ನು ಒಂದು ಮೂಲೆಗೆ ದೂಡಿ, ತಮ್ಮ ತಮ್ಮ ಧರ್ಮಗಳನ್ನು ಆಚಾರಗಳ ಸಹಾಯದಿಂದ ಬಹಳ ಸುಲಭಗೊಳಿಸಿದ್ದಾರೆ ಆ ಹಿಂದಿನ ಸ್ವಾರ್ಥಿ ಧರ್ಮಪಾಲಕ ಮಾನವರು!! ‘ಕತ್ತಲೆಯ ಪಾತ್ರೆಯಲ್ಲಿ ಬೆಳಕಿನ ಅಮೃತವನ್ನು ಹಿಡಿದಿಡುವೆನು’ ಎಂಬ ವಾದವೇ ಇವರದು!! ಮೋಸ, ಮೋಸ, ಜಗತ್ತೇ ಆ ಪ್ರಾಚೀನ ವಾಮಾಚಾರದ ಸಂಚಿನ ಮೋಸಕ್ಕೆ ಬಲಿಯಾಗಿ ನರಳಾಡುತ್ತಿದೆ.
ಇದು ಮುಂದುವರಿದಲ್ಲಿ ಮಾನವನ ಶಾಶ್ವತ ಅಳಿವು ಖಚಿತವಾಗುವುದು. ನಿಮ್ಮ ಮಕ್ಕಳನ್ನು ಉಳಿಸಬೇಕಾ ಅಥವಾ ಪುನಃ ಅನಾಗರೀಕ ಕಾಡು ಮಾನವರನ್ನಾಗಿ, ಆ ಹಿಂಸೆ, ಕಾಮದ ಮೃಗಗಳನ್ನಾಗಿ ಮಾಡಬೇಕಾ ಎಂಬುವುದು ನಿಮ್ಮ ತೀರ್ಮಾನಕ್ಕೆ ಬಿಟ್ಟಿದೆ. ನಿಮ್ಮ ಉತ್ತರ ಧನಾತ್ಮಕವಾದರೆ ನೀವು ಇಂದಿನಿಂದಲೇ ನಿಮ್ಮ ನಿಮ್ಮ ಧರ್ಮವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಲೇಬೇಕಾಗುವುದು.