ಸೃಷ್ಟಿಕರ್ತ ದೇವರು ಇರುವ ಎಲ್ಲಾ ಧರ್ಮಗಳೂ ಮಾನವನಿಗೆ ಆ ಸೃಷ್ಟಿಕರ್ತನು ‘ಮುಕ್ತ ಆಯ್ಕೆ’ ಅಥವಾ ‘ಸ್ವ-ಇಚ್ಛೆ’ಯನ್ನು ಕೊಟ್ಟಿದ್ದಾನೆ ಎಂದಿದೆ. ಅಂದರೆ ಅದರ ಅರ್ಥ, ‘ಒಬ್ಬ ಮಾನವನಿಗೆ, ಈ ಭೂಮಿಯಲ್ಲಿ ತನ್ನ ಇಚ್ಛೆಯಂತೆ ಉತ್ತಮನಾಗಿಯೋ ಅಥವಾ ಕೆಟ್ಟವನಾಗಿಯೋ ಜೀವಿಸಿ, ಮರಣಾನಂತರ ಅದರ ಫಲಕ್ಕನುಸರಿಸಿ ಸ್ವರ್ಗವನ್ನೋ ಅಥವಾ ನರಕವನ್ನೋ ಸೇರಲಿರುವ ಪೂರ್ಣ ಸ್ವಾತಂತ್ರ್ಯ’ ಎಂದಾಗಿದೆ. ಇಲ್ಲಿಯೇ ನಾವು ಸರಿಯಾಗಿ ಗಮನಿಸಬೇಕಾಗಿರುವುದು, ಆ ದೇವರೇ ಮಾನವನ ಸ್ವಂತ ಇಚ್ಛೆಯನ್ನು ಪ್ರೋಹ್ಸಾಹಿಸುವಾಗ, ಈ ದೇವರು ಹೇಳಿದಂತೆ ನುಡಿವ ಧರ್ಮಗಳು ಮಾನವನನ್ನು ಬಲಾತ್ಕಾರವಾಗಿ ಮತಾಂತರ ಮಾಡುವುದು, ಶೋಷಣೆ ಮಾಡುವುದು ಇತ್ಯಾದಿ ಕರ್ಮಗಳು ಪಾಪ ಕರ್ಮಗಳಾಗುವವು ಎಂದು ಸ್ಪಷ್ಟವಾಗುವುದಿಲ್ಲವೇ?
ನಿಜವಾಗಿಯೂ ಧರ್ಮವೆಂದರೆ ಅದು ಜನರಲ್ಲಿ ನೈತಿಕತೆಯ ಬೋಧವನ್ನು ಉಂಟುಮಾಡಬೇಕಾಗಿದೆ, ಬರೇ ವಿವರಣೆ, ಬೋಧನೆಯು ಧರ್ಮ ಆಗುವುದಿಲ್ಲ. ಜನ ಎಷ್ಟು ಬಡಬಡ ಎಂದು ಉಪದೇಶಿಸಿದರೂ ಉಪದೇಶಿಸುವಾತನು ಸತ್ಯಸಂಧನಲ್ಲವಾದರೆ ಅಂಥವರಿಂದ ಜನರಲ್ಲಿ ನೈತಿಕತೆಯ ಬೋಧವನ್ನು ಉಂಟುಮಾಡಲು ಸಾಧ್ಯವಾಗಲಾರದು. ಯಾವ ಧರ್ಮದಲ್ಲಾದರೂ ಸರಿ, ಆ ನೈತಿಕ ಜೀವನ ನಡೆಸುವ ಅದ್ಭುತ ಮಹಾತ್ಮರೇ ಈ ಕಾರ್ಯಗಳಿಗೆ ನಿಜವಾಗಿಯೂ ಬೇಕಾಗಿರುವುದು, ಅದಲ್ಲದೆ, ಬರೇ “ತಾನು ತನ್ನದು” ಎಂದು ಸ್ವಾರ್ಥದ ಜೀವನ ನಡೆಸುವ ಯಾರಿಂದಲೂ ಅದು ಎಂದಿಗೂ ಸಾಧ್ಯವಿಲ್ಲ, ಅವರು ಸ್ವಾರ್ಥದ ಧರ್ಮಾಂಧತೆಯನ್ನು ಮಾತ್ರ ಬೆಳೆಸುವರು ಅಷ್ಟೆ. ಜಾತೀಯತೆ, ಅಸ್ಪೃಶ್ಯತೆ, ಇತ್ಯಾದಿಗಳು ಈ ಜಗತ್ತನ್ನು ಆವರಿಸಿಕೊಳ್ಳಲೂ, ಮಹಾತ್ಮರ ಧರ್ಮದ ವಿವರಣೆಯನ್ನು ಕಸದ ಬುಟ್ಟಿಗೆ ತಳ್ಳಿ, ನಂಬಿಕೆ, ಆಚಾರ ರೀತಿಯನ್ನೇ ಮತ್ತೆ ಮತ್ತೆ ಧರ್ಮದ ನಿಜವಾದ ವಿವರಣೆಯಾಗಿ ಬದಲಾಯಿಸಿ ಜಗತ್ತಿಗೆ ತೋರಿಸುವಲ್ಲಿ ಮಾತ್ರ ಅವರ ಕೆಲಸ ಸೀಮಿತ ಗೊಂಡಿರುವುದು. ಇದನ್ನು ಹಿಂದಿನ ಹಲವು ಮಹಾತ್ಮರು ಹೇಳಿರುವರಲ್ಲದೆ, ನಮಗೆ ಇಂದೂ ಕಾಣುವ ಸತ್ಯವಾಗಿ ನಮ್ಮ ಕಣ್ಣ ಮುಂದೆಯೇ ಇರುವುದು. ಮಹಾತ್ಮನಾಗುವುದು ಯಾರಿಂದಲೂ ಸಾಧ್ಯವಿದೆ, ಅದಕ್ಕೆ ಸನ್ಯಾಸದ ಅಗತ್ಯವಿಲ್ಲ, ಅದಕ್ಕೆ ಬೇಕಾಗಿರುವುದು ಬರೇ ಆ ಸತ್ಯಸಂಧವಾದ ವಿಶಾಲ ಮನಸ್ಕತೆ ಮಾತ್ರವಾಗಿದೆ. ಈ ಹಿನ್ನೆಲೆಯಲ್ಲಿ, ಇನ್ನಾದರೂ ಧರ್ಮವನ್ನು ಅದರ ಸಾರದ ಭಾಗದಲ್ಲಿ ಮುಖ್ಯವಾಗಿ ವಿವರಿಸಿ ತಮ್ಮನ್ನು, ತಮ್ಮವರನ್ನು ಮತ್ತು ಈ ಜಗತ್ತನ್ನು ರಕ್ಷಿಸುವ ಆ ಮಹತ್ ಕಾರ್ಯವನ್ನು ಎಲ್ಲಾ ಧರ್ಮ, ಪಂಥಗಳ ಜನರು ಮಾಡಲು ಮುಂದಾಗುವರು ಎಂಬ ಭರವಸೆಯನ್ನು ನಾವು ಇರಿಸಿಕೊಳ್ಳೋಣ.
ಸ್ತ್ರೀಯರು ಪ್ರಕೃತಿಯ ಪಾಲುದಾರರು. ಪುರುಷನಿಗೆ ಇರುವಷ್ಟೇ ಸ್ವಾತಂತ್ರ್ಯ ಸ್ತ್ರೀಗೂ ಇದೆ. ಅದರ ಮೇಲೆ ದೇವರು ಕೊಟ್ಟ ತನ್ನಿಷ್ಟದಂತೆ ಜೀವಿಸುವ ಸ್ವಾತಂತ್ರ್ಯವಿದೆ!! ಹೀಗಿರುವಾಗ ಸ್ತ್ರೀಯರನ್ನು ಮಾತ್ರ ಸಹಸ್ರವರುಷಗಳಿಂದಲೂ ನಿಯಂತ್ರಿಸಲು ಯಾವ ಧರ್ಮಕ್ಕೂ ಹಕ್ಕು ಇರಲಿಲ್ಲ ಎಂದು ನೆನಪಿಸಬೇಕು. ಹಾಗೆ ನಿಯಂತ್ರಿಸಿದಲ್ಲಿ, ಅದು ದೇವರು ಮಾನವನಿಗೆ ಕೊಟ್ಟ ಮುಕ್ತ ಆಯ್ಕೆಯೆಂಬ ಆ ದೇವರ ಮಾತನ್ನೇ ಧರ್ಮಗಳು ತಳ್ಳಿಹಾಕಿದಂತಾಗುವುದು! ಇಲ್ಲಿ, ದೇವರ ಮಾತೋ ದೊಡ್ಡದು ಅಥವಾ ಮಾನವನ ಧರ್ಮದ ಸ್ವಂತ ಸ್ವಾರ್ಥ ವ್ಯಾಖ್ಯಾನವೋ ದೊಡ್ಡದು ಎಂದು ನಾವು ಆಲೋಚಿಸಬೇಕಾಗುವುದು.
ಬಂಧನವಲ್ಲ, ಬದಲು ಸ್ವಾತಂತ್ರ್ಯವು ಧರ್ಮದ ಜೀವಾಳವಾಗಿರುವುದು. ತಪ್ಪು ಮಾಡಿದವರಿಗೆ ಶಿಕ್ಷಿಸಬೇಕು ಎಂಬುವುದು ನಿಯಮವಾಗಿದೆ, ಆದರೆ ಅದರ ಅರ್ಥ ಎಲ್ಲರ ಸ್ವಾತಂತ್ರ್ಯವನ್ನು ಇಲ್ಲವಾಗಿಸಬೇಕೆಂದು ಅಲ್ಲ. ಸತ್ಯ, ನೀತಿಯನ್ನು ಜಗತ್ತಿಗೆ ಸಾರುವಲ್ಲಿ ಆ ಸ್ತ್ರೀಯರೇ ಮುಂದೆ ಬರುವ ಕಾಲ ಮಿಂಚಿದೆ. ಈಗೀಗ ಸ್ತ್ರೀಯರಲ್ಲಿ ತಮ್ಮ ಸ್ವಾತಂತ್ರ್ಯದ ದುರುಪಯೋಗವು ಹೆಚ್ಚುತ್ತಿದೆ ಎಂಬುವುದರಲ್ಲಿ ಸಂಶಯವಿಲ್ಲ. ಆದರೆ ಅದಕ್ಕೆ ಕಾರಣ ಆ ಸ್ತ್ರೀಯರ ಮನದಲ್ಲಿ ಉಂಟಾಗಿರುವ ಲೈಂಗಿಕತೆಗಿರುವ ಹೆಚ್ಚಿನ ಮಹತ್ವವಾಗಿದೆ. ಇದು ನಿಜವಾಗಿಯೂ ಪುರುಷರಿಗಾದರೂ, ಸ್ತ್ರೀಯರಿಗಾದರೂ ಅಪಾಯಕಾರಿಯಾಗುವುದು ಖಂಡಿತ, ಯಾಕೆಂದರೆ ಅಂಥವರು ತಮ್ಮ ಜೀವನದಲ್ಲಿ ಮುಂದೆ ಮಾನಸಿಕವಾಗಿ ನೋವನ್ನು ಬಹಳವಾಗಿ ಅನುಭವಿಸಬೇಕಾಗಿ ಬರುವುದು ಖಂಡಿತ. ಅವರ ದಾಂಪತ್ಯಜೀವನವನ್ನು ಕಸಕ್ಕಿಂತಲೂ ಕಡೆಯಾಗಿ ಮಾತ್ರ ಅವರದೇ ಸುಪ್ತಮನಸ್ಸು ಒತ್ತಿ ಹೇಳುತ್ತಿರುವುದು! ಹಾಗಾಗಿ ಅವರಲ್ಲಿ ದಾಂಪತ್ಯ ವಿರಸ, ವಿವಾಹ ವಿಚ್ಛೇಧನ ಇತ್ಯಾದಿಗಳನ್ನು ಬಹಳವಾಗಿ ಕಾಣಲು ಸಾಧ್ಯವಾಗುವುದು. ಹಿಂದಿನ ಕಾಲದ ಸಮಾಜದಲ್ಲಿ ಪುರುಷರು ಮಾತ್ರ, ವೇಶ್ಯೆಗಳು ಎಂಬ ಆ ಸಮಾಜದಿಂದ ದೂರವಿರಿಸಲ್ಪಟ್ಟ ಸ್ತ್ರೀಯರ ಸಹವಾಸ ಮಾಡುತ್ತಿದ್ದರು, ಮತ್ತು ಮನೆಗೆ ಬಂದು ಹೆಂಡತಿಗೆ ಒದೆಯುತ್ತಿದ್ದರು, ಆದರೆ ಇಂದು ಹೆಂಗಸರು ಮತ್ತು ಗಂಡಸರಲ್ಲಿ ಹೆಚ್ಚಿನವರೂ ಮದುವೆ ಮೊದಲೇ, ಹಣಕಲ್ಲದ ಆದರೆ ಸುಖಕ್ಕಾಗಿ, ವೇಶ್ಯಾವಾಟಿಕೆ ಮಾಡುವವರೇ ಆಗಿರುವರು. ಆದುದರಿಂದ ಇಂದು ದಾಂಪತ್ಯಕ್ಕೆ ಎರಡು ಕಡೆಯಿಂದಲೂ ಒದೆತ ಸಿಗುವಂತಾಗಿದೆ. ಈ ಕಾರಣದಿಂದ ಎರಡು ಕಡೆಯಿಂದಲೂ ವಿವಾಹ ವಿಚ್ಛೇಧನವನ್ನು ಬಯಸುವ ಸಾಧ್ಯತೆಗಳನ್ನು ಅವು ಹೆಚ್ಚಿಸುವವು.
ಇದರಿಂದ ಸಮಾಜವು ಪಾರಾಗಬೇಕಾದರೆ ಇನ್ನುಳಿದ ಆ ಒಂದು ದಾರಿಯು, ಅದು ಸ್ತ್ರೀಯರಿಗೂ, ಪುರುಷರಿಗೂ ಆ ಮಹತ್ತಾದ ಮಹಾತ್ಮರ ಜೀವನವನ್ನು ಅರಿಯುವಂತೆ ಮಾಡುವುದಾಗಿದೆ. ನಿಜವಾಗಿಯೂ, ಈ ಮಹಾತ್ಮರು ತಮ್ಮ ಜೀವನದಲ್ಲಿ ಈ ಇಹದ ಸುಖವನ್ನು ಇತರರಿಗಿಂತ ಅತ್ಯಧಿಕ ಪ್ರಮಾಣದಲ್ಲಿ ಅನುಭವಿಸುವರು ಎಂಬ ಸತ್ಯವು ಜನರಿಗೆ ತಿಳಿದಿಲ್ಲ ಅಷ್ಟೆ. ಅದನ್ನು ಸ್ಪಷ್ಟವಾಗಿ ಜನರಿಗೆ ಅರ್ಥ ಮಾಡಿಕೊಡುವಲ್ಲಿ ಎಲ್ಲರೂ ಆ ಜೀವನವನ್ನೇ ಬಯಸುವರು ಎಂಬುವುದರಲ್ಲಿ ಸಂಶಯವಿಲ್ಲ. ಅದರೊಂದಿಗೆ, ಮಹಾತ್ಮರ ಆ ಆದರ್ಶ ಜೀವನದ ಆನಂದವು ಅದ್ಭುತ ರೀತಿಯಲ್ಲಿ, ಮನ, ಮನೆ, ಹಾಗೂ ಲೋಕ ಶಾಂತಿಯನ್ನೂ ಉಂಟು ಮಾಡುವುದು ಎಂಬುವುದು, ರಾಜ್ಯ, ದೇಶ, ಹಾಗೂ ಲೋಕಕ್ಕೂ ಅನಿವಾರ್ಯವಾಗಿ ಬೇಕಾಗಿರುವ ಆ ದೊಡ್ಡ ಪರಿಹಾರವೂ ಆಗಿರುವುದು.
ಆ ಪ್ರಾಚೀನ ವಾಮಾಚಾರವು ಇರುವಾಗಲೇ ಅದರ ಪ್ರಭಾವದ ಕಗ್ಗತ್ತಲೆಯಿಂದ ಮೇಲೆ ಬರಲು ಈ ಮಹಾತ್ಮರ ಜೀವನ ಜ್ಯೋತಿಗಳಿಗೆ ಮಾತ್ರ ಸಾಧ್ಯ ಎಂಬುವುದರಲ್ಲಿ ಸಂಶಯವೇ ಇಲ್ಲ. ಆ ಜ್ಯೋತಿಯ ಬೆಳಕು ಹೆಚ್ಚಾಗುವಾಗಲೇ ಆ ಶಾಂತಿಯ ಪವಿತ್ರ ಸತ್ಯಯುಗದ ಆರಂಭ. ಅಲ್ಲಿಯ ತನಕ ಜನರು ಇದೇ ಭಯಾನಕ ಕತ್ತಲಲ್ಲಿ ನರಳಬೇಕಾಗುವುದು. ಎಲ್ಲಾ ಧರ್ಮಗಳ ಕನಸಾಗಿರುವ ಆ ಸತ್ಯಯುಗವನ್ನು ನನಸು ಮಾಡಲು, ಜಗತ್ತಿನ ಎಲ್ಲಾ ಧರ್ಮಗಳಲ್ಲೂ ಮಹಾತ್ಮರುಗಳು ಕೋಟಿಗಟ್ಟಲೆ ಸಂಖ್ಯೆಯಲ್ಲಿ ಸೃಷ್ಟಿಯಾಗಲಿ ಎಂದು ಆಶಿಸೋಣ.