ಪೂರ್ಣ ಸತ್ಯವನ್ನು ಉತ್ತಮರಲ್ಲಿ ಹಾಗೂ ಮಹಾತ್ಮರಲ್ಲಿ ಕಾಣಬಹುದು. ಆದರೆ ಇತರ ಕಡೆ ಜನರು ಸತ್ಯವೆಂದೇ ಹೇಳತ್ತಾ ಜನರನ್ನು ಮೋಸ ಮಾಡುವರು, ವಂಚಿಸುವರು. ಇಲ್ಲಿ ಒಂದು ಅಚ್ಚರಿಯನ್ನು ನೋಡಬಹುದು. ಜನರು ಇತರರಲ್ಲಿ ಸತ್ಯಸಂಧತೆಯನ್ನೇ ಕಾಣಬಯಸುವರು ಎಂಬುವುದೇ ಅದಾಗಿದೆ! ಒಬ್ಬ ಕಳ್ಳನೂ, ತನ್ನ ಗೆಳೆಯ-ಕಳ್ಳನ ಕೈಯಲ್ಲಿರುವ, ತಾನು ಕದ್ದ ಹಣವನ್ನು, ಮೋಸ ಮಾಡದೆ, ಎಲ್ಲವನ್ನೂ ಆತನು ತನಗೆ ಹಿಂತಿರುಗಿಸುವಲ್ಲಿ, ತನ್ನ ಗೆಳೆಯ-ಕಳ್ಳನ ಸತ್ಯಸಂಧತೆಯನ್ನೇ ನಿರೀಕ್ಷಿಸುತ್ತಾನೆ!! ಜಗತ್ತು ಸತ್ಯವನ್ನೇ ಬಯಸುವುದು, ಮತ್ತು ಅಸತ್ಯವು ಅದಕ್ಕೆ ಬೇಕಾಗಿಲ್ಲ, ಆದರೆ ತೊಂದರೆಯು ವ್ಯಕ್ತಿಯಲ್ಲಿದೆ, ಆತನ ಆಸೆ, ಆಸಕ್ತಿಗಳು, ಅಸತ್ಯವನ್ನು ಹೇಳುವಂತೆ ಬಲವಂತ ಮಾಡುವವು. ಇದೇ ರೀತಿ, ಧರ್ಮ, ಪಂಥಗಳು, ತಮ್ಮದು ಶ್ರೇಷ್ಠ ಧರ್ಮ ಎಂದು ತೋರಿಸುವಲ್ಲಿ ಅಸತ್ಯವನ್ನು ಸೃಷ್ಟಿಸಿ ಹಾಕುವವು ಮತ್ತು ಮತಾಂತರ ಎಂಬ ಅದರ ಲಾಭವನ್ನು ಪಡೆಯುವವು. ಆದರೆ, ನಿಜವಾಗಿಯೂ ಧರ್ಮವಿರುವುದು ಒಬ್ಬಾತನ ಉತ್ತಮ-ಜೀವನ ಅನುಷ್ಠಾನದಲ್ಲಿ ಮಾತ್ರ ಆಗುವುದು. ಆದರೆ ಮೂಢ ಜನರು, ಇತರ ಧರ್ಮ, ಪಂಥಗಳ ಪುರಾಣ ಕಥೆಗಳ ಲೋಪದಲ್ಲೋ, ತತ್ವಗಳ ಸೂಕ್ಷ್ಮ ಲೋಪಗಳಲ್ಲೋ, ತಪ್ಪನ್ನು ಕಂಡು ಹುಡುಕಿ, ನಿಂದಿಸಿ, ಇತರ ಧರ್ಮಗಳಿಗಿಂತ ತಾವು ಶ್ರೇಷ್ಠರು ಎಂದು ಹೇಳುತ್ತಾ ಸಹಸ್ರಾರು ವರುಷವನ್ನೇ ಆ ವಾದಗಳಿಗಾಗಿ ಮತ್ತು ದಿಗ್ವಿಜಯ, ಮತಾಂತರಗಳಿಗಾಗಿ ಮೀಸಲಾಗಿಟ್ಟಿರುವುದು ನಮಗೆಲ್ಲಾ ತಿಳಿದ ವಿಚಾರವಾಗಿದೆ!!
ತಾವು ಇತರರಿಗಿಂತ ಶ್ರೇಷ್ಠ ಎಂಬಲ್ಲಿ ಧರ್ಮದ ವಾದವಿರುವುದಿಲ್ಲ. ಆದರೆ, ಹೇಗೆ ಶ್ರೇಷ್ಠ ವ್ಯಕ್ತಿತ್ವವನ್ನು ಪಡೆಯಬಹುದು ಎಂಬ ವಾದದಲ್ಲಿ ಮಾತ್ರ ಧರ್ಮವು ಅಡಕವಾಗಿರುವುದು.