ಸತ್ಯ, ಪ್ರೀತಿ, ನೀತಿಗಳಿಗೆ ಶ್ಲೋಕಗಳ ಅಗತ್ಯವಿದೆಯೇ? ಅಥವಾ ಗ್ರಂಥ, ಗ್ರಂಥಾಲಯಗಳ ಅಗತ್ಯವಿದೆಯೇ? ಇಲ್ಲ ಎಂಬುವುದು ಸತ್ಯ. ಆದರೆ ಅವುಗಳನ್ನು ಹೊರತಾಗಿರುವ ದೇವರು, ಧರ್ಮಗಳು ಇರಲು ಸಾಧ್ಯವೇ? ಅಲ್ಲೂ ‘ಇಲ್ಲ’ ಎಂಬುವುದೇ ಸತ್ಯವಾದ ಉತ್ತರವಾಗುವುದು!! ಅಂದರೆ, ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ, ಇವುಗಳನ್ನು ಜೀವಿಸಿ ತೋರಿಸುವುದೇ ನಿಜವಾದ ಧರ್ಮಪ್ರಚಾರವಾಗಿದೆ. ಓದಿ ನೆನಪಿಟ್ಟುಕೊಂಡು ಧರ್ಮವನ್ನು ವಿವರಿಸುವುದು ಒಬ್ಬ ಪಾಪಿಗೂ ಸಾಧ್ಯವಾಗುವ ಕೆಲಸವಾಗಿದೆ. ಮಹಾತ್ಮರು ಧರ್ಮದ ನಿಜವಾದ ಪಾಲಕರು ಮತ್ತು ಪ್ರಚಾರಕರು. ಅವರು, ತಾವು ಧರ್ಮಮಾರ್ಗದಲ್ಲಿ ಜೀವಿಸಿ, ಅದನ್ನು ಜಗತ್ತಿಗೆ ಎತ್ತಿ ಹಿಡಿದಿದ್ದಾರೆ. ಆದರೆ ಇಂದು ಜಗತ್ತಿನ ಎಲ್ಲಾ ಭಾಗದಲ್ಲೂ ಅಧರ್ಮ ಮಾರ್ಗದಲ್ಲಿ ಜೀವಿಸುವವರೇ ಹೆಚ್ಚಾಗಿ ಧರ್ಮ ರಕ್ಷಣೆಯ ಹೊಣೆಹೊತ್ತವರಂತೆ ಕಾಣಿಸಿಕೊಳ್ಳುವರು. ಇದು ಜಗತ್ತನ್ನು ಸರ್ವನಾಶದತ್ತ ನಡೆಸುವುದು.