ಜಗತ್ತಿನ ಎಲ್ಲಾ ಧರ್ಮ, ಪಂಥಗಳಿಗೆ ಸಂಬಂಧಿಸಿ ಹೇಳುವಾಗ, ಈ ಜಗತ್ತಿಗೆ ಮೂಲ ಕಾರಣವಾದ ಒಂದು ಪವಿತ್ರ ಶಕ್ತಿಯನ್ನು ಒಪ್ಪುವವರನ್ನು[ದೇವರನ್ನು ನಂಬುವವರನ್ನು] ಆಸ್ತಿಕರೆಂದೂ ಆದರೆ ಅದನ್ನು ಒಪ್ಪದವರನ್ನು [ದೇವರನ್ನು ನಂಬದವರನ್ನು] ನಾಸ್ತಿಕರೆಂದೂ ಸಾಮಾನ್ಯವಾಗಿ ಜನರು ತಿಳುದುಕೊಂಡಿರುವರು.
ಇಲ್ಲಿ ಒಂದು ಅಂಶವನ್ನು ಹೇಳಬೇಕಾಗಿದೆ. ಅದಕ್ಕಾಗಿ ಮೊದಲಲ್ಲಿ, ದೇವರ ಚೈತನ್ಯದ ಸ್ವಭಾವವನ್ನು ನೋಡೋಣ. ಇಲ್ಲಿ, ಜಗತ್ತಿನ ಎಲ್ಲಾ ದೇವಸಂಕಲ್ಪಗಳ ಚೈತನ್ಯವು ಪವಿತ್ರವಾಗಿದೆ ಎಂದು ಎಲ್ಲಾ ಶಾಸ್ತ್ರಗಳು ಹೇಳುವವು. ಅಂದರೆ, ಜನರು ಆ ‘ಪವಿತ್ರತೆ’ಯನ್ನು ಒಪ್ಪಿರುವುದೇ ಜನರ ಆಸ್ತಿಕತನಕ್ಕೂ ಕಾರಣವಾಗಿರುವುದು ಎಂದು ಅರ್ಥ. ಪವಿತ್ರವಲ್ಲದಿದ್ದಲ್ಲಿ, ಯಾವ ಕಾಲಕ್ಕೂ, ಸಗುಣ ದೇವರಾಗಲೀ ಅಥವಾ ನಿರ್ಗುಣ ದೇವರಾಗಲೀ, ಅದು ದೇವರೇ ಆಗುವುದಿಲ್ಲ ಎಂಬುವುದು ಸರ್ವ ಸಮ್ಮತವೆಂದು ಇದು ತೋರಿಸುವುದು. ಈಗ ಪವಿತ್ರತೆ ಎಂದರೆ ಏನು ಎಂದು ನೋಡೋಣ. ಪವಿತ್ರತೆಯನ್ನು ನಾವು ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೆಂದೇ ಹೇಳಬೇಕಾಗಿದೆ, ಯಾಕೆಂದರೆ ಇವುಗಳು ಹೊರತಾದ ಪವಿತ್ರತೆ ಈ ಜಗತ್ತಿನಲ್ಲಿ ಇಲ್ಲ. ಅಂದರೆ ಸಗುಣವಾದರೂ, ನಿರ್ಗುಣವಾದರೂ, ದೇವರ ಮೂಲ ಚೈತನ್ಯವು ಪವಿತ್ರವಾಗಿರುವುದು ಎಂದು ಹೇಳುವಲ್ಲಿ, ಅದು ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಗಳನ್ನು ಜಗತ್ತಿನಲ್ಲಿ ಸೃಷ್ಟಿಸಲು ಶಕ್ತವಾಗಿರುವಂಥಹ ಪವಿತ್ರ ಶಕ್ತಿಯನ್ನು ಮಾತ್ರ ಹೊಂದಿರುವುದು ಎಂದು ಸ್ಪಷ್ಟವಾಗುವುದು. ಹಾಗಿದ್ದಲ್ಲಿ ನಾವೆಲ್ಲ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯನ್ನೇ ಮೂಲದಲ್ಲಿ ಆಸ್ತಿಕತನಕ್ಕೂ ಕಾರಣ ಎಂದು ಹೇಳಿದಂತಾಯಿತು. ಅಂದರೆ ಈ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯನ್ನು ಈ ಜಗತ್ತಲ್ಲಿ ಸೃಷ್ಟಿಸುವ ಆ ಪವಿತ್ರ ಕಾರಣ ಚೈತನ್ಯವನ್ನೇ ಆಸ್ತಿಕನಾಗಲು ಒಬ್ಬನು ಒಪ್ಪಬೇಕಾಗಿರುವುದು ಎಂದು ಶಾಸ್ತ್ರಗಳೂ ಒತ್ತಾಯಿಸಿದಂತೆ ಆಗುವುದು. ಒಬ್ಬ ಕಳ್ಳನಿಗೆ ಅಥವಾ ಕೆಟ್ಟವನಿಗೆ ಉತ್ತಮನು ಆದರ್ಶನಾಗುವುದಿಲ್ಲ ಎಂಬ ಕಾರಣವಿರುವುದರಿಂದ, ಯಾರು ಅಸತ್ಯ, ದ್ವೇಷ, ಅನೀತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವರೋ ಅವರಿಗೆ ಪವಿತ್ರ ದೇವರು ಆದರ್ಶ ಆಗುವುದಿಲ್ಲ!! ಈ ಹಿನ್ನೆಲೆಯಲ್ಲಿ, ಅಂಥವರು ಆಸ್ತಿಕರೆಂದು ಹೇಳಿಕೊಂಡರೂ ಅವರೆಂದೂ ಆಸ್ತಿಕರಾಗುವುದಿಲ್ಲ, ಬದಲು ನಾಸ್ತಿಕರಾಗುವರೆಂದು ಇಲ್ಲಿ ಸ್ಪಷ್ಟವಾಗುವುದು. ಚುಟುಕಾಗಿ ಹೇಳುವುದಾದರೆ ಆಸ್ತಿಕನೆಂದರೆ ದೇವರನ್ನು ಸತ್ಯ, ಪ್ರೀತಿ, ನೀತಿಯೆಂದು ಅಥವಾ ಅವುಗಳ ಮೂಲ ಕಾರಣವೆಂದು ಖಂಡಿತವಾಗಿಯೂ ತಿಳಿದುಕೊಂಡಿರುವವನು ಎಂದು ಹೇಳಬೇಕಾಗುವುದು. ಬೇರೆ ಬೇರೆ ಧರ್ಮಗಳಲ್ಲಿ ವ್ಯತ್ಯಸ್ಥವಾಗಿ ವಿವರಿಸಿರುವ ಪುರಾಣಗಳ ಸೃಷ್ಟಿಕರ್ತ ದೇವರುಗಳನ್ನು “ನಂಬುವ” ಆ ರೀತಿಯು, ಅದು ತಾರ್ಕಿಕ ಅಥವಾ ವೈಜ್ಞಾನಿಕ ರೀತಿಯ, ಆಸ್ತಿಕವಾದವಾಗುವುದಿಲ್ಲ ಎಂದೂ ತಿಳಿದುಬರುವುದು. ಯಾಕೆಂದರೆ, ಅಲ್ಲಿ ದೇವರನ್ನೇ ಮೋಸ ಮಾಡುವ ಒಬ್ಬ ಪಾಪಿ ರಾಕ್ಷಸನಿಗೂ ದೇವರ ಭಕ್ತನಾಗಿ ದೊಡ್ಡ ಆಸ್ತಿಕನಾಗಬಹುದು!
ದೇವರನ್ನು ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೆಂದು ತಿಳಿದುಕೊಳ್ಳುವ ವಿಧಾನವೇ, ಆ ಸತ್ಯಸಂಧವಾದ, ತಾರ್ಕಿಕ ಮತ್ತು ವೈಜ್ಞಾನಿಕ ರೀತಿಯ, ಆಸ್ತಿಕ-ಪ್ರತಿಪಾದನೆ ಎಂದು ಇಲ್ಲಿ ನಮಗೆ ಸ್ಪಷ್ಟವಾಗುವುದು.