ದೇವರನ್ನೇ ನಂಬದ ಧರ್ಮಗಳು ಮತ್ತು ದೇವರ ಮೇಲಿನ ಭಯ

ದೇವರನ್ನೇ ನಂಬದ ಧರ್ಮಗಳ ಜನರಿಗೆ ದೇವರ ಹೆದರಿಕೆ ಇಲ್ಲ, ಮತ್ತು ಅದು ಈ ಜಗತ್ತಿಗೆ ಅಪಾಯ ಎಂದು ಹೇಳಿಕೊಳ್ಳುವವರು ಇದ್ದಾರೆ. ನಾವು ನಿಜವಾಗಿಯೂ ದೇವರಿಲ್ಲದ ಧರ್ಮಗಳನ್ನು ಮತ್ತು ದೇವರನ್ನು ಭಯ ಭಕ್ತಿಯಿಂದ ಪಾಲಿಸುವ ಧರ್ಮಗಳನ್ನು ಹೋಲಿಸಿ ನೋಡಿದರೆ, ನಮಗೆ ದೇವರ ಭಯವನ್ನು ಹೊತ್ತುಕೊಂಡಿರುವ ಧರ್ಮಗಳಿಂದಲೇ ಹೆಚ್ಚು ಹಿಂಸೆ ಮಾನವರಿಗೆ ಉಂಟಾಗಿದೆ ಎಂದು ಸ್ಪಷ್ಟವಾಗುವುದು. ಆ ದೇವರ ಹೆಸರಲ್ಲಿ ಕೊಚ್ಚಿ ಕೊಚ್ಚಿ ಕೊಂದು ಹಾಕಿರುವ ಘಟನೆಗಳು ಅಷ್ಟಿಷ್ಟಲ್ಲ. ಈಗ ಹೇಳಿ, ಜಗತ್ತನ್ನು ಅಧರ್ಮದ ಕಡೆಗೆ ಹೆಚ್ಚು ಕೊಂಡು ಹೋಗಿರುವುದು ಯಾವುದು?

ತಿಳಿದೂ ತಪ್ಪು ಮಾಡುವವನು ಎಂದೆಂದಿಗೂ ಅದನ್ನು ನಿಲ್ಲಿಸಲಾರ. ಅಧರ್ಮದ ದಾರಿಯಲ್ಲಿ ನಡೆದರೆ ಆತನಿಗೆ ದೇವರಿಂದ ಬರುವ ಶಾಪ, ದೇವರು ಅತನಿಗೆ ಕಲ್ಪಿಸುವ ಘೋರ ನರಕ ಶಿಕ್ಷೆ, ಇತ್ಯಾದಿಗಳನ್ನು ಕಂಠಪಾಠ ಮಾಡಿ ತಿಳಿದುಕೊಂಡಿರುವವರೇ ಅದಕ್ಕೆ ಎಳ್ಳಷ್ಟೂ ಹೆದರದೆ ಕೆಟ್ಟತನದ ಪರಮಾವಧಿಯಲ್ಲಿ ಜೀವಿಸಲು ಧೈರ್ಯಪಡುವುದಾದರೆ ಇನ್ನು ಈ ಜಗತ್ತಿಗೆ ಉಳಿಗಾಲವಿಲ್ಲ. ನರಕವನ್ನು ಅಷ್ಟು ಭಯಾನಕವಾಗಿ ಧರ್ಮಗಳಲ್ಲಿ ವಿವರಿಸಿದರೂ, ಕಳ್ಳತನ, ಮೋಸ, ವಂಚನೆ, ದುಶ್ಚಟ, ಶಾಲಾ ಕಾಲೇಜುಗಳಲ್ಲಿಯೂ ಸೇರಿ ಎಲ್ಲೆಡೆ ನಡೆಯುವ ವ್ಯಭಿಚಾರ ಕ್ರಿಯೆಗಳು, ಜಾತಿ ಹಿನ್ನೆಲೆಯ ಹಿಂಸೆ, ಧರ್ಮಾಂಧರ ರಕ್ತಪಾತ, ಹೀಗೆ ಎಲ್ಲಿ ನೋಡಿದರೂ ದೇವರ ಮೇಲಿನ ಭಯ ಕಾಣಿಸದಾಗಿ, ಆ ಭಯದ ವಿವರಣೆಗಳು ಎಲ್ಲವೂ ನಿಶ್ಪ್ರಯೋಜಕಗಳಾಗಿಹೋದವು! ಇನ್ನೊಮ್ಮೆ ನೆನಪಿಸಬೇಕಾದ ಅಂಶವೆಂದರೆ ಅವರೆಲ್ಲರಿಗೂ ನರಕದ ಭಯಾನಕ ವಿವರಣೆ ಸ್ಪಷ್ಟವಾಗಿ ತಿಳಿದಿದೆ ಎಂಬುವುದನ್ನಾಗಿದೆ!!! ನಮಗೆ ಇದು ಚುಟುಕಾಗಿ ಮತ್ತು ಸ್ಪಷ್ಟವಾಗಿ ಒಂದು ಮುಖ್ಯ ಅಂಶವನ್ನು ತಿಳಿಸುವುದು. ಅದೇನೆಂದರೆ, ಒಳಿತಿನ ಜೀವನ ದಾರಿಯನ್ನು ಅಥವಾ ಧರ್ಮವನ್ನು ನಿರ್ಣಯಿಸುವುದು ಅದು ದೇವರಲ್ಲ, ಅದೇ ರೀತಿ, ದೇವರ ಮೇಲಿನ ಅಥವಾ ನರಕದ ಭಯವೂ ಅಲ್ಲ, ಬದಲು ದೇವತ್ವವೆಂಬ ಆದರ್ಶಗಳಾಗಿವೆ. ಇದುವೇ ಆ ಪ್ರಮುಖ ಅಂಶವಾಗಿರುವುದು. ದೇವರಿಲ್ಲದ ಧರ್ಮಗಳಲ್ಲಿ ಇತರ ಧರ್ಮಗಳಿಗಿಂತಲೂ ಅಹಿಂಸೆಗೆ ಹೆಚ್ಚು ಒತ್ತು ಕೊಟ್ಟಿರುವುದನ್ನು ಗಮನಿಸಬಹುದು. ಇದು ನಿಜವಾಗಿಯೂ ಆ ಕರುಣಾಮಯನೆಂದು ಸಾವಿರಾರು ವರುಷಗಳಲ್ಲಿ ಹೊಗಳುತ್ತಾ ಬಂದಿರುವ ದೇವರು ಇರುವ ಧರ್ಮಗಳಲ್ಲಿ ಕಾಣಿಸಬೇಕಾಗಿತ್ತು!! ಆದರೆ ಅಲ್ಲಿ, ಹೆಚ್ಚಿನ ಕಡೆಗಳಲ್ಲೂ, ಧರ್ಮಯುದ್ಧಗಳೇ ಕಾಣಸಿಗುವುದು ನಿಜಕ್ಕೂ ಅಚ್ಚರಿ ಮೂಡಿಸುವ ವಿಷಯವಾಗಿದೆ! ಜಾಗತಿಕವಾಗಿ ಎಲ್ಲಾ ಧರ್ಮಗಳಲ್ಲೂ ಕಂಡುಬರುವ ಧರ್ಮಾಂಧತೆಯೆಂಬ ಭೀಕರ ಬೆಂಕಿಯಿಂದ, ಮುಂದೆ “ಆ ಕರುಣಾಮಯ ಸೃಷ್ಟಿಕರ್ತ ದೇವರು, ಜನರಿಗೆ ತನ್ನಲ್ಲಿರುವ ಕರುಣಾಮೃತವನ್ನು ಧಾರೆಯೆರೆದು ಕಾಪಾಡಬಲ್ಲ,” ಎಂಬ ಭರವಸೆಯು ಇದರಿಂದ ಸಂಪೂರ್ಣವಾಗಿಯೂ ಇಲ್ಲವಾಗುವುದು. ಮಾತ್ರವಲ್ಲ, ಮಾನವನೇ ‘ಮಾನವೀಯತೆ’ ಎಂಬ ಆಯುಧದೊಂದಿಗೆ ಸ್ವತಃ ಎಚ್ಚೆತ್ತುಕೊಳ್ಳಬೇಕಾಗುವುದು ಎಂಬ ಸಂದೇಶವನ್ನು ಇದು ಜಗತ್ತಿಗೆ ಸ್ಪಷ್ಟವಾಗಿ ರವಾನಿಸುವುದು ಎಂದೂ ತಿಳಿದುಕೊಳ್ಳಬಹುದು.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||