ಜಾತಿಯನ್ನು ಹೊಗಳುವುದು ಮತ್ತು ಕೊಳೆತ ವಸ್ತುವನ್ನು ಹೊಗಳುವುದು ಒಂದೇ ಆಗುವುದು. ಯಾಕೆಂದರೆ ಮಹಾತ್ಮರು ಕಣ್ಣೀರಿಟ್ಟು ಹೇಳಿದ ಮಾತುಗಳನ್ನು ಕಸದಂತೆ ದೂರ ಎಸೆದು, ಸ್ವಾರ್ಥದ ಮಹಾ ಪಾಪದ ದುರ್ವಾಸನೆಯನ್ನು ಮಲ್ಲಿಗೆಯ ಸುಗಂಧಕ್ಕೆ ಹೋಲಿಸಿ ಜನರನ್ನು ಮೋಸ ಮಾಡಿದ ಆ ವಾಮ ಬುದ್ಧಿಯು ಈ ಜಾತಿಯಾಗುವುದು. ನಂಬಿಕೆಗಳನ್ನು ಉಪಯೋಗಿಸಿ ಮುಗ್ಧ ಜನರನ್ನು ಸಾವಿರಾರು ವರುಷಗಳಷ್ಟು ಅತಿ ನೀಚವಾಗಿ ಶೋಷಿಸಿದ ಭೀಕರ ವರ್ತನೆಯ ವರ್ಣತಂತುಗಳು ಅವುಗಳಲ್ಲಿ ಅಡಕವಾಗಿವೆ. ಮೇಲು, ಕೀಳು ವರ್ಗಗಳೆಂದು ಭೇದವಿಲ್ಲದೆ ಈ ಭೂಮಿಯ ಎಲ್ಲರೂ ಆಂಗ್ಲರ ರಾಜಕೀಯ “ಶೋಷಣೆ”ಯನ್ನು ತೆಗಳುತ್ತಿರುವಾಗ, ಮತ್ತು ಆ ಶೋಷಣೆಯಿಂದ ದೂರವಾಗಲು, ಅವರನ್ನು ಈ ದೇಶದಿಂದ ದೂರ ಮಾಡಲು ಲಕ್ಷಗಟ್ಟಲೆ ಜನ ಮುಂದೆ ಬಂದು, ಸಾವಿರಾರು ಜನ ಜೀವವನ್ನೇ ದಾನ ಎರೆದಾಗ, ಇತ್ತ ದೇವರ, ಧರ್ಮದ ಹೆಸರಲ್ಲಿ, ಅತ್ಯಂತ ಹೀನವಾಗಿ ‘ಶೋಷಣೆ’ ಮಾಡಿದ ಈ ಜಾತಿಗಳನ್ನು ಮಾತ್ರ ಜನರು ತಲೆಯಲ್ಲಿ ಇಂದೂ ಹೊತ್ತುಕೊಂಡಿದ್ದಾರೆ, ಹೊಗಳುತ್ತಿದ್ದಾರೆ, ಮಾತ್ರವಲ್ಲ ಅವುಗಳಲ್ಲಿ ರಾಜಕೀಯದ ಆಟವನ್ನೂ ಆಡುತ್ತಿದ್ದಾರೆ. ಅಯ್ಯೋ, ಇದೆಂಥ ವೈಪರೀತ್ಯ!!
ತಾನು ಶೋಷಿಸಲ್ಪಡಬಾರದು ಮತ್ತು ತಮ್ಮವರು ಶೋಷಿಸಲ್ಪಡಬಾರದು ಎಂಬ ಬಯಕೆಯು ಎಲ್ಲಾ ಮಾನವನಿಗೂ ಇರುವುದು, ಆ ಶೋಷಿಸಲ್ಪಡುವವನ ಸ್ಥಾನದಲ್ಲಿ ನಾವು ನಿಂತು, ಹಿಂದೆ ಏನೆಲ್ಲಾ ತರದಲ್ಲಿ, ಜಾತಿ ಹಿನ್ನೆಲೆಯಲ್ಲಿ, ಶೋಷಿಸಲ್ಪಟ್ಟಿದೆ, ಅವೆಲ್ಲವನ್ನೂ ನಾವು ಮಾನಸಿಕವಾಗಿ ಅನುಭವಿಸಿ ನೋಡಿದಾಗ ಮಾತ್ರ ಹೃದಯ ಹಿಂಡಿದ ಅನುಭವವಾಗುವುದು. ಹಾಗೆ ಮಾಡದವನು ‘ಅದು ಆತನ ಹಿಂದಿನ ಜನ್ಮದ ಕರ್ಮ’ ಅಥವಾ ‘ತಲೆ ಬರಹ’ ಎಂಬ ಹಿಂದಿನವರ ಆ ಕ್ರೌರ್ಯದ ಮಾತನ್ನೇ ಆವರ್ತಿಸುವನು! ಮಾನವನು ಆ ಶೋಷಣೆಯನ್ನು ತಾಳಲಾರದೆ, ಅಂದು, ತಾನು ತನ್ನ ಕಣ್ಣೀರಲ್ಲೇ ಹರಿದು ದುಃಖದ ಸಾಗರವನ್ನು ಸೇರುವಾಗ, ಅಂದಿನ ಆ ಸಮಾಜದಲ್ಲಿ ಧರ್ಮ ಎಲ್ಲಿತ್ತು? ಅದೇ ರೀತಿ ಇಂದೂ ಹಲವು ಕಡೆಗಳಲ್ಲಿ ಅವುಗಳ ಅಸ್ಥಿ ಪಂಜರಗಳು ಒಡಾಡುತ್ತಿರುವಾಗ, ಇಂದೂ, ಧರ್ಮ ಎಲ್ಲಿದೆ ಎಂಬ ಪ್ರಶ್ನೆಗೆ ನಾವು ಉತ್ತರಿಸಬೇಕಾಗುವುದು.
ಇನ್ನಾದರೂ, ಈ ಜಾತಿಗಳಿಗೆ ತಿಲಾಂಜಲಿ ಕೊಡುವಲ್ಲಿ ಜನರು ಪ್ರಬುದ್ಧರಾಗುವರು ಎಂದು ಆಶಿಸೋಣ. ಈ ಮಹತ್ ಕಾರ್ಯವನ್ನು ನಿರ್ವಹಿಸಲು ನಾವು ಮೊದಲಿಗೆ ಮಾನವೀಯತೆಯನ್ನು ಬೆಳೆಸುತ್ತಾ ಮಹಾತ್ಮರಾಗೋಣ ಮತ್ತು ಈ ನೀಚ ಜಾತಿ ಭ್ರಮೆಯೆಂಬ ಕಗ್ಗತ್ತಲೆಯನ್ನು, ಎಲ್ಲರ ಮನದಿಂದಲೂ, ಆ ಸತ್ಯದ ದಿವ್ಯ ಬೆಳಕಿನ ಸಹಾಯದಿಂದ ಹೋಗಲಾಡಿಸೋಣ.