ಧರ್ಮದ ಸಾರವೇ ಧರ್ಮ

ನಾನು ನನ್ನ ಮಾತುಗಳಿಂದ ಏನನ್ನು ಹೊಸತಾಗಿ ಸೃಷ್ಟಿಸಲು ಬಯಸುವುದಿಲ್ಲ ಬದಲಿಗೆ ಆ ಪ್ರಾಚೀನ ವಾಮಾಚಾರದ ಕರಾಳ ಹಸ್ತದಿಂದ ಈ ಜಗತ್ತು ಹೇಗೆ ರಕ್ಷಣೆಯನ್ನು ಪಡೆಯಬಹುದು ಎಂದು ಮಾತ್ರ ಚಿಂತಿಸುವೆನು. ಇನ್ನು ಧರ್ಮದ ಸಾರವೇ ಆ ನಿಜವಾದ ಧರ್ಮವಾಗುವುದು ಎಂಬುವುದರ ಬಗ್ಗೆ ಎಲ್ಲಾ ಧರ್ಮಗಳ ಪಂಡಿತರುಗಳ ಅಭಿಪ್ರಾಯವನ್ನು ಕೇಳೋಣ.

ಪ್ರಶ್ನೆ- ಧರ್ಮಗಳ ಪಂಡಿತರುಗಳೇ, ನಿಮ್ಮ ನಿಮ್ಮ ಧರ್ಮವು ಯಾವುದಕ್ಕಾಗಿದೆ?

ಉತ್ತರ- [ಎಲ್ಲಾ ಪಂಡಿತರುಗಳು ಒಕ್ಕೊರಳಲ್ಲಿ] ಶಾಂತಿಗಾಗಿ.

ಪ್ರಶ್ನೆ- ಧರ್ಮಗಳ ಪಂಡಿತರುಗಳೇ, ನಿಮ್ಮ ನಿಮ್ಮ ಧರ್ಮ ಮತ್ತು ದೇವರುಗಳು ಇನ್ನೊಬ್ಬರನ್ನು ನೋಯಿಸಬೇಕು ಎಂದಿದೆಯಾ?

ಉತ್ತರ- [ಎಲ್ಲಾ ಪಂಡಿತರುಗಳು ಒಕ್ಕೊರಳಲ್ಲಿ] ಇಲ್ಲವೇ ಇಲ್ಲ.

ಪ್ರಶ್ನೆ- ಧರ್ಮಗಳ ಪಂಡಿತರುಗಳೇ, ನಿಮ್ಮ ನಿಮ್ಮ ದೇವರು ಮತ್ತು ಧರ್ಮಗಳು ಸುಳ್ಳು, ವಂಚನೆ, ದ್ವೇಷ, ಅನೈತಿಕ ಜೀವನ ಇತ್ಯಾದಿಗಳನ್ನು ಪ್ರೊಹ್ಸಾಹಿಸುವುದಾ?

ಉತ್ತರ- [ಎಲ್ಲಾ ಪಂಡಿತರುಗಳು ಒಕ್ಕೊರಳಲ್ಲಿ] ಇಲ್ಲ, ಅದೆಂದಿಗೂ ಸಾಧ್ಯವಾಗದು.

ಪ್ರಶ್ನೆ- ಧರ್ಮಗಳ ಪಂಡಿತರುಗಳೇ, ನಿಮ್ಮ ನಿಮ್ಮ ದೇವರು ಸುಳ್ಳ, ಕ್ರೂರಿ, ಅನೈತಿಕ ವ್ಯಕ್ತಿ ಎಂದು ಯಾರಾದರೂ ಅಂದರೆ ನೀವು ಒಪ್ಪುವಿರೇ?

ಉತ್ತರ- [ಎಲ್ಲರೂ ಒಕ್ಕೊರಳಲ್ಲಿ] ಅದನ್ನು ಎಂದಿಗೂ ನಾವು ಒಪ್ಪಲಾರೆವು. ಆತನು ಕರುಣಾಮಯನು.

ಇಷ್ಟರಲ್ಲಿ ಧರ್ಮ, ಮತ್ತು ದೇವರ ಸ್ವಭಾವ ಮತ್ತು ಜನರಿಂದ ಧರ್ಮಗಳು ಏನನ್ನು ಬಯಸುವವು ಎಂಬುವುದು ಸ್ಪಷ್ಟವಾಯಿತು, ಮಾತ್ರವಲ್ಲ, ಅವುಗಳನ್ನು ಎಲ್ಲರೂ ಒಕ್ಕೊರಳಲ್ಲಿ ಒಪ್ಪುವರು. ಅಚ್ಚರಿ ಎಂದರೆ, ಇದಲ್ಲದೆ ಇನ್ನು ಧರ್ಮವಾಗಿ ಬೇರೆ ಏನೂ ಉಳಿದಿಲ್ಲ ಮತ್ತು ಆ ‘ಸಾರ’ ಹೊರತು ಬೇರೆ ರೀತಿಯಲ್ಲಿ ಧರ್ಮವನ್ನು ಅವರು ಒಪ್ಪಲಾರರು ಎಂದೂ ಸ್ಪಷ್ಟವಾಯಿತು. ಹಾಗಿದ್ದರೆ, ಇನ್ನಿರುವುದೆಲ್ಲಾ ಒಂದೊಂದು ಊರ ನಂಬಿಕೆ, ಆಚಾರಗಳು ಮಾತ್ರ!! ಅವುಗಳು ಧರ್ಮವಲ್ಲ, ಖಂಡಿತಾ ಧರ್ಮವಲ್ಲ!! ಈಗಲಾದರೂ ಧರ್ಮ ಮತ್ತು ದೇವಸಂಕಲ್ಪಗಳು ಸಾರ್ವತ್ರಿಕ ಎಂದು ತಿಳಿದುಕೊಳ್ಳಬಹುದು. ಇದನ್ನು ಪ್ರಾಚೀನ ಕಾಲದಲ್ಲೇ ಮಹಾತ್ಮರು ಜನರಿಗೆ ಉಪದೇಶಿಸಿದ್ದರು. ಕಾಲಾನಂತರದಲ್ಲಿ ಬಂದ ಪರಂಪರೆ, ಪಂಥ, ಧರ್ಮಗಳು ಈ ಸಾರ್ವತ್ರಿಕ ಧರ್ಮವನ್ನು ಆಚಾರಗಳಿಂದಲೇ ತುಂಬಿದ ಗೋಣಿಚೀಲದೊಳಗೆ ಎಲ್ಲೋ ಮೂಲೆಯಲ್ಲಿ ಇರಿಸಿ ’ನಮ್ಮ ಧರ್ಮ ಬೇರೆ’ ‘ನಮ್ಮಧರ್ಮ ನಿಮ್ಮಕ್ಕಿಂತ ಶ್ರೇಷ್ಠ’ ಎಂದು ಆಚಾರಗಳನ್ನೇ ಆ ಧರ್ಮದ ಬದಲು ಎಲ್ಲರಿಗೂ ತೋರಿಸುತ್ತಾ, ಅವುಗಳ ಮೇಲೆಯೇ ಸಾವಿರಾರು ವರುಷಗಳಿಂದ ವಾದ ಮಾಡುತ್ತಾ ಬಂದಿವೆ! ಶಾಂತಿಯನ್ನು ಜಗತ್ತಿಗೆ ತರುವ ಬದಲು, ಪ್ರೀತಿಯನ್ನು ಜಗತ್ತಲ್ಲಿ ಹೆಚ್ಚಿಸುವ ಬದಲು, ಎಲ್ಲರೂ ಒಂದಾಗುವ ಬದಲು, ತಮ್ಮೊಳಗೆ ಹೊಡೆದಾಡಿ ರಕ್ತಪಾತ ಮಾಡಿ ಈ ಭೂಮಿಯನ್ನು ಭೀಕರ ನರಕವನ್ನಾಗಿ ಮಾಡಿವೆ!!

ಆ ಎಲ್ಲಾ ಧರ್ಮ ಪಂಡಿತರುಗಳು ಮೇಲಿನ ಮಾತಿನಲ್ಲಿ ಒಪ್ಪಿಕೊಂಡ ಆ ‘ನಿಜ ಧರ್ಮ’ವನ್ನು ಮಾತ್ರ ನಾನು ಹೇಳುವುದು ಅದಲ್ಲದೆ, ಹೊಸತಾಗಿ ಏನೂ ಹೇಳಿಲ್ಲ. ಆಚಾರಗಳಿಗೆ ಇನ್ನಾದರೂ ಕಡಿಮೆ ಒತ್ತು ಕೊಟ್ಟು, ಆ ಸಾರ್ವತ್ರಿಕ ಧರ್ಮವನ್ನು[ಧರ್ಮದ ಸಾರ ಭಾಗವನ್ನು] ಎತ್ತಿ ಹೇಳಿದರೆ ನಮಗೆ ಈ ಜಗತ್ತಿಗೇ ಶಾಂತಿಯ ಆ ಸತ್ಯ ಯುಗವನ್ನೇ ತರಲು ಸಾಧ್ಯವಾಗಬಹುದು. ಇದನ್ನು ಮಾತ್ರ ನಾನು ಉದ್ದೇಶಿಸಿರುವುದು ಎಂದು ನೆನಪಿಡಬೇಕಾಗಿದೆ. ನಮಗೆ ಆ ಮುಂಬರುವ ಆಪತ್ತಿನಿಂದ ರಕ್ಷಣೆಯನ್ನು ಪಡೆಯಲೂ ಇದುವೇ ಆ ಏಕೈಕ ಪರಿಹಾರವಾಗುವುದು ಎಂಬುವುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||