ಎಲ್ಲಾ ಧಾರ್ಮಿಕತೆಯೂ ತಮ್ಮ ಧರ್ಮದಲ್ಲೇ ಇರುವುದು ಮತ್ತು ಇನ್ನು ಧರ್ಮದ ವಿಚಾರವಾಗಿ ಯಾರೂ ಹೊಸತಾಗಿ ಹೇಳಬೇಕಾಗಿಲ್ಲ, ಎಂದು ಎಲ್ಲಾ ಧರ್ಮದ ಧರ್ಮಾಂಧ ಪಂಡಿತರುಗಳು ಹೇಳುವುದಿದೆ. ಹೊಸತನವೆಂದರೆ ಏನು, ಹೊಸ ಬಣ್ಣದ ಬಟ್ಟೆಯ ತರವೇ? ಇದುವೇ ಹೆಚ್ಚಿನ ಜನರಲ್ಲಿರುವ ಆಧ್ಯಾತ್ಮದ ಮತ್ತು ಧರ್ಮದ ಬಗೆಗಿನ ತಪ್ಪು ತಿಳುವಳಿಕೆಯಾಗಿದೆ! ಸನ್ಯಾಸಿಗಳು ತಮ್ಮ ತಮ್ಮ ಮೋಕ್ಷಕ್ಕಾಗಿ ಮಾತ್ರ ಸೀಮಿತವಾಗಿರುವವರು [ಸೀಮಿತವಾಗಿರಬೇಕಾದವರು ಎಂದು ಶಾಸ್ತ್ರಗಳು ವಿಧಿಸಿವೆ], ಯೋಗಿಗಳಲ್ಲಿ ಅಪರೂಪಕ್ಕೆ ಮೋಕ್ಷಾರ್ಥಿಗಳು ಇರುವರು, ಇನ್ನು ಅವರಲ್ಲಿ ಹೆಚ್ಚಿನವರೂ ಏನಾದರೂ ಒಂದು ಸಿದ್ಧಿಯನ್ನು ಅಥವಾ ಉತ್ತಮ ಅರೋಗ್ಯವನ್ನು ಪಡೆಯಲಿರುವ ಮಾರ್ಗದಲ್ಲಿ ತಲ್ಲೀನರಾದವರು ಮತ್ತು ಅದಕ್ಕೆ ಹೆಚ್ಚು ಮಹತ್ವವನ್ನು ಕೊಡುವವರು. ಇದೆಲ್ಲಾ ನಿಮಗೆ ತಿಳಿದಿದೆ. ಇದು ಯಾವುದೂ ತಪ್ಪು ಎಂದು ಹೇಳುವುದಿಲ್ಲ. ಯಾಕೆಂದರೆ ಅದು ಮಾನವನ ಜೀವನದ ತೊಂದರೆಯನ್ನು ಸ್ವಲ್ಪಮಟ್ಟಿಗೆ ನಿವಾರಿಸುವಲ್ಲಿ ಸಹಾಯಕವಾಗುವುದು ಮಾತ್ರವಲ್ಲ ಅದು ಅವರವರ ಅಭಿರುಚಿಯನ್ನು ಹೊಂದಿಕೊಂಡಿರುವುದು. ಆದರೆ ಇಲ್ಲಿ ಒಂದು ವಿಚಾರವನ್ನು ನಾವು ತಿಳಿಯಬೇಕಾಗಿದೆ. ಅದೇನೆಂದರೆ ಜಗತ್ತಿನಲ್ಲಿ ‘ಧರ್ಮ’ ಎಂಬ ಪದವನ್ನು ಉಪಯೋಗಿಸಿದಲ್ಲಿ, ಅಲ್ಲಿ ಇವುಗಳಿಗೆ ಯಾವುದಕ್ಕೂ ನೇರವಾದ ಸ್ಥಾನವೇ ಇರುವುದಿಲ್ಲ. ಮೇಲಿನ ಆ ಕ್ರಿಯೆಗಳಿಂದ ಮತ್ತು ಸಾಧನೆಗಳಿಂದ ಈ ಜಗತ್ತಲ್ಲಿ ಧರ್ಮವನ್ನು ಬೆಳೆಸಲು ಸಾಧ್ಯವಾಗದು. ಅದಕ್ಕೆ ನೇರವಾಗಿ ಸಂಬಂಧಿಸಿದ ಒಂದು ಬೇರೆ ಮನುಷ್ಯ ವರ್ಗವಿದೆ, ಅವರನ್ನು ಕರೆಯೋಣ, ಅವರೇ ಧರ್ಮದ ನಿಜವಾದ ರಕ್ಷಕರು, ಅವರು ಬೇರೆ ಯಾರೂ ಅಲ್ಲ, ಅವರೇ, ನಾವು ಮೊದಲಿನಿಂದಲೂ ಮಹತ್ವದ ಸ್ಥಾನವನ್ನು ಕೊಟ್ಟು ಗೌರವಿಸುವ ಆ ಮಹಾತ್ಮರುಗಳಾಗಿರುವರು!! ಇವರಿಲ್ಲದ ದೇಶ ಸ್ಮಶಾನಕ್ಕೆ ಸಮ. ಇವರನ್ನು ಸೃಷ್ಟಿಸದ ಧರ್ಮ, ಅದು ಅನುಷ್ಠಾನ ಹೀನ ಧರ್ಮವಾಗುವುದು. ಇವರಿಲ್ಲದಲ್ಲಿ, ಅಸುರ ಸಂತತಿಗಳು ಬೆಳೆವವು! ಇವರಿಲ್ಲದಲ್ಲಿ ನೈತಿಕತೆಯ ಅಂತ್ಯವಾಗುವುದು! ಹೇ ಧರ್ಮವೇ, ನಿನ್ನುಸಿರು ನಿಜವಾಗಿಯೂ ಇಲ್ಲಿದೆ! ಅವರ ಮನಸ್ಸನ್ನು ಸಾಮಾನ್ಯರ ಮನಸ್ಸಿನೊಂದಿಗೆ ಹೋಲಿಸಲು ಸಾಧ್ಯವಾಗದು ಎಂಬುವುದನ್ನು ನಾವು ಮೊದಲು ನೆನಪಿಡಬೇಕಾಗಿದೆ, ಯಾಕೆಂದರೆ ಒಬ್ಬ ಸ್ವಾರ್ಥಿಯ ಮನಸ್ಸು ಮಹಾತ್ಮನ ಮನಸ್ಸಿನ ಅಗಾಧತೆಯನ್ನು ಅರಿಯಲು ಶಕ್ತವಾಗುವುದಿಲ್ಲ. ಕುಡುಕನಿಗೆ ಅವನ ಸ್ವಭಾವವೇ ಸರಿಯಾಗಿ ಮತ್ತು ಆನಂದದಾಯಕವಾಗಿ ಕಾಣಿಸುವಂತೆ, ಪ್ರತಿಯೊಬ್ಬನೂ ತನ್ನ ಧಾರ್ಮಿಕ ಬೆಳವಣಿಗೆಯ ಯಾವುದೋ ಒಂದು ಹಂತದಲ್ಲಿದ್ದು, ಅಲ್ಲಿಂದ ಈ ಜಗತ್ತನ್ನು ಇಣುಕಿ ನೋಡಿ ಬೆಲೆಕಟ್ಟಲು ಪ್ರಯತ್ನಿಸುವನು ಅಷ್ಟೆ.
ನಾವು ರೋಗದಿಂದ ಗುಣಮುಖರಾದ ನಂತರವೂ ಮದ್ದನ್ನು ಸೇವಿಸುವುದಿಲ್ಲ. ಅದೇ ರೀತಿ ಇನ್ನೊಂದು ಉದಾಹರಣೆಯನ್ನು ಹೇಳುವುದಾದರೆ, ನಮ್ಮ ತಲೆ ನೋವು ಹೋದ ನಂತರವೂ ನಾವು ನಮ್ಮ ಹಾಸಿಗೆಯಲ್ಲೇ ಮಲಗಿಕೊಂಡಿರುವುದಿಲ್ಲ, ಯಾಕೆಂದರೆ ಅಲ್ಲಿ ಪೂರ್ತಿಯಾಗಿ ನಮಗೆ ನಮ್ಮ ಸಮಸ್ಯೆ ಪರಿಹಾರವಾಗಿದೆ. ಅದೇ ರೀತಿ ನಮ್ಮ ಜಗತ್ತಿನಲ್ಲಿ ಅಥವಾ ಸಮಾಜದಲ್ಲಿ ಸತ್ಯ, ಪ್ರೀತಿ, ನೀತಿಯಿಂದೊಡಗೂಡಿದ ಆ ಆನಂದದ ಧಾರ್ಮಿಕ ಜೀವನವು ಯಾವಾಗ ಹಬ್ಬಿ ಹಸಿರಾಗಿ ಕಂಗೊಳಿಸುವುದೋ, ಅಂದು ಮಾತ್ರ ನಮ್ಮ ನಮ್ಮ ಧರ್ಮವು ಪರಿಪೂರ್ಣವಾಗುವುದು. ಅಂದರೆ, ಆ ರೀತಿಯಲ್ಲಿ ಧರ್ಮವು ಪರಿಪೂರ್ಣವಾದಲ್ಲಿ, ಅದರ ನಂತರ ನಮಗೆ ಹೊಸ ರೀತಿಯೋ ಅಥವಾ ಇನ್ನಾವುದೋ ಬೇಕಾಗುವುದಿಲ್ಲ. ಆದರೆ ಶೋಷಣೆ, ಹಿಂಸೆ, ರಕ್ತಪಾತಗಳು ಧರ್ಮಗಳ ಹಿನ್ನೆಲೆಯಲ್ಲಿ ಎಲ್ಲಿಯ ತನಕ ಇರುವುದೋ ಅಲ್ಲಿಯ ತನಕ ನಮಗೆ ಅದನ್ನು ಸರಿ ಪಡಿಸಲಿರುವ ಪ್ರಯತ್ನವೂ ಬೇಕಾಗುವುದು. ಅದಕ್ಕೆ ನಮಗೆ ಎಲ್ಲಕ್ಕಿಂತಲೂ ಅನಿವಾರ್ಯವಾಗುವುದು ಆ ನಮ್ಮ ಮಹಾತ್ಮರುಗಳಾಗಿರುವರು. ಇವರ ಸಂಖ್ಯೆಯು ಹೆಚ್ಚುತ್ತಾ ಬಂದಲ್ಲಿ ಮಾತ್ರ ಜಗತ್ತಿಗೆ ಧರ್ಮದ ತಿರುಳು ದೊರಕುವುದು, ಇಲ್ಲಾವಾದಲ್ಲಿ, ಬರೇ ಧರ್ಮದ ರಸರಹಿತ ಗೊಜ್ಜು ಮಾತ್ರ ಜಗಿಯಬೇಕಾಗಿ ಬಂದು, ಈ ಜಗತ್ತು, ಅಂಧಾಚಾರಗಳೊಂದಿಗೆ ಭಯಾನಕ ಕರ್ಮಗಳಲ್ಲಿ ತನ್ನನ್ನು ತಾನು ಮತ್ತೂ ಮತ್ತೂ ತೊಡಗಿಸಿಕೊಳ್ಳುತ್ತಾ ಮುಂದುವರಿಯುವುದು!!
ಸತ್ಯಚಿಂತನೆಯ ಮೂಲಕ ಮಾತ್ರ ಮಹಾತ್ಮರ ಸೃಷ್ಟಿ ಸಾಧ್ಯವೆಂಬ ಕಾರಣಕ್ಕೆ, ಈ ಜಗತ್ತಿಗೆ ಇಂದು ಅನಿವಾರ್ಯವಾದುದೇ ಸಾಮೂಹಿಕವಾದ ಸತ್ಯಚಿಂತನೆಯಾಗಿದೆ. ಅದರಿಂದ ಹೃದಯ, ಬುದ್ಧಿ, ಮನಸ್ಸುಗಳು ಪವಿತ್ರವಾಗಿ ಸ್ತ್ರೀ, ಪುರುಷ, ವೃದ್ಧ, ವೃದ್ಧೆ, ಮಕ್ಕಳೆಂದು ಬೇಧವಿಲ್ಲದೆ ಸರ್ವರೂ ತಮ್ಮ ಲೌಕಿಕ ಜೀವನವನ್ನು ಆ ಅದ್ಭುತಕರವಾದ ಶಾಂತಿ, ಆನಂದದಿಂದ ಜೀವಿಸುವಂತಾಗುವುದು! ಇದು ಮಹತ್ವದ ಆದರ್ಶ ಜೀವನವನ್ನು ಜಗತ್ತಿಗೆ ನೀಡುವ ಒಂದು ಮಹತ್ತಾದ ಮತ್ತು ಸರ್ವ ಧರ್ಮ, ಪಂಥಗಳಲ್ಲೂ ಅನುಸರಿಸಬಹುದಾದ ಜೀವನ ರೀತಿಯಾಗಿದೆ. ಅಂದರೆ ಇದುವೇ ಮಹಾತ್ಮರ ಜೀವನ ರೀತಿಯಾಗಿದೆ! ಈ ವಿಶಾಲ ಮನಸ್ಕತೆ ಎಂಬ ಧಾರ್ಮಿಕ ಪರಿಪೂರ್ಣತೆಯನ್ನು ನಾವು ಆದಷ್ಟು ಬೇಗನೆ ಪಡೆದು ಮುಂಬರಲಿರುವ ಆ ಭಯಾನಕ ಪ್ರಾಚೀನ ವಾಮಾಚಾರದ ರಕ್ತಪಾತಗಳ ಸರಮಾಲೆಗಳನ್ನೇ ಎಂದೆಂದಿಗಾಗಿ ಇಲ್ಲವಾಗಿಸಿಬಿಡೋಣ.