ಈ ವಿಷಯವಾಗಿ ವಿವರಣೆಯನ್ನು ಮೊದಲೇ ಕೊಟ್ಟಿದ್ದೇನೆ. ಇನ್ನು, ಉದಾಹರಣೆಯ ಸಹಾಯದಿಂದ ಸ್ಪಷ್ಟಪಡಿಸಲು ಪ್ರಯತ್ನಿಸಬಹುದು. ನಾವು ಯಾರೂ ಮಾವಿನ ಹಣ್ಣನ್ನ ಸೇಬು ಹಣ್ಣು ಎಂದು ಹೇಳುವುದಿಲ್ಲ, ಅದೇ ರೀತಿ ಸೇಬು ಹಣ್ಣನ್ನು ಮಾವಿನ ಹಣ್ಣೆಂದು ಹೇಳುವುದಿಲ್ಲ. ಅದೇ ರೀತಿ, ದೇವರನ್ನು ಸೈತಾನನೆಂದು ಹೇಳುವುದಿಲ್ಲ, ಮತ್ತು ಸೈತಾನನನ್ನು ದೇವರೆಂದೂ ಹೇಳುವುದಿಲ್ಲ. ಇನ್ನು, ಮೇಲಿನ ಉದಾಹರಣೆಯನ್ನೇ ತೆಗೆಯೋಣ. ನಮಗೆ ತೋರಿಸಿ ಕೊಡಲು ಹಣ್ಣುಗಳು ಇಲ್ಲದಿರುವಾಗ, ಆ ಹಣ್ಣನ್ನು ಕಾಣದ ಮತ್ತು ಅದರ ಬಗ್ಗೆ ಗೊತ್ತೇ ಇಲ್ಲದ ಜನರಿಗೆ, ಅವುಗಳ ಪ್ರತ್ಯೇಕತೆಯನ್ನು ತಿಳಿಸಿಕೊಡಲು ನಾವು ಆ ಹಣ್ಣುಗಳ ರೂಪ, ಅವುಗಳ ರುಚಿಯ ಪ್ರತ್ಯೇಕತೆ, ಮತ್ತು ಅದಕ್ಕೆ ಸಂಬಂಧಿಸಿದ ಮರಗಳ ಪ್ರತ್ಯೇಕತೆ, ಇತ್ಯಾದಿ ವಿವರಣೆಯ ಮೂಲಕ ತಿಳಿಸಿಕೊಡಬಹುದು. ಇದೇ ರೀತಿಯಲ್ಲಿ, ಕಣ್ಣಿಗೆ ಕಾಣಿಸದ ಆ ದೇವರು ಮತ್ತು ಸೈತಾನ ತಮ್ಮೊಳಗಿನ ವ್ಯತ್ಯಾಸವನ್ನು ತಿಳಿಸಿಕೊಡಬೇಕಷ್ಟೆ. ಆದರೆ, ಆ ದೇವರ ಪ್ರತ್ಯೇಕತೆಯನ್ನು ತಿಳಿಸಿಕೊಡುವಲ್ಲಿ ಆ ದೇವರ ನಾಮ, ರೂಪ ಯಾವುದೂ ಇಲ್ಲಿ ಪ್ರಯೋಜನಕ್ಕೆ ಬರಲಾರದು! ಇಲ್ಲಿ, ಆ ದೇವರ ಸ್ವಭಾವ ಮತ್ತು ಸೈತಾನನ ಸ್ವಭಾವದ ವ್ಯತ್ಯಾಸವನ್ನು ಹೇಳಿದಲ್ಲಿ ಮಾತ್ರ ಮಾನವನನಿಗೆ ದೇವರು ಮತ್ತು ಸೈತಾನನನ್ನು ಪ್ರತ್ಯೇಕಿಸಿ ತಿಳಿಯಲು ಸಾಧ್ಯವಾಗುವುದು. ಒಬ್ಬ ದುಷ್ಟ, ಪಾಪಿ, ಮತ್ತು ಕ್ರೂರಿಯಾದವನನ್ನು, ಆತನು ದೇವರ ಅವತಾರವೆಂದರೆ ಎಲ್ಲರೂ ನಗುವರು, ಅದೇ ರೀತಿ ಒಬ್ಬ ತ್ಯಾಗಜೀವಿಯಾಗಿ ಜೀವಿಸುವ ಆ ಸಾರ್ವತ್ರಿಕ ಪ್ರೀತಿಯ ಮಹಾತ್ಮ ಅಥವಾ ಹೃದಯವಂತನನ್ನು ಸೈತಾನ ಎಂದರೂ ಎಲ್ಲರೂ ನಗುವರು. ಆದುದರಿಂದ ದೇವರು ಎಂದರೆ ದೇವರ ಸ್ವಭಾವವೆಂದೂ ಮತ್ತು ಸೈತಾನ ಎಂದರೆ ಸೈತಾನನ ಸ್ವಭಾವವೆಂದೂ ಇಲ್ಲಿ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ. ಈ ರೀತಿ ‘ದೇವರ ಸ್ವಭಾವವೇ ದೇವರು’ ಎಂಬ ಹಿನ್ನೆಲೆಯಲ್ಲಿ, ನಮಗೆ ದೇವರು ದೇವರಾಗಿಯೇ ಸಿಗುವನು ಮತ್ತು ಸೈತಾನ ಸೈತಾನನಾಗಿಯೇ ಸಿಗುವನು. ಸೈತಾನನಿಗೂ ಅದನ್ನು ಮೋಸ ಮಾಡಲು ಸಾಧ್ಯವಾಗಲಾರದು! ಆದುದರಿಂದ ಆ ಸೃಷ್ಟಿಕರ್ತ ದೇವರನ್ನು ವ್ಯಕ್ತಿಯಾಗಿ ಬಣ್ಣಿಸುವಾಗ, ಆತನು ಸ್ವಭಾವ-ಸೃಷ್ಟಿಕರ್ತನಾದಲ್ಲಿ, ಆತನು ಸರ್ವರಿಗೂ, ಎಂದೆಂದಿಗೂ ದೇವರಾಗಿಯೇ ಸಿಗುವನು ಮತ್ತು ಆತನನ್ನು ಯಾರಿಂದಲೂ ಅದಲುಬದಲು ಮಾಡಿ ತೋರಿಸಿ ಈ ಜಗತ್ತಲ್ಲಿ ಶೋಷಣೆ, ಹಿಂಸೆ, ರಕ್ತಪಾತವನ್ನು ಮಾಡಿಸಲೂ ಸಾಧ್ಯವಾಗದು ಎಂಬುವುದೂ ಸತ್ಯವಾಗುವುದು. ಹೀಗಾದಲ್ಲಿ, ಪ್ರಾಚೀನ ವಾಮಾಚಾರವೂ ತನಗೆ ಏನೂ ಮಾಡಲಾಗದೆ ಸೋತು ಹೋಗುವುದು!