ದೇವರ ಮತ್ತು ಧರ್ಮದ ಅತ್ಯಂತ ಶ್ರೇಷ್ಠ ಗುರಿ

ಯುದ್ಧವಿಲ್ಲದ [ಪ್ರೀತಿಯ] ಜಗತ್ತು, ಮತ್ತು ನೈತಿಕತೆಯ ಜೀವನವನ್ನು ನಡೆಸುವ ಜಗತ್ತು, ಎಂಬವುಗಳೇ ದೇವರು ಮತ್ತು ಧರ್ಮದ ಪರಮ ಶ್ರೇಷ್ಠ ಗುರಿಗಳಾಗಿವೆ ಎಂಬುವುದರಲ್ಲಿ ಸಂಶಯ ಇರಲಾರದು. ಮೊದಲೇ ವಿವರಿಸಿರುವ ಆ ಧರ್ಮದ ಸಾರಕ್ಕೆ ಹೆಚ್ಚು ಒತ್ತು ಕೊಟ್ಟಲ್ಲಿ ಅದನ್ನು ಮಾನವರಿಗೆ ಪಡೆಯಬಹುದಾಗಿದೆ. ಈ ರೀತಿಯಲ್ಲಿ ಜೀವಿಸಲು ಕಠಿಣ ಪರಿಶ್ರಮ ಎನೂ ಇಲ್ಲ, ಬರೇ “ನಾವು, ನಾವು” ಎಂಬ ಭ್ರಮೆಯನ್ನು ಮಾತ್ರ ದೂರ ಮಾಡಿದರೆ ಸಾಕಾಗುವುದು. ನಾವು ಮಾತ್ರ ಈ ಭೂಮಿಯಲ್ಲಿ ಇದ್ದಲ್ಲಿ ಶಾಂತಿ ಬರುವುದೆಂದು ತಿಳಿದಿರೇನು? ಅದು ಒಂದು ಭ್ರಮೆ ಮಾತ್ರ!! ನಾವು ಮಾತ್ರವಾಗಿರುವ ಒಂದು ಕುಟುಂಬದೊಳಗೆ ಶಾಂತಿ ಇದೆಯೇ? ಇಲ್ಲ, ಇನ್ನು, ಈ ಜಗತ್ತಲ್ಲಿ ತಮ್ಮ ಒಂದೇ ಧರ್ಮ ಮಾತ್ರ ಇದ್ದಲ್ಲಿ ಈ ಜಗತ್ತಿನಲ್ಲಿ ಶಾಂತಿಯನ್ನು ಅದು ಹರಿಸುವುದೇ? ಎಂದಿಗೂ ಇಲ್ಲ. ಅಲ್ಲಿ ಹಲವು ಪಂಥ, ಸಂಪ್ರದಾಯಗಳು ಉಂಟಾಗಿ ಅವು ತಮ್ಮೊಳಗೆ ಹೊಡೆದಾಡಿ ರಕ್ತಪಾತ ಮಾಡುವವು! ಮಾತ್ರವಲ್ಲ, ಈ ಜಗತ್ತೆಲ್ಲಾ ಒಂದೇ ಧರ್ಮ ಅಥವಾ ಪಂಥವಾಗಬೇಕೆಂದು ಯಾರು ಆಸೆ ಪಟ್ಟರೂ ಅದು ನಡೆಯಲಾರದು. ಯಾಕೆಂದರೆ ಅದು ಇದುವರೆಗೂ ನಡೆದಿಲ್ಲ! ಇನ್ನು, ಆ ಒಂದು ಮುಖ್ಯ ವಿಷಯವನ್ನೂ ಅದರೊಂದಿಗೆ ಸೇರಿಸಿ ಹೇಳುವೆನು. ಅದೇನೆಂದರೆ, ಆ ಪ್ರಾಚೀನ ವಾಮಾಚಾರ ಅದನ್ನು ನಡೆಸಿಲ್ಲ ಎಂದು, ಮತ್ತು ಅದು ಎಂದಿಗೂ ಅದನ್ನು ನಡೆಸುವುದೂ ಇಲ್ಲ,  ನೆನಪಿಡಿರಿ!! ಆದರೆ, ಈ ಜಗತ್ತನ್ನೆಲ್ಲಾ ತಮ್ಮ ಒಂದೇ ಧರ್ಮ ಅಥವಾ ಪಂಥವೇ ಆವರಿಸಿರಬೇಕು, ಮತ್ತು ಅಂತಿಮ ಜಯ ತಮಗೆ ಎಂಬೆಲ್ಲಾ ಭ್ರಮೆಯನ್ನು ಜನರ ಮನದಲ್ಲಿ ಸೇರಿಸಿ, ಬಹಳ ಸುಲಭವಾಗಿ ಆ ದೇವರು, ಧರ್ಮದ ಹೆಸರಲ್ಲಿ ಸಾಕಷ್ಟು ಹಿಂಸೆ, ರಕ್ತವನ್ನು ಅವು ಹಿಂದಿನಿಂದಲೇ ಪಡೆಯುತ್ತಿರುವವು!! ಈ ಅಜ್ಞಾನಿ ಮಾನವನು, ನಿಜವಾಗಿಯೂ ತಾನು ಅವುಗಳ ಸೇವೆಯನ್ನು ಮಾಡುತ್ತಿರುವುದು ಎಂಬ ಸತ್ಯವನ್ನೂ ತಿಳಿಯದೆ, ತನ್ನ ಆವೇಶವನ್ನೆಲ್ಲಾ ಅಲ್ಲಿಗೆ ಹಾಕಿದ್ದಾನೆ!! ಇತ್ತ, ಆ ದೇವರೇ ಬಯಸುವ ಆ ಸಾರ್ವತ್ರಿಕ ಪ್ರೀತಿಯನ್ನು ಸರ್ವನಾಶ ಮಾಡಿದ್ದಾನೆ!! ಮಾತ್ರವಲ್ಲ, ಏನೂ ತಿಳಿಯದೆ, ಆ ಪ್ರಾಚೀನ ವಾಮಾಚಾರದ ಈ ರೀತಿಯ ಸೇವೆಯೇ ಅತ್ಯಂತ ಶ್ರೇಷ್ಠ ದೇವರ ಸೇವೆಯೆಂದು ಬಣ್ಣಿಸುತ್ತಾ, ಇಂದೂ, ವಾದ, ಪ್ರತಿವಾದ, ದಿಗ್ವಿಜಯಗಳಿಗೆ ಜನರನ್ನು ಸಾಲುಗಟ್ಟಿ ನಿಲ್ಲಿಸುತ್ತಿದ್ದಾನೆ!!

ಮಹಾತ್ಮರೆಲ್ಲರೂ ಜಾತೀಯತೆ ಮತ್ತು ಧರ್ಮಾಂಧತೆಗಳ ಸಮಾಜಗಳ ಮಧ್ಯ, ಎಲ್ಲರಂತೆ, ಮಕ್ಕಳಾಗಿ ಬೆಳೆದು ಬಂದವರು ಎಂಬುವುದನ್ನು ನೆನಪಿಡಬೇಕು. ಅವರು ಯಾರೂ ಯಾವುದೇ ಲಾಭಕ್ಕಾಗಿ ದೇವರು, ಧರ್ಮದ ಪರ ಮಾತಾಡುವವರಲ್ಲ ಎಂದೂ ತಿಳಿಯಬೇಕು. ಆದರೆ, ಅವರು ಆ ದೇವರ ನಿಜವಾದ ಆಸೆ ಅಥವಾ ಇಚ್ಛೆ ಏನಿರಬಹುದು ಎಂದು ತಮ್ಮ ಸ್ವಂಥ ಮನಸ್ಸಿನೊಳಗೆ ಪರಿಶೋಧನೆ ನಡೆಸಿ, ಅದು ಯುದ್ಧ ರಹಿತ ಭೂಮಿ ಎಂದು ಮನಗೊಳ್ಳುವರು, ಪ್ರೀತಿ ಸಹಿತ ಭೂಮಿ ಎಂದು ಮನಗೊಳ್ಳುವರು, ಮತ್ತು ತಮ್ಮ ಮಕ್ಕಳು ಮರಿಗಳು ವಿವಾಹ ವಿಚ್ಛೇಧನ ಇತ್ಯಾದಿಗಳ ಮೂಲಕ ಅನಾಥರಾಗದಿರುವ ಮತ್ತು ಮನೆಶಾಂತಿಯನ್ನೂ ತರುವ ಆ ನೈತಿಕ ಜೀವನದ ಭೂಮಿ ಎಂದು ಮನಗೊಳ್ಳುವರು. ಇದುವೇ ಅವರ ನಿಜವಾದ ಧರ್ಮಬೋಧವಾಗಿರುವುದು, ಮತ್ತು ಅವರ ಧರ್ಮಬೋಧನೆಯು ಇದೇ ಆಗಿರುವುದು. ಅಂದರೆ, ಒಬ್ಬ ಮಹಾತ್ಮನಾಗಬೇಕಾದರೆ ಆತ ಸ್ವತಃ ಇವುಗಳನ್ನು ಆಲೋಚಿಸಿ, ಮನಗಂಡು ಅನುಷ್ಠಿಸಿದರೆ ಸಾಕಾಗುವುದು. ಇದಕ್ಕೆ ಎನೂ ಕಷ್ಟವಿಲ್ಲ. ಉಪವಾಸ, ಸನ್ಯಾಸಗಳ ಅಗತ್ಯವಿಲ್ಲ, ಅತಿಯಾದ ಧ್ಯಾನ, ಮೌನಗಳ ಅಗತ್ಯವಿಲ್ಲ. ಹೀಗಿರಲು ಇದನ್ನು ಎಲ್ಲಾ ಮಾನವರಿಗೂ ತನ್ನ ಜೀವನದಲ್ಲಿ ಅನುಷ್ಠಿಸುವುದು ಅತ್ಯಂತ ಸುಲಭವಾಗುವುದು! ಎಲ್ಲರೂ ತಮ್ಮ ತಮ್ಮ ಧರ್ಮ ಪಂಥಗಳೊಳಗಿದ್ದು, ಆ ದೇವರು ನಿಜವಾಗಿಯೂ ಬಯಸುವ ಈ ರೀತಿಯ ಧಾರ್ಮಿಕ ಜೀವನವನ್ನು ಅನುಷ್ಠಿಸಿ, ಆ ಮೂಲಕ ಅವರವರ ರೀತಿಯ ಸ್ವರ್ಗವನ್ನು ಅಥವಾ ಮೋಕ್ಷವನ್ನು ಅವರವರ ರೀತಿಯಲ್ಲೇ ಪಡೆಯಬಹುದು. ಇನ್ನು, “ದೇವರು ಇಲ್ಲ” ಎಂದು ವಾದ ಮಾಡುವವರು, ಈ ರೀತಿಯಲ್ಲಿ ಜೀವಿಸಿ, ತಮ್ಮ ಮನದ ಶಾಂತಿ ಮತ್ತು ಮನೆಯ ಶಾಂತಿಯನ್ನು ಪಡೆವರು, ಹಾಗೂ ಲೋಕ ಶಾಂತಿಗೂ ಪೂರಕವಾಗುವರು. ಇದು ಮಾತ್ರವಲ್ಲದೆ, ವಿವಾಹ ವಿಚ್ಛೇಧನ ಇತ್ಯಾದಿ ಭಯಾನಕ ಮಾನಸಿಕ ಹಿಂಸೆಗಳಿಂದ ಪರಿಹಾರವನ್ನೂ ಪಡೆಯುವರು ಎಂಬುವುದನ್ನೂ ನಮಗೆ ಖಚಿತವಾಗಿ ತಿಳಿದುಕೊಳ್ಳಬಹುದಾಗಿದೆ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||