ದೇವರು ಮತ್ತು ಧರ್ಮದ ಚುಟುಕು ವಿವರಣೆ

ದೇವರು ಮತ್ತು ಧರ್ಮವು ಯಾಕೆ ಚುಟುಕಾಗಿ ವಿವರಿಸಲ್ಪಡಬೇಕೆಂಬುವುದಕ್ಕೆ ಕಾರಣಗಳನ್ನು ನೋಡೋಣ. ಸೃಷ್ಟಿಕರ್ತ ದೇವನಿದ್ದಲ್ಲಿ ಆತ ಏನು ಹೇಳುವನು? ತನ್ನ ಮಕ್ಕಳಲ್ಲಿ ಒಬ್ಬ ಮೇಲು ಜಾತಿಯವನಾಗಿದ್ದು ಇನ್ನೊಬ್ಬ ಕೀಳು ಜಾತಿಯ ಶೂದ್ರನಾಗಿ ಆತನು ಜೀವನ ಪರ್ಯಂತ ಮೇಲು ಜಾತಿಯವನ ಸೇವೆ ಮಾಡುತ್ತಿರಬೇಕು ಎನ್ನುವನೇ? ಇಲ್ಲ, ಅದೇ ರೀತಿ ತನ್ನ ಒಂದು ಧರ್ಮದ ಮಕ್ಕಳು ಇನ್ನೊಂದು ಧರ್ಮದ ಮಕ್ಕಳು ತಮ್ಮೊಳಗೆ ಭೀಕರ ರಕ್ತಪಾತ ಮಾಡಿ ಎಲ್ಲರೂ ಸತ್ತು ಹೋಗಬೇಕೆಂದು ಹೇಳುವನೇ? ಇಲ್ಲ. ಅಥವಾ ಹಳೆಯ ತನ್ನ ಧರ್ಮಗಳು ಸರಿಯಿಲ್ಲ, ಆದುದರಿಂದ ತನ್ನ ಹೊಸತಾಗಿ ನಿರ್ಮಿಸಿದ ಧರ್ಮಕ್ಕೆ ನೀವೆಲ್ಲಾ ವರ್ಗಾವಣೆಯಾಗಿ ಎಂದು ಹೇಳುವನೇ? ಇಲ್ಲ. ತನ್ನ ಹಳೆ ಧರ್ಮದಲ್ಲಿ ಸ್ವಲ್ಪ ವಿಚಾರಗಳನ್ನು ಹೇಳುವುದಕ್ಕೆ ಮರೆತು ಹೋಗಿದೆ, ಅದನ್ನು ತನ್ನ ಅತ್ಯಾಧುನಿಕ ಆವೃತ್ತಿಯ ಧರ್ಮದಲ್ಲಿ ಸೇರಿಸಿದ್ದೇನೆ ಎಂದು ತನ್ನ ನೆನಪು ಶಕ್ತಿಯ ಕೊರತೆಯನ್ನು ಹೇಳುವನೇ? ಇಲ್ಲ. ಹಾಗಿದ್ದರೆ ಮತ್ಯಾಕೆ ಇದೆಲ್ಲವನ್ನು ದೇವರ ಹೆಸರಲ್ಲಿ ಮಾಡಿದ್ದೀರಿ ಮತ್ತು ಮಾಡುತ್ತಿದ್ದೀರಿ? ಉತ್ತರ ಕೊಡಿ. ದೇವರ ನಿಜ ಸ್ವರೂಪವಾದ ಸಾರ್ವತ್ರಿಕ ಸತ್ಯ , ಪ್ರೀತಿ, ನೀತಿಯನ್ನು ಮೂಲೆಗೆ ಹಾಕಿ ಹಲವು ಹಲವು ಪುಸ್ತಕಗಳಲ್ಲಿ ಹಲವು ಹಲವು ಆಚಾರಗಳನ್ನು ಪುಟಗಟ್ಟಲೆ ವರ್ಣಿಸಿ, ಆ ಸೃಷ್ಟಿಕರ್ತನನ್ನು ಆಮಿಷಕ್ಕೆ ಬಲಿಯಾಗುವ ಕೀಳು ಮಾನವನ ತರ ವಿವರಿಸಿದ್ದೀರಲ್ಲಾ, ಇದೆಂಥಹ ದೈವನಿಂದನೆ!! ಸೃಷ್ಟಿಕರ್ತನಿಂದ ಸೃಷ್ಟಿಸಲ್ಪಟ್ಟದ್ದೆಂದು ಹೇಳಲ್ಪಡುವ, ಆದರೆ, ಒಂದಕ್ಕೊಂದು ವಿರುದ್ದವಾಗಿರುವ ಆಚಾರಗಳನ್ನು ಈ ಜಗತ್ತಿನಲ್ಲಿ ನೋಡುವಾಗಲಾದರೂ ಇವೆಲ್ಲಾ ಸೃಷ್ಟಿಕರ್ತನದ್ದಲ್ಲವೆಂದೂ ಆತನು ಈ ರೀತಿ ವಿಚಿತ್ರವಾಗಿ ವರ್ತಿಸಲಾರನೆಂದು ಗೊತ್ತಾಗಿಲ್ಲವೆ? ಮಹಾತ್ಮರು ಹಿಂದಿನ ಕಾಲದಿಂದಲೇ ಪಂಡಿತರುಗಳ ಸ್ವಾರ್ಥದ ಈ ಮೋಸವನ್ನು ನಿಮಗೆ ಅಗಾಗ್ಗ ತಿಳಿಸಿ ಎಚ್ಚರಿಸುತ್ತಾ ಬಂದಿರುವರು, ನೀವು ಅವರ ಮಾತನ್ನು ಕೇಳಿದಿರೇ? ಇಲ್ಲ. ಆ ಸಹಸ್ರಾರು ವರುಷಗಳಲ್ಲಿ ಧರ್ಮ, ಜಾತಿಯ ಹಿನ್ನೆಲೆಯಲ್ಲಿ ಶೋಷಣೆಗಳಿಗೆ ಒಳಗಾದ ಆ ಆತ್ಮಗಳಿಗೆ ಮಾಡಿರುವ ಅನ್ಯಾಯಕ್ಕೆ ಪ್ರಾಯಶ್ಚಿತ್ತವನ್ನು ಜೀವನ ಪೂರ್ತಿ ಮಾಡಿದರೂ ಸಾಕಾಗಲಾರದು. ಒಮ್ಮೆ ಆ ದೌರ್ಜನ್ಯಕ್ಕೆ, ಶೋಷಣೆಗೆ, ಒಳಗಾದವರ ಆ ಸ್ಥಾನದಲ್ಲಿ ನಮ್ಮನ್ನೇ ನಿಲ್ಲಿಸಿ ನೋಡೋಣ, ಆಗ ಮಾತ್ರ ಅದು ಘೋರ ಪಾಪ ಕರ್ಮವೆಂದು ನಮಗೆ ತಿಳಿಯುವುದು. ಮಾನವೀಯತೆಯ ಹೃದಯವಿದ್ದಲ್ಲಿ, ಧರ್ಮ, ಜಾತಿಯ ಹೆಸರಲ್ಲಿ ಆ ದಾರುಣ ಜೀವನಕ್ಕೆ ಒಳಗಾದ ಮುಗ್ಧ ಮಾನವರನ್ನು ಒಮ್ಮೆ ನೆನಪಿಸಿಕೊಳ್ಳೋಣ. ಆಗ ಹೊರಟು ಬರುವ ಕಣ್ಣೀರ ನದಿಗೆ ಜನರು ಪವಿತ್ರವೆಂದು ತಿಳಿದಿರುವ ಆ ಗಂಗೆಗಿಂತಲೂ ಹೆಚ್ಚು ಪವಿತ್ರತೆ ಇರುವುದು. ದೇವರನ್ನು ತನ್ನ ಸ್ವಾರ್ಥಕ್ಕೆ ಬೇಕಾದಂತೆ ಜಗತ್ತಿನ ಸರ್ವ ಕಡೆಗಳಲ್ಲೂ ದುರುಪಯೋಗ ಮಾಡುತ್ತಾ, ದೇವರ ಕರುಣೆ, ದಯೆ, ಇತ್ಯಾದಿಗಳ ಕುರಿತು ಕೋಟಿಗಟ್ಟಲೆ ಪುಸ್ತಕಗಳನ್ನು ಬರೆದು ಹಾಕಿದುದರಲ್ಲಿ ಏನು ವಿಶೇಷತೆ ಇದೆ? ಅನುಷ್ಠಾನದಲ್ಲಿ ಜೀವಿಸಿದ ಮಹಾತ್ಮರುಗಳ ಮಾತನ್ನು ಮತ್ತು ಜೀವನವನ್ನು ಯಾರು ಅನುಸರಿಸಿದ್ದಾರೆ? ಅವರ ವಿಶಾಲ ಮನಸ್ಕತೆಯ ಪವಿತ್ರ ಪ್ರೀತಿಯ ಮಾತು ನಿಮಗೆ ದೈವನಿಂದನೆಯಾಯಿತು!! ಇನ್ನು ಉಳಿಗಾಲವಿಲ್ಲ, ದೇವರನ್ನು, ದೇವರ ಮಾತನ್ನು ಉಳಿಸುವ ನೆಪದಲ್ಲಿ ಆ ದೇವರನ್ನೇ ಅಳಿಸಿ ಹಾಕಿ ಆಗಿದೆ. ಇದೇ ಸ್ಥಿತಿ ಮುಂದುವರಿಯುವುದಾದರೆ ಜಗತ್ತು ಶಾಂತಿಯೆಡೆಗೆ ಎಂದೂ ಮರುಳುವುದಿಲ್ಲ!!

ದೇವರು, ವ್ಯಕ್ತಿಯಾದರೂ, ತತ್ವವಾದರೂ ಅದು ಎಂದೂ ಕೆಟ್ಟದನ್ನು ಸೃಷ್ಟಿಸಲಾರದು. ಸೃಷ್ಟಿಕರ್ತನಾದುದರಿಂದ ಆತನಿಗೆ ಯಾವ ಧರ್ಮವೂ ವಿಶೇಷವಾಗಲಾರದು, ಆದರೆ ಆತನು ತನ್ನ ಮಕ್ಕಳು ಶಾಂತಿಯಿಂದ ಜೀವಿಸಬೇಕು ಎಂಬುವುದನ್ನು ಆಶಿಸುವನು ಅಷ್ಟೆ. ನೀವೇ ಹೇಳಿ, ಆತನು ತನ್ನದೇ ಒಂದು ಧರ್ಮದಿಂದ ಇನ್ನೊಂದಕ್ಕೆ ಮತಾಂತರವನ್ನು ಆಶಿಸುವನೇ? ಮಾನವನಿಗೆ ಬೇಕಾದ ಧರ್ಮದ ಸರ್ವ ಸಾರವೂ ಸತ್ಯ, ಪ್ರೀತಿ, ನೀತಿಯಲ್ಲಿ ಅಡಕವಾಗಿದೆ, ಮತ್ತು ಅದನ್ನು ಆತನು ಎಲ್ಲಾ ಧರ್ಮಗಳಲ್ಲೂ ಮೊದಲಲ್ಲೇ ಹೇಳಿ ಮುಗಿಸಿದ್ದಾನೆ. ಇನ್ನು ಈ ಆಚಾರಗಳು, ಜಾತೀಯತೆ, ಧರ್ಮಾಂಧತೆಗಳಿಂದ ಶೋಷಣೆ, ರಕ್ತಪಾತ ಮಾಡಲು ಆತನು ಹೇಳಿದನೇ ಮತ್ತು ಹೇಳುವನೇ? ಇಲ್ಲ, ಇಲ್ಲ. ಆದುದರಿಂದ ನಮಗೆ ದೇವರು ಎಂದರೆ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೀತಿಯ ಮೂಲವೆಂದೂ ಧರ್ಮವನ್ನು ಈ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯನ್ನು ಜೀವನದಲ್ಲಿ ಬೆಳೆಸುವ ದಾರಿಯೆಂದು ಚುಟುಕಾಗಿ ವಿವರಿಸಿದರೆ, ಅದು ದೇವರು ಮತ್ತು ಧರ್ಮದ ಪೂರ್ತಿ ವಿವರಣೆ ಆಗುವುದು. ನಮಗೆ ಇದರಿಂದ ಮುಂಬರಲಿರುವ ಎಲ್ಲಾ ಅನಾಹುತಗಳಿಂದಲೂ ಪಾರಾಗುವ ಒಂದು ಅವಕಾಶವೂ ಉಂಟಾಗುವುದು.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||