ನೇರ ಪ್ರಶ್ನೆಗಳು

Table of Contents

ಸ್ವಧರ್ಮ ಅಥವಾ ವ್ಯಕ್ತಿಧರ್ಮ ಮತ್ತು ಸಾಮಾಜಿಕ ಧರ್ಮ ಎಂದು ಬೇರೆ ಬೇರೆ ಇವೆಯೇ?

ಉತ್ತರ- ಧರ್ಮ ಎಂಬ ಶಬ್ಧವು ನಿಸ್ವಾರ್ಥತೆ ಭಾವನೆಯನ್ನು ಪ್ರಕಟಗೊಳಿಸುವುದು. ‘ಸ್ವ’ ಧರ್ಮ ಅಥವಾ ವ್ಯಕ್ತಿ ಧರ್ಮ ಎಂದು ಹೇಳುವಾಗ ಅಲ್ಲಿ ‘ಸ್ವ’ ಎಂಬುವುದು, ಸ್ವಾರ್ಥ ಅಥವಾ ಒಬ್ಬ ವ್ಯಕ್ತಿಯು ತನ್ನ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಆಲೋಚನೆ ಮಾಡುವ ಅಷ್ಟಕ್ಕೆ ಧರ್ಮವನ್ನು ಹಗುರಮಾಡಿದಂತೆ ಆಗುವುದು. ಈ ಹಿನ್ನೆಲೆಯಲ್ಲಿ, ವ್ಯಕ್ತಿ ಧರ್ಮಕ್ಕಿಂತ ಸಾಮಾಜಿಕ ಧರ್ಮವೇ ನಾವು ಮೊದಲು ಪರಿಗಣಿಸಬೇಕಾದ ಧರ್ಮವಾಗುವುದು. ಮಾತ್ರವಲ್ಲ, ಈ ರೀತಿ, ವ್ಯಕ್ತಿ ಧರ್ಮವು ಸಾಮಾಜಿಕ ಧರ್ಮವನ್ನು ಮೀರಿದಲ್ಲಿ ಧರ್ಮವು ನಾಶವಾಗುವ ಸಂಭವವಿದೆ. ಇನ್ನು, ಸಾಮಾಜಿಕ ಧರ್ಮ ಎಂದರೇನು ಎಂದು ತಿಳಿಯೋಣ. ಇದು ಸಮಾಜದಲ್ಲಿ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ, ಬೆಳೆಯಲು ಸಾಧ್ಯವಾಗುವ ರೀತಿಯ ಧರ್ಮವಾಗುವುದು. ಅಂದರೆ, ಕಳ್ಳರು, ಅಥವಾ ಕೆಟ್ಟ ಸ್ವಭಾವದವರು ಯಾರೇ ಆದರೂ, ಅವರಿಂದ ದೂರ ನಿಲ್ಲುವ ಅಥವಾ ಸಾಧ್ಯವಿದ್ದರೆ ಆ ಅನ್ಯಾಯದ ಎದುರು ಶಬ್ಧ ಎತ್ತುವ ರೀತಿಯಾಗುವುದು. ಈ ಸಾಲಿನಲ್ಲಿ ನಮ್ಮ ಮನೆಯವರು ಇದ್ದರೂ ಅಲ್ಲಿಯೂ ಎದುರಿಸುವ ಅಥವಾ ದೂರವಿರುವ ಧೈರ್ಯಬೇಕಾಗುವುದು. ಆದರೆ ಇದನ್ನು ಹೆಚ್ಚಾಗಿ ಯಾರೂ ಮಾಡುವುದಿಲ್ಲ. ಮನೆ ಮಂದಿ ಏನು ತಪ್ಪು ಮಾಡಿದರೂ ಅದನ್ನು ಸರಿಯೆಂದು ಹೇಳುವವರೇ ಹೆಚ್ಚಿನ ಜನರು. ಈ ವಿಚಾರವು ಬೇಗನೆ ಅರ್ಥವಾಗಬೇಕಿದ್ದರೆ, ರಾಮಾಯಣ ಮತ್ತು ಮಹಾಭಾರತಗಳ ಒಂದೊಂದು ಉದಾಹರಣೆಯನ್ನು ತೆಗೆಯೋಣ. ರಾಮಾಯಣದಲ್ಲಿ, ವಿಭೀಷಣನು ತನ್ನ ಅಣ್ಣಂದಿರನ್ನು ಹಾಗೂ ದೇಶವನ್ನೇ ತೊರೆದು ರಾಮನಲ್ಲಿಗೆ ಬಂದನು. ಇದು, ತನ್ನ ಅಣ್ಣ ಪರಸ್ತ್ರೀಯನ್ನು ಬಚ್ಚಿಟ್ಟ ಆ ದೊಡ್ಡ ಅಧರ್ಮದ ವಿರುದ್ಧವಾಗಿತ್ತು. ಇಲ್ಲಿ, ವಿಭೀಷಣನು ಇಡೀ ಜಗತ್ತಿಗೆ ಒಬ್ಬ ಉತ್ತಮ ಆದರ್ಶನಾದನು. ಆದರೆ, ಮಹಾಭಾರತದಲ್ಲಿ ಭೀಷ್ಮ, ದ್ರೋಣರು, ಧರ್ಮವು ಪಾಂಡವರ ಕಡೆ ಇದ್ದರೂ, ಅವರ ಕಡೆಗೆ ಬರಲಿಲ್ಲ. ಅಲ್ಲಿ ಅವರು ಕೊಟ್ಟ ಉತ್ತರವು ಈ ಸ್ವಧರ್ಮವಾಗಿದೆ. ಅಂದರೆ, ಅವರಿಗೆ ರಾಜ ಊಟ ಕೊಟ್ಟಿದ್ದಾನೆ ಎಂಬ ಕಾರಣಕ್ಕೆ ಆ ಸಾಮಾಜಿಕ ಆದರ್ಶದ ಧರ್ಮಕ್ಕೆ ವಿರುದ್ಧವಾಗಿ ನಡೆದರು. ಅಂದರೆ, ಊಟಕೊಟ್ಟಿದ್ದಾನೆ ಎಂದು ಅಧರ್ಮವನ್ನು ಒಪ್ಪಲು ಸಾಧ್ಯವಾಗುವುದೇ? ಆದುದರಿಂದ ನಮಗೆ ಎಲ್ಲವನ್ನೂ ಚುಟುಕಾಗಿ ಹೇಳಬೇಕಾದರೆ ನಮಗೆ ಈ ರೀತಿಯಲ್ಲಿ ಹೇಳಬಹುದು, ‘ಸ್ವಧರ್ಮದ ಬೋಧವಿರಬೇಕು, ಆದರೆ, ಅದು ಸಾಮಾಜಿಕ ಧರ್ಮಕ್ಕೆ ವಿರೋಧವಾಗುವಲ್ಲಿ ಸಾಮಾಜಿಕ ಧರ್ಮವನ್ನೇ ಅವಲಂಭಿಸಬೇಕಾಗುವುದು” ಎಂದು ಆಗಿದೆ.  ಆದುದರಿಂದ ಎಂದಿಗೂ ಈ ವಿಭೀಷಣ-ಧರ್ಮದ ರೀತಿಯೇ ನಿಜವಾಗಿಯೂ ಅನುಸರಿಸಬೇಕಾದ ಧರ್ಮದ ರೀತಿ ಎಂದು ತಿಳಿಯುವುದು. ಅಂದರೆ, ಸತ್ಯ ಮತ್ತು ನ್ಯಾಯ ಎಲ್ಲಿದ್ದರೂ ಅದು ಮಾತ್ರವೇ ಸರಿ ಎಂಬ ಸಾರ್ವತ್ರಿಕ ಸತ್ಯದ ರೀತಿಯು ಇದಾಗಿದೆ. ಸಮಾಜದಲ್ಲಿ ಇದು ನಾಶವಾಗಿರುವ ಕಾರಣದಿಂದಾಗಿ ಅಸ್ಪೃಶ್ಯತೆ, ಅನೈತಿಕತೆ, ಜಾತೀಯತೆ, ಧರ್ಮಾಂಧತೆ, ಸ್ವಾರ್ಥ ರಾಜಕೀಯ, ಇತ್ಯಾದಿಗಳು ಬೆಳೆದು ಪರ್ವತವಾಗಿರುವುದು.

ಸನ್ಯಾಸಿಗಳಿಗೆ ಬ್ರಹ್ಮಚರ್ಯ ಇರುವಾಗ ದೇವತೆಗಳಿಗೆ ಯಾಕಿಲ್ಲ, ಮತ್ತು ನಿಮ್ಮ ದೇವಸಂಕಲ್ಪವು ಯಾವ ತರದ್ದಾಗಿರುವುದು?

ಉತ್ತರ- ಪುರಾಣದ ಹಿನ್ನೆಲೆಯಲ್ಲಿ ಹೇಳುವುದಾದರೆ ಹಲವು ಕಥೆಗಳಿರಬಹುದು. ಅದು ಹೊರತಾಗಿ ದೇವಸಂಕಲ್ಪದ ರೀತಿಯಲ್ಲಿ ಮಾತ್ರ ತಿಳಿಯಲು ಪ್ರಯತ್ನಿಸೋಣ. ಬ್ರಹ್ಮಚರ್ಯ ಎಂದರೆ, ಹಿಂದಿನ ಶಾಸ್ತ್ರಗಳ ಪ್ರಕಾರ, ಅದು ಮೋಕ್ಷಾರ್ಥಿಗಳ ಚರ್ಯೆ ಆಗಿದೆ. ಯಾಕೆಂದರೆ ಮೋಕ್ಷ ಎಂದರೆ ಅದು ತನ್ನ ಅಸ್ತಿತ್ವವನ್ನು ಸತ್ತ ನಂತರದಲ್ಲಿ ಸೂಕ್ಷ್ಮ ಸ್ಥರದಲ್ಲಿ ಇಲ್ಲದಂತೆ ಮಾಡುವುದು ಅಥವಾ ತನ್ನ ಅಸ್ತಿತ್ವವನ್ನು ತನ್ನ ದೇವರಲ್ಲಿ ಅಥವಾ ತತ್ವದಲ್ಲಿ ಲೀನವಾಗಿಸುವುದು ಎಂದು ತಿಳಿಯಲಾಗಿದೆ. ಈ ಶೂನ್ಯ ಆಗುವಿಕೆ ಅಥವಾ ಲೀನ ಆಗುವಿಕೆಯು, ಒಬ್ಬಾತನಿಗೆ, ಆಸೆಗಳು ಮನಸ್ಸಿನಲ್ಲಿ ಸ್ವಲ್ಪವೂ ಇಲ್ಲದಾಗ ಮಾತ್ರ ಸಾಧ್ಯ ಎಂದು ಅದು ಹೇಳುವುದು. ಆಸೆ ಇರುವಾತನು ಎಷ್ಟೇ ಧ್ಯಾನ ಮಾಡಿದರೂ ಆತನು ಶೂನ್ಯ ಅಥವಾ ಲೀನವಾಗುವ ಮೋಕ್ಷವನ್ನು ಸಾಧಿಸಲಾರ ಎಂದೂ. ಹೀಗಿರುವಾಗ, ಕಾಮಾಸಕ್ತಿ ಒಂದು ಆಸೆಯಾದುದರಿಂದ ಆ ಆಸೆಯನ್ನು ಇಟ್ಟುಕೊಂಡು ಸನ್ಯಾಸಿಯು ನಿರ್ವಾಣ ಮೋಕ್ಷವನ್ನು ಅಥವಾ ಲೀನ ಮೋಕ್ಷವನ್ನು ಪಡೆಯಲಾರ ಎಂಬುವುದು ಖಂಡಿತವಾದ ತರ್ಕವಾದ ಎಂದು ಹೇಳುವುದು. ಈ ತರ್ಕದ ಹಿನ್ನೆಲೆಯಲ್ಲೇ ಸನ್ಯಾಸಿಗೆ ಬ್ರಹ್ಮಚರ್ಯ ವಿಧಿಸಿರುವುದು. ಸನ್ಯಾಸಿ ಎಂದರೆ ಮೋಕ್ಷಾರ್ಥಿ, ಹೀಗಿರುವಾಗ, ಆತನ ಸನ್ಯಾಸಕ್ಕೆ ಏಕಾಂತವಾಸವು ಅತ್ಯಗತ್ಯವಾಗುವುದು. ಮಾತ್ರವಲ್ಲ, ಆತನಿಗೆ ಆಶೀರ್ವಚನ ಕೆಲಸ ಬಿಟ್ಟು ಬೇರೆ ಯಾವ ಲೌಕಿಕ ಕರ್ಮವೂ ವಿರುದ್ಧವಾಗುವುವು ಎಂದೂ ಶಾಸ್ತ್ರಗಳು ಹೇಳುವವು.

ದೇವ, ದೇವತಾ ಸಂಕಲ್ಪಗಳು ಸೂಕ್ಷ್ಮ ಸ್ಥರದಲ್ಲಿದ್ದು, ಭಕ್ತರನ್ನು ಸದಾ ಕಾಲವೂ ಅನುಗ್ರಹಿಸಲಿರುವ ಶಕ್ತಿಗಳಾಗಿವೆ. ಆದುದರಿಂದ ದೇವತೆಗಳು ಸೂಕ್ಷ್ಮ ಸ್ಥರದಲ್ಲಿ, ಶೂನ್ಯವಾಗದೆ ಅಥವಾ ಲೀನವಾಗದೆ, ತಮ್ಮ ಅಸ್ತಿತ್ವವನ್ನು ಇಟ್ಟು ಕೊಳ್ಳುವ ಅವಶ್ಯಕತೆ ಇರುವುದು. ಆದುದರಿಂದ ಆ ದೇವ, ದೇವತಾ ಶಕ್ತಿಗಳು ಸನ್ಯಾಸಿಗಳಂತೆ ಅಸ್ತಿತ್ವವನ್ನು ಕಳಕೊಳ್ಳುವ ರೀತಿಯದ್ದಲ್ಲವೆಂದೂ ಮಾತ್ರವಲ್ಲ, ಭಕ್ತರಿಗಾಗಿ ಕಳಕೊಳ್ಳಬಾರದು ಎಂದೂ ತಿಳಿಯಬೇಕು. ಹೀಗಿರುವಾಗ ಒಂದು ದೇವ ಅಥವಾ ದೇವತಾ ಸಂಕಲ್ಪವು “ಸನ್ಯಾಸಿ” ಆಗಲು ಸಾಧ್ಯವೇ ಇಲ್ಲ, ಅಥವಾ ಒಬ್ಬ ಸನ್ಯಾಸಿಗೆ ದೇವ ಸಂಕಲ್ಪದೊಂದಿಗೆ ಇರಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಯಿತು. ಈ ರೀತಿಯಲ್ಲಿ, ದೇವತೆಗಳಿಗೆ, ತನ್ನ ಅಸ್ತಿತ್ವವನ್ನು ಸೂಕ್ಷ್ಮ ಸ್ಥರದಲ್ಲಿ ಕಳಕೊಳ್ಳಲು ಅಗತ್ಯವಾದ, ಆ ಬ್ರಹ್ಮಚರ್ಯದ ಅಗತ್ಯವೂ ಇರುವುದಿಲ್ಲ.

ದೇವ, ದೇವತೆಗಳಿಂದ ಭಕ್ತರು ಪಡೆಯುವ ಅನುಗ್ರಹದ ವಿಚಾರವಾಗಿ ನೋಡುವಾಗ, ಅಲ್ಲಿ, ತಮ್ಮ ಗೃಹಸ್ಥಾಶ್ರಮದ ತೊಂದರೆಗಳನ್ನು ನಿವಾರಿಸಲು ಕೂಡಾ ಭಕ್ತರು ತನ್ನ ದೇವರಲ್ಲಿ ಬೇಡಿಕೊಳ್ಳುವರು. ಆಗ, ಆ ದೇವತೆಯು ಬ್ರಹ್ಮಾಚಾರಿಯಾಗಿದ್ದರೆ, ಆ ತೊಂದರೆ ನಿವಾರಣೆಯು ಆ ದೇವತೆಯಿಂದ ಸಾಧ್ಯವಾಗಲಾರದು. ಉದಾಹರಣೆಗೆ, ಹಿಂದಿನ ದೇವ, ದೇವತಾ ಸಂಕಲ್ಪಗಳ ವಿಜ್ಞಾನದಲ್ಲಿ “ಅಗ್ನಿ” ದೇವಶಕ್ತಿಯು ನೀರನ್ನು ಸೃಷ್ಟಿ ಮಾಡಲಾರದು, ಅದೇ ರೀತಿ, “ವರುಣ” ದೇವಶಕ್ತಿಯು ಅಗ್ನಿಯನ್ನು ಸೃಷ್ಟಿ ಮಾಡಲಾರದು.

ಇನ್ನು, ಧರ್ಮದ ಮೂಲವು ಇರುವುದು ವೈವಾಹಿಕ ಜೀವನದಲ್ಲಿ ಎಂದು ತಿಳಿದಿದೆ. ಅದು ನಾಶವಾದರೆ ಧರ್ಮವೂ ನಾಶವಾದಂತೆ. ಆ ಪ್ರಾಚೀನ ವಾಮಾಚಾರವು, ಎಲ್ಲಾ ಧರ್ಮಗಳಲ್ಲೂ, ಈ ವೈವಾಹಿಕ ಜೀವನವನ್ನೇ ಅತ್ಯಂತ ಬೇಗನೆ ನಾಶಮಾಡಿಸಿ ತಮ್ಮ ಗುರಿಯನ್ನು ಬಹಳ ಬೇಗನೆ ಸೇರುವ ತವಕದಲ್ಲಿ ನಿರಂತರ ಕೆಲಸದಲ್ಲಿ ತೊಡಗಿಸಿಕೊಂಡಿದೆ! ಹೀಗಿರುವಾಗ, ಈ ವೈವಾಹಿಕ ಜೀವನವನ್ನು ರಕ್ಷಿಸಲು ಪ್ರಯತ್ನವನ್ನು ಮಾಡದಿದ್ದರೆ, ಬೇರೆ ಯಾವ ಕೆಲಸಕ್ಕೆ ಇನ್ನು ಕೋಟಿ ದೇವ, ದೇವತೆಗಳಿದ್ದೂ ಪ್ರಯೋಜನವಾಗುವುದಿಲ್ಲ ಎಂಬುವುದು ಪರಮ ಸತ್ಯವಾಗುವುದು. ಈ ನಿಟ್ಟಿನಲ್ಲೇ ನಾನು ನನ್ನ ದೇವಸಂಕಲ್ಪದಲ್ಲಿ ಬದಲಾವಣೆಯನ್ನು ತರಲು ತೀರ್ಮಾನಿಸಿದ್ದು ಎಂದು ತಿಳಿಯಬೇಕು [ಇಲ್ಲವಾದರೆ ನನ್ನ ದೇವ ಸಂಕಲ್ಪವಿದ್ದೂ ಪ್ರಯೋಜನವಿಲ್ಲವಾಗಿ, ಮೊದಲಿನ ಸ್ಥಿತಿಯಲ್ಲಿ ಏನೂ ಬದಲಾವಣೆ ಸಾಧ್ಯವಾಗದೆ ಮುಂದುವರಿಯುವುದು.] ಇನ್ನು, ವೈವಾಹಿಕ ಜೀವನದ ತೊಂದರೆಗಳಾದ, ಅನೈತಿಕ ಕಾಮಾಸಕ್ತಿ, ದಾಂಪತ್ಯ ಜಗಳ, ವಿವಾಹ ವಿಚ್ಛೇದನ, ಇತ್ಯಾದಿ ಗಂಭೀರ ತೊಂದರೆಗಳನ್ನು ನೋಡುವುದಾದರೆ, ಇದಕ್ಕೆ ಆ ಏಕ ಸಂಕಲ್ಪ-ವಿಜ್ಞಾನದ ಪರಿಹಾರವೆಂದರೆ, ಅದು “ಪತಿವ್ರತಾ ಸಂಕಲ್ಪ” ಮತ್ತು “ಏಕಪತ್ನೀ ವ್ರತಸ್ಥ ಸಂಕಲ್ಪ” ದ ಅತಿ ದೊಡ್ಡ ಪ್ರಮಾಣದ ತಯಾರಿಯಾಗಿದೆ. ಇದನ್ನು ತಯಾರಿಸಬೇಕಾದರೆ, ನಾನು ಸ್ವತ: ಏಕಪತ್ನೀ ವೃತಸ್ಥನಾಗಬೇಕು ಮತ್ತು ಒಬ್ಬಳು ಪತಿವ್ರತೆಯೂ ಅದಕ್ಕೆ ತಯಾರಾಗಬೇಕಾಗುವುದು. ಈ ರೀತಿಯಲ್ಲಿ, ಆ ಪವಿತ್ರ ಸಂಕಲ್ಪಗಳನ್ನು ಬೆಳೆಸಿ ಅದನ್ನು ಒಂದು ದೊಡ್ಡ ಪ್ರೇರಣೆಯ ರೀತಿಯಲ್ಲಿ ಪ್ರಯೋಗಿಸುವುದಾದರೆ, ದೊಡ್ಡ ಅಯಸ್ಕಾಂತವು ಚಿಕ್ಕ ಕಬ್ಬಿಣವನ್ನು ತನ್ನ ಪ್ರೇರಣೆಯ ಮೂಲಕ ತನ್ನದೇ ಅಯಸ್ಕಾಂತದ ಸ್ವಭಾವಕ್ಕೆ ತಿರುಗಿಸುವಂತೆ, ಆ ಪವಿತ್ರಗೊಳಿಸಲ್ಪಟ್ತ ಪತಿವ್ರತಾ ಮತ್ತು ಏಕಪತ್ನೀ ವ್ರತದ ಆ ದೊಡ್ಡ ಪ್ರೇರಕ ಸಂಕಲ್ಪಶಕ್ತಿಯು, ಸಾಮಾನ್ಯ ಮಾನವರ ದಾಂಪತ್ಯ ವಿರಸ, ವಿವಾಹ ವಿಚ್ಛೇದನ, ಇತ್ಯಾದಿಗಳಿಂದ ಆವರನ್ನು ಪಾರುಗೊಳಿಸಲು ಶಕ್ತವಾಗಬಹುದು. ಈ ಉದ್ದೇಶಕ್ಕೆ, ನನಗೆ ನನ್ನ ಭಕ್ತಳು ಹಾಗೂ ನನ್ನ ಪತ್ನಿಯಾಗಿದ್ದು ಪತಿವ್ರತಾ ಜೀವನ ನಡೆಸಲು ಸಾಧ್ಯಾವಾಗುವ ಒಬ್ಬಳು ಆಧ್ಯಾತ್ಮಿಕ ವ್ಯಕ್ತಿಯ ಅನಿವಾರ್ಯತೆ ಉಂಟಾಯಿತು. ಹಾಗೆ ಯಾರಾದರೂ ಸತ್ಯಸಂಧಳಾದ ಒಬ್ಬಳು ಮುಂದಾದರೆ ನನಗೆ ಪತಿವ್ರತೆ ಮತ್ತು ಏಕಪತ್ನಿ ವ್ರತಸ್ಥ ಎಂಬ ಏರಡೂ ಅಗತ್ಯದ ಸಂಕಲ್ಪವನ್ನು ಪಡೆದು ಅವುಗಳಿಗೆ ಶಕ್ತಿ ಪೇರಿಸಿ ಅದನ್ನು ದೊಡ್ಡ ಪ್ರೇರಕ ಶಕ್ತಿಯಾಗಿಸಿ ನನ್ನ ಭಕ್ತರ ದಾಂಪತ್ಯದ ಮೇಲೆ ಬೀರುವ ಆ ಪ್ರಾಚೀನ ವಾಮಾಚಾರದ ಆ ಪ್ರಭಾವವನ್ನು ತಡೆಗಟ್ಟಲು ಸಾಧ್ಯವಾಗುವುದು ಎಂದು ತೀರ್ಮಾನಿಸಿದ್ದೆ. ಹೀಗಿರುವಾಗ, ಈ ಅನಿವಾರ್ಯತೆಯನ್ನು ಅರಿತು, ಜಗತ್ತಿನ ಉದ್ದಾರಕ್ಕಾಗಿ ಮಾಡುವ ಆ ಕಾರ್ಯಕ್ಕಾಗಿ, ಮತ್ತು ಆ ಸೇವೆಗಾಗಿ, ತನ್ನ ಜೀವನವನ್ನೇ ಮುಡಿಪಾಗಿಸಲು, ಒಬ್ಬಳು ನನ್ನ ಭಕ್ತೆ ತಯಾರಾದಳು! ತನ್ನ ತಂದೆ, ತಾಯಿಯರ ಅನುಮತಿಯೊಂದಿಗೆ, ಪೆರ್ಮುದೆ ಎಂಬ ಸ್ಥಳದಿಂದ ಬಂದ ಕವಿತ ಎಂಬ ಹೆಸರಿನ ಆ ನನ್ನ ಭಕ್ತೆಯು, ಆ ರೀತಿಯ ಜೀವನದ ಅರ್ಹತೆಗಾಗಿ, ಮೂರು ವರುಷ ಅದಕ್ಕೆ ಬೇಕಾಗಿರುವ ಸಾಧನೆಗಳಲ್ಲಿ ತೊಡಗಿಸಿಕೊಂಡಳು. ಅದರ ನಂತರ, ಅದು ಪೂರ್ಣವಾದಾಗ, ನಾನು ಮದುವೆ ಸಂಕಲ್ಪವನ್ನು ತೆಗೆದು, ಅಂದರೆ ಮದುವೆಯಾಗಿ, ಆ ದಾಂಪತ್ಯ ಪರಿಹಾರ ಸಂಕಲ್ಪ ಶಕ್ತಿಯನ್ನು ಬೆಳೆಸುತ್ತಿದ್ದೇನೆ. ನನ್ನ ದೇವಸಂಕಲ್ಪದಲ್ಲಿ, ಈ ರೀತಿಯಲ್ಲಿ, ಭಕ್ತರ ದಾಂಪತ್ಯ ತೊಂದರೆಗಳಿಗೆ ಒಂದು ಪರಿಹಾರ ಸಾಧ್ಯತೆಯು ಉಂಟಾಗಿರುವುದು ಭಕ್ತರಿಗೆ ತುಂಬಾ ಲಾಭದಾಯಕವಾಗಿ ಪರಿಣಮಿಸಬಹುದು ಎಂದು ನನ್ನ ಅನಿಸಿಕೆ.

ಸಮಾಜದಲ್ಲಿ, ಅಪವಾದಗಳಿಂದ ದೂರವಾಗಲು ಪ್ರಯತ್ನಿಸಬೇಕೆ?

ಉತ್ತರ- ನೋಡಿ, ಸಂನ್ಯಾಸಿಗಳು ಹಾಗೆ ಪ್ರಯತ್ನಿಸದಿದ್ದಲ್ಲಿ ಅದು ಅವರ ಇಷ್ಟ ಎನ್ನಬಹುದು, ಆದರೆ ಜಗತ್ತಿಗೆ ಆದರ್ಶರಾಗಿ ಬೆಳಗಬೇಕಾದ ಮಹಾತ್ಮರು ಹಾಗೆ ಹೇಳಿದ್ದಲ್ಲಿ ಅದನ್ನು ಒಪ್ಪುವುದು ಕಷ್ಟ. ಯಾಕೆಂದರೆ, ಯಾರದರೂ ನೈತಿಕತೆ, ಅಥವಾ ಸತ್ಯ, ಪ್ರೀತಿ, ನೀತಿಯೆಂಬ ಆ ಪವಿತ್ರ ಜೀವನದ ಬಗ್ಗೆ ಉಪದೇಶಿಸುವಾಗ, ಕಿಡಿಗೇಡಿ ಜನರು, ಅಂಥವರಿಗೆ ಹೇಗಾದರೂ ಮಾಡಿ ಅಪವಾದವನ್ನು ಹೊರಿಸುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಇದು ಮಹಾತ್ಮರಿಗೆ ಅಪವಾದ ಬರುವಂತೆ ಮಾಡಿ, ಸಮಾಜದಲ್ಲಿ ನೈತಿಕತೆಯ ಬಗ್ಗೆ ಮಾತೆತ್ತಲು ಯಾರೂ ಇಲ್ಲವಾಗುವಂತೆ ಮಾಡುವುದು! ಇದರಿಂದಾಗಿ ಅನೈತಿಕತೆಯ ಪಾಪಿಗಳಿಗೆ ಲಾಭವಾಗಿ, ಸ್ವಚ್ಚಂದ ಜೀವನವನ್ನು ನಡೆಸಲು ಸಾಧ್ಯವಾಗುವುದು, ಮತ್ತು ತಾವು ಅನೈತಿಕ ಮಾರ್ಗದಲ್ಲಿದ್ದರೂ ಅದಕ್ಕೆ ಅದನ್ನು ಅವರವರ ಖಾಸಗೀ ಜೀವನವೆಂದು ಬಣ್ಣಿಸುತ್ತಾ ಸಮಾಜದಲ್ಲಿ ಮಹಾತ್ಮರಷ್ಟು ಗೌರವವನ್ನು ಜನರಿಂದ ಗಳಿಸುವಲ್ಲಿ ಜಯಗಳಿಸುವರು!! ಅವರು ಹಾಸಿದ ಆ ಪಾಪದ ದಾರಿಯನ್ನು ಸರ್ವರೂ ಅನುಸರಿಸುವಲ್ಲಿ, ಜಗತ್ತಿನಲ್ಲಿ ಅಧರ್ಮದ ಸಂಸ್ಥಾಪನೆಯೂ ಆಗುವುದು!! ಅಂದರೆ, ಆಧ್ಯಾತ್ಮ ದಾರಿಯಲ್ಲಿರುವವರು ಬರಬಹುದಾದ ಅಪವಾದವನ್ನು ಗಮನಿಸದಿದ್ದಲ್ಲಿ, ಅದು ಜಗತ್ತಿನಲ್ಲಿ ಸಾವಿರಾರು ಪಾಪಿಗಳಿಗೆ ಅಧರ್ಮದ ಸಂಸ್ಥಾಪನೆ ಮಾಡುವುದಕ್ಕೆ ಅವಕಾಶವನ್ನು ಕೊಟ್ಟಂತೆ ಆಗುವುದು!! ಮಾತ್ರವಲ್ಲ, ತಮ್ಮ ಜೀವನವಿಡೀ ಜನರಿಗೆ ನೈತಿಕತೆಯ ಕುರಿತು ಬೋಧಿಸಲು ಪ್ರಯತ್ನಿಸಿದ ಆ ಮಹಾತ್ಮರ ಪ್ರಯತ್ನವು, ಆ ಮಹಾತ್ಮರುಗಳೇ ತಪ್ಪಿತಸ್ಥರು ಎಂಬ ಅಪವಾದದ ಹಿನ್ನೆಲೆಯಲ್ಲಿ, ನಿಮಿಷಾರ್ಧದಲ್ಲಿ ಧ್ವಂಸವಾಗಿಬಿಡುವುದು! ಆದುದರಿಂದ ಎಲ್ಲಾ ಆಧ್ಯಾತ್ಮಿಕ ವ್ಯಕ್ತಿಗಳೂ ತಮಗೆ ಅಪವಾದ ಬಾರದಂತೆ ಕೆಲವು ಮುಂಜಾಗ್ರತೆಯನ್ನು ವಹಿಸಬೇಕಾಗಿದೆ.

ಇದಕ್ಕಾಗಿಯೇ ನನ್ನಲ್ಲಿ ಕೆಲವು ನಿಯಮಗಳಿರುವುದು. ಅದರ ಉದ್ದೇಶವು ಇದೇ ಅಪವಾದಗಳಿಗೆ ಅವಕಾಶವನ್ನೇ ಇಲ್ಲದಂತೆ ಮಾಡುವುದಾಗಿದೆ. ಮನೆಯಲ್ಲಿ ಕುಳಿತು ಆರಾಮವಾಗಿ ಒಂದು ಅಪವಾದವನ್ನು ಸೃಷ್ಟಿಸಬೇಕಾದರೂ ಅದಕ್ಕೆ ಸಂಧರ್ಭವನ್ನು ಮೊದಲು ಸೃಷ್ಟಿಸಬೇಕಾಗುವುದು. ಸಂದರ್ಭಯಾವುದೆಂಬುವುದು ಎಲ್ಲರೂ ಕೇಳುವ ಮೊದಲ ಪ್ರಶ್ನೆಯಾದುದರಿಂದ ಅವರು ಆ ಸಂದರ್ಭವನ್ನು ಹೇಳಲೇ ಬೇಕಾಗುವುದು. ಆದರೆ ಆ ಸಂದರ್ಭವೇ ಇಲ್ಲವಾದರೆ, ಅವರಿಗೆ ಬಾಯಿ ತೆರೆಯಲು ಸಾಧ್ಯವಾಗುವುದಿಲ್ಲ. ಅಂದರೆ, ಅವರಿಗೆ, ಹುಟ್ಟದ ರಾಜನ ಕಥೆಯನ್ನು ವಿವರಿಸಲು ಸಾಧ್ಯವಾಗುವುದಿಲ್ಲವೆಂದು ಅರ್ಥ. ನನ್ನ ನಿಯಮಗಳು ಎಲ್ಲವೂ ಈ ಅಪವಾದಗಳನ್ನು ಹುಟ್ಟದಂತೆ ಮಾಡುವಲ್ಲಿ ತಯಾರು ಮಾಡಲಾಗಿದೆ.

ದೆವ್ವಗಳನ್ನು ನೀವು ಈ ೨೧ ನೇ ಶತಮಾನದ ಅತ್ಯಾಧುನಿಕ ಯುಗದಲ್ಲೂ ನಂಬುವಿರೇ?

ಉತ್ತರ- ದೆವ್ವಗಳು ಹಿಂದೆ ಇದ್ದಲ್ಲಿ, ಇಂದೂ ಇರುವುದು. ಆಧುನಿಕ ಯುಗ ಬಂತೆಂದು ಅವುಗಳು ತಮ್ಮನ್ನು ತಾವು ನಾಶ ಮಾಡಿಕೊಳ್ಳಲಾರವು. ಆದರೆ ಪ್ರಶ್ನೆ ಇರುವುದು ಅವುಗಳು ಇವೆಯೇ ಅಥವಾ ಇಲ್ಲವೇ ಎಂದು. ಮಾನವನಿಗೆ ಮನಸ್ಸು ಇದೆ. ಇದು ಸೂಕ್ಷ್ಮ ಸ್ಥರದಲ್ಲಿರುವುದು. ಆತನ ಶರೀರ ಸ್ಥೂಲ ಸ್ಥರದಲ್ಲಿರುವುದು. ಈ ನಿಟ್ಟಿನಲ್ಲಿ ಜೀವಂತವಾಗಿರುವಾಗಲೂ ಮಾನವನು ಸೂಕ್ಷ್ಮ ಜೀವಿಯಾಗಿಯೇ ಜೀವಿಸುವನು. ಯಾಕೆಂದರೆ ಆತನು ತನ್ನ ಮನಸ್ಸಿನ ವ್ಯಕ್ತಿತ್ವದಿಂದ ಮಾತ್ರ ವ್ಯವಹರಿಸುತ್ತಾನೆ ಅಥವಾ ಜೀವಿಸುತ್ತಾನೆ. ಆತನ ಸ್ಥೂಲ ದೇಹ ಆತನ ಸೂಕ್ಷ್ಮ ಮನಸ್ಸಿನ ವ್ಯಕ್ತಿತ್ವ ಹೇಳಿದಂತೆ ಮಾಡುತ್ತಿರುವುದು ಅಷ್ಟೆ. ಈ ರೀತಿಯಲ್ಲಿ ಮಾನವನನ್ನು ಶರೀರವಿರುವ ಸೂಕ್ಷ್ಮಜೀವಿ ಎನ್ನಬಹುದು. ಅದೇ ರೀತಿ ದೆವ್ವಗಳನ್ನು ಶರೀರ ಕಳಕೊಂಡ ಅಥವಾ ಶರೀರವಿಲ್ಲದ ಸೂಕ್ಷ್ಮ ಜೀವಿಗಳೆನ್ನಬಹುದು. ಒಟ್ಟಿನಲ್ಲಿ ಎಲ್ಲವೂ ಮನಸ್ಸಿಗೆ ಸಂಬಂಧಿಸಿದ, ಕಣ್ಣಿಗೆ ಕಾಣಿಸದ, ಸೂಕ್ಷ್ಮ ಅಸ್ತಿತ್ವಗಳು ಅಷ್ಟೆ. ದೆವ್ವಗಳೇ ಇಲ್ಲವೆಂದು ವಾದಿಸುವವರು ಇದನ್ನು ತಿಳಿಯಬೇಕು.

ವ್ಯಕ್ತಿತ್ವದಿಂದೊಡಗೂಡಿದ ಮನಸ್ಸಿಗೆ, ದೇಹವಿಯೋಗದ ನಂತರವೂ ಅಸ್ತಿತ್ವವಿರುವುದು. ಇದನ್ನೇ ಸತ್ತ ಆತ್ಮ ಅಥವಾ ಕೆಲವೊಮ್ಮೆ ಅವುಗಳಲ್ಲಿ ಕೆಲವೊಂದನ್ನು ಜನರು ದೆವ್ವವೆನ್ನುವುದು. ಇದು ಅವೈಜ್ಞಾನಿಕವಲ್ಲ. ಆದರೆ ಇವುಗಳು ಯಾವಾಗಲೂ ಮಾನವನಿಗೆ ತೊಂದರೆ ಕೊಡುವಂತಿರುವುದು. ಮಾನವನ ಭೂಮಿಯ ರೀತಿಯ ಆ ವ್ಯಕ್ತಿತ್ವಗಳನ್ನು ಕ್ರೌರ್ಯದ ದೆವ್ವದ ರೀತಿಯಾಗಿ, ಆ ಪ್ರಾಚೀನ ವಾಮಾಚಾರ ಪರಿವರ್ತಿಸಿರುವುದೇ ಇದಕ್ಕೆ ಕಾರಣವಾಗಿದೆ. ಆ ಪ್ರಾಚೀನ ವಾಮಾಚಾರವು ಅವುಗಳನ್ನು ದೆವ್ವವಾಗಿಸದಿರುತ್ತಿದ್ದರೆ, ಮಾನವನಿಗೆ ಅವುಗಳು ಉಪಕಾರಿಗಳಾಗುತ್ತಿದ್ದವು!

ನೀವು ಮೊದಲು ಇದ್ದ ಆಶ್ರಮದಲ್ಲಿ ನೀವೇ ಅರಾಧಿಸುತ್ತಿದ್ದ ಗುರು, ದೇವತೆಗಳ ಸಂಕಲ್ಪವನ್ನು ತೆಗೆದಿರುವುದು ಯಾತಕ್ಕಾಗಿ ಎಂದು ಕೇಳಬಹುದಲ್ಲಾ?

ಉತ್ತರ- ಖಂಡಿತವಾಗಿಯೂ ಕೇಳಬಹುದು. ಇದನ್ನೆಲ್ಲಾ ಎಲ್ಲರೂ ಮೊದಲೇ ಕೇಳಿದ್ದರೆ ಚೆನ್ನಾಗಿರುತ್ತಿತ್ತು. ನಾನು ಅಂದು ಅದ್ವೈತ ಸಾಧಕನಾಗಿದ್ದೆನು. ನನ್ನ ಗುರಿಯು ಮೋಕ್ಷಮಾತ್ರವಾಗಿತ್ತು. ಆ ಆಶ್ರಮದಲ್ಲಿ ನನ್ನೊಂದಿಗೆ ಇನ್ನೊಬ್ಬರು ಸ್ವಾಮೀಜಿಗಳೂ ಇದ್ದರು. ನಾನು ಸಾಧನಾ ಹಂತದಲ್ಲಿ ಮುಂದುವರಿಯುತ್ತಿದ್ದಂತೆ, ನನ್ನ ಧ್ಯಾನಕ್ಕೆ ತಡೆಯನ್ನು ಉಂಟುಮಾಡುತ್ತಾ ಕೆಲವು ಸೂಕ್ಷ್ಮ ಶಕ್ತಿಗಳು ತೊಂದರೆ ಕೊಡಲು ಆರಂಭಿಸಿದವು. ಇದು ನನ್ನ ಸೂಕ್ಷ್ಮ ಅನುಭವಗಳ ಆರಂಭ ಮಾತ್ರವಾಗಿತ್ತು. ಎಲ್ಲಾ ದೇವರುಗಳು ಮತ್ತು ಗುರುಗಳನ್ನು ಹಲವು ಬಾರಿ ಪ್ರಾರ್ಥಿಸಿ ಕರೆದರೂ ಫಲಕಾರಿಯಾಗಿಲ್ಲ. ಇದನ್ನು ಪರಿಹರಿಸದಿದ್ದಲ್ಲಿ ನನ್ನ ಧ್ಯಾನಕ್ಕೆ ತೊಂದರೆ ಆಗುವುದೆಂದು, ಮಂತ್ರ ತಂತ್ರಗಳಿಂದ ನಿವಾರಿಸುವ ಸಾತ್ವಿಕ ಜನರನ್ನು ಕರೆಸಿದೆ. ಆದರೆ ಯಾರಿಗೂ ಅದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ!! ಇನ್ನು, ಇದರ ನಂತರದ ಅನುಭವಗಳನ್ನು ನೇರವಾಗಿ ಹೇಳಬಯಸುವುದಿಲ್ಲ, ಕಾರಣ, ಯಾರಿಗೂ ನಂಬಲು ಸಾಧ್ಯವಾಗದ ಸೂಕ್ಷ್ಮ ರಹಸ್ಯ ಸತ್ಯಗಳು, ನನ್ನದೇ ಧನಾತ್ಮಕ ಶಕ್ತಿಯ ಹೋರಾಟದ ಮೂಲಕ, ನಿಧಾನವಾಗಿ ಹೊರಬಂದ ಕಾಲವಾಗಿತ್ತದು. ಹಲವು ಭಯಾನಕ ಸೂಕ್ಷ್ಮ ಸತ್ಯಗಳ ಇರುವಿಕೆಯ ಕುರಿತು ತಿಳಿದುಕೊಳ್ಳಲು ನನ್ನ ಸೂಕ್ಷ್ಮದ ಬೇಹುಗಾರಿಕಾ ದಳಗಳಿಗೆ ಕೆಲವು ವರುಷಗಳೇ ಬೇಕಾದವು!!

ನಾನು, ಈ ಭಯಾನಕ ಹೋರಾಟದಲ್ಲಿರುವಾಗ, ನನ್ನ ಶಕ್ತಿಯಲ್ಲಿನ ಏಕಾಗ್ರತೆಯನ್ನು ಬಿಟ್ಟು, ಇನ್ನಾವ ಶಕ್ತಿಯ ಆರಾಧನೆಗಳಿಗೆ ಗಮನ ಕೊಟ್ಟರೂ ಆಗ ಅವುಗಳ ಹೋರಾಟವು ನನಗೆ ತಡೆಯಲು ಸಾಧ್ಯವಾಗದಷ್ಟು ಕಠಿಣವಾಗುತ್ತಿತ್ತು. ಅದಕ್ಕೆ ಪರಿಹಾರವೆಂದು ನಾನು ಆ ಆಶ್ರಮವನ್ನು ಇನ್ನೊಬ್ಬರು ಸ್ವಾಮೀಜಿಗೆ ಬಿಟ್ಟುಕೊಟ್ಟು ಒಬ್ಬನೇ ಎಲ್ಲಾದರೂ ಇದ್ದು ಅವುಗಳೊಂದಿಗೆ ಹೋರಾಡೋಣವೆಂದು ತೀರ್ಮಾನಿಸಿದ್ದೆ. ಮತ್ತು ಜೀವಂತವಾಗಿ ಬದುಕಿ ಉಳಿದಲ್ಲಿ, ಆ ಹೋರಾಟವೆಲ್ಲಾ ಮುಗಿದ ನಂತರ ತಿರುಗಿ ಬರೋಣವೆಂದೂ ತೀರ್ಮಾನಿಸಿ ಅಲ್ಲಿಂದ ಹೊರಡಲು ಕೊನೆಯ ತೀರ್ಮಾವನ್ನು ಮಾಡಿದೆನು. ಆದರೆ ನನ್ನ ಭಕ್ತರು, ನಾನು ಏನು ಹೇಳಿದರೂ ನನ್ನನ್ನು ಅಲ್ಲಿಂದ ಹೊರಡಲು ಬಿಡಲಿಲ್ಲ. ಮಾತ್ರವಲ್ಲ, ಆ ಸಂಸ್ಥೆಯನ್ನು ಅಲ್ಲಿಗೇ ಕೊನೆಗೊಳಿಸುವುದಾಗಿಯೂ ಅವರು ಹೇಳಿದರು. ಆದರೆ ಆ ರೀತಿ ಮಾಡಿದಲ್ಲಿ ಜನರು ತಪ್ಪು ತಿಳಿಯಬಹುದೆಂದೂ, ನಾನು ಅವರನ್ನು ಎಚ್ಚರಿಸಿದೆನು, ಆದರೂ ಅವರು ಅದಕ್ಕೆ ಒಪ್ಪಲಿಲ್ಲ. ಆಗ ಬೇರೆ ದಾರಿಕಾಣದೆ ನನ್ನ ಆ ಪರಿಸ್ಥಿತಿಯನ್ನು ಅವರಲ್ಲಿ ಹೇಳಿದೆನು. ಆದರೆ ಇದಕ್ಕಿಂತ ಮೊದಲೇ ನನ್ನಲ್ಲಿ ಆ ಒಂದು ಪ್ರತ್ಯೇಕ ಶಕ್ತಿ ಇರುವುದು ಮತ್ತು, ನಾನು ಸೂಕ್ಷ್ಮದಲ್ಲಿ ವಾಮಾಚಾರ ಶಕ್ತಿಗಳೊಂದಿಗೆ ಹೋರಾಡುತ್ತಿರುವುದು, ನಾನು ಮೊದಲೇ ಸೂಚಿಸಿರುವುದುದರಿಂದ, ಅವರಿಗೆ ಅದು ಗೊತ್ತಿತ್ತು. ಮಾತ್ರವಲ್ಲ, ಭಕ್ತರು ನನ್ನಲ್ಲಿ ಕೇಳಿ ಆ ಶಕ್ತಿಯಿಂದ ಅನುಗ್ರಹವನ್ನೂ ಪಡೆದಿದ್ದರು. ಈ ರೀತಿಯಲ್ಲಿ ನನ್ನಿಂದ ಅವರಿಗೆ ಅನುಗ್ರಹವು ಲಭಿಸಲು ಆರಂಭವಾಗಿತ್ತು. ಈ ಲಾಭವನ್ನು ಕಳಕೊಳ್ಳಲು ತಯಾರಿಲ್ಲದ ಭಕ್ತರು, ನನ್ನ ಮನ ಒಲಿಸಲು ನನಗೆ ಒಂದು ವಿಚಾರವನ್ನು ಹೇಳಿದರು. ಅವರು ಹೇಳಿರುವುದು ಹೀಗೆ, “ಈ ಆಶ್ರಮದಲ್ಲಿರುವ ಗುರು ಹಾಗೂ ದೇವರುಗಳ ಸಂಕಲ್ಪಕ್ಕೆ ಜಗತ್ತಿನಲ್ಲಿ ಸಾವಿರಗಟ್ಟಲೆ ಇತರ ಆಶ್ರಮ, ಆಲಯಗಳಿವೆ, ಮತ್ತು ಈ ಒಂದು ಆಶ್ರಮದ ಅಭಾವವು ಆ ಗುರುಗಳ ಆಶ್ರಮಗಳಿಗೆ ಮತ್ತು ದೇವರುಗಳ ಆಲಯಗಳಿಗೆ ಒಂದು ನಷ್ಟವೇ ಆಗಲಾರದು, ಆದರೆ ನಿಮ್ಮಿಂದ ನಮಗೆ ಅನುಗ್ರಹ ದೊರಕುವ ಆ ಶಕ್ತಿಗೆ ಜಗತ್ತಿನಲ್ಲಿ ಎಲ್ಲೂ ಒಂದು ಆಲಯವಿಲ್ಲದುದರಿಂದ ಇಲ್ಲೇ ಆ ಶಕ್ತಿಯ ನೆಲೆಯಾಗಲಿ ಮತ್ತು ಅದನ್ನು ನಾವು ಆರಾಧಿಸುತ್ತಾ ಇಲ್ಲಿಗೆ ಬರುವ ಭಕ್ತರೂ ಅನುಗ್ರಹವನ್ನು ಪಡೆಯುವಂತಾಗಲಿ” ಎಂದರು, ಆಶ್ಚರ್ಯವೆಂದರೆ ಆ ಹಿರಿಯ ಸ್ವಾಮೀಜಿಗಳೂ ಅದನ್ನೇ ಹೇಳಿದರು, ಯಾಕೆಂದರೆ ಅವರಿಗೂ ಹಲವು ಬಾರಿ ನನ್ನ ಅನುಗ್ರಹದ ನೇರ ಅನುಭವವಾಗಿತ್ತು. ಭಕ್ತರ ಆ ಮಾತುಗಳನ್ನು ನಾನು ಆಲೋಚಿಸಿದಾಗ ಮತ್ತು ಆ ಮಾತುಗಳಲ್ಲಿ ನ್ಯಾಯವಿದೆ ಎಂದು ತೋರಿದುದರಿಂದ ಮತ್ತು ಭಕ್ತರನ್ನು ಬೇಸರಪಡಿಸುವುದೂ ಅದರಿಂದಾಗಿ ನಿಲ್ಲುವುದೆಂಬ ಕಾರಣಕ್ಕೆ, ನಾನು ಅದಕ್ಕೆ ವಿರೋಧವನ್ನು ಹೇಳಿಲ್ಲ ಅಷ್ಟೆ. ಅನಂತರ ಆ ಸ್ವಾಮೀಜಿಗಳೇ ಇತರ ಎಲ್ಲಾ ಸಂಕಲ್ಪವನ್ನೂ ದೂರವಿರಿಸಿ, ನನ್ನಲ್ಲಿ ಕೇಳಿ, ಆ ನನ್ನಲ್ಲಿನ ಶಕ್ತಿಯ ಒಂದು ಸಂಕೇತವನ್ನು ಅಲ್ಲಿ ಪ್ರತಿಷ್ಠಾಪಿಸಿದ್ದು. ಅನಂತರ ಅವರೇ ನನ್ನ ಭಾವ ಚಿತ್ರವನ್ನು ತರಲು ಹೇಳಿ, ಆ ಚಿಹ್ನೆಯ ಬದಲು ಅಲ್ಲಿ ಆರಾಧನೆಗಾಗಿ ನನ್ನ ಭಾವಚಿತ್ರವನ್ನು ಇಟ್ಟು ಆರಾಧನೆಯನ್ನು ಆರಂಭಿಸಿರುವುದು.

ಇದುವೇ, ಅಲ್ಲಿ ಮೊದಲಿದ್ದ ಇತರ ದೇವರುಗಳ ಮತ್ತು ಗುರು ಸಂಕಲ್ಪವನ್ನು ಭಕ್ತರು ತೆಗೆಯಲು ಹಾಗೂ ನನ್ನ ಭಾವ ಚಿತ್ರವನ್ನು ಅಲ್ಲಿ ಇರಿಸಲು ಕಾರಣವಾಗಿರುವುದು.

ಬ್ರೈನ್ ವಾಶ್ ಮಾಡುವುದು ಎಂದರೇನು? ಹೆಚ್ಚಿನ ಧಾರ್ಮಿಕ ಮತಾಂತರವೂ ಇದೇ ರೀತಿಯಲ್ಲಿ ನಡೆಯುತ್ತವೆ ಎನ್ನುವರಲ್ಲಾ?

ಉತ್ತರ- ಮೊದಲಿಗೆ ‘ಬ್ರೈನ್ ವಾಶ್’ ಎಂದರೆ ಅದರ ಅರ್ಥ ಏನೆಂದು ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿಯ ‘ಬ್ರೈನ್ ವಾಶ್’ ಹೇಗೆ ನಡೆಯುವುದು ಎಂಬುವುದನ್ನು ಚುಟುಕಾಗಿ ನೋಡೋಣ.

ಬ್ರೈನ್ ವಾಶ್ ಗೆ ಅಗತ್ಯವಾದ ವಸ್ತು ನಂಬಿಕೆಯಾಗಿದೆ. ಅಂದರೆ ನಂಬಿಕೆಯೆಂಬ ಆಯುಧದಿಂದ ಮಾತ್ರ ‘ಬ್ರೈನ್ ವಾಶ್’ ಮಾಡಲು ಸಾಧ್ಯ. ನಂಬಿಕೆ ಇರುವ ಎಲ್ಲಾ ಕಡೆಯೂ ‘ಬ್ರೈನ್ ವಾಶ್’ ಕೆಲಸ ಸಾಧ್ಯವಿದೆ. ನಂಬಿಕೆಯ ಧರ್ಮ, ಪಂಥಗಳಾಗಲೀ ಅಥವಾ ಇನ್ನಾವ ಸಂಘಟನೆಗಳಾಗಲೀ ಅಲ್ಲೆಲ್ಲಾ, ಒಂದು ನಂಬಿಕೆಯನ್ನು ಇನ್ನೊಂದು ನಂಬಿಕೆಯು ಯಾವುದಾದರೂ ರೀತಿಯಿಂದ ಸೋಲಿಸಲು ಪ್ರಯತ್ನಿಸುವುದು ಅಷ್ಟೆ. ಒಂದು ನಂಬಿಕೆಯನ್ನು ಇನ್ನೊಂದು ನಂಬಿಕೆ ಸೋಲಿಸುವಾಗ ಅಲ್ಲಿ ‘ಬ್ರೈನ್ ವಾಶ್’ ನಡೆಯುವುದು. ಆದರೆ ಸತ್ಯದಲ್ಲಿ ಬ್ರೈನ್ ವಾಶ್ ನಡೆಯುವುದಿಲ್ಲ. ವಿಜ್ಞಾನವು ಸತ್ಯವಾಗುವುದು. ವಿಜ್ಞಾನವನ್ನು ಒಂದು ‘ಬ್ರೈನ್ ವಾಶ್’ ಎಂದು ಹೇಳಿ ಯಾರೂ, ಇದುವರೆಗೂ, ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ತಂದಿಲ್ಲ. ಇನ್ನು, ನನ್ನ ವಿಚಾರವಾಗಿ ಹೇಳುವುದಾದರೆ, ನನ್ನಲ್ಲಿ ನಂಬಿಕೆಯ ರೀತಿ ಇಲ್ಲ, ಸತ್ಯದ ರೀತಿ ಮಾತ್ರ ಇರುವುದು. ಅಂದರೆ, ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯು ನಂಬಿಕೆಯಲ್ಲ, ಬದಲು ವಿಜ್ಞಾನದಂತೆ ಸತ್ಯಮಾತ್ರವಾಗುವುದು. ಆದುದರಿಂದ, ನನ್ನಲ್ಲಿ ಬ್ರೈನ್ ವಾಶ್ ಗೆ ಅವಕಾಶವೇ ಇಲ್ಲವಾಗುವುದು ಎಂದು ತಿಳಿಯಬೇಕು. ವಿಜ್ಞಾನವು, ಮಾನವನ ಹಿಂದಿನ ಹಲವು ಅಧಾರ ರಹಿತ ನಂಬಿಕೆಗಳ ಬ್ರೈನ್ ವಾಶ್ ನ್ನು ತೆಗೆದು ಅಲ್ಲಿ ವೈಜ್ಞಾನಿಕ ಸತ್ಯಗಳನ್ನು ತುಂಬಿಸುವ ಆ ಮಹಾ ಕೆಲಸವನ್ನು ಮಾತ್ರ ಮಾಡುತ್ತಿದೆ.

ಎಲ್ಲಾ ಧರ್ಮ, ಪಂಥಗಳಲ್ಲೂ ನಂಬಿಕೆಯೇ ಸರ್ವಸ್ವವಾದುದರಿಂದ, ಹಿಂದೆ ಇದ್ದ ನಂಬಿಕೆಗಳನ್ನು ತಪ್ಪು ಎಂದು ನಂಬಿಸುವ ಮತ್ತು ತಮ್ಮ ನಂಬಿಕೆಗಳನ್ನು ಹೇರುವ ಆ ‘ಬ್ರೈನ್ ವಾಶ್’ನ ರೀತಿಯನ್ನೇ ಮುಂದುವರಿಸುತ್ತಾ ಹೋಗುತ್ತಿವೆ! ಮತಾಂತರಗಳೆಲ್ಲ ಒಂದು ರೀತಿಯ ಬ್ರೈನ್ ವಾಶ್ ಗಳೇ ಆಗಿವೆ. ಬ್ರೈನ್ ವಾಶ್ ಎಂಬುವುದು ಸತ್ಯಸಂಧ ಚಿಂತನೆಯ ಶತ್ರು ಆಗಿದೆ. ಇದರ ಪರಿಣಾಮವೇ ಭೀಕರ ಧರ್ಮಾಂಧತೆ ಮತ್ತು ಅವುಗಳ ರಕ್ತಪಾತದ ಪಾಪಕರ್ಮಗಳಾಗಿರುವುದು. ಈ ‘ಬ್ರೈನ್ ವಾಶ್’ ಗಳು ಬೆಳೆದು ಹೆಮ್ಮರವಾದ ಹಿನ್ನೆಲೆಯಲ್ಲಿ, ಇನ್ನು ನಮಗೆ ಯಾವ ಕಾಲಕ್ಕೂ ಇದರಿಂದ ಪಾರಾಗುವ ಸಾಧ್ಯತೆಯು ಇಲ್ಲವಾಗಿಹೋಗಿದೆ. ಆ ರಕ್ತಪಾತವು, ಇಂದು ಕೆಲವು ದೇಶಗಳ ಜನರಿಂದ ದೂರವಿರಬಹುದು, ಆದರೆ ಮುಂದೆ ಅದೇ ರಕ್ತಪಾತವು ಎಲ್ಲರ ಮನೆಯ ಮುಂದೆ ಬಂದು ನಿಲ್ಲಬಹುದು! ಆದರೆ ನಾವೆಲ್ಲರೂ ನಮ್ಮ ನಮ್ಮ ಧರ್ಮದ ವೈಜ್ಞಾನಿಕ ಮತ್ತು ಸಾರ್ವತ್ರಿಕವಾದ ಆ ಸತ್ಯ, ಪ್ರೀತಿ, ನೀತಿ ಎಂಬಲ್ಲಿ ಗಟ್ಟಿಯಾಗಿ ನಿಂತು, ನಂಬಿಕೆಯ ಬ್ರೈನ್ ವಾಶ್ ನ ಸಂತತಿಗಳಾದ ನಂಬಿಕೆ, ಆಚಾರಗಳಿಗೆ ಹೆಚ್ಚು ಒತ್ತು ಕೊಡದೆ ಆಚರಿಸುವುದಾದರೆ, ಮುಂದೆ ಬರಲಿರುವ ಭೀಕರ ಅಪಾಯದಿಂದ ಪಾರಾಗಬಹುದು ಮಾತ್ರವಲ್ಲ, ನರಕವಾಗಿರುವ ಈ ಭೂಮಿಯನ್ನೇ ಸ್ವರ್ಗವಾಗಿಸಬಹುದು!! ಅದಕ್ಕಾಗಿ ನಾವೆಲ್ಲರೂ ಪ್ರಯತ್ನಿಸೋಣ, ಆ ಆನಂದದ ಮತ್ತು ಸತ್ಯದ ಕೆತ್ತನೆಯ ಭೂಸ್ವರ್ಗದ ನಿರ್ಮಾಣಕಾರ್ಯದಲ್ಲಿ ಪ್ರತಿ ವ್ಯಕ್ತಿಯೂ ಭಾಗಿಯಾಗಿ ತನ್ನ ಜೀವನವನ್ನು ಧನ್ಯವಾಗಿಸಲಿ. ಈ ಮಹತ್ ಕಾರ್ಯವನ್ನು ಯಾವ ದೇವರೂ ವಿರೋಧಿಸಲಾರನು ಯಾಕೆಂದರೆ, ಅದು, ಆ ದೇವರಲ್ಲಿ ಸಾವಿರ ಪಾಲು ಹೆಚ್ಚು ದೇವತ್ವವನ್ನು [ಯಾಂತ್ರಿಕ ಆಚಾರ-ಭಕ್ತಿ ರೀತಿ ಅಲ್ಲದಿರುವ ಕಾರಣ] ಕಾಣುವ ಮಾನವನ ಆ ಅದ್ಭುತ ಶುದ್ಧ-ಭಕ್ತಿಯ ರೀತಿಯಾಗುವುದು.

ಬ್ರಹ್ಮಚರ್ಯದ ಅನಿವಾರ್ಯತೆ ಎಲ್ಲಿರುವುದು ಮತ್ತು ಕಾಮವು ಆಧ್ಯಾತ್ಮಕ್ಕೆ ಹೇಗೆ ಮಾರಕವಾಗುವುದು?

ಮರಣಾನಂತರ ಒಬ್ಬಾತನಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬಾರದೆಂಬ ರೀತಿಯ ಮೋಕ್ಷ ಸಾಧನೆಯಾದರೆ ಅಲ್ಲಿ ಮಾತ್ರ ಈ ಬ್ರಹ್ಮಚರ್ಯದ ಅನಿವಾರ್ಯತೆ ಇರುವುದು ಎಂದು ಹಿಂದಿನ ಶಾಸ್ತ್ರಗಳ ಹಿನ್ನೆಲೆಯಲ್ಲೇ ಹೇಳಬಹುದು. ಅದೇ ರೀತಿ, ಬ್ರಹ್ಮಚಾರಿ ದೇವರ ಸ್ವರ್ಗವನ್ನು ಸೇರಲು ಬ್ರಹ್ಮಚರ್ಯವೇ ಬೇಕೆಂದು ನಿಬಂಧನೆ ಇದ್ದಲ್ಲಿ, ಆ ಸ್ವರ್ಗಕ್ಕೆ ಹೋಗಲು ಕೂಡಾ ಈ ರೀತಿಯ ಬ್ರಹ್ಮಚರ್ಯದ ಅಗತ್ಯವಿದೆ. ಇನ್ನಿತರ ರೀತಿಯ ಮೋಕ್ಷ, ಸ್ವರ್ಗಗಳಿಗೆ ಅದರ ಅಗತ್ಯ ಇರುವುದಿಲ್ಲ. ಯಾಕೆಂದರೆ ಮೋಕ್ಷದಲ್ಲಿ ತನ್ನ ಅಸ್ತಿತ್ವವನ್ನು ಪರದಲ್ಲಿ ಪೂರ್ತಿ ಇಲ್ಲದಂತೆ ಮಾಡಬೇಕಾದಲ್ಲಿ ಆತನಿಗೆ ಸ್ವಲ್ಪವಾದರೂ ಆಸೆಯು ಇರಬಾರದು. ಆಸೆ ಇದ್ದಲ್ಲಿ ಆತನ ವ್ಯಕ್ತಿತ್ವವು ಲೀನ ಅಥವಾ ಇಲ್ಲವಾಗಲಾರದು ಎಂಬುವುದು ಇಲ್ಲಿಯ ತರ್ಕ. ಕಾಮವು, ಒಂದು ರೀತಿಯ ಆಸೆಯಾದುದರಿಂದ ಅದು ಆತನಿಗೆ ಆ ಆಸೆಯಿಲ್ಲದ ಸ್ಥಿತಿಯನ್ನು ತರಲಾರದು.

ಶಕ್ತಿ ಸಂಚಯಕ್ಕಾಗಿ ಬ್ರಹ್ಮಚರ್ಯ, ಎಂಬುವುದು ಅರ್ಥ ಹೀನವಾಗುವುದು. ಯಾಕೆಂದರೆ ಶಕ್ತಿಯು ಯಾವ ಇತರ ವಿಧಗಳಲ್ಲೂ ನಮಗೆ ನಷ್ಟವಾಗಬಹುದು. ಇನ್ನು ಬುದ್ಧಿಯ ನಷ್ಟ ಸಂಭವಿಸುವುದು ಎಂದು ಹೇಳುವುದಾದರೆ, ಅದು ಹಾಗಲ್ಲವೆಂದು ಹಲವು ಹಲವು ವಿಜ್ಞಾನಿಗಳೇ ಸಾಕ್ಷಿಯಾಗಿರುವರು. ಅವರೆಲ್ಲರೂ ಮದುವೆ ಆದವರು ಎಂದು ನಮಗೆ ತಿಳಿದಿದೆ. ಇನ್ನು ಋಷಿಗಳಲ್ಲಿ ಹಿಂದೆ ಒಂದಕ್ಕಿಂತ ಹೆಚ್ಚು ಮದುವೆಯಾದವರೂ ಇದ್ದರು, ಆದರೆ ಅವರು ಮಹಾ ಆಧ್ಯಾತ್ಮಿಕ ವ್ಯಕ್ತಿಗಳಾಗಿದ್ದರು. ಆದುದರಿಂದ ಆಧ್ಯಾತ್ಮಿಕ ವ್ಯಕ್ತಿತ್ವವು ಅದು ಆ ವ್ಯಕ್ತಿಯ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಅದ್ಭುತ ಅನುಷ್ಠಾನದಲ್ಲಿರುವುದು, ಅದಲ್ಲದೆ, ಬ್ರಹ್ಮಚರ್ಯದಲ್ಲಿ ಅದನ್ನು ಪಡೆಯಲು ಸಾಧ್ಯವಿಲ್ಲ. ಯಾಕೆಂದರೆ ಆ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೀತಿ ಇಲ್ಲದ ಬರೇ ಬ್ರಹ್ಮಚಾರಿಯು ಯಾವ ಕಾಲಕ್ಕೂ ಆಧ್ಯಾತ್ಮಿಕತೆಯನ್ನು ಮತ್ತು ಪವಿತ್ರತೆಯನ್ನು ಪಡೆಯಲಾರ.

ಕಾಮದಲ್ಲಿ ಎರಡು ವಿಧಗಳಿವೆ. ಅವುಗಳಲ್ಲಿ ಒಂದು ‘ನೈತಿಕ ಕಾಮ’ ಇನ್ನೊಂದು ‘ಅನೈತಿಕ ಕಾಮ’ವಾಗಿದೆ. ಇವಲ್ಲಿ ಅನೈತಿಕ ಕಾಮವು ಆಧ್ಯಾತ್ಮಕ್ಕೆ ವಿರೋಧವಾಗುವುದು. ಅಂದರೆ ನೈತಿಕ ಪ್ರೇಮದೊಂದಿಗೆ ಕಾಮ ಇದ್ದಲ್ಲಿ ಮಾತ್ರ ಅದು ಆಧ್ಯಾತ್ಮಕ್ಕೆ ವಿರೋಧಿಯಲ್ಲ ಎಂದಾಗುವುದು, ಅದು ಪತಿ, ಪತ್ನಿಯಲ್ಲಿ ಮಾತ್ರ ಇರಲು ಸಾಧ್ಯ. ಆದರೆ ಇದನ್ನು ತಪ್ಪಿಸುವ ಎಲ್ಲಾ ಮೋಸವನ್ನು ಆ ಪ್ರಾಚೀನ ವಾಮಾಚಾರವು ನಿರಂತರ ಮಾಡುತ್ತಿರುವುದು! ಮದುವೆ ಮೊದಲ ಮಿಲನ, ಪರಸ್ತ್ರೀ ಮತ್ತು ಪರಪುರುಷ ಆಸೆಗಳನ್ನು ಹುಟ್ಟಿಸುವಲ್ಲಿ ಇವು ನಿರಂತರ ಕೆಲಸ ಮಾಡುತ್ತಿರುತ್ತವೆ. ಆದುದರಿಂದ ಒಬ್ಬ ವ್ಯಕ್ತಿಯು ಆಧ್ಯಾತ್ಮದಲ್ಲಿ ಮುಂದುವರಿಯಬೇಕಿದ್ದಲ್ಲಿ ಇದರಿಂದ ಮೇಲೆ ಬರಲೇ ಬೇಕಾಗುವುದು. ಇಲ್ಲವಾದರೆ ಆತನು ಯಾವ ಕಾಲಕ್ಕೂ ಆಧ್ಯಾತ್ಮದಲ್ಲಿ ಮುಂದಕ್ಕೆ ಹೋಗಲಾರ.

ಸ್ವಯಂ ಘೋಷಿತ ದೇವ ಮಾನವ ಎಂಬುವುದರ ಅರ್ಥವೇನು?

ಉತ್ತರ- ಮನ ಬಂದಂತೆ ಈ ಶಬ್ಢವನ್ನು ಉಪಯೋಗಿಸುವುದು ಈಗೀಗ ಒಂದು ಚಾಳಿಯಾಗಿಹೋಗಿದೆ. ಈ ಶಬ್ಧವನ್ನು ಎರಡು ದೃಷ್ಟಿಕೋನಗಳಲ್ಲಿ ನೋಡಬಹುದು. ಮೊದಲನೆಯದು, ಈ ಹಿಂದೆ ಇರುವ ದೇವ, ದೇವತೆಗಳ, ಅವತಾರ ಅಥವಾ ಅಂಶ ಎಂದು ಯಾರಾದರೂ ಘೋಷಿಸಿದಲ್ಲಿ ಅವರನ್ನು ಸ್ವಯಂ ಘೋಷಿತ ದೇವ ಮಾನವ ಎನ್ನಬಹುದು. ಹಿಂದಿನ ಆ ದೇವ ಅಥವಾ ದೇವತೆ ಮೇಲಿನ ಜನರ ಭಕ್ತಿಯನ್ನು, ಈ ರೀತಿ ಹೇಳಿಕೊಂಡಲ್ಲಿ, ಆ ದೇವ ಮಾನವನು ಶೋಷಣೆ ಮಾಡಿದಂತೆ ಆಗುವುದು ಎಂಬುವುದು ಒಂದು ಸತ್ಯವೂ ಆಗುವುದು. ಈ ರೀತಿಯ ದೇವಮಾನವರು ಆದಿ ಕಾಲದಿಂದಲೂ ಇರುವರು. ಅವರಲ್ಲಿ ಕೆಲವರು ತಮ್ಮನ್ನು ಅವತಾರ ಎಂದರು, ಇನ್ನು ಹಲವರು ಅಂಶ ಎಂದರು.

ಇನ್ನೊಂದು ರೀತಿಯ ದೇವಮಾನವರು ಇರುವರು. ಅವರು ಯಾವ ಹಿಂದಿನ ದೇವ, ದೇವತೆಗಳ ಅವತಾರ ಅಥವಾ ಅಂಶ ಎಂದು ಹೇಳಿಕೊಳ್ಳುವುದಿಲ್ಲ, ಬದಲು ಅವರು ಹೇಳುವುದು ಎಲ್ಲರೂ ದೇವ ಮಾನವರಾಗಬೇಕೆಂದಾಗಿದೆ! ಇವರ ಪ್ರಕಾರ, ದೇವತ್ವವೇ ದೇವರಾಗಿದೆ. ಅಂದರೆ, ದೇವತ್ವವು, ಆ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೀತಿಯ ಹಿನ್ನೆಯಲ್ಲಿ ತನ್ನ ಮನಸ್ಸನ್ನು ಪವಿತ್ರಗೊಳಿಸುವಲ್ಲಿ ಸೃಷ್ಟಿಯಾಗುವುದು ಎಂದು ಅರ್ಥ. ಪ್ರಾಣಿಗಳಿಗೂ ತನ್ನ ಮರಿಗಳಲ್ಲಿ ಪ್ರೀತಿ ಇದೆ, ಆದರೆ ಅದು ಅಷ್ಟಕ್ಕೆ ಮುಗಿದು ಹೋಗುವುದು. ಅನಂತರ ಅದು ಆಲೋಚನೆ ಮಾಡದ ಕಾರಣ, ಉಳಿದ ಕಡೆ ಅವು ಸ್ವಾರ್ಥವನ್ನು ತೋರಿಸುವವು. ಇನ್ನು, ಮಾನವನು, ತನಗೆ ಆಲೋಚಿಸುವ ಬುದ್ಧಿ ಇರುವ ಕಾರಣ, ಇನ್ನೂ ಸ್ವಲ್ಪ ಹೆಚ್ಚು ಮುಂದುವರಿದು ಕುಟುಂಬ, ಬಂಧುಗಳು, ಊರು, ದೇಶ ಎಂಬೆಲ್ಲಾ ರೀತಿಯಲ್ಲಿ “ನಾನು” ಭಾವಕ್ಕಿಂತ ಸ್ವಲ್ಪ ಮೇಲೇರಿ “ನಾವು” ಭಾವಕ್ಕೆ ತಲುಪಿದ್ದಾನೆ. ಸಾಮಾನ್ಯ ಮಾನವನಾದ ಅವನ ರೀತಿಯೂ ಅಲ್ಲಿಗೆ ಮುಗಿಯುವುದು. ಅಂದರೆ, ಆತನು ಉಳಿದೆಲ್ಲಾ ಕಡೆಯೂ ತನ್ನ ಸ್ವಾರ್ಥವನ್ನು ಮೆರೆಸುವನು. ಇನ್ನು, ಇರುವ ಒಂದು ಮುಖ್ಯ ಅಂಶವನ್ನು ಪ್ರತ್ಯೇಕ ಗಮನಿಸಬೇಕಾಗಿದೆ. ನಮಗೆ ತಿಳಿದಿರುವಂತೆ, ಮಾನವನಿಗೆ ಮಾತ್ರವಾಗಿ ದೊರಕಿದ ಒಂದು ನಿಧಿಯು ಆ ವಿವೇಚನಾ ಸಾಮರ್ಥ್ಯವಿರುವ ಬುದ್ಧಿಯಾಗಿದೆ. ಇಲ್ಲಿಯೇ ಮಾನವನಿಗೆ ಸಂಬಂಧಿಸಿದಂತೆ ಒಂದು ದೊಡ್ಡ ಕವಲು ಒಡೆಯುವಿಕೆಯ ಸಾಧ್ಯತೆ ಇರುವುದು. ಅಂದರೆ, ಯಾರಿಗೆ ಬೇಕಾದರೂ ತನ್ನ ಬುದ್ಧಿಯ ವಿವೇಚನಾ ಸಾಮರ್ಥ್ಯವನ್ನು ಉಪಯೋಗಿಸಿ ತನ್ನ ಮನಸ್ಸನ್ನು ಸಾಧನೆಯ ಮೂಲಕ ಪವಿತ್ರ ಮಾಡುವ ಮುಕ್ತ ಅವಕಾಶ ಇದೆ! ಅದೇ ರೀತಿ, ತನ್ನ ವಿವೇಚನಾ ಸಾಮರ್ಥ್ಯದ ಬುದ್ಧಿ ಉಪಯೋಗಿಸಿ ತನ್ನ ಸ್ವಾರ್ಥ ಸ್ವಭಾವವನ್ನು ಹೆಚ್ಚಿಸುವ ಮುಕ್ತ ಅವಕಾಶವೂ ಇರುವುದು! ಹೀಗಿರಲು ಯಾರು ತನ್ನ ಮನಸ್ಸನ್ನು, ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಹಿನ್ನೆಲೆಯಲ್ಲಿ, ಸಾಧನೆಯ ಮೂಲಕ, ಪವಿತ್ರರಾಗಿಸುವರೋ ಅವರು ಸಾಮಾನ್ಯ ಮಾನವರಿಗಿಂತ ಖಂಡಿತವಾಗಿಯೂ ಹೆಚ್ಚು ಪರಿಶುದ್ಧರು ಎಂಬುವುದು ಸ್ಪಷ್ಟವಾಗುವುದು. ಈ ಹಂತವನ್ನು ಮಹಾತ್ಮರ ಪ್ರಥಮ ಹಂತ ಎನ್ನುವರು. ಇನ್ನೂ ಆ ಮನಸ್ಸಿನ ಪರಿಶುದ್ದತೆಯನ್ನು[ವಿಶಾಲ ಮನಸ್ಕತೆ] ಯನ್ನು ಹೆಚ್ಚಿಸುವಲ್ಲಿ ನಮಗೆ ಆ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೀತಿಯ ಆ ಮೇಲಿನ ಹಂತಗಳು ದೊರಕುವವು. ಮೊದಲೇ ತಿಳಿದಿರುವಂತೆ, ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೇ ದೇವ ಸಂಕಲ್ಪವಾದ ಕಾರಣ, ಆ ಮಹಾತ್ಮರ “ಮೇಲಿನ ಹಂತದ” ಮಾನವನನ್ನು ದೇವಮಾನವ ಎಂದು ಮಹಾತ್ಮರುಗಳು ಕರೆಯುವರು. ಇದು ಸ್ವಭಾವದ ಪವಿತ್ರತೆಯ ಆ ಮೇಲಿನ ಹಂತವಾಗಿದೆ. ಇಲ್ಲಿ, ಅಲೌಕಿಕ ಶಕ್ತಿಯ ಯಾವ ಹಿನ್ನಲೆಯೂ ಇಲ್ಲವೆಂದು ಪ್ರತ್ಯೇಕ ನೆನಪಿಡಬೇಕಾಗಿದೆ. ಇಂಥ ದೇವಮಾನವರು ಈ ಜಗತ್ತಲ್ಲಿ ಕೋಟಿ ಗಟ್ಟಲೆ ಸೃಷ್ಟಿಯಾಗಿ ಈ ಭೂಮಿಯನ್ನು ದೇವ ಲೋಕ [ಪವಿತ್ರ, ಪಾವನ ಲೋಕ]ವನ್ನಾಗಿ ಪರಿವರ್ತಿಸಲಿ ಎಂಬುವುದೇ ಎಲ್ಲಾ ಮಹಾತ್ಮರುಗಳೂ ಆಶಿಸುವುದು.

ಮಾನವರ ಇನ್ನೊಂದು ಮುಕ್ತ ಅವಕಾಶ ಎಂದರೆ, ತನ್ನ ಬುದ್ಧಿಯ ಮೂಲಕ ಸ್ವಾರ್ಥವನ್ನು ಹೆಚ್ಚಿಸುವ ಅವಕಾಶವಾಗಿದೆ. ಹೀಗೆ ಹೆಚ್ಚಿಸುತ್ತಾ ಹೋಗುವವರು ಕೊನೆಯಲ್ಲಿ ಅದರ ಮೇಲಿನ ಹಂತವಾದ ಅಸುರ ಹಂತವನ್ನು ಅಥವಾ ಸಮಾಜ-ಕಿಡಿಗೇಡಿ ಹಂತವನ್ನು ತಲುಪುವರು. ಆದರೆ ಅಲ್ಲಿಂದ ಅವರು ತನ್ನ ಭಯಾನಕ ಕೆಲಸಗಳಿಂದ ಸಮಾಜದ ಇತರರ ಮನದಲ್ಲೂ ಈ ಅಸುರ ಬೀಜವನ್ನು ತುಂಬುವರು.

ಆದುದರಿಂದ ಮನುಷ್ಯರು ಸ್ವಾರ್ಥದ ಹಿನ್ನೆಲೆಯಲ್ಲಿ ಮುಂದುವರಿದು, ಆ ಕಿಡಿಗೇಡಿಗಳು ಅಥವಾ ಕಾಡು ಮಾನವರಾಗುವುದಕ್ಕಿಂತ, ಆ ಪವಿತ್ರತೆಯ ಹಿನ್ನೆಲೆಯಲ್ಲಿ ಬೆಳೆದು ದೇವಮಾನವರಾಗುವುದು ಈ ಭೂಮಿಯ ಸರ್ವರಿಗೂ ಆ ಮನಶ್ಯಾಂತಿ, ಮನೆ ಶಾಂತಿ, ಮತ್ತು ಲೋಕ ಶಾಂತಿಯನ್ನೀಯುವ ವರದಾನವಾಗುವುದು. ಆದುದರಿಂದ ಎಲ್ಲರೂ ಆ ರೀತಿಯ ದೇವಮಾನವರಾಗಿರಿ, ಮತ್ತು ಈ ಜಗತ್ತನ್ನು ಆ ಪ್ರಾಚೀನ ವಾಮಾಚಾರದ ಸರ್ವನಾಶದ ಯೋಜನೆಯಿಂದ ಎಂದೆಂದಿಗಾಗಿ ರಕ್ಷಿಸಿರಿ.

ಸತ್ಯವನ್ನೇ ನುಡಿಯಬೇಕು ಎನ್ನುವರು, ಆದರೆ, ಮೋಸ ಮಾಡುವ ಉದ್ದೇಶ ಇಲ್ಲದಿದ್ದರೂ, ಒಮ್ಮೆ ಮಾತು ತಪ್ಪಿ ಹೋದರೆ ಎಲ್ಲವೂ ಅಸತ್ಯವಾಗುವುದೇ?

ಮಾನವನಿಗೆ ಎಲ್ಲವೂ ನಂಬಿಕೆಯೇ ಆಗಿ ಹೋಗಿದೆ, ಆ ನಂಬಿಕೆಯೇ ಆಗಲಾರದ “ಸತ್ಯ” ವನ್ನು ಕೂಡಾ ನಂಬಿಕೆಯ ರೀತಿಯಲ್ಲೇ ಕಾಣುವರು ಎಂಬುವುದು ಅತ್ಯಂತ ದುರದೃಷ್ಟಕರವಾಗಿದೆ! ಒಂದು ಚಿಕ್ಕ ಉದಾಹರಣೆಯನ್ನು ತೆಗೆಯೋಣ. ಇಬ್ಬರು ಸತ್ಯನಿಷ್ಟರು ತಮ್ಮ ಕಷ್ಟದಲ್ಲಿರುವ ಗೆಳೆಯನಿಗೆ ಸಾಲ ಕೊಡಲು ತಮ್ಮಲ್ಲಿ ಹಣ ಸದ್ಯಕ್ಕೆ ಇಲ್ಲ ಎಂಬ ಮಾತು ಹೇಳಿ ಮನೆ ಬಂದರು. ಆದರೆ, ಮರು ದಿನ ಆ ಇಬ್ಬರು ಸತ್ಯನಿಷ್ಠರಿಗೂ ಸರಕಾರದಿಂದ ಸಿಗಬೇಕಾದ ಹಣವು ಅನಿರೀಕ್ಷಿತವಾಗಿ ಬಂದವು. ಆಗ ಒಬ್ಬ ಸತ್ಯನಿಷ್ಠನು ಕೂಡಲೆ ಆತನ ಗೆಳೆಯನಲ್ಲಿಗೆ ಹೋಗಿ, ಆತನಿಗೆ ಬೇಕಾದಷ್ಟು ಹಣವನ್ನು ಕೊಟ್ಟು ಬಂದನು, ಆದರೆ ಇದನ್ನು ತಿಳಿದ ಇನ್ನೊಬ್ಬ ಸತ್ಯನಿಷ್ಠನು “ಕೊಟ್ಟ ಮಾತನ್ನು ತಪ್ಪಿದವ” ಎಂದು ಆ ಹಣವನ್ನು ಕೊಟ್ಟ ಸತ್ಯ ನಿಷ್ಠನನ್ನು ನಿಂದಿಸಿದನು. ಆತನ ಪ್ರಕಾರ ಅವರು ಇಬ್ಬರೂ ಹಿಂದಿನ ದಿನ “ಹಣ ಕೊಡಲು ಸಾಧ್ಯವಾಗುವುದಿಲ್ಲ” ಎಂದು ಹೇಳಿರುವ ಆ ಮಾತನ್ನು ಪಾಲಿಸುವುದೇ ಪರಮ ಸತ್ಯನಿಷ್ಠೆ ಎಂದಾಗಿದೆ!!! ಅಯ್ಯೋ, ಮಾನವರು ಸತ್ಯವನ್ನೂ ಈ ರೀತಿ ನಂಬಿಕೆಯನ್ನಾಗಿ ಪರಿವರ್ತಿಸುವರಲ್ಲಾ!! ಧರ್ಮವನ್ನು ಮತ್ತು ದೇವರನ್ನು ಆ ಅರಿವಿನ ಸಹಾಯವಿಲ್ಲದೆ ಬರೇ ನಂಬಿದುದರ ಪರಿಣಾಮವಾಗಿ ಈ ಜಗತ್ತಿನಲ್ಲಿ ಇಷ್ಟೆಲ್ಲಾ ಅನಾಚಾರ, ಕ್ರೌರ್ಯ, ಇತ್ಯಾದಿಗಳು ಉಂಟಾಗಿರುವುದು ಎಂದು ಈಗ ಮತ್ತೂ ಸ್ಪಷ್ಟವಾಗುವುದು.

ಸತ್ಯವು “ಮಾತು” ಅಲ್ಲ ಎಂಬುವುದನ್ನು ಮೊದಲು ನೆನಪಿಡಬೇಕು. ಸತ್ಯವು ಅನುಭವವಾಗುವುದು. ಇನ್ನು, ಒಬ್ಬಾತನು ಆಡಿದ ಮಾತಿನ ರೀತಿಯಲ್ಲೇ ಹೇಳುವುದಾದರೆ, ಅದು ಆತನ ಮಾತಿನ ಫಲವಾಗಿರುವುದು. ಉದಾ- ಒಬ್ಬನು ಇನ್ನೊಬ್ಬನಿಗೆ “ಹತ್ತು ಸಾವಿರ ರೂಪಾಯಿಗಳನ್ನು ಕೊಟ್ಟು ಸಹಾಯ ಮಾಡುವೆನು” ಎಂದು ಮಾತು ಕೊಟ್ಟು ಕೊನೆಗೆ ಅವನಿಗೆ ಹತ್ತು ಸಾವಿರದ ಬದಲು ಒಂದು ಲಕ್ಷ ರೂಪಾಯಿಯನ್ನು ದಾನ ಮಾಡುವುದಾದರೆ, ಅತನು ಸತ್ಯವನ್ನು ನಾಶಮಾಡಿದನೇ? ಅದು ಧರ್ಮವೇ ಅಥವಾ ಅಧರ್ಮವೇ? ಇದರ ಉತ್ತರವನ್ನು ಸರಿಯಾಗಿ ಅರಿತು ಕೊಂಡಲ್ಲಿ ಜಗತ್ತೇ ಸರಿಯಾಗಿಬಿಡುವುದು. ಆದುದರಿಂದ ನಾವು ಒಬ್ಬರಿಗೆ ಅಥವಾ ಸಮಾಜಕ್ಕೆ ಮೊದಲಿಗಿಂತ ಹೆಚ್ಚು ಒಳಿತನ್ನು ಉಂಟುಮಾಡುವುದಾದರೆ, ಅಲ್ಲಿ ನಾವು ಮೊದಲಿನ ಸತ್ಯಕ್ಕಿಂತಲೂ ದೊಡ್ಡ ಸತ್ಯವನ್ನು ಸ್ಥಾಪಿಸಿದಂತೆ ಆಗುವುದು. ಒಬ್ಬಾತನಿಗೆ ಸಹಾಯವನ್ನು ಮಾಡಬಾರದು ಎಂಬುವುದು ಮೊದಲ ಆ ಸತ್ಯನಿಷ್ಠನ ಉದಾಹರಣೆಯಲ್ಲಿ ನಮಗೆ ಸತ್ಯನಿಷ್ಠೆಯ ಫಲವಾಗಿ ಕಾಣಿಸುವುದು!! ಆಗ, ಆ ಸತ್ಯ ನಿಷ್ಠೆಯೇ ಮಾನವೀಯತೆ ಶತ್ರುವಾಗುವುದು. ಮಾತ್ರವಲ್ಲ, ಯಾವ ದೇವರೂ ಅದನ್ನು ಸಹಿಸಲಾರನು! ಹೀಗಿರುವಾಗ, ಇನ್ನು, ಈ[ನಂಬಿಕೆಯ] ರೀತಿಯಲ್ಲಿ ಏನು ನಿಷ್ಠೆ, ಏನು ಧರ್ಮ? ಮಾನವನಿಗೆ ಮತ್ತೂ ಹೆಚ್ಚು ಒಳಿತು ಉಂಟಾಗುವ ರೀತಿಯಲ್ಲಿ ಧರ್ಮವನ್ನು ತಿದ್ದುಪಡಿ ಮಾಡುವಲ್ಲಿ, ಎಲ್ಲಾ ಧರ್ಮಗಳಲ್ಲೂ, ಜನರು ಅದಕ್ಕೆ ಒಪ್ಪದೆ, ಬಿಗಿಹಿಡಿದು ಕೂತಿರುವುದು ಇದೇ ಮೂರ್ಖತನದ “ಧರ್ಮನಿಷ್ಠೆ” ಎಂಬ ನಂಬಿಕೆಯ ಅನುಷ್ಠಾನ ರೀತಿಯ ಕಾರಣದಿಂದಾಗಿ ಎಂದು ತಿಳಿಯಬಹುದು. ಇದೇ ಧರ್ಮನಿಷ್ಠೆಯು ಮಹಾತ್ಮರ ಅನುಷ್ಠಾನದ ತರವಾಗಿರುತ್ತಿದ್ದರೆ ಇಂದು ಈ ಜಗತ್ತು ಸ್ವರ್ಗವೇ ಆಗಿರುತ್ತಿತ್ತು!

ಜನರು ಈ ಪ್ರಾಚೀನ ವಾಮಾಚಾರದ ಬಲೆಗೆ ಯಾವೆಲ್ಲಾ ರೀತಿಯಲ್ಲಿ ಸೇರಿಹೋಗಿದ್ದಾರೆ ಎಂದು ಇವು ಸ್ಪಷ್ಟಪಡಿಸುವುವು. ಎಲ್ಲಾ ಧರ್ಮಗಳ ಧರ್ಮಾಂಧ ಜನರು, ತಮ್ಮ ತಮ್ಮ ಧರ್ಮ, ದೇವರುಗಳು ಸರಿ ಎಂದೂ, ಮತ್ತು ಇತರ ಧರ್ಮ, ದೇವರುಗಳು ತಪ್ಪು ಎಂದೂ, ಹಿಂಸೆ, ಮತಾಂತರ, ಇತ್ಯಾದಿಗಳನ್ನು ಮಾಡುವುದು ಈ ರೀತಿಯ “ಧರ್ಮನಿಷ್ಠೆ” ಯ ಪರಿಣಾಮವಾಗಿರುವುದು ಎಂಬುವುದನ್ನೂ ಮರೆಯಬಾರದು. ಈ ಕಾರಣದಿಂದಾಗಿ ಮಾತ್ರ, ಎಲ್ಲಾ ಧರ್ಮಗಳಲ್ಲೂ ಆಚಾರಗಳನ್ನು ನಿತ್ಯವೂ ತಪ್ಪದೆ ಮಾಡುವ ಅತ್ಯಂತ ಧರ್ಮನಿಷ್ಠರುಗಳು ಲಕ್ಷಗಟ್ಟಲೆ ಇದ್ದರೂ, ನಿಜವಾದ ಶಾಂತಿಯು ಈ ಜಗತ್ತಿಗೆ ಸಿಗದೆ ಹೋಗಿರುವುದು!

ದಿವ್ಯಜ್ಞಾನ ಸನ್ನಿಧಿಗೆ ಹೋದಲ್ಲಿ ಅಥವಾ ಮಹಾಜೀವನ ನಡೆಸಿದಲ್ಲಿ ಉತ್ತಮ ಜೀವನ ಸಿಗುವುದು ಎಂದು ಧೈರ್ಯವಾಗಿ ಹೇಳಲು ಹೇಗೆ ಸಾಧ್ಯ?

ದಿವ್ಯಜ್ಞಾನ ಸನ್ನಿಧಿಗೆ ಹೋದಲ್ಲಿ ಅಥವಾ ಮಹಾಜೀವನ ನಡೆಸಿದಲ್ಲಿ ಉತ್ತಮ ಜೀವನ ಸಿಗುವುದು ಎಂದು ಧೈರ್ಯವಾಗಿ ಹೇಳಬಹುದು. ಇದಕ್ಕೆ ಬರೇ ಒಂದು ಉದಾಹರಣೆ ಮಾತ್ರ ಸಾಕಾಗುವುದು. ನೋಡಿ, ಶಾಲಾ ಕಾಲೇಜುಗಳಲ್ಲಿ ಕಲಿತವರು ಅಲ್ಲವೇ ಮುಂದೆ ಈ ಭೂಮಿಯಲ್ಲಿ ಎಲ್ಲೆಡೆಯು ಉತ್ತಮ ಸರಕಾರಿ ಉದ್ಯೋಗ, ಡಾಕ್ಟರು, ಇಂಜಿನಿಯರು, ವಿಜ್ಞಾನಿಗಳು, ಇತ್ಯಾದಿ ಜನರು ಆಗಿರುವುದು? ಹಾಗಿರುವಾಗ, ‘ಶಾಲಾ ಕಾಲೇಜಿಗೆ ಹೋದರೆ ಉತ್ತಮ ಕೆಲಸ ಸಿಗುವುದು’ ಎನ್ನುವುದರಲ್ಲಿ ತಪ್ಪಿದೆಯೇ? ಇಲ್ಲ. ಇದೇ ರೀತಿ, ಮಹಾಜೀವನವು ಉತ್ತಮ ಜೀವನವನ್ನು ಕೊಡುವುದು ಎಂಬುವುದು ಸ್ಪಷ್ಟ. ಇನ್ನು, ಶಾಲಾ ಕಾಲೇಜಿಗೆ ಹೋಗಿಯೂ ಕಲಿಯದೆ ಸೋತ ಮಕ್ಕಳು, ಪೋಲಿ ಮಕ್ಕಳು, ಇತ್ಯಾದಿ ಮಕ್ಕಳು ಇರುವರು. ಅವರು ಶಾಲೆ ಕಾಲೇಜಿಗೆ ಹೋಗಿಯೂ ಕೆಟ್ಟ ಜೀವನವನ್ನು ಪಡೆಯಬಹುದು. ಹಾಗೆಂದು, ಶಾಲಾ ಕಾಲೇಜಿಗೆ ಹೋದರೆ ಉತ್ತಮ ಕೆಲಸ ಸಿಗುವುದಿಲ್ಲ ಕೆಟ್ಟವರಾಗುವರು ಎನ್ನುವುದು ಸರಿಯಾಗುವುದೇ? ಇಲ್ಲ ಅಲ್ಲವೇ? ಇಷ್ಟೆ ಇದರ ಉತ್ತರ. ದಿವ್ಯಜ್ಞಾನ ಸನ್ನಿಧಿ ಅಥವಾ ಮಹಾಜೀವನ ಎಂಬುವುದು ಜೀವನ ಪಾಠಶಾಲೆ. ಇದು, ಇದುವರೆಗೂ ಯಾರೂ ತೆರೆಯದ ಶಾಲೆ ಅಥವಾ ಕಾಲೇಜು ಆಗಿರುವುದು. ಎಲ್ಲರೂ, ವಿದ್ಯೆ ಹಾಗೂ ಧರ್ಮಗಳ ಪಾಠಶಾಲೆಗಳಲ್ಲಿ ಮಾತ್ರ ಗಮನ ಕೇಂದ್ರೀಕರಿಸಿರುವರು ಅಷ್ಟೆ. ಹೀಗಿರುವಾಗ, ಮಹಾಜೀವನವು 65% ಜೀವನಾನಂದವನ್ನು ಪಡೆಯಲಿರುವ ಒಂದು ಸದಾವಕಾಶವನ್ನು ಜನತೆಗೆ ಮಾಡಿಕೊಟ್ಟಿರುವುದು. ಇಲ್ಲಿ, ಸತ್ಯಸಂಧವಾಗಿ ಕಲಿತವರು ಮತ್ತು ಸಾಧನೆ ಮಾಡಿದವರು ಆ ಜೀವನ ಆನಂದವನ್ನು ಪಡೆಯುವರು. ಅದಲ್ಲವಾದರೆ, ಹೆಸರಿಗೆ ಮಾತ್ರ ‘ನಾನು ಮಹಾಜೀವನದಲ್ಲಿದ್ದೇನೆ’ ಎಂದು ಹೇಳುತ್ತಾ, ಮೊದಲಿನಂತೆ ಇದ್ದು, ಜೀವನ ಆನಂದವನ್ನು ಪಡೆಯಲು ಸಾಧ್ಯವಾಗದೆ, ತಮಗೆ ಆನಂದ ಸಿಗಲಿಲ್ಲ ಎಂದು ಮಹಾಜೀವನಕ್ಕೆ ಅಪವಾದವನ್ನು ಹೇರಬಹುದು. ಆದುದರಿಂದಲೇ, ‘ಆ ದೊಡ್ಡ ಮಹಾಜೀವನದ ಲಾಭವು, ಸಾಧನೆ ಮಾಡಲು ತಯಾರಾಗುವವರಿಗೆ ಮಾತ್ರ ಸೀಮಿತವಾಗಿ ಲಭಿಸುವ ನಿಧಿ’ ಎಂದು ಹೇಳುವುದು. ಮಾತ್ರವಲ್ಲ, ಅದಕ್ಕೆ, “ಮನಸಿದ್ದರೆ ಮಾರ್ಗವಿದೆ” ಎಂಬುವುದು ಮಹಾಜೀವನದ ಮಹಾವಾಕ್ಯಗಳಲ್ಲಿ ಒಂದು ಆಗಿರುವುದು ಎಂದು ತಿಳಿಯಬೇಕು.

ಓಂದೇವ ನಿಮ್ಮ ಧರ್ಮ ಯಾವುದು?

ಸತ್ಯ ಪ್ರೀತಿ ನೀತಿಗಳೇ ನನ್ನ ಧರ್ಮ, ಮತ್ತು ಇದು ಅನಾದಿಯಾಗಿದೆ, ಇದಕ್ಕೆ ಒಂದು ಹೆಸರಿನ ಬೇಲಿ ಎಂದಿಗೂ ಸಾಧ್ಯವಿಲ್ಲ. ಆದುದರಿಂದ, ಅವು ಮೂರು ಇಲ್ಲದಿದ್ದಲ್ಲಿ ಅದು ನನ್ನ ಧರ್ಮ ಆಗುವುದಿಲ್ಲ.

ಈ ಭೂಮಿಯ ಆ ಹಲವು ಧರ್ಮ, ಪಂಥಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಅಲ್ಲಿ ನಾವು ಬೆರೆ ಬೇರೆ ಹೆಸರು, ಆಚಾರ, ನಂಬಿಕೆಗಳೆಂಬ ಧರ್ಮದ ಆ ಹೊರಕವಚ ಅಥವಾ ಬೇಲಿಗಳನ್ನೇ ‘ಧರ್ಮ’ ಎಂದು ಎತ್ತಿಹಿಡಿಯುವ ಧರ್ಮಗಳನ್ನು ಕಾಣುವೆವು. ಆಗ, ಸಹಜವಾಗಿಯೂ, ಅಲ್ಲಿ, ದ್ವೇಷ, ಹಿಂಸೆ, ರಕ್ತಪಾತ ಸೃಷ್ಟಿಯಾಗುವುದು. ಇದುವರೆಗೆ ಭಯಾನಕವಾಗಿ ಆಗುತ್ತಾ ಬಂದಿದೆ, ಇನ್ನು ಮುಂದೆಯೂ ಅದು ಆಗುತ್ತಾ ಹೋಗುವುದು! ಇನ್ನು, ‘ಧರ್ಮವು ಶಾಂತಿಗಾಗಿ’ ಎಂದು ಧರ್ಮಗಳು ಹೇಳುತ್ತಾ ಅದರ ವಿರುದ್ಧ ಕರ್ಮವನ್ನು ಮಾಡುತ್ತಾ ಬರುವಾಗ, ಅವು ಅಧರ್ಮವನ್ನು ಕೊಡುತ್ತಾ ಬಂದಿರುವ ಫಲ ಮಾತ್ರವೇ ಅಲ್ಲಿ ಕಾಣಿಸುವುದು. ಈ ಕಾರಣಕ್ಕೆ, ಕತ್ತಲೆಯನ್ನು ಬೆಳಕು ಎಂದು ಹೇಳಲು ಕಷ್ಟವಾಗುವಂತೆ, ಬೇಲಿ ಧರ್ಮಗಳನ್ನು ಧರ್ಮಗಳು ಎಂದು ಹೇಳುವುದಕ್ಕೆ ಕಷ್ಟವಾಗುವುದು ಎಂದು ಮಾತ್ರ ಹೇಳುವೆನು.

ಹಾಗಿದ್ದರೆ ಈಗಿರುವ ಧರ್ಮಗಳು ಬೇಡವೇ?

ತೆಂಗಿನಕಾಯಿ ಬೇಡ ಎಂದು ಹೇಳುವುದಿಲ್ಲ, ಆದರೆ ಅದರ ಚಿಪ್ಪನ್ನೇ ತೆಂಗಿನಕಾಯಿ ಎಂದರೆ ಅದನ್ನು ಹೇಗೆ ಒಪ್ಪಿಕೊಳ್ಳುವುದು? ಆದುದರಿಂದ, ಈಗಿರುವ ಧರ್ಮಗಳು, ಅವುಗಳ ಹೆಸರು, ಆಚಾರ, ನಂಬಿಕೆಗಳೇ ‘ಧರ್ಮ’ ಎಂದು ಬಿಂಬಿಸುವುದನ್ನು ನಿಲ್ಲಿಸಿ, ಅವುಗಳ ಸಾರ ಭಾಗಗಳನ್ನು ‘ಧರ್ಮ’ ಎಂದು ಪ್ರಚಾರ ಮಾಡಲು ಆರಂಭಿಸಬೇಕು ಎಂಬುವುದನ್ನು ಮಾತ್ರ ಇಲ್ಲಿ ಉದ್ದೇಶಿಸಿರುವುದು. ಆದುದರಿಂದ, ನಾನು, ಈಗಿರುವ ಧರ್ಮಗಳು ಬೇಡ ಎಂದು ಹೇಳುವುದಲ್ಲ, ಬದಲು, ಈಗಿರುವ ಬೇಲಿ-ಧರ್ಮಗಳು ಅವುಗಳ ಬೇಲಿಯ ಭಾಗಕ್ಕೆ ಕಡಿಮೆ ಒತ್ತು ಕೊಟ್ಟು, ಅವುಗಳ ಸಾರದ ಭಾಗಕ್ಕೆ ಹೆಚ್ಚು ಒತ್ತು ಕೊಡುವ ‘ಧರ್ಮಗಳ ಶುದ್ಧೀಕರಣ’ ದ ಬಗ್ಗೆ ಮಾತ್ರ ಹೇಳುತ್ತಿರುವುದು ಎಂದು ತಿಳಿಯಬೇಕು.

ಹಾಗಿದ್ದರೆ, ನೀವು ಹಿಂದೆ ಇದ್ದ ಧರ್ಮವು ನಿಮಗೆ ಈಗ ಇಲ್ಲವೇ?

ಸತ್ಯ, ಪ್ರೀತಿ, ನೀತಿಗಳು ನನ್ನ ಹಿಂದಿನ ಧರ್ಮದಲ್ಲಿದೆ ಎಂದಾದರೆ, ನಾನು ಅದರ ಆ ಸಾರ ಭಾಗದಲ್ಲಿ ಮಾತ್ರ ಇರುವೆನು ಎಂಬುವುದು ಸ್ಪಷ್ಟ ಆಗುವುದಿಲ್ಲವೇ? ಇನ್ನು, ಹೊಸತಾಗಿ ಧರ್ಮದ ಬೇಲಿಯನ್ನು ನಾನು ಎಂದಿಗೂ ತಯಾರು ಮಾಡಲಾರೆ, ಯಾಕೆಂದರೆ, ಧರ್ಮದ ಬೇಲಿಯು, ಧರ್ಮವನ್ನು ನಾಶ ಮಾಡುವ ಆ ಭೀಕರ ಕಳೆ ಅಥವಾ ರೋಗ ಆಗಿರುವುದು. ಆದ ಕಾರಣ, ಮತಾಂತರ ಅಥವಾ ಹೊಸಮತ ಇತ್ಯಾದಿಗಳ ಪ್ರಶ್ನೆಯೇ ನನ್ನಲ್ಲಿ ಉದಿಸುವುದಿಲ್ಲ. ಆದರೆ, ‘ನಾನು ಧರ್ಮದ ಸಾರ ಭಾಗದಲ್ಲಿ ಮಾತ್ರ ಇರುವೆನು’ ಎಂದು ಹೇಳುವಾಗ, ಧರ್ಮದ ಸುತ್ತ ಇರುವ ಜಾತಿ, ವರ್ಣ, ಮೇಲು, ಕೀಳು ಭಾವನೆಗಳು, ಅವುಗಳ ಆಚಾರಗಳು, ಅವುಗಳ ನಂಬಿಕೆಗಳು, ಇತ್ಯಾದಿಗಳಲ್ಲಿ ನಾನು ಇರುವುದಿಲ್ಲ ಎಂದು ಅದು ಸ್ಪಷ್ಟಗೊಳಿಸುವುದು. ಯಾವುದೇ ಧರ್ಮವಾದರೂ ಅದಕ್ಕೆ ಈ ‘ಸಾರಭಾಗ’ ವು ಇದ್ದಲ್ಲಿ, ಆ ಸಾರಭಾಗದಲ್ಲಿ ನಾನು ಇರುವೆನು. ಆದರೆ ಎಂದಿಗೂ ಧರ್ಮಗಳ ಭಯಾನಕ ಆ ತಮ್ಮೊಳಗೆ ಬೇರ್ಪಡಿಸುವ, ಹಾಗೂ ದ್ವೇಷ, ಹಿಂಸೆ, ರಕ್ತಪಾತಕ್ಕೆ ಕಾರಣವಾಗುವ, ಹೊರ ಕವಚಗಳಾದ, ಮೇಲು, ಕೀಳು ಭಾವನೆಗಳು, ಆಚಾರಗಳು, ಅವುಗಳ ನಂಬಿಕೆಗಳು, ಇತ್ಯಾದಿಗಳಲ್ಲಿ ನಾನು ಇರುವುದಿಲ್ಲ, ಅಷ್ಟೆ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||