ಪ್ರಶ್ನೆ- ಮದುವೆ ಎಂದರೆ ಅದು ಆಚಾರಗಳ ಆ ಹಲವು ಕ್ರಿಯೆಗಳಲ್ಲ ಎಂದು ನೀವು ಹೇಳುವಿರಿ, ಹಾಗಿದ್ದರೆ ಮದುವೆಯು ಇನ್ನೇನು ಆಗುವುದು?
ಉತ್ತರ- ಮದುವೆ ಎಂದರೆ ಆಚಾರಗಳ ಆ ಹಲವು ಕ್ರಿಯೆಗಳಲ್ಲ. ಮದುವೆಯು ಅದು ಮದುವೆಯಾಗುವ ಆ ಗಂಡು ಮತ್ತು ಹೆಣ್ಣಿನ ಮನಸ್ಸಿನ ಸಂಕಲ್ಪವಾಗುವುದು! ಈಗ, ನಾವು ಈ ‘ಸಂಕಲ್ಪ’ ಏನೆಂದು ಮೊದಲಿಗೆ ತಿಳಿಯಬೇಕು. ಅದರ ಸರಿಯಾದ ಅರ್ಥವಾದಲ್ಲಿ ಮಾತ್ರ ಮುಂದೆ ಮಾತಾಡಲು ಸಾಧ್ಯವಾಗುವುದು. ಸಂಕಲ್ಪ ಎಂದರೆ ಮನಸ್ಸಿನ ಒಳಗೆ ನಡೆಯುವ ಆ ಒಂದು ತೀರ್ಮಾನ ಎಂದು ಹೇಳಬಹುದು. ಉದಾಹರಣೆಗೆ, “ನಾನು ನಾಳೆ ಆ ಕೆಲಸ ಮಾಡಿ ಮುಗಿಸುತ್ತೇನೆ” ಎಂದು ಸಂಕಲ್ಪ ಅಥವಾ ತೀರ್ಮಾನವನ್ನು ನಾವು ಮಾಡಿದರೆ, ನಾಳೆ ನಾವು ಆ ಕೆಲಸವನ್ನು ಮಾಡಿ ಮುಗಿಸುವೆವು. ಆದರೆ ಸಂಕಲ್ಪ ಅಥವಾ ತೀರ್ಮಾನವೇ ಮಾಡದಿದ್ದಲ್ಲಿ ಆ ಕೆಲಸವು ಮಾಡಲ್ಪಡುವುದಿಲ್ಲ! ಅಂದರೆ, ಎಲ್ಲಾ ಕ್ರಿಯೆಗಳೂ ಬಾಹ್ಯದಲ್ಲಿ ನಡೆಯಬೇಕಿದ್ದರೆ [ಹಸಿವು, ಬಾಯಾರಿಕೆ ಇತ್ಯಾದಿ ಪ್ರಕೃತಿಯ ಇಂದ್ರಿಯ ಸಹಜ ಸಂಕಲ್ಪಗಳನ್ನು ಹೊರತುಪಡಿಸಿದಲ್ಲಿ] ಈ ನಮ್ಮ ತೀರ್ಮಾನಗಳು ಅಥವಾ ಸಂಕಲ್ಪಗಳು ಬೇಕೇ ಬೇಕಾಗುವುದು.
ಇನ್ನು, ಈ ಸಂಕಲ್ಪಗಳು ಒಂದೇ ರೀತಿಯವುಗಳೇ ಎಂದು ನೋಡೋಣ. ಸಂಕಲ್ಪಗಳು ಒಂದೇ ರೀತಿಯವುಗಳಲ್ಲ. ಅವುಗಳಲ್ಲಿ ಸಾಮಾನ್ಯ ಸಂಕಲ್ಪ, ದೃಢ ಸಂಕಲ್ಪ, ಪ್ರತಿಜ್ಞಾ ಸಂಕಲ್ಪ ಎಂದೆಲ್ಲಾ ಮನೋ ದೃಢತೆಯ ಹಿನ್ನೆಲೆಯ ಸಂಕಲ್ಪಗಳಿವೆ. ಸಾಮಾನ್ಯ ಸಂಕಲ್ಪದಲ್ಲಿ ಮಾಡುವ ಕೆಲಸವನ್ನು ದೃಢ ಸಂಕಲ್ಪದಲ್ಲಿ ಬೇಗನೇ ಮಾಡಿ ಮುಗಿಸಬಹುದು, ಇನ್ನು ಪ್ರತಿಜ್ಞಾ ಸಂಕಲ್ಪದಲ್ಲಿ ಅಸಾಧ್ಯ ಕೆಲಸಗಳನ್ನೂ ಮಾಡಿ ಮುಗಿಸಲು ಸಾಧ್ಯವಾಗುವುದು. ಮಹತ್ಕಾರ್ಯವನ್ನು ಮಾಡಿದ ಯಾರನ್ನಾದರೂ ಪರೀಕ್ಷಿಸಿದರೆ, ಅವರು ಈ ಮೇಲು ಮೇಲಿನ ಸಂಕಲ್ಪ ರೀತಿಗಳನ್ನು ಅವಲಂಭಿಸಿರುವುದು ತಿಳಿದು ಬರುವುದು. ಆದುದರಿಂದಲೇ ಮಹಾತ್ಮಾರ ಜೀವನವನ್ನು ನಡೆಸುವವರು, ಕೊನೆಯ ಪಕ್ಷ, ಸಾಮಾನ್ಯ ಸಂಕಲ್ಪ ಅಥವಾ ತೀರ್ಮಾನವನ್ನಾದರೂ ತೆಗೆಯಲು ತಯಾರಾಗಬೇಕು ಎನ್ನುವುದು. ಅದೂ ಇಲ್ಲವಾದರೆ, ಅಲ್ಲಿ ಯಾವ ಅನುಷ್ಠಾನವೂ ನಡೆಯದೆ, ಬರೇ ಕಿವಿಯಲ್ಲಿ ಕೇಳಿ ಬಿಡುವ ರೀತಿಯಾಗಿ ಅದು ಮಾರ್ಪಾಟು ಹೊಂದುವುದು ಎಂಬುವುದು ಖಂಡಿತವಾಗಿದೆ.
ಅರಿವು ಎಂಬುವುದು ಸಂಕಲ್ಪದ ಹಂತದಲ್ಲಿ ಇಲ್ಲ ಎಂಬುವುದನ್ನು ನಾವು ಪ್ರತ್ಯೇಕವಾಗಿ ತಿಳಿದಿರಬೇಕು. ಅಲ್ಲಿ ಬರೇ ಓದಿ ಅರಿತು ಇತರರಿಗೆ ಸುಂದರವಾದ ಮಾತುಗಾರಿಕೆಯ ಮೂಲಕ ವಿವರಿಸುವುದು ಮಾತ್ರ ಇರುವುದು. ಆ ರೀತಿಯವರು ಅರಿವನ್ನು ಇತರರಿಗೆ ಹಂಚುವ ಶಾಲಾ ಕಾಲೇಜುಗಳ ಗುರುಗಳ ರೀತಿಯ ಕೆಲಸ ಮಾತ್ರ ಮಾಡುವರು. ಅವರು ಧರ್ಮ, ಆಧ್ಯಾತ್ಮ, ಉಪದೇಶ, ಇತ್ಯಾದಿ ಏನು ಆದರೂ ಅದನ್ನು ಅಚ್ಚುಕಟ್ಟಾಗಿ ಮಾಡುವ ಸಾಮರ್ಥ್ಯವನ್ನು ಪಡೆದಿರುವರು ಅಷ್ಟೆ. ಆದರೆ ಅವರು ತಮ್ಮ ಸ್ವಂತ ಜೀವನದಲ್ಲಿ ಅವನ್ನು ಅನುಷ್ಠಿಸುವುದಿಲ್ಲ. ಅನುಷ್ಠಾನ ಮಾಡುವ ಹಂತ ಬರಬೇಕಿದ್ದರೆ ಆ ತನಗೆ ತಿಳಿದಿರುವ ಅರಿವನ್ನು ತನ್ನ ಜೀವನದಲ್ಲಿ ಸತ್ಯಸಂಧವಾಗಿ ಅಳವಡಿಸಬೇಕಾಗುವುದು. ಅದಕ್ಕೆ ಅಲ್ಲಿ ಪ್ರತ್ಯೇಕವಾಗಿ ಮತ್ತು ಖಂಡಿತವಾಗಿ ಬೇಕಾಗಿರುವುದೇ ಆ ತೀರ್ಮಾನ ಅಥವಾ ಸಂಕಲ್ಪ ಆಗಿದೆ!
ಈಗ, ಮದುವೆ ಎಂಬ ವಿಷಯಕ್ಕೆ ಹಿಂದಿರುಗೋಣ. ಮದುವೆ ಎಂದರೆ ಏನು? ಅದು ಎಲ್ಲಾ ಧರ್ಮಗಳ ಪುರೋಹಿತರ ಮಂತ್ರ, ಮುಂಡಾಸು, ಟೋಪಿ, ಉಂಗುರ, ಮಾಂಗಲ್ಯ, ದೊಡ್ಡ ಔತಣ, ಇತ್ಯಾದಿಗಳೇ? ಇವು ಯಾವುದೂ ಮದುವೆಯಾಗುವುದಿಲ್ಲ, ಯಾಕೆಂದರೆ ಇವು ಯಾವುದೂ ಇಲ್ಲದೆ ಮದುವೆಯು ನಡೆಯುವುದು ಎಂಬುವುದು ಒಂದು ಉತ್ತರವಾದರೆ, ಇನ್ನೊಂದು ಮುಖ್ಯ ಉತ್ತರವು ಅವುಗಳಿಗೆ ದಾಂಪತ್ಯಕ್ಕೆ ಕಾಲಿರಿಸಿದ ಆ ಎರಡು ಮಾನವ ಹೃದಯಗಳನ್ನು ಆತ್ಮೀಯ ಪ್ರೀತಿಯ ಕೊಂಡಿಯಲ್ಲಿ ಎಂದೆಂದಿಗೂ ಒಂದಾಗಿ ಇರಿಸುವ ಶಕ್ತಿ ಇಲ್ಲ ಎಂದಾಗಿದೆ. ಹಾಗಿರುತ್ತಿದ್ದರೆ, ದಾಂಪತ್ಯದಲ್ಲಿ ಇದುವರೆಗೂ ಯಾವ ವಿರಸವೂ ಇಲ್ಲದೆ ಎಲ್ಲರೂ ಅತ್ಯಂತ ಪ್ರೀತಿಯಿಂದ ಈ ಭೂಮಿಯಲ್ಲಿ ಜೀವಿಸಿ ಬರುತ್ತಿದ್ದರು. ಮದುವೆ ಎಂದರೆ, ಪತಿ, ಪತ್ನಿ ಎಂಬ ಎರಡು ಜೀವಗಳು, ಒಟ್ಟಿಗೆ ಇದ್ದು, ಆತ್ಮೀಯ ಪ್ರೀತಿಯ ಆ ಆನಂದದ ದಾಂಪತ್ಯ ಜೀವನವನ್ನು ಕೊನೆಯ ತನಕವೂ ನಡೆಸುವ ಸಂಕಲ್ಪವಾಗುವುದು. ಈ ಸಂಕಲ್ಪವನ್ನು ಪುರೋಹಿತರಿಗೋ ಅಥವಾ ಇನ್ನಾವುದೋ ಔತಣ, ವಾದ್ಯಗಳಿಗೋ ಸೃಷ್ಠಿಸಲು ಸಾಧ್ಯವಿಲ್ಲ. ಅದನ್ನು ಮದುವೆಯಾಗುವ ಆ ಎರಡು ವ್ಯಕ್ತಿಗಳೇ ಸೃಷ್ಟಿಸಬೇಕಾಗಿದೆ. ಸಾಮಾನ್ಯವಾಗಿ, ಮದುವೆ ಕಾರ್ಯಕ್ರಮಗಳು ಆ ಎರಡು ಮದುವೆಯಾಗುವ ವ್ಯಕ್ತಿಗಳಲ್ಲಿ ತಾವು ಮದುವೆಯಾಗಿದ್ದೇವೆ ಎಂಬ ಅರಿವನ್ನು ಮಾತ್ರ ಉಂಟು ಮಾಡುವುದು. ಅಂದರೆ, ಆ ಅರಿವು ಅವರಲ್ಲಿ ಸಂಕಲ್ಪದ ಹಂತಕ್ಕೆ ಏರಿರುವುದಿಲ್ಲ ಎಂದು ಅರ್ಥ. ಬರೇ ಅರಿವಿನ ಹಂತವು ಕ್ರಿಯೆಯನ್ನು ಉಂಟು ಮಾಡುವುದಿಲ್ಲ ಎಂದು ನಾವು ಮೊದಲೇ ತಿಳಿದಿದ್ದೇವೆ. ಇನ್ನು, ಇದೇ ನಿಯಮವು ಮದುವೆಯ ವಿಚಾರದಲ್ಲಿ ಬರುವಾಗ, ಅಲ್ಲಿ, ಅವರ ಆ ಬರೇ ‘ಮದುವೆಯಾದ ಅರಿವು’ ತಮ್ಮೊಳಗೆ ‘ಆತ್ಮೀಯ ಪ್ರೀತಿಯನ್ನು ಬೆಳೆಸುವ ಯಾವ ಕಾರ್ಯವನ್ನೂ ಮಾಡದೆಹೋಗುವುದು’ ಪರಿಣಾಮವಾಗಿ ದಾಂಪತ್ಯವು ಹುಟ್ಟು ಇಲ್ಲದ ದೋಣಿಯ ತರ ಆಗುವುದು! ಪರಿಸ್ಥಿತಿಯು ಹೀಗಿರುವಾಗ, ಅಂಥ ದಾಂಪತ್ಯಗಳಲ್ಲಿ ಕೆಲವೊಂದು ವಿವಾಹ ವಿಚ್ಛೇಧನಕ್ಕೆ ಬಲಿಯಾದರೆ, ಇನ್ನು ಹೆಚ್ಚಿನವು ಅಷ್ಟಕ್ಕೆ ಹೋಗದೆ ಬರೇ ಜಗಳಕಾಯುತ್ತಿರುತ್ತವೆ. ಇನ್ನು, ಅವು ಎರಡರಿಂದಲೂ ಪಾರಾಗಿದ್ದರೆ, ಅಲ್ಲಿ, ದಾಂಪತ್ಯವು ಯಾಂತ್ರಿಕವಾಗಿ ದೂಡಿಕೊಂಡು ಹೋಗುವ ಒಂದು ನೂಕುಗಾಡಿಯ ತರ ಮಾತ್ರ ಇರುವುದು! ಇಂದೇ ಹೀಗಿದ್ದರೆ, ಮುಂದೆ ನೂರಾರು ವರುಷಗಳ ನಂತರ, ಜಗತ್ತಿನ ಎಲ್ಲಾ ಧರ್ಮ, ಪಂಥಗಳ ಈ ಆಚಾರ ಮದುವೆಗಳ ಅವಸ್ಥೆ ಏನಾಗಿರಬಹುದು ಎಂಬುವುದನ್ನು ನಮಗೆ ಈಗ ಸ್ಪಷ್ಟವಾಗಿ ಊಹಿಸಲು ಸಾಧ್ಯವಾಗುವುದು.
ಇಲ್ಲಿ ಮಹಾತ್ಮರ ಜೀವನ ಎಂದು ಹೇಳುವಾಗ, ಮರದಡಿಯ ಮಹಾತ್ಮರ ವಿಚಾರವಾಗಿ ಹೇಳುವುದಲ್ಲ, ಬದಲು ಮನೆ ಮನೆಯ ಆ ಗೃಹಸ್ಥ ಮಹಾತ್ಮರ ವಿಚಾರವಾಗಿ ಹೇಳುವುದು ಎಂದು ಮೊದಲಿಗೆ ತಿಳಿದಿರಬೇಕು. ಈ ಮಹಾತ್ಮರುಗಳಲ್ಲಿ ‘ಮದುವೆ’ ಎಂದರೆ ಮುಖ್ಯವಾಗಿಯೂ ಅದು “ಸಂಕಲ್ಪದ ಮದುವೆ” ಯಾಗಿದೆ. ಅಂದರೆ, ಅಲ್ಲಿ ಆಚಾರ ಮದುವೆಯ ರೀತಿಯನ್ನು ಅನುಸರಿಸಬಾರದು ಎಂದು ಏನೂ ಇಲ್ಲ, ಯಾರಿಗೆ ಬೇಕಾದರೂ ಆಚಾರ ಮದುವೆಯನ್ನು ಅವಲಂಭಿಸಬಹುದು. ಆದರೆ, ಅದು ಇದ್ದರೂ, ಇಲ್ಲಿ, ಪತಿ, ಪತ್ನಿಯರು ತಮ್ಮ ತೀರ್ಮಾನ ಅಥವಾ ಸಂಕಲ್ಪದಲ್ಲೇ ತಮ್ಮ ದಾಂಪತ್ಯವನ್ನು ಬೆಳೆಸಿಕೊಂಡು ಕೊನೆಯ ತನಕ ಜೀವಿಸುವರು ಎಂಬುವುದು ಮುಖ್ಯ ವಿಷಯವಾಗಿದೆ. ಸಂಕಲ್ಪಗಳ ಮೇಲು ಮೇಲಿನ ತೀವ್ರತೆಯ ಹಂತಗಳಾದ ಆ ದೃಢ ಸಂಕಲ್ಪ, ಮತ್ತು ಪ್ರತಿಜ್ಞಾ ಸಂಕಲ್ಪವನ್ನು ಪ್ರಯೋಗಿಸುವಲ್ಲಿ ಅವರು ಮೇಲು ಮೇಲಿನ ಪತಿವ್ರತೆ ಮತ್ತು ಏಕ ಪತ್ನೀವ್ರತಸ್ಥರು ಆಗುವರು. ಈ ರೀತಿಯಲ್ಲಿ, ನಿಜವಾದ ಆ ಸುಂದರ ಜೀವನವನ್ನು ತಮ್ಮ ಜೀವನದ ಕೊನೆಯ ತನಕವೂ ಪಡೆದು ಅವರು ಆನಂದಿಸುವರು.
ಹಿಂದೆ ಪುರಾಣಗಳಲ್ಲಿ ಪತಿಯು ಅಸುರನಾದರೂ ಪತ್ನಿಯು ಪತಿವ್ರತೆ ಎಂಬ ರೀತಿಯನ್ನು ಕಾಣಬಹುದಾಗಿದೆ. ಅದು ಈ ಮನೆ ಮನೆಯ ಈ ಮಹಾತ್ಮರುಗಳ ಜೀವನದಲ್ಲಿ ಇಲ್ಲ ಎಂಬುವುದನ್ನು ತಿಳಿದಿರಬೇಕು, ಆದರೆ ಇಲ್ಲಿರುವುದು, ಎರಡು ಕಡೆಯಿಂದಲೂ ಹರಿದು ಬರುವ ಆ ಆತ್ಮೀಯ ಪ್ರೀತಿಯ ಸಾಗರಗಳ ಪವಿತ್ರ ಪ್ರೇಮದ ಆನಂದ ಬಂಧನವೆಂಬ ಸುಂದರ ಸಂಗಮ ಎಂಬುವುದನ್ನು ನೆನಪಿಡಬೇಕಾಗಿದೆ.ಮದುವೆ ಎಂಬುವುದರ ಸರ್ವನಾಶವೇ ಆ ಪ್ರಾಚೀನ ವಾಮಾಚಾರದ ಎರಡು ಮುಖ್ಯ ಗುರಿಗಳಲ್ಲಿ ಒಂದು ಮುಖ್ಯ ಗುರಿ ಎಂದು ನಾನು ಈ ಮೊದಲೇ ತಿಳಿಸಿದ್ದೇನೆ. ಮದುವೆಯನ್ನು ಮುಂದೆ ಪೂರ್ತಿಯಾಗಿ ಇಲ್ಲದಂತೆ ಮಾಡುವ ಅದರ ಕೆಲಸವು ನಿರಂತರವಾಗಿ ಮುಂದುವರಿಯುತ್ತಾ ಬಂದಿದೆ ಮತ್ತು ಅದು ಇನ್ನೂ ಮುಂದುವರಿಯುತ್ತಾ ಸರ್ವನಾಶವಾಗುವ ತನಕ ಹೋಗುವುದು ಎಂಬುವುದು ಖಚಿತ. ಹೀಗಿರುವಾಗ, ಇನ್ನು, ಈ ಜಗತ್ತಲ್ಲಿ ದಾಂಪತ್ಯ ಜೀವನವನ್ನು ರಕ್ಷಿಸಲು ಮನೆ ಮನೆಯ ಮಹಾತ್ಮರ ಆ ಪವಿತ್ರ ಸಂಕಲ್ಪದ, ಆ ‘ಮನಸ್ಸಾಕ್ಷಿಯ ಮದುವೆ’ ಗೆ ಮಾತ್ರ ಸಾಧ್ಯವಾಗಬಲ್ಲದು ಎಂಬುವುದನ್ನು ನಮಗೆ ಇಲ್ಲಿ ಸ್ಪಷ್ಟವಾಗಿ ಊಹಿಸಿಕೊಳ್ಳಲೂ ಸಾಧ್ಯವಾಗುವುದು.