Table of Contents
ಪರಿಚಯ
ಓಂದೇವ ಅವರು ಬರೋಬ್ಬರಿ ಹದಿನೈದು ವರ್ಷಗಳಷ್ಟು ಸುಧೀರ್ಘ ಕಾಲ ಸೂಕ್ಷ್ಮದ ಬೇಹುಗಾರಿಕೆಯನ್ನು ಮಾಡಿರುವರು. ಆ ಒಟ್ಟು ಹದಿನೈದು ವರುಷಗಳಲ್ಲಿ ಹೆಚ್ಚು ಕಡಿಮೆ ಏಳೆಂಟು ವರುಷಗಳು ಕಳೆದ ನಂತರದಲ್ಲಿ ಮಾತ್ರವೇ ಅವರು ಅದರ ಕುರಿತಾಗಿ ಬರೆಯಲು ಆರಂಭಿಸಿರುವುದು. ನಾವು ಅವರ ಬರಹಗಳನ್ನು ಈ ಜಾಲತಾಣದಲ್ಲಿ ಪ್ರಸ್ತುತಪಡಿಸುವಾಗ, ಅವರ ಆ ಮೊದಮೊದಲ ಬರಹಗಳನ್ನು, ಅದೇ ಕ್ರಮದಲ್ಲಿ, ಆರಂಭದಲ್ಲೇ ಸೇರಿಸಿದ್ದೇವೆ.
ಇಲ್ಲಿ ಒಂದು ಮುಖ್ಯ ವಿಷಯವನ್ನು ನಾವು ಗಮನಿಸಬೇಕಾಗಿರುವುದು. ಅದೇನೆಂದರೆ, ಅವರ ಸೂಕ್ಷ್ಮದ ಬೇಹುಗಾರಿಕೆಯ ಆರಂಭ ಕಾಲದಲ್ಲಿ, ಅವರು, ‘ಅನ್ಯಗ್ರಹಜೀವಿಗಳ ಸೂಕ್ಷ್ಮದ ಆ ಅತಿರಹಸ್ಯ ವ್ಯವಸ್ಥೆ’ ಎಂಬುವುದನ್ನು, ಬರೇ ‘ರಹಸ್ಯ ಪ್ರಾಚೀನ ವಾಮಾಚಾರ’ ಅಥವಾ “ಪ್ರಾಚೀನ ವಾಮಾಚಾರ ಪದ್ಧತಿ” ಎಂದು ಮಾತ್ರ ಕರೆದಿದ್ದರು ಎಂಬುವುದಾಗಿರುವುದು. ಅಂದರೆ, ಅನಂತರದ ವೀಡಿಯೋಗಳಲ್ಲಿ ಅವರು ಹೇಳಿರುವಂತೆ, ಆ ಮೊದಲ ಹಂತದಲ್ಲಿ ಅವರು ಅದನ್ನು ‘ಅನ್ಯಗ್ರಹಜೀವಿಗಳ ಸೂಕ್ಷ್ಮದ ಆ ಅತಿರಹಸ್ಯ ವ್ಯವಸ್ಥೆ’ ಎಂದು ಹೇಳುತ್ತಿರಲಿಲ್ಲ ಎಂದು ಅರ್ಥ. ಹೀಗಿರುವಾಗ, ಎಲ್ಲೆಲ್ಲಾ “ರಹಸ್ಯ ಪ್ರಾಚೀನ ವಾಮಾಚಾರ” ಅಥವಾ “ಪ್ರಾಚೀನ ವಾಮಾಚಾರ ಪದ್ಧತಿ” ಎಂದು ಅವರ ಬರಹಗಳಲ್ಲಿ ಇವೆಯೋ, ಅಲ್ಲೆಲ್ಲಾ, ಅವನ್ನು “ಅನ್ಯಗ್ರಹಜೀವಿಗಳಿಂದ ನಿರ್ಮಿಸಲ್ಪಟ್ಟ ಸೂಕ್ಷ್ಮದ ಆ ಅತಿರಹಸ್ಯ ವ್ಯವಸ್ಥೆ” ಎಂದು ಓದುಗರು ತಿಳಿದುಕೊಂಡಲ್ಲಿ ಅವರು ತಿಳಿಸುವ ವಿಚಾರಗಳು ಮತ್ತೂ ಸ್ಪಷ್ಟವಾಗುವವು ಮತ್ತು ಗೊಂದಲಗಳಿಗೆ ಅವಕಾಶ ಇಲ್ಲದಾಗುವುದು ಎಂದು ತಿಳಿಸುತ್ತೇವೆ.
ಇದು ಧರ್ಮ ಪ್ರಚಾರವಲ್ಲ, ಇದು ಪಂಥ ಸ್ಥಾಪನೆಯ ಪ್ರಯತ್ನವಲ್ಲ, ಆದರೆ ಇದು ಈ ಭೂಮಿಯ ಸರ್ವ ಮಾನವರೂ ಆ ಭಯಾನಕ ರಹಸ್ಯ ಪ್ರಾಚೀನ ವಾಮಾಚಾರಕ್ಕೆ ಮೊಸಹೋಗಿರುವ ಆ ದುರಂತದ ಭಯಾನಕ ರಹಸ್ಯಗಳ ಅನಾವರಣವಾಗಿದೆ.
ಎಲ್ಲಾ ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿರೋಧಾಭಾಸಗಳಿಗೆ ಮತ್ತು ಇದುವರೆಗೂ ತರ್ಕಕ್ಕೆ ನಿಲುಕದೆ ಇದ್ದ ಸರ್ವ ವಿಚಾರಗಳಿಗೂ ಸ್ಪಷ್ಟ ಕಾರಣ ದೊರಕಿರುವುದು! ಭಯಾನಕವಾದರೂ, ಸತ್ಯದ ಅರಿವಿನ ಆಸಕ್ತಿಯನ್ನು ಹೊಂದಿದವರು ಅಚ್ಚರಿಯೊಂದಿಗೆ ಅದನ್ನು ಇಲ್ಲಿ ತಿಳಿದುಕೊಳ್ಳಬಹುದು!
ಈ ಸತ್ಯಗಳನ್ನು, ಬಹಳ ವರುಷಗಳ ತನ್ನ ಧ್ಯಾನದಿಂದ ಸಂಚಯಿಸಿದ ತನ್ನ ಆಧ್ಯಾತ್ಮಿಕ ಶಕ್ತಿಯ ಹಿನ್ನೆಲೆಯ ಪ್ರತ್ಯೇಕ ಸೂಕ್ಷ್ಮ ಲೋಕದ ಬೇಹುಗಾರಿಕೆಯಿಂದ ನಮಗೆ ದೊರಕಿಸಿ ಕೊಟ್ಟಿರುವ ಆ ಓಂದೇವ ಎಂಬವರ ಒಂದು ಮುಖ್ಯವಾದ ಮಾತಿನೊಂದಿಗೆ ನಾವು ಅವರ ಮಾತುಗಳನ್ನು ಜಗತ್ತಿಗೆ ತಿಳಿಸುವ ಸೇವೆಯನ್ನು ಆರಂಭಿಸುತ್ತೇವೆ.
ಒಂದು ವಿಚಾರಕ್ಕೆ ಹಲವು ಸತ್ಯಗಳಿದ್ದಲ್ಲಿ ಅವುಗಳು ಹಲವು ಅಸತ್ಯಗಳಾಗುವವು ಯಾಕೆಂದರೆ ಯಾವುದೇ ಘಟನೆಗೆ ಅಥವಾ ವಿಚಾರಕ್ಕೆ ಸತ್ಯವು ಎಂದಿಗೂ ಒಂದಕ್ಕಿಂತ ಹೆಚ್ಚು ಇರುವುದಿಲ್ಲ.
ಓಂದೇವ ಅವರು ಹಗಲು ರಾತ್ರಿ ಕಷ್ಟಪಟ್ಟು ಕಂಡುಹಿಡಿದ, ಸೂಕ್ಷ್ಮ ಲೋಕದ ಆಳದಲ್ಲಿ ಅಡಗಿರುವ, ಆ ಸೂಕ್ಷ್ಮ ಜೀವಿಗಳ ಅಸ್ತಿತ್ವಗಳ ರಹಸ್ಯ ಸತ್ಯಗಳ ಅನುಭವದ ಒಟ್ಟು ಮಾತುಗಳನ್ನು ಈ ಕೆಳಗಿನ ಶೀರ್ಷಿಕೆಗಳು ಪ್ರತಿಫಲಿಸುವವು.
ಮಾನವಕುಲಕ್ಕೆ ಇದುವರೆಗೂ ತಿಳಿಯದ ಭಯಾನಕ ಸೂಕ್ಷ್ಮಲೋಕ ಜೀವಿಗಳ ಆಟ ಬಹಿರಂಗ!!
ಮಾನವರೆಲ್ಲರೂ ಇದುವರೆಗೂ ಮೋಸ ಹೋದ, ಸೂಕ್ಷ್ಮ ಲೋಕದ, ಆ ಭಯಾನಕ ರಹಸ್ಯ ಸತ್ಯಗಳ ಅನಾವರಣ!!
ಮಾನವರೆಲ್ಲರೂ ಸೇರಿ ಇದಕ್ಕೆ ಪರಿಹಾರವನ್ನು ಯಾವುದಾದರೂ ರೀತಿಯಲ್ಲಿ ಕಂಡುಹಿಡಿಯದಿದ್ದಲ್ಲಿ, ಸರ್ವನಾಶ ಕಟ್ಟಿಟ್ಟ ಬುತ್ತಿಯಾಗುವುದು, ಸಂಶಯವಿಲ್ಲ!!
ಜಗತ್ತು ಬೆಳಕನ್ನು ಸತ್ಯಕ್ಕೆ ಹೋಲಿಸಿದೆ. ಯಾಕೆಂದರೆ ಬೆಳಕಿನಡಿಯಲ್ಲಿ ಮಾತ್ರ ನಮಗೆ ನಮ್ಮ ಸುತ್ತಮುತ್ತಲೂ ಏನಿವೆಯೋ, ಅವುಗಳು ಅದೇ ರೀತಿಯಲ್ಲಿ ಕಾಣಿಸುವುದು. ಆದರೆ ನಸು ಬೆಳಕಲ್ಲಿ ಅಥವಾ ಕತ್ತಲಲ್ಲಿ, ಹಗ್ಗವನ್ನು ಹಾವೆಂದು ಭ್ರಮಿಸಿದಂತೆ ಅಥವಾ ಹಾವನ್ನು ಹಗ್ಗವೆಂದು ಭ್ರಮಿಸಿದಂತೆ, ಏನಿದೆಯೋ ಅವುಗಳ ಅಸತ್ಯ ರೂಪವು ಸತ್ಯವೆಂದು ಭ್ರಮಿಸಲ್ಪಡುವುದು. ಇದು ಜನರಲ್ಲಿ ಗೊಂದಲ, ಅಶಾಂತಿಯನ್ನು ಸೃಷ್ಟಿಸುವುದು. ಪರಿಣಾಮವಾಗಿ ಹಿಂಸಾಚಾರವು ಸದಾಚಾರದ ರೂಪ ಪಡೆದು, ಮತ್ತು ಅನೈತಿಕತೆಯು ನೈತಿಕತೆಯ ಸಿಂಹಾಸನದಲ್ಲಿ ಕುಳಿತು ಜಗತ್ತನ್ನು ಆಳಲಾರಂಭಿಸುವುದು. ಇದರಿಂದ ಜನರ ಜೀವನವು ದುಃಖ, ನೋವುಗಳಿಂದ ಕಣ್ಣೀರಿಡುವುದು. ಆದುದರಿಂದ ಸತ್ಯದ ಬೆಳಕಿನ ದಾರಿದೀಪವು ಮಾನವನಿಗೆ ಅನಿವಾರ್ಯವಾಗಿದೆಯೆಂದು ತಿಳಿಯಬಹುದು.
ಒಬ್ಬ ವಿಜ್ಞಾನಿ ಮಾತ್ರ ಹೇಳುವುದಾದರೆ, ಮತ್ತು ಇತರ ವಿಜ್ಞಾನಿಗಳು ಒಪ್ಪದಿದ್ದರೆ, ಅದನ್ನು ‘ಸತ್ಯ’ ಎಂದು ಹೇಳುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ಆದರೆ ಅದನ್ನು ಎಲ್ಲಾ ವಿಜ್ಞಾನಿಗಳೂ ಪರೀಕ್ಷಿಸಿ ಒಪ್ಪಿಕೊಂಡಿದ್ದರೆ ಅದು ‘ಸತ್ಯ’ ಎಂದು ಹೇಳಬಹುದು. ಅದೇ ರೀತಿ, ಪರಸ್ಪರ ವಿರುದ್ಧ ಇರುವ ಈ ಧರ್ಮ, ಪಂಥಗಳಲ್ಲಿ ಹೇಳಿರುವ ಎಲ್ಲವೂ ಸತ್ಯ ಎಂದು ಹೇಳುವುದಕ್ಕೂ ಸಾಧ್ಯವಾಗುವುದಿಲ್ಲ. ಆದರೆ, ಎಲ್ಲಾ ಧರ್ಮ, ಪಂಥದವರು ಒಪ್ಪಿಕೊಳ್ಳುವ ಆ ಧರ್ಮ, ಪಂಥಗಳ ಆ ಪ್ರತ್ಯೇಕ ಭಾಗವು ಮಾತ್ರ ಸತ್ಯ ಎಂದಾಗುವುದು. ಆದುದರಿಂದ, ಮುಕ್ತ-ದೃಷ್ಟಿ ಎಂಬ ಬೆಳಕು ಮಾತ್ರ ಪರಮ ಸತ್ಯವನ್ನು ಜಗತ್ತಿಗೆ ಕರುಣಿಸಬಲ್ಲದು, ಎಂದು ಓಂದೇವ ಅವರು ಹೇಳುವರು.
ಓಂದೇವ ಅವರ ಆಧ್ಯಾತ್ಮಿಕ ಜೀವನದಲ್ಲಿ ಉಂಟಾದ ಒಂದು ದೊಡ್ಡ ತಿರುವು
ಸ್ನಾತಕೋತ್ತರ ಪದವೀಧರರೂ, ಸರಕಾರಿ ನೌಕರರೂ ಆಗಿ ಜೀವನ ಆರಂಭಿಸುವಾಗ ಓಂದೇವ ಅವರು ಆಧ್ಯಾತ್ಮಿಕ ಜೀವನದತ್ತಲೂ ಆಸಕ್ತಿಯನ್ನು ತಾಳಿದರು. ಅದುವರೆಗೂ ತನ್ನ ರೀತಿಯ ತತ್ವ ಶಾಸ್ತ್ರದ ಮತ್ತು ವಿಚಾರಗಳ ಗುಂಗಿನಲ್ಲಿದ್ದ ಅವರನ್ನು ಅದ್ವೈತ ಸಿದ್ಧಾಂತವು ಆಕರ್ಷಿಸಿತು. ಅದ್ವೈತದ ಆಕರ್ಷಣೆಯೊಂದಿಗೆ ಸರ್ವ ಧರ್ಮಗಳ ಸ್ವರೂಪವೆಂದೇ ಕಾಣಿಸಿದ ರಾಮಕೃಷ್ಣ ಪರಮಹಂಸರು ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ಮೌಢ್ಯತೆಗಳನ್ನು ಎತ್ತಿ ತೋರಿಸಿ ಜಗತ್ತಿಗೆ ಧರ್ಮ, ಪಂಥ, ಜಾತಿಗಳಿಗೆ ಅತೀತವಾದ ಮಾನವನ ವ್ಯಕ್ತಿತ್ವವನ್ನು ಎತ್ತಿ ಹಿಡಿದ ವಿವೇಕಾನಂದ ಸ್ವಾಮಿಗಳು ಹಾಗೂ ಇತರ ಅವರಂತೆ ಜಗತ್ತಿನ ಎಲ್ಲೆಡೆ ಜೀವಿಸಿ ಹೋದ ಮಹಾತ್ಮರ ಜೀವನಗಳು ಓಂದೇವ ಅವರನ್ನು ತುಂಬಾ ಆಕರ್ಷಿಸಿದವು. ಹೀಗೆ, ಮೊದಲು ಮೋಕ್ಷ, ಅನಂತರ ಆಧ್ಯಾತ್ಮಿಕ ಸೇವೆ ಎಂಬ ನಿರ್ಧಾರದೊಂದಿಗೆ, ಮೊದಲೇ ನಿಶ್ಚಯಿಸಿದಂತೆ, ಜೀವಂತ ಗುರುವಿನ ಮೂಲಕವಲ್ಲದ, ಮಾನಸ ಗುರುವಿನ ಸಂಕಲ್ಪದಲ್ಲಿ, ಸ್ವತಃ ಸಂನ್ಯಾಸವನ್ನು ಸ್ವೀಕರಿಸಿದರು. ಒಂದುವರೆ ವರುಷ ಅಖಂಡ ಮೌನವೃತ, ಮತ್ತು ಇಂದ್ರಿಯ ನಿಗ್ರಹಕ್ಕಾಗಿ ಹುಳಿ, ಖಾರ, ಸಿಹಿ ಇತ್ಯಾದಿಗಳನ್ನು ವರ್ಜಿಸಿ, ಒಟ್ಟು ಎರಡುವರೆ ವರುಷಗಳ ಕಠಿಣ ಸಾಧನೆಯ ನಂತರ ಸಂನ್ಯಾಸ ಜೀವನಕ್ಕೆ ದೇಹ ಮನಸ್ಸುಗಳನ್ನು ಯೋಗ್ಯವಾಗಿಸಿ, ಪವನಗಿರಿ ಎಂಬಲ್ಲಿ ತಾವೇ ವಿವೇಕಾನಂದ ಸ್ವಾಮಿಗಳ ಹೆಸರಲ್ಲಿ ಸ್ಥಾಪಿಸಿದ ಆಶ್ರಮದ ಒಂದು ಕುಟೀರದಲ್ಲಿ ತಮ್ಮ ಸಾಧನೆಯನ್ನು ಮುಂದುವರಿಸಿದರು. ಆದರೆ ಆ ಸಾಧನೆಯ ದಾರಿಯಲ್ಲಿ ಅವರ ಜೀವನದ ಒಂದು ದೊಡ್ಡ ತಿರುವು ಉಂಟಾಯಿತು. ಅದುವೇ, ಅವರಿಗಾದ, ಸೂಕ್ಷ್ಮ ಲೋಕದಲ್ಲಿ ಅತ್ಯಂತ ರಹಸ್ಯವಾಗಿ ಅಡಗಿಕೊಂಡಿರುವ, ಆ ಪ್ರಾಚೀನ ವಾಮಾಚಾರ ಶಕ್ತಿಗಳ ಪ್ರಭಾವದ ಅರಿವು ಆಗಿದೆ. ಅವರಿಗೆ ಮೊದಮೊದಲು ಎಲ್ಲಾ ಗೊಂದಲವಾಗಿತ್ತು. ಆ ಅನುಭವಗಳನ್ನು ಅವರು ಭೂಮಿಯಲ್ಲಿ ಸಾಮಾನ್ಯವಾಗಿ ಮಾಡುವ ವಾಮಾಚಾರವೆಂದು ತಪ್ಪು ತಿಳಿದಿದ್ದರು, ಯಾಕೆಂದರೆ ಅವೆಲ್ಲಾ ಆಧ್ಯಾತ್ಮಿಕ ಚರಿತ್ರೆಯಲ್ಲೇ ಎಲ್ಲೂ ಇದುವರೆಗೂ ಹೇಳದ ಅನುಭವಗಳಾಗಿದ್ದವು. ಮುಂದೆ ಮುಂದೆ ಹೋದಂತೆ ಅವರಿಗೆ ಎಲ್ಲವೂ ಸ್ಪಷ್ಟವಾಗತೊಡಗಿತು. ಅವರು ತನ್ನ ಸೂಕ್ಷ್ಮ ಶಕ್ತಿಯ ಸಹಾಯದಿಂದ ಅವುಗಳ ಸರ್ವ ರಹಸ್ಯಗಳನ್ನು ತಿಳಿಯಲೆಂದು, ಸೂಕ್ಷ್ಮ ವಲಯಗಳಲ್ಲಿ, ಬೇಹುಗಾರಿಕೆಯನ್ನು ಆರಂಭಿಸಿದರ ಪರಿಣಾಮವಾಗಿ ಮಾತ್ರ ಈ ರಹಸ್ಯ ಸತ್ಯಗಳು ತಿಳಿದು ಬಂದಿರುವುದು, ಮತ್ತು ಅದರಲ್ಲಿ ತುಂಬಾ ಮುಂದುವರಿದಾಗ ಎಲ್ಲಾ ರಹಸ್ಯಗಳು ಹೊರಬಂದವು. ಓಂದೇವ ಅವರು ಹೇಳುವ ರೀತಿಯಲ್ಲಿ ಅವೆಲ್ಲಾ ಸೂಕ್ಷ್ಮ ಲೋಕದ ಚರಿತ್ರೆಯಲ್ಲಿ ಎಲ್ಲೂ ಹೇಳದ ಮತ್ತು ಕೇಳದ ಅತಿ ಭಯಾನಕ ರಹಸ್ಯಗಳಾಗಿವೆ. ಅವುಗಳ ಸಾರ್ವತ್ರಿಕ ಪ್ರಭಾವದಿಂದ ಪಾರಾಗಲು ಮತ್ತು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತ್ರ ಓಂದೇವರು, ಸಂನ್ಯಾಸವೂ ಸೇರಿದಂತೆ, ಈ ಹಿಂದಿನ ತನ್ನ ಸರ್ವ ಆಧ್ಯಾತ್ಮಿಕ ರೀತಿಗಳನ್ನು ತ್ಯಜಿಸಬೇಕಾಗಿ ಬಂದಿರುವುದು ಎಂಬುವುದನ್ನು ತಿಳಿಯಬೇಕಾಗಿದೆ. ಈ ಭಯಾನಕ ವಿಪತ್ತಿನ ಪರಿಹಾರಕ್ಕೆ ಪ್ರಯತ್ನ ಪಡುವುದೆಂದರೆ ಜೀವವನ್ನು ಪಣಕ್ಕೆ ಇಡುವ ಒಂದು ಪಂಥವೆಂಬುವುದನ್ನು ನಾವು ಅರಿಯಬೇಕು. ಆದರೂ “ಏನೇ ಆಗಲಿ ಮತ್ತು ಯಾರು ಏನೇ ತಿಳಿಯಲಿ, ನಾನು ಈ ಜಗತ್ತಿನ ಜನರಿಗೆ ಮುಂಬರುವ ದುರಂತಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಿಯೇ ಮಾಡುವೆನು” ಎಂದು ಅವರು ಕೊನೆಯ ತೀರ್ಮಾನವನ್ನು ಮಾಡುತ್ತಾರೆ. ಆ ಪ್ರಾಚೀನ ವಾಮಚಾರದ ರಹಸ್ಯಗಳನ್ನು ಅರಿಯಲು ಸಾಧ್ಯವಾದುದೇ, ಅವರಿಗೆ, ಅದಕ್ಕನುಸರಿಸಿ, ಒಂದು ತನ್ನದೇ ಧನಾತ್ಮಕ ಶಕ್ತಿಯ ವ್ಯವಸ್ಥೆಯನ್ನು ಅದರ ವಿರುದ್ಧ ಸೃಷ್ಟಿಸಲು ಸಾಧ್ಯವಾಗಿರುವುದು ಎಂದು ಅವರು ಹೇಳುವರು. ಮಾತ್ರವಲ್ಲ, ಆ ವಾಮಾಚಾರ ವ್ಯವಸ್ಥೆಯು, ಹಲವು ಸಹಸ್ರ ವರುಷಗಳು ಕಳೆದುದರ ಪರಿಣಾಮವಾಗಿ ಅತಿ ಶಕ್ತಿಶಾಲಿಯಾಗಿದ್ದರೂ, ಅವುಗಳು ಅತಿ ಪುರಾತನ ವ್ಯವಸ್ಥೆಯಾದುದರಿಂದ ಅವುಗಳಲ್ಲಿ ಹಲವು ಕೊರತೆಗಳು ಇರುವವೆಂದೂ, ಮತ್ತು ಆ ಪ್ರಾಚೀನ ವ್ಯವಸ್ಥೆಯ ಆ ಕೊರತೆಗಳ ಅರಿವು ಕೂಡಾ ಇನ್ನೊಂದು ರೀತಿಯಲ್ಲಿ ಓಂದೇವ ಅವರ ಹೊಸ ಧನಾತ್ಮಕ ವ್ಯವಸ್ಥೆಯ ಶಕ್ತಿ ವರ್ಧನೆಗೆ ತುಂಬಾ ಸಹಾಯಕವಾಯಿತು ಎಂದೂ ಅವರು ಹೇಳಿರುವರು. ಹಾಗಿಲ್ಲವಾಗಿರುತ್ತಿದ್ದರೆ, ಎಂದಿಗೂ ಆ ಭಯಾನಕ ಶಕ್ತಿಗಳ ವಿರುದ್ಧ ನಿಲ್ಲಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ ಎಂದೂ ಸ್ಪಷ್ಟವಾಗಿ ಹೇಳಿರುವರು. ಈ ಪರಿಹಾರ ಪ್ರಯತ್ನದ ಉದ್ದೇಶ ಮಾತ್ರಕ್ಕಾಗಿ ಅವರು “ಓಂದೇವ” ಎಂಬ ಹೊಸ ಹೆಸರಿನ ದೇವಶಕ್ತಿಯಾಗಿ, ಹೋರಾಟದ ಆರಂಭದಲ್ಲೇ, ತನ್ನ ಧ್ಯಾನಶಕ್ತಿ ಎಲ್ಲವನ್ನೂ ಬದಲಾಯಿಸಿಕೊಂಡಿರುವುದು ಎಂದು ತಿಳಿಯಬೇಕು. ಈ ಉದ್ದೇಶವಲ್ಲದೆ ‘ಓಂದೇವ’ ಎಂಬ ದೇವ ಸಂಕಲ್ಪದ ಸೃಷ್ಟಿಗೆ ಬೇರೆ ಉದ್ದೇಶಗಳಿರಲಿಲ್ಲ. ಆದರೆ ಇದನ್ನು ತಪ್ಪು ತಿಳಿದುಕೊಂಡ ಸಮಾಜದ ಕಿಡಿಗೇಡಿಗಳು ಅವರಿಗೆ ತೊಂದರೆಯನ್ನು ಕೊಟ್ಟದರ ಪರಿಣಾಮವಾಗಿ ಈಗ ಓಂದೇವ ಅವರು ಪವನಗಿರಿಯಿಂದ ಬೇರೆಕಡೆ ಇದ್ದು, ಅವರಷ್ಟಕ್ಕೆ ಆ ತನ್ನ ರೀತಿಯ ಧನಾತ್ಮಕ ಶಕ್ತಿಯನ್ನು ಬೆಳೆಸುತ್ತಿದ್ದಾರೆ, ಮತ್ತು ಅವರು ಹೇಳುತ್ತಿರುವಂತೆ ಅವರ ಜೀವನದ ಕರ್ತವ್ಯವನ್ನು ಮಾಡುತ್ತಿದ್ದಾರೆ.
ತನಗೆ ಬಯಲಾದ ಸೂಕ್ಷ್ಮದ ಆ ಪ್ರಾಚೀನ ವಾಮಾಚಾರದ ರಹಸ್ಯಗಳನ್ನು ಜಗತ್ತಿನ ಮುಂದಿಡುವುದರೊಂದಿಗೆ ತನ್ನ ಮುಖ್ಯ ಕರ್ತವ್ಯವು ಮುಗಿಯಿತು ಎಂದು ಓಂದೇವ ಅವರು ಹೇಳುವರು. ಅವರ ದೇವಸಂಕಲ್ಪ, ಮತ್ತು ಅದರ ಮೂಲಕ, ಮುಂದೆ ಬರಲಿರುವ ಆಪತ್ತಿಗಿರುವ ಪರಿಹಾರ ಮಾರ್ಗವು, ಅದು ಅವರ ರೀತಿಯ ಒಂದು ಪ್ರಯತ್ನ ಮಾತ್ರವಾಗಿದೆ ಎಂದು ಹೇಳುವರು. ಮಾತ್ರವಲ್ಲದೆ, “ಜನರು ಇಂದು ನಂಬುವರೋ, ಬಿಡುವರೋ ಎಂಬುವುದು ಮುಖ್ಯವಲ್ಲ, ಆದರೆ ಮುಂದೆ ಆ ದೊಡ್ಡ ಆಪತ್ತು ಹತ್ತಿರ ಬರುತ್ತಿರುವಾಗ ಸಹಜವಾಗಿಯೇ ಈ ಎಲ್ಲಾ ಅಂಶಗಳನ್ನು, ಸತ್ಯವೆಂದು, ಸ್ಪಷ್ಟವಾಗಿ ಜನರು ಅರಿಯುವರು” ಎಂದು ಅವರು ಹೇಳಿರುವರು. ಆ ಆಪತ್ತಿನ ಕಾಲಕ್ಕೆ ತನ್ನ ಮಾತುಗಳು, ಜನರಿಗೆ ಅವರಷ್ಟಕ್ಕೆ ಒಂದು ಪರಿಹಾರ ಮಾರ್ಗವನ್ನು, ಸಾಧ್ಯವಾದಲ್ಲಿ, ಕೂಡಲೇ ಕಂಡುಕೊಳ್ಳಲು, ಸಹಕರಿಸುವುದು ಎಂದೂ ಹೇಳಿರುವರು.
ಓಂದೇವ ಅವರು ಜಗತ್ತಿನ ಮುಂದಿಟ್ಟ ಹಲವು ಸೂಕ್ಷ್ಮದ ರಹಸ್ಯ ವಿಚಾರಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದಂತಿರುವ ಇತರ ವಿಚಾರಗಳನ್ನು ಬೇಕಾದಲ್ಲಿ ಬೇಕಾದಂತೆ ಸೇರಿಸಿ ಓದುಗರಿಗೆ ಸತ್ಯಗಳು ಹೆಚ್ಚು ಮನದಟ್ಟಾಗುವಂತೆ ಈ ಕೆಳಗೆ ವಿವರಿಸಿದ್ದೇವೆ. ಇದರಿಂದ ಓದುವ ವೇಳೆ ಸಂಶಯಗಳು ಉದಯವಾಗುವುದು ಕಡಿಮೆಯಾಗಬಹುದು. ಈ ಕೆಳಗಿನ ವಿವರಣೆಗಳಲ್ಲಿ ಓಂದೇವರವರ ಸಾರ್ವತ್ರಿಕ ಸಂದೇಶಗಳೊಂದಿಗೆ, ಕೆಲವು ಪ್ರಶ್ನೋತ್ತರಗಳನ್ನೂ ಸೇರಿಸಿದ್ದೇವೆ. ಇವು ಜನಸಾಮಾನ್ಯರ ಹಲವು ಸಂಶಯಗಳನ್ನು ಪರಿಹರಿಸುವುದು. ಸಂಶಯಗಳು ಮತ್ತೂ ಇದ್ದಲ್ಲಿ, ಅದನ್ನು ಓದುಗರು ನಮಗೆ ತಿಳಿಸಿದಲ್ಲಿ, ಅದರ ಉತ್ತರವನ್ನು ಇದರಲ್ಲೇ ಮುಂದೆ ಪ್ರಕಟ ಮಾಡುವ ವ್ಯವಸ್ಥೆಯನ್ನೂ ಮಾಡಿದ್ದೇವೆ. ಈ ವಿಚಾರವಾಗಿರುವ ವಿವರಣೆಯನ್ನು ಕೊನೆಯ ಪುಟದಲ್ಲಿ ಕೊಡಲಾಗಿದೆ.
ಓಂದೇವರವರ ಮಾತುಗಳು
ಓಂದೇವರವರು ಮೊಟ್ಟ ಮೊದಲಾಗಿ ಜಗತ್ತಿನ ಸರ್ವರಲ್ಲೂ ಸ್ಪಷ್ಟವಾಗಿ ತಮ್ಮ ಬಗ್ಗೆ ತಿಳಿದಿರಲು ಹೇಳಿರುವ ಕೆಲವು ಮುಖ್ಯ ವಿಚಾರಗಳು ಈ ಕೆಳಗಿನಂತಿವೆ. ಅವರು ಹೇಳುವ ಪ್ರಕಾರ ಅವರ ಹೆಸರನ್ನು ತಿಳಿಯುವ ಮೊದಲೇ ಈ ವಿಚಾರಗಳನ್ನು ಜನರು ತಿಳಿದಿರಬೇಕೆಂದಾಗಿದೆ, ಅಂದರೆ, ಅಷ್ಟಕ್ಕೂ ಅನಿವಾರ್ಯವಾಗಿ ಅವರ ಕುರಿತು ಮೊದಲಲ್ಲೇ ತಿಳಿಯಬೇಕಾದ ವಿಷಯಗಳಿವು ಎಂದು ಅರ್ಥ.
1. ನಾನು ಸೂಕ್ಷ್ಮದ ಆ ಪ್ರಾಚೀನ ವಾಮಾಚಾರದ ರಹಸ್ಯ ಸತ್ಯಗಳನ್ನು ಕಂಡದ್ದು ಕಥೆಯಲ್ಲ ಬದಲು ಪರಮ ಸತ್ಯವೆಂದು ಹೇಳುವೆನು. ಆದರೆ ಅದನ್ನು ಮುಂದಿಟ್ಟುಕೊಂಡು ನನಗೆ ಒಂದು ಧರ್ಮವನ್ನಾಗಲೀ ಅಥವಾ ಪಂಥವನ್ನಾಗಲೀ ಸೃಷ್ಟಿಸುವ ಉದ್ದೇಶ ಎಂದೂ ಇಲ್ಲ ಎಂದು ತಿಳಿಸುವೆನು. ಯಾಕೆಂದರೆ ಹಾಗೆ ಮಾಡಿದ್ದಲ್ಲಿ, ಈವರೆಗೆ ಆಗಿಹೋಗಿರುವ ಎಲ್ಲಾ ಧರ್ಮ, ಪಂಥಗಳ ತಮ್ಮೊಳಗಿನ ಹೊಡೆದಾಟದ ಅನುಭವದ ಹಿನ್ನೆಲೆಯಲ್ಲಿ, ಅದು ಎಂದಿಗೂ ಈ ಜಗತ್ತಿಗೆ ನೆಮ್ಮದಿಯನ್ನು ತರಲಾರದು ಎಂಬುವುದು ಖಂಡಿತವಾಗಿ ಹೇಳಬಹುದು. ಅದಕ್ಕಿಂತಲೂ ಹೆಚ್ಚಾಗಿ ಈ ತಮ್ಮೊಳಗೆ ಹೊಡೆದಾಡುವ ಧರ್ಮ, ಪಂಥಗಳು ಆ ಪ್ರಾಚೀನ ವಾಮಾಚಾರವು ತಮ್ಮ ಗುರಿಯನ್ನು ತಲುಪಲು ಪ್ರಯೋಗಿಸುವ ಅಸ್ತ್ರಗಳು ಮಾತ್ರವೆಂದು ಅತ್ಯಂತ ಸ್ಪಷ್ಟವಾಗಿ ತಿಳಿದಿರುವೆನು!! ಎಲ್ಲಾ ಧರ್ಮಗಳ ಆಧಾರ ಅಥವಾ ಸಾರವಾದ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯನ್ನು “ನಮಗೆ ಮಾತ್ರ” ಎಂದು ಹೇಳಿಕೊಳ್ಳುವುದು ಅತ್ಯಂತ ಮೂಢತನ ಎಂಬುವುದು ಇನ್ನೊಂದು ಪರಮ ಸತ್ಯವಾಗಿದೆ. ನಾನು ಏನಾದರೂ ಹೇಳುವುದಾದರೂ ಮತ್ತು ಬರೆಯುವುದಾದರೂ ಅದರ ಮುಖ್ಯ ಉದ್ದೇಶವು ಆ ಪ್ರಾಚೀನ ವಾಮಾಚಾರದ ಭಯಾನಕ ಪ್ರಭಾವವನ್ನು ಅರಿಯದೆ ದುರಂತಗಳಿಗೆ ಒಳಗಾಗುತ್ತಿರುವ ಮಾನವನು ಹೇಗಾದರೂ ಮಾಡಿ ಯಾವುದಾದರು ರೀತಿಯಲ್ಲಿ ಅವುಗಳಿಂದ ರಕ್ಷಣೆ ಪಡೆಯಲಿ ಎಂಬ ಉದ್ದೇಶದಿಂದ ಮಾತ್ರವಾಗಿದೆ. ನಿಮ್ಮ ಮಗುವನ್ನು ನಿಮ್ಮದೇ ಧರ್ಮದ ಒಬ್ಬ ಧರ್ಮಾಂಧನು ದೇವರ ಹೆಸರಲ್ಲಿ ಕೈಗೆತ್ತಿ ಕೊಲ್ಲಲು ಹೊರಟರೆ, ಆಗ ನೀವು ದೇವರ ಹೆಸರಲ್ಲಿ ಮಗುವನ್ನು ಕೊಲ್ಲಲಿ ಎಂದು ಸುಮ್ಮನಿರುವಿರೇ? ಅಥವಾ “ದೇವರು ಹಾಗೆಂದೂ ಬಯಸಲಾರ, ನನ್ನ ಮಗುವಿನ ಪ್ರಾಣ ಆತ ಬಯಸಲಾರ, ದಯವಿಟ್ಟು ಮಗುವನ್ನು ಕೊಲ್ಲಬೇಡಿ” ಎಂದು ಬೇಡುವಿರೇ? ನೀವು ನಿಮ್ಮ ಮಗುವಿನ ಪ್ರಾಣವನ್ನು ದೇವರು ಬಯಸಲಾರ ಎನ್ನುವಿರಿ ಖಂಡಿತ. ಅದೇ ರೀತಿಯಲ್ಲಿ, ಯಾವ ಧರ್ಮದ ದೇವರೂ ಇತರ ಧರ್ಮದ ಮಾನವನನ್ನು ಚುಚ್ಚಿ ಕೊಂದು ಹಾಕು ಎನ್ನಲಾರ, ಆದರೆ, ಎಲ್ಲಾ ಧರ್ಮಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಧರ್ಮಾಂಧರಿಂದ ಕೊಲೆಗಳು ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ, ಅಲ್ಲಿ ಮಗುವಿನ ತಂದೆ ಬೇಡಿಕೊಂಡಂತೆ, ಜಗತ್ತಿನ ಆ ರೀತಿಯ ಜನರಲ್ಲಿ ನಾನು ಒಬ್ಬ ಸಾಮಾನ್ಯ ಮಾನವನಾಗಿ “ಮಾನವರನ್ನು ಕೊಲ್ಲಬೇಡಿ, ಹಿಂಸಿಸಬೇಡಿ, ಆ ರೀತಿಯ ಹಿಂಸೆಯು ಧರ್ಮ ಎಂದೂ ಆಗಲಾರದು ಬದಲು ಧರ್ಮದ
ನಾಶವಾಗುವುದು” ಎಂದು ಕೇಳಿಕೊಳ್ಳುತ್ತೇನೆ. ನನ್ನ ಪ್ರತಿ ಮಾತು ಹಾಗೂ ಬರಹವು ಈ ಉದ್ದೇಶಮೂಲದಿಂದ ಮಾತ್ರ ಹುಟ್ಟಿ ಬರುವವು ಎಂಬುವುದನ್ನು ಎಲ್ಲಾ ಕಾಲದಲ್ಲೂ ಮರೆಯಬಾರದು ಎಂದು ಮಾತ್ರ ಜಗತ್ತಿನ ಸರ್ವರಲ್ಲೂ ನಾನು ಕೇಳಿಕೊಳ್ಳುತ್ತಿರುವುದು. ಆ ಪ್ರಾಚೀನ ವಾಮಾಚಾರದ ಭಯಾನಕ ರಹಸ್ಯ ಸತ್ಯಗಳು ತಿಳಿದ ಹಿನ್ನೆಲೆಯಲ್ಲಿ ಅದು ನಿಮಗೆ ತಿಳಿಸಿಬಿಡುವುದೊಂದೇ ನನ್ನ ಜೀವನದ ಉದ್ದೇಶ ಹಾಗೂ ಕರ್ತವ್ಯವಾಗಿರುವುದು.
2. ನನಗೆ ಯಾವ ಪ್ರತ್ಯೇಕ ಜಾತಿ, ಧರ್ಮ, ಪಂಥಗಳಿಲ್ಲ. ನಾನು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಗಳನ್ನು ಮಾತ್ರ ಧರ್ಮ ಮತ್ತು ದೇವರೆಂದು ಅನುಸರಿಸುವ ಒಬ್ಬ ಸಾಮಾನ್ಯ ಮಾನವ ಅಷ್ಟೆ. ಆದುದರಿಂದ ನಾನು ಯಾವ ಧರ್ಮ, ಪಂಥಗಳ ಪರವೋ ಅಥವಾ ವಿರೋಧವೋ ನಿಲ್ಲುವುದಿಲ್ಲ. ಅದೇ ರೀತಿ, ನಾನು ಯಾವ ರಾಜಕೀಯ ಪಕ್ಷದಲ್ಲೂ ಇಲ್ಲವೆಂಬ ಕಾರಣಕ್ಕೆ ನನ್ನ ಮಾತುಗಳು ಯಾವ ಪಕ್ಷವನ್ನು ನಿಂದಿಸುವುದು ಅಥವಾ ಎತ್ತಿ ಹಿಡಿಯುವುದು ಇಲ್ಲ ಎಂದೂ ತಿಳಿಯಬೇಕಾಗಿದೆ. ಯಾಕೆ ಈ ರೀತಿ ಹೇಳುತ್ತಿದ್ದೇನೆ ಎಂದರೆ, ಆ ಪ್ರಾಚೀನ ವಾಮಾಚಾರದ ಅತ್ಯಂತ ಮೋಸದ ರೀತಿಗಳಲ್ಲಿ ಒಂದು ಮುಖ್ಯವಾದದ್ದು ಮಾನವನ “ವಿಭಜನೆ”ಯಾಗಿದೆ. ಅದನ್ನು ಯಾರಿಂದಾದರೂ ಮಾಡಿಸಲು ಅದು ಎಲ್ಲಾ ಕಾಲದಲ್ಲೂ ಹೊಂಚು ಹಾಕುತ್ತಿರುವುದು. ಆದುದರಿಂದಲೇ ನನ್ನ ಹೃದಯದ ಉದ್ದೇಶವನ್ನು ನಿಮ್ಮ ಮುಂದೆ ನೇರವಾದ ಮಾತುಗಳಲ್ಲಿ ಹೇಳಬೇಕಾಯಿತು. ಜಗತ್ತಿಗೆ ಶಾಂತಿ ಬರುವುದೆಂದು ಕಂಡಲ್ಲಿ, ಆ ಪ್ರಾಚೀನ ವಾಮಾಚಾರವು, ಅಲ್ಲಿ, ಹಲವು ರೀತಿಗಳ ಸಹಾಯದಿಂದ ವಿಭಜನೆಯನ್ನು ಸೃಷ್ಟಿಸಿ ಶತ್ರುತ್ವವು ಬೆಳೆಯುವಂತೆ ಮಾಡುವುದು ಮತ್ತು ಆ ರೀತಿಯಲ್ಲಿ ಅದು ಜಗತ್ತಿಗೆ ಶಾಂತಿ ಬಾರದಂತೆ ಮಾಡುವುದು!
3. ನಾನು ಹೇಳುವ ಮಾತುಗಳು ಯಾರನ್ನೂ ಯಾವುದಕ್ಕೂ ಒತ್ತಾಯಿಸುವುದಕ್ಕಲ್ಲ, ಆದರೆ ಕಾಲವು ಮುಂದೆ ಎಲ್ಲರಿಗೂ ಸತ್ಯವನ್ನು ಬಡಿಸುವುದು, ಆಗ ಈ ಎಲ್ಲಾ ಹಿಂಸೆಗಳಿಂದ ಪಾರಗುವ ಮಾರ್ಗವನ್ನು ಹುಡುಕಲು ನೀವೇ ಮುಂದಾಗುವಿರಿ, ಆಗ ಈ ನನ್ನ ಮಾತುಗಳಲ್ಲಿರುವ ಸತ್ಯವು ಪೂರ್ಣ ರೂಪದಲ್ಲಿ ಅರ್ಥವಾಗುವುದು.
4. ನನ್ನ ಬರಹದಲ್ಲಿ ಅಕ್ಷರ ತಪ್ಪುಗಳಿರಬಹುದು, ಅದೇ ರೀತಿ ವ್ಯಾಕರಣ ತಪ್ಪುಗಳೂ ಇರಬಹುದು. ಆದರೆ ಸತ್ಯಸಂಧತೆ ಮತ್ತು ನೈತಿಕತೆಗಳಲ್ಲಿ ಮಾತ್ರ ಯಾರಿಗೂ ತಪ್ಪನ್ನು ಕಂಡುಹಿಡಿಯಲು ಸಾಧ್ಯವಾಗಲಾರದು, ಯಾಕೆಂದರೆ ನಾನು ಈ ಭೂಮಿಯಲ್ಲಿ ಜೀವಿಸುವುದು ಅದಕ್ಕಾಗಿ ಮಾತ್ರವಾಗಿದೆ. ಆದುದರಿಂದ ಮನೆಯಲ್ಲಿ ಕುಳಿತು ಅಪವಾದಗಳನ್ನು ಹೇರಲು ಅಂದಾಜು ಮಾಡುವವರು ಯಾರಾದರೂ ಇದ್ದಲ್ಲಿ, ದಯವಿಟ್ಟು, ನನ್ನ ಕುರಿತಾದ ಪೂರ್ಣ ಚಿತ್ರಣವನ್ನು ಪಡೆಯುವ ಮುನ್ನ ಅದನ್ನು ಆರಂಭಿಸದಿರುವುದು ಒಳಿತು ಎಂದು ಕೇಳಿಕೊಳ್ಳುವೆನು.
ಪ್ರಾಚೀನ ವಾಮಾಚಾರ
ಜಗತ್ತಿನ ಪ್ರತಿ ಮಾನವನಿಗೂ ವಾಮಾಚಾರದ ಕುರಿತು ತಿಳಿದಿದೆ, ಅದೇ ರೀತಿ ಅಸುರ ಅಥವಾ ಸೈತಾನನ ಕುರಿತೂ ತಿಳಿದಿದೆ. ಇವೆಲ್ಲವನ್ನೂ ಎಲ್ಲರ ಧರ್ಮಗಳಲ್ಲಿ ವಿವರಿಸಿದ್ದಾರೆ. ಅದೇನೇ ಇರಲಿ, ಈ ಒಂದು ಪ್ರತ್ಯೇಕ ಪ್ರಾಚೀನ ವಾಮಾಚಾರದ ಇರುವಿಕೆಯನ್ನು ಜಗತ್ತು ಮೊದಲೇ ಪತ್ತೆಹಚ್ಚಿರುತ್ತಿದ್ದರೆ ಈ ಜಗತ್ತು ಇಂದಿನ ಸ್ಥಿತಿಯಲ್ಲಿರುತ್ತಿರಲಿಲ್ಲ, ಬದಲು ಜನರು ಅದಕ್ಕೆ ತಕ್ಕ ಪರಿಹಾರವನ್ನು ಅಂದೇ ಕಂಡುಹಿಡಿಯುತ್ತಿದ್ದರು ಮತ್ತು ಆ ಮೂಲಕ ಒಂದು ಶಾಶ್ವತ ಸತ್ಯಯುಗವು ಸೃಷ್ಟಿಯಾಗುತ್ತಿತ್ತು! ಆದರೆ ಅದು ಆಗಿಲ್ಲ, ಇದಕ್ಕೆ ಕಾರಣ ಆ ಪ್ರತ್ಯೇಕ ಪ್ರಾಚೀನ ವಾಮಾಚಾರದ ಮೋಸವು ಸಹಸ್ರ ಸಹಸ್ರ ವರುಷಗಳಿಂದಲೂ ಯಾರಿಗೂ ತಿಳಿಯದೆ ರಹಸ್ಯವಾಗಿಯೇ ಉಳಿದಿರುವುದು ಆಗಿದೆ!
ಮಾನವ ಕಾಡಿನಲ್ಲಿರುವಾಗಲೇ ವಾಮಚಾರ ಕ್ಷುದ್ರ ಶಕ್ತಿಗಳನ್ನು ಬಳಸುತ್ತಿದ್ದನು. ಆತ ಕಾಡಿನಿಂದ ನಾಡಿಗೆ ಬಂದು ಹಲವು ಸಹಸ್ರ ವರುಷಗಳು ಕಳೆದ ನಂತರವೇ ಸ್ವಲ್ಪ ಪ್ರಾಮಾಣಿಕನಾಗುವ ಪ್ರಯತ್ನವನ್ನು ಆರಂಭಿಸಿರುವುದು. ಮಾನವ ಜನಾಂಗದ ಸತ್ಯ, ಧರ್ಮ, ದೇವರು ಇತ್ಯಾದಿ ಮಾತುಗಳ ಆರಂಭವೇ ಹಲವು ಸಾವಿರ ವರುಷಗಳ ನಂತರವಾಗಿರುವುದು! ಅದುವರೆಗೂ ಜಗತ್ತಿನಾದ್ಯಂತ ಬೆಳೆದು ಬಂದಿರುವುದು ಹಲವು ವಾಮಾಚಾರ ಪದ್ದತಿಗಳು, ಮತ್ತು ಅವುಗಳ ಕ್ಷುದ್ರ ಶಕ್ತಿಗಳು!
ವಾಮಾಚಾರ ಶಕ್ತಿಗಳನ್ನು ಮಾನವನು ಕಾಡಿನಲ್ಲಿ ಬೆಳೆಸಿ ನಾಡಿಗೆ ತಂದ ನಂತರ ಅದನ್ನು ವ್ಯವಸ್ಥಿತ ರೂಪಕ್ಕೆ ತಂದನು. ಅಂದಿನಿಂದ ಹಲವು ಸಹಸ್ರ ವರುಷಗಳು ಕಳೆದ ನಂತರವೇ ಹಲವು ಧನಾತ್ಮಕ ದೇವತಾ ಶಕ್ತಿಗಳ ಆರಾಧನೆಯು ಆರಂಭವಾಗಿರುವುದು. ಅನಂತರದಲ್ಲಿ ಮಾತ್ರವೇ, ಸೃಷ್ಟಿಗೆ ಒಂದು ಕಾರಣವನ್ನು ಮಾನವನು ಹುಡುಕಲು ಪ್ರಯತ್ನಿಸಿರುವುದು. ಆಗ ಬಹಳ ಸುಲಭದಲ್ಲಿ ಸಿಕ್ಕಿದ ಕಾರಣವೇ ಆ ‘ಸೃಷ್ಟಿಕರ್ತ’ ದೇವರು. ಅಲ್ಲಿಂದ ಆತನು ತನ್ನ ಧನಾತ್ಮಕ ದೇವತಾ ಶಕ್ತಿಯನ್ನು ಆ ಸೃಷ್ಟಿಕರ್ತ ದೇವರೆಂದು ಸಂಕಲ್ಪಿಸಿ ಪೂಜಿಸಲು ಮತ್ತು ಬೆಳೆಸಲು ಆರಂಭಿಸಿದನು. ಇದರ ಪರಿಣಾಮವೇ ಆ ದೇವಶಕ್ತಿಗಳು ಅನಂತರದಲ್ಲಿ, ಸೂಕ್ಷ್ಮದಲ್ಲಿ ಮಾನವರಿಗೆ ನೀಡುವ ಆ ದೇವ ದರ್ಶನಗಳಲ್ಲಿ, ತಮ್ಮನ್ನು ತಾವು ‘ಸೃಷ್ಟಿಕರ್ತ’ ಎಂದು ಹೇಳಿಕೊಳ್ಳಲು ಆರಂಭಿಸಿದವು! ಅವು ಜಗತ್ತಿನಾದ್ಯಂತ ಅಲ್ಲಲ್ಲಿ ಕಾಣಿಸಿಕೊಂಡು ತಾನು ಸೃಷ್ಟಿಕರ್ತ ಅಥವಾ ಆತನ ಅಂಶ ಇತ್ಯಾದಿ ಎಂದು ಹೇಳಲು ಆರಂಭಿಸಿದವು! ಅದು ಇಂದಿಗೂ ಮುಂದುವರಿಯುತ್ತಾ ಇದೆ. ನಾನು ಸೂಕ್ಷ್ಮ ವಲಯಗಳಲ್ಲಿನ ರಹಸ್ಯಗಳನ್ನು ತಿಳಿದ ಸಂದರ್ಭದಲ್ಲಿ ಸ್ಪಷ್ಟವಾಗಿ ಕಂಡದ್ದು ಈ ಸತ್ಯವನ್ನೇ ಎಂದು ತಿಳಿಸುತ್ತೇನೆ.
ಈ ಸೂಕ್ಷ್ಮ ವಲಯಗಳಲ್ಲಿ, ಸಾಮಾನ್ಯರಿಗೂ ತಿಳಿಯುವ ಆ ಮೇಲಿನ ಸ್ಥರಗಳು ಮತ್ತು ಆಳದ ರಹಸ್ಯ ಸ್ಥರಗಳೆಂದು ಹಲವು ಸ್ಥರಗಳು ಇವೆ. ಅವುಗಳಲ್ಲಿ ಮೇಲಿನ ಸ್ಥರಗಳಲ್ಲಿ ಸಾಮಾನ್ಯ ವಾಮಾಚಾರ ಶಕ್ತಿಗಳು ಮತ್ತು ಧನಾತ್ಮಕ ದೇವತಾ ಶಕ್ತಿಗಳು ಕಾಣಸಿಗುವವು. ಆದರೆ ಈ ಪ್ರತ್ಯೇಕ ಪ್ರಾಚೀನ ವಾಮಾಚಾರ ಮಾತ್ರ ಅತ್ಯಂತ ರಹಸ್ಯ ವಲಯಗಳಲ್ಲಿದ್ದು ಅವುಗಳು ಹೊರಗೆ ಕಾಣಿಸದೆ, ತನ್ನ ಕೆಲಸವನ್ನು ಈ ಮೇಲಿನ ಸ್ಥರಗಳ ಆ ಋಣಾತ್ಮಕ ಮತ್ತು ಧನಾತ್ಮಕ ಶಕ್ತಿಗಳ ರಹಸ್ಯ ನಿಯಂತ್ರಣಗಳ ಮೂಲಕವೇ ರಹಸ್ಯವಾಗಿ ಮಾಡಿಸಿಕೊಳ್ಳುವವು!! ತಾವು ಆ ಪ್ರಾಚೀನ ವಾಮಾಚಾರದ ನಿರ್ದೇಶನದ ಪಾತ್ರಧಾರಿಗಳು ಎಂದು ಆ ಮೇಲಿನ ಸ್ಥರದ ಯಾವ ಶಕ್ತಿಗಳಿಗೂ ತಿಳಿದಿಲ್ಲ, ಎಲ್ಲವೂ ತಾವು ಸ್ವತಂತ್ರ ಶಕ್ತಿಗಳೆಂದೇ ತಿಳಿದುಕೊಂಡಿವೆ! ಇತ್ತ, ಭೂಮಿಯ ಜನರಿಗೆ ಅವುಗಳ ರಹಸ್ಯ ಯೋಜನೆಗಳ ಬಗ್ಗೆ ಯಾವ ಸಂಶಯವೂ ಬಾರದಿರಲು ಬೇಕಾಗಿ, ಅವುಗಳು ಎಲ್ಲಾ ಧರ್ಮ, ಪಂಥ ಇತ್ಯಾದಿಗಳ ಮೂಲಕವೂ, “ಈ ಜಗತ್ತಿನ ಜನರು ಕಾಲಹೋದಂತೆ ಹೆಚ್ಚು ಹೆಚ್ಚು ಕೆಟ್ಟವರು ಆಗುವರು” ಎಂದು ಒಂದೇ ರೀತಿಯಲ್ಲಿ ತಿಳಿಸಿರುವುದು, ಮತ್ತು ಅವುಗಳು ಮುಂದೆ ಮಾಡಲು ಉದ್ದೇಶಿಸುವ ಹಲವು ಯೋಜನೆಗಳನ್ನು ಭವಿಷ್ಯವಾಣಿಗಳ ಮೂಲಕ ಸಾವಿರಾರು ವರುಷಗಳ ಮೊದಲೇ ತಿಳಿಸಿರುವವು. ಈ ರೀತಿಯಲ್ಲಿ ಜನರು, ಅವೆಲ್ಲ ದೇವರ ಆಟವೆಂದು ನಂಬಿ ಮುಂದೆ ಅದಕ್ಕೆ ಕಾರಣವನ್ನು ಹುಡುಕುವುದನ್ನೇ ನಿಲ್ಲಿಸಿದರು!
ಈ ರಹಸ್ಯ ಸತ್ಯಗಳು ನನಗೆ ಹಲವು ವರುಷಗಳ, ನಿರಂತರ, ಸೂಕ್ಷ್ಮ ಲೋಕದಲ್ಲಿನ ಬೇಹುಗಾರಿಕೆಯ ಪರಿಶ್ರಮದ ಫಲವಾಗಿ ತಿಳಿದಿರುವುದು. ಅಂದರೆ, ಈ ವರೆಗೆ ಎಲ್ಲರೂ ಹೇಳಿರುವಂತೆ, ಯಾವುದೇ ಸೂಕ್ಷ್ಮ ಶಕ್ತಿಯು ಬಂದು ನನ್ನಲ್ಲಿ ಹೇಳಿದ ಮಾತುಗಳು ಅಲ್ಲ ಎಂದು ಅರ್ಥ. ದೇವರು ತನ್ನ ಅತ್ಯಂತ ಉತ್ತಮರಾದ ಭಕ್ತರನ್ನೂ ರಕ್ಷಿಸದೆ ಇರಲು ಕಾರಣ, ಮತ್ತು ಅವರು ಭಯಾನಕ ಕಷ್ಟಕ್ಕೆ ತುತ್ತಾಗುವಂತೆ ಮಾಡುವುದರ ರಹಸ್ಯ ಈಗ ಬಯಲಾಯಿತು! ಈ ಪ್ರಾಚೀನ ವಾಮಾಚಾರದ ಈ ಕೈವಾಡವನ್ನೇ ಆ [ದೇವರಿಂದಲೂ ಬದಲಾಯಿಸಲು ಸಾಧ್ಯವಾಗದ] ಹಣೆಬರಹ ಎಂದು ಹೇಳುವುದು ಅಥವಾ ದೇವರ ಪರೀಕ್ಷೆ, ದೇವರ ಲೀಲೆ ಎಂದೆಲ್ಲಾ ಹೇಳಿ ಸಮಾಧಾನ ಮಾಡಿಕೊಳ್ಳುವುದು ಎಂದೂ ತಿಳಿಯುವುದು. ಯಾಕೆಂದರೆ, ದೇವರು ತನ್ನ ಉತ್ತಮ ಭಕ್ತರನ್ನು ಅಷ್ಟು ಭೀಕರ ದುಃಖ, ನೋವಿಗೆ ತುತ್ತಾಗುವಂತೆ ಯಾವಕಾಲಕ್ಕೂ ಮಾಡಲಾರ, ಮತ್ತು ತಂದೆಯಾಗಿ ಕರುಣೆಯನ್ನು ತೋರಬೇಕಾದವನು ಬೆಕ್ಕು, ಇಲಿಯನ್ನು ಹಿಂಸಿಸಿ ಕೊಲ್ಲುವಂತೆ ಪರೀಕ್ಷೆಮಾಡಿ ಸಂತೋಷಪಡಲಾರನು. ಎಲ್ಲಾ ಧರ್ಮಗಳು ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಈ ರೀತಿ ಹಿಂಸೆ, ರಕ್ತಪಾತ ಮಾಡುತ್ತಿರುವುದು ಇದೇ ಕಾರಣಕ್ಕಾಗಿ. “ನಾವೆಲ್ಲಾ ದೇವರ ಮಕ್ಕಳು” ಎಂದು ಹೇಳುತ್ತಾ, ಎಲ್ಲರ ಕಣ್ಣ ಮುಂದೆಯೇ ಜಾತೀಯತೆಯ ಭೀಕರ ಶೋಷಣೆಯ ಕ್ರೌರ್ಯವನ್ನು ಮಾನವನು ಮೆರೆಸಲೂ ಇದೇ ಕಾರಣವಾಗಿದೆ. ಯಾಕೆಂದರೆ ದೇವರ ಹೆಸರೆತ್ತುವವರು, ಧರ್ಮವನ್ನು ಬೋಧಿಸುವವರು, ಯಾವ ಕಾಲಕ್ಕೂ ಮಾಡಲು ಸಾಧ್ಯವಾಗದ ಕರ್ಮಗಳನ್ನು, ಆ ಜಾತೀ ಶೋಷಣೆ ರೀತಿಯಲ್ಲಿ ಮತ್ತು ಧರ್ಮಾಂಧತೆಯ ರಕ್ತಪಾತದ ರೀತಿಯಲ್ಲಿ, ಮಾಡಿರುವುದನ್ನು ನಮಗೆ ಇತಿಹಾಸದ ಪುಟಗಳಲ್ಲಿ ಹಾಗೂ ನಮ್ಮ ಕಣ್ಣೆದುರು ಕಾಣಲು ಸಾಧ್ಯವಾಗುವುದು! ಈ ವಾಮಾಚಾರಕ್ಕೆ ನಿರಂತರ ಬೆಳೆಯಲು ಅಗತ್ಯವಾದ ಎರಡು ಮುಖ್ಯ ಮಾನವ ಭಾವನೆಗಳು ಎಂದರೆ, ಆ ಹಿಂಸೆಯ ಭಾವನೆ ಮತ್ತು ಅನೈತಿಕ ಕಾಮಭಾವನೆ ಆಗಿರುವುದು. ಹಿಂಸೆಯನ್ನು, ಮನೆ ಜಗಳದಿಂದ ಹಿಡಿದು ಹಲವು ರೀತಿಯ ಯುದ್ಧಗಳ ವರೆಗಿನ ಎಲ್ಲದರ ಸಹಾಯದಿಂದ ಅದು ಪಡೆಯುವುದು, ಅದೇ ರೀತಿ ಭೂಮಿಯಲ್ಲಿ ಅನೈತಿಕ ಕಾಮ ವರ್ಧನೆಯನ್ನುಂಟು ಮಾಡುವ ಹಲವು ವಿಧಾನಗಳನ್ನು ಉಪಯೋಗಿಸಿ ಅದು ಅದನ್ನೂ ಪಡೆಯುತ್ತಲೇ ಬಂದಿರುವುದು. ಈ ಅನೈತಿಕ ಕಾಮವರ್ಧನೆಯನ್ನು ಉಂಟುಮಾಡಬೇಕಾದರೆ ಅದು ಜಗತ್ತಿನಲ್ಲಿ ಸ್ವಾರ್ಥ ಮತ್ತು ಅನೈತಿಕತೆಯನ್ನು ಹೆಚ್ಚಿಸಲೇ ಬೇಕಾಗುವುದು. ಇಲ್ಲವಾದರೆ ಆ ಕೆಲಸಗಳಿಗೆ ಯಾರೂ ತಯಾರಾಗುವುದಿಲ್ಲ. ಜನರನ್ನು ನಿಧಾನವಾಗಿ ಆ ಅನೈತಿಕ ಜೀವನಕ್ಕಾಗಿ ಪ್ರೇರೇಪಿಸುತ್ತಾ, ಇಂದು ಅದು ಶಾಲಾ ಕಾಲೇಜುಗಳಲ್ಲೂ ಮಕ್ಕಳು ಬಹಳ ಸುಲಭವಾಗಿ ಕಾಮಾಸಕ್ತಿ ತೀರಿಸಿಕೊಳ್ಳುವ ವರೆಗೆ ತಲುಪಿದೆ!! ಜಗತ್ತಿನಲ್ಲಿ ಇಷ್ಟೆಲ್ಲಾ ಧರ್ಮ, ಪಂಥಗಳಿದ್ದೂ, ಅದೇ ರೀತಿ, ಸಾವಿರಾರು ದೇವರುಗಳಿದ್ದೂ ಈ ಹಿಂಸೆ, ಅನೈತಿಕತೆಗಳ ವರ್ಧನೆಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗಿಲ್ಲ! ಆ ಪ್ರಾಚೀನ ವಾಮಾಚಾರದ ಪ್ರಭಾವವು ಎಲ್ಲದರಲ್ಲೂ ಹಬ್ಬಿ ಮುಂದುವರಿಯುತ್ತಾ ಬರುತ್ತಿದೆ ಎಂಬ ತಿಳುವಳಿಕೆಯು ಇದುವರೆಗೂ ಇಲ್ಲವಾಗಿರುವುದೇ ಅದನ್ನು ನಿಯಂತ್ರಿಸಲು ಯಾರಿಂದಲೂ ಆಗಿಲ್ಲವೆಂಬುವುದಕ್ಕೆ ಕಾರಣ ಎಂದು ಹೇಳಬಹುದು.
ಧರ್ಮ, ಪಂಥಗಳಲ್ಲಿ ಅಸುರ, ಸೈತಾನ ಎಂದೆಲ್ಲಾ ಹೇಳಿವೆ, ಆದರೆ ಆ ಶಕ್ತಿಗಳು ಸೂಕ್ಷ್ಮ ಸ್ಥರಗಳ ಆ ಮೇಲಿನ ಸ್ಥರಗಳಲ್ಲಿ ಮಾತ್ರ ಕಾಣಿಸುವಂಥವುಗಳಾಗಿವೆ. ಆದರೆ ಅವುಗಳ ಮೂಲಕ ಆಳದ ಸ್ಥರಗಳಲ್ಲಿರುವ ಆ ಪ್ರಾಚೀನ ವಾಮಾಚಾರ ಶಕ್ತಿಗಳು, ರಹಸ್ಯವಾಗಿ, ತಮಗೆ ಸಾಧ್ಯವಾಗುವಷ್ಟು ಕೆಲಸವನ್ನು ಮಾಡಿಸುವವು! ಜಗತ್ತಿನ ಮಾನವನ ಎಲ್ಲಾ ಆಚಾರಗಳಲ್ಲೂ, ಸಿದ್ಧಿಗಳಲ್ಲೂ ಹಾಗೂ ಮಾನವ ಬುದ್ದಿಯಲ್ಲೂ ಆ ಪ್ರಾಚೀನ ವಾಮಾಚಾರದ ದೂರದ [ನಿಜವಾಗಿಯೂ ಅವು ರಹಸ್ಯವಾಗಿ ಹತ್ತಿರವೇ ಇವೆ] ನಿಯಂತ್ರಣವಿರುವುದು! ತಮ್ಮ ರಕ್ತದಾಹಕ್ಕಾಗಿ, ಜನರನ್ನು ತಮ್ಮೊಳಗೆ ವಿಭಜಿಸುವಂತೆ, ಧರ್ಮಗಳೊಳಗಿದ್ದು, ಅವು ಪ್ರೇರೇಪಿಸುವವು, ಆಗ ಮುಗ್ಧ ಮಾನವರು ಅವುಗಳ ಅಣತಿಯಂತೆ ಮನುಷ್ಯರನ್ನು ಮನುಷ್ಯರಿಂದ ಆ ದೇವರ ಹೆಸರಲ್ಲಿ ಬೇರ್ಪಡಿಸಿ, ಅನಂತರ ತಾವೇ ತಮ್ಮೊಳಗೆ ಕೊಚ್ಚಿಹಾಕಿ ಆ ಪ್ರಾಚೀನ ವಾಮಾಚಾರದ ಸೇವೆಯನ್ನು ಮಾಡುವರು!!
ಈ ಭೂಮಿಯನ್ನೇ ಭೀಕರ ಹಿಂಸೆಯ ತಾಣವನ್ನಾಗಿ ಮಾಡುವುದು ಮತ್ತು ಈ ಭೂಮಿಯನ್ನು ಒಂದು ವೇಶ್ಯಾಲಯವಾಗಿಸುವುದು ಅವುಗಳ ಆತ್ಯಂತಿಕವಾದ ಗುರಿಗಳಲ್ಲಿ ಮುಖ್ಯವಾದ ಎರಡು ಗುರಿಗಳಾಗಿರುವವು.
ಪ್ರಾಚೀನ ಕಾಲದಿಂದಲೂ ನೈತಿಕವನ್ನು ಅನೈತಿಕವಾಗಿ ಬದಲಾಯಿಸುತ್ತಾ ಬರುವ ಆ ಪ್ರಾಚೀನ ವಾಮಾಚಾರದ ರಹಸ್ಯಗಳನ್ನು ತಿಳಿಯದೆ ಇಂದೂ ಜಗತ್ತು ಕತ್ತಲಲ್ಲಿದೆ. ವಿವಿಧ ಧರ್ಮಗಳೂ ಸೇರಿದಂತೆ ಜಗತ್ತು ಇಂದೂ ನಂಬಿರುವುದು ಕಾಲ ತಾನಾಗಿಯೇ ಕಾರಣವಿಲ್ಲದೆ ಕೆಟ್ಟು ಹೋಗುವುದೆಂದು! ದೇವರು ಜಗತ್ತಿಗೆ ಬಂದಲ್ಲಿ ಅದು ದೊಡ್ಡ ಬೆಳಕಾಗಬೇಕು. ಈ ಭೂಮಿಯಲ್ಲಿ ಇಷ್ಟೆಲ್ಲಾ ದೇವರುಗಳು, ಧರ್ಮಗಳು, ಧರ್ಮಪ್ರಚಾರಗಳು, ಮಹಾತ್ಮರುಗಳು, ಸಂತರು, ಧರ್ಮಗ್ರಂಥಗಳು, ಅವುಗಳ ಪಾರಾಯಣ, ಪ್ರವಚನಗಳು ಇವೆಲ್ಲಾ ಸೇರಿರುವಾಗ ನಿಜವಾಗಿಯೂ ಅದು ಪ್ರಪಂಚವನ್ನೇ ಪ್ರೀತಿ, ಸತ್ಯ, ಹಾಗೂ ನೈತಿಕ ಸಂಕಲ್ಪಗಳ ಬೆಳಕಿನಿಂದ ಬೆಳಗಿಸಬೇಕಾಗಿತ್ತು. ಆದರೆ ಅದಕ್ಕೆ ವಿರುದ್ಧವೆಂಬಂತೆ ಜಗತ್ತಿನಲ್ಲಿ ಹಿಂಸೆ, ಅನೈತಿಕತೆಯ ಭಯಾನಕ ಕತ್ತಲೆಯೇ ಹೆಚ್ಚುತ್ತಾ ಬಂದಿರುತ್ತದೆ. ಆ ಪ್ರಾಚೀನ ವಾಮಾಚಾರದ ರಹಸ್ಯಗಳನ್ನು ತಿಳಿಯದೆ ಜಗತ್ತು ಮುಂದುವರಿದು ಬಂದಿರುವುದೇ ಇದಕ್ಕೆ ಕಾರಣವಾಗಿರುವುದು ಎಂದು ಇಲ್ಲಿ ಸ್ಪಷ್ಟವಾಗುವುದು.
ಧರ್ಮಗಳು, ಪಂಥಗಳು, ಯಾಕೆ ಹೀಗೆ ತಮ್ಮೊಳಗೆ ಹೊಡೆದಾಡಿಕೊಳ್ಳುತ್ತವೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಧರ್ಮಗಳು ತಮ್ಮೊಳಗೆ ವೈರುಧ್ಯಗಳನ್ನೇ ಎತ್ತಿ ಹೇಳುತ್ತಿರುವಾಗ, ಜಗತ್ತಿನಲ್ಲಿ ಕೊನೆಗೆ ಎಲ್ಲಾ ಕೆಟ್ಟು ಹೋಗುವುದೆಂದೂ, ಕೆಟ್ಟ ಕಾಲ ಬರುವುದೆಂದೂ ಇದೇ ಧರ್ಮಗಳು ಒಂದೇ ಸ್ವರದಲ್ಲಿ ಯಾಕೆ ಹೇಳುತ್ತಿವೆ ಎಂಬುವುದರ ಗುಟ್ಟು ಈಗ ತಿಳಿಯುವುದು. ದೇವರನ್ನು ಕರುಣಾಸಾಗಾರನೆಂದು ಹೇಳುತ್ತಾ, ಅದೇ ದೇವರ ಹೆಸರೆತ್ತಿ, ಅತಿ ಕ್ರೌರ್ಯದ ಬೆಂಕಿಯನ್ನು ಉಗುಳಲು ಹೇಗೆ ಸಾಧ್ಯವಾಗುವುದು ಎಂಬುದಕ್ಕೂ ಉತ್ತರ ಸಿಕ್ಕಿದೆ. ದೇವರಿರುವ ಎಲ್ಲಾ ಧರ್ಮಗಳಲ್ಲೂ ದೇವರುಗಳು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಾಣಿ ಬಲಿ ಪಡೆಯುವ ರೀತಿಯ ಪುರಾಣ ಕಥೆಗಳು ಮತ್ತು ಅವುಗಳ ಅನುಷ್ಠಾನಗಳೂ ಸೇರಿಕೊಂಡಿರುವ ಕಾರಣವೂ ತಿಳಿದಿದೆ.
ಈ ಜಗತ್ತು ಹೀಗೆ ಮುಂದುವರಿದರೆ ಏನಾಗಬಹುದು ಎಂದು ಸಾಮಾನ್ಯ ಜನರಿಗೂ ಊಹಿಸಲು ಸಾಧ್ಯವಾಗುವುದು. ಆದರೆ ನಾನು ಕಂಡ ಆ ರಹಸ್ಯ ವಾಮಾಚಾರದ ಭಯಾನಕ ಭವಿಷ್ಯ ಯೋಜನೆಗಳಲ್ಲಿ ಒಂದನ್ನು ನಿಮಗೆ ಇಲ್ಲಿ ತಿಳಿಸಲೇಬೇಕಾಗಿದೆ. ಇದು ಭವಿಷ್ಯದಲ್ಲಿ ಜನತೆಗೆ ಅತಿ ದೊಡ್ಡ ಅನಾಹುತವನ್ನು ತಂದೊಡ್ಡುತ್ತದೆ. ಅದೇನೆಂದರೆ, ಅದೇ ಆ ಪ್ರಾಚೀನ ವಾಮಾಚಾರವು ಜಗತ್ತಿನಲ್ಲಿ ಪ್ರೇಮವನ್ನು ನಾಶಮಾಡಿ, ಕಾಮವನ್ನು ಮಾತ್ರ ಹೆಚ್ಚಿಸಿ ಕೊನೆಗೆ ‘ಮದುವೆ’ ಎಂಬುದನ್ನೇ ಇಲ್ಲವಾಗಿಸುವುದು. ಅದಕ್ಕೆ ಅದು ಮದುವೆಯ ಬಂಧನದೊಳಗಿನ ಕಾಮವನ್ನು ಹಾಗೂ ಪ್ರೇಮವನ್ನೂ ಕಾಲ ಹೋದಂತೆ ಸರ್ವನಾಶ ಮಾಡುತ್ತಾ ಹೋಗುವುದು! ಹೆಚ್ಚೆಂದರೆ ಇದಕ್ಕೆ ಐನೂರು ವರುಷಗಳು ಬೇಕಾಗುವುದಿಲ್ಲ. ಆಗ ಅಲ್ಲಿ ಮದುವೆಯು ಇಲ್ಲವಾಗುವುದು. ಮದುವೆ ಇಲ್ಲವಾದಲ್ಲಿ ತಾಯಿ-ಮಗುವಿನ ಪ್ರೀತಿ, ತಂದೆ-ಮಕ್ಕಳ ಪ್ರೀತಿ, ಗಂಡ-ಹೆಂಡತಿ ಪ್ರೀತಿ ಇತ್ಯಾದಿ ಪವಿತ್ರ ಸಂಬಂಧಗಳಲ್ಲಿನ ಪ್ರೀತಿಗಳೆಲ್ಲವೂ ಎಂದೆಂದಿಗಾಗಿ ಹೊರಟು ಹೋಗಿಬಿಡುವುದು. ಅವುಗಳ ಸ್ಥಾನಗಳಲ್ಲಿ ಮೃಗೀಯ ಕಾಮ, ಅತಿ ಕ್ರೌರ್ಯ, ಹಿಂಸೆ, ಇತ್ಯಾದಿಗಳು ತಾಂಡವವಾಡುವವು. ಇನ್ನೊಂದು ಕಡೆ ಅತಿಯಾದ ದುಃಖ, ನೋವುಗಳಿಂದ ಜನ ನರಳಾಡುವಂತಾಗುವುದು. ಅಂದಿನ ಸಾಮಾಜಿಕ ಪೈಪೋಟಿಗಳಲ್ಲಿ ಹಿಂದೆ ಬಿದ್ದ ಬಲಹೀನರಾದವರು, ವೃದ್ಧ, ವೃದ್ಧೆಯರು, ತರಗೆಲೆಗಳಂತೆ ಕಸದ ತೊಟ್ಟಿಯಲ್ಲಿ ನರಕಯಾತನೆ ಅನುಭವಿಸುವಂತಾಗುವುದು. ಮಕ್ಕಳನ್ನು ಹೆತ್ತು ಹಣ ಸಂಪಾದನೆ ಮಾಡುವ ನಾರಿಯರು, ನಾಯಿಮರಿಗಳಂತೆ ಅವುಗಳನ್ನು ಸ್ವಲ್ಪ ಕಾಲದವರೆಗೆ ಸಾಕುವ, ಸಾಕು ತಾಯಿ ಅಥವಾ ಸಾಕು ತಂದೆಯಂದಿರು, ಅದೇ ರೀತಿ ಸಾಕು ಸರಕಾರ, ಇತ್ಯಾದಿಗಳು ಅಂದಿನ ಸಮಾಜದ ಸಹಜ ಜೀವನ ರೀತಿಗಳಾಗಿರುವವು! ಸತ್ಯ, ಪ್ರೀತಿ, ನೀತಿಗಳನ್ನು ರಕ್ಷಿಸುವುದೇ ಧರ್ಮಗಳ ಮೂಲಕರ್ಮವೆಂದು ಹೇಳಿಕೊಳ್ಳುವ ಧರ್ಮಗಳು ಆಗಲೂ ತಮ್ಮ ತಮ್ಮ ಧರ್ಮವನ್ನೇ ಹೊಗಳಿಕೊಳ್ಳುವವು! ಅದು ಹೇಗೆಂದರೆ ‘ಆ ಕೊನೆಯ ಆ ಕೆಟ್ಟ ಕಾಲ ಬಂದಿದೆ, ಅದಕ್ಕೆ ಹೀಗೆಲ್ಲಾ ಆಗುತಿರುವುದು, ಇದನ್ನು ದೇವರು ಮೊದಲೇ ನಮಗೆ ತಿಳಿಸಿದ್ದಾನೆ. ದೇವರ ಮಾತುಗಳು ಸತ್ಯವಾಯಿತು’ ಎಂದು ತಮ್ಮ ತಮ್ಮ ಧರ್ಮ, ದೇವರ ಮಹಿಮೆಯನ್ನು ಕೊಂಡಾಡಲು ಪ್ರಯತ್ನಿಸುವವು. ಆದರೆ ಆಗಲೂ ಕಷ್ಟಪಟ್ಟು ಮತಾಂತರ ಮಾಡಿ ಅಥವಾ ರಕ್ತ ಚಿಮ್ಮಿಸಿ ಧರ್ಮಯುಧ್ಧ ಮಾಡಿ ತಮ್ಮ ತಮ್ಮ ಧರ್ಮಗಳನ್ನು ಜಗತ್ತಿನಲ್ಲೆಲ್ಲರೂ ಅನುಸರಿಸುವಂತೆ ಮಾಡುವ ಆ ಪ್ರಯತ್ನವನ್ನು ಮಾತ್ರ ಅವು ಮರೆಯುವುದಿಲ್ಲ!
ಈ ರೀತಿಯಲ್ಲಿ ಆ ವಾಮಾಚಾರವು ಜೀವನದ ಹಲವು ಮಜಲುಗಳಲ್ಲಿ ಭೀಕರ ದುರಂತಗಳನ್ನು ಸೃಷ್ಟಿಸುತ್ತಾ ಮುಂದುವರಿಯುವುದು. ಎಲ್ಲಾ ಧರ್ಮ, ಪಂಥಗಳಲ್ಲಿನ ಜನರು ಈಗಲೇ ಜಗತ್ತಿನಾದ್ಯಂತ ಒಂದಾಗಿ, ಇದಕ್ಕೆ ಒಂದು ಪರಿಹಾರ ಮಾರ್ಗವನ್ನು ಕಂಡು ಹಿಡಿದಲ್ಲಿ ಮಾತ್ರ ಮುಂದೆ ಅವುಗಳಿಂದಾಗುವ ಭಯಾನಕ ಅನಾಹುತಗಳನ್ನು ಒಂದು ಹಂತದವರೆಗೆ ತಡೆಗಟ್ಟಲು ಸಾಧ್ಯವಾಗಬಹುದು ಎಂಬುವುದು ನನ್ನ ಅನಿಸಿಕೆ. ಮನುಷ್ಯನನ್ನು ಈ ಭೂಮಿಯಲ್ಲಿ ಸ್ವಲ್ಪವಾದರೂ ಶಾಂತಿಯಿಂದ, ಸಮಾಧಾನದಿಂದ ಬದುಕಲು ಈ ಧರ್ಮಗಳು ಬಿಟ್ಟಲ್ಲಿ, ಅದುವೇ ಜಗತ್ತಿಗೆ ಧರ್ಮಗಳ ದೊಡ್ಡ ಕೊಡುಗೆಯಾಗುವುದು. ಧರ್ಮಯುದ್ಧಗಳ ಹಿಂಸೆಯ ರಕ್ತಕ್ರಾಂತಿಯಲ್ಲ ಜನತೆಗೆ ಬೇಕಾಗಿರುವುದು, ಮುಗ್ಧ ಮಾನವನ ಶಾಂತಿಗಾಗಿ, ಪ್ರೀತಿ, ತ್ಯಾಗಗಳಿಂದ ತುಂಬಿದ ಮಾನವೀಯತೆಯ ಮಹಾ ಕ್ರಾಂತಿ ಇಂದು ನಮಗೆ ಬೇಕಾಗಿದೆ.
ಈ ಮೊದಲು ಹೇಳಿದಂತೆ ಆದಿಕಾಲದ ಆ ವಾಮಾಚಾರದ ಆಳದ ಹಲವು ರಹಸ್ಯಗಳನ್ನು ತಿಳಿದಿರುವ ಹಿನ್ನೆಲೆಯಲ್ಲಿ ಅವುಗಳ ಪ್ರಭಾವದಿಂದ ದೂರವಾಗಿ ನನ್ನಷ್ಟಕ್ಕೆ, ಸೂಕ್ಷ್ಮವಲಯದಲ್ಲಿ, ಒಂದು ಪರಿಹಾರ ಮಾರ್ಗವನ್ನು ಉಂಟುಮಾಡಲು ನಾನು ಎಲ್ಲದರಿಂದಲೂ ದೂರವಾಗಿರುವುದು. ನಾನು ಜಗತ್ತಿನ ಯಾವ ಧರ್ಮ, ಪಂಥ, ಸಂಪ್ರದಾಯ, ಜಾತಿಗಳಿಗೂ ಸೇರಿದವನಲ್ಲವೆಂದು ಸಾರಿ ಹೇಳಿರುವುದು ಈ ಉದ್ದೇಶಕ್ಕಾಗಿ ಎಂದು ತಿಳಿಯಬೇಕು. ನಾವು ಈಗ ಕಾಣುತ್ತಿರುವ ಭೂಮಿ ಮೇಲಿನ ಆ ಪ್ರಾದೇಶಿಕ ವಾಮಾಚಾರ ಪಂಗಡಗಳು ಮತ್ತು ಅವುಗಳ ಶಕ್ತಿಗಳಿಗೆ, ತಮ್ಮ ಮೇಲಿನ ಆ ಪ್ರಾಚೀನ ವಾಮಾಚಾರದ ಪ್ರಭಾವದ ಬಗ್ಗೆ ತಿಳಿದಿಲ್ಲ. ಅವುಗಳಿಗೆ ಸೂಕ್ಷ್ಮ ಲೋಕದ, ಮೇಲಿನ ಸ್ಥರಗಳ ಸೂಕ್ಷ್ಮಶಕ್ತಿಗಳ ಜ್ಞಾನ ಮಾತ್ರ ಇವೆಯಷ್ಟೆ. ನಾನು ಕಂಡ ಸೂಕ್ಷ್ಮದ ಹಲವು ರಹಸ್ಯಗಳಲ್ಲಿ ಕೆಲವೊಂದನ್ನು ಈ ಕೆಳಗೆ ತಿಳಿಸುವೆನು. ಅಷ್ಟನ್ನಾದರೂ ಎಲ್ಲರೂ ತಿಳಿದಿರುವುದು ಉತ್ತಮವೆಂದು ನನಗೆ ತೋರುವುದು.
೧. ಆ ಪ್ರಾಚೀನ ವಾಮಾಚಾರವು ಜಾತಿ, ಧರ್ಮ, ಪಂಥಗಳೊಳಗೆ ರಹಸ್ಯವಾಗಿ ಸೇರಿಕೊಂಡು ಜಗತ್ತಿನಲ್ಲಿ ಸತ್ಯ, ನೈತಿಕತೆ ಮತ್ತು ಆತ್ಮೀಯ ಪ್ರೀತಿಯನ್ನು ಸರ್ವನಾಶ ಮಾಡುವುದು.
೨. ನಿಜವಾದ ಧಾರ್ಮಿಕ ಜೀವನವು ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ, ಇತ್ಯಾದಿಗಳನ್ನು ಮಾತ್ರ ಹೇಳುವುದು. ಆದರೆ ಆ ಪ್ರಾಚೀನ ವಾಮಾಚಾರವು ಅದೇ ಸತ್ಯ, ಪ್ರೀತಿಗಳನ್ನು ತಮ್ಮ ಜಾತಿ, ಧರ್ಮ, ಪಂಥಗಳೊಳಗೆ ನಂಬಿಕೆಗಳ ಸಹಾಯದಿಂದ ಮಿತಿಗೊಳಿಸಿ, ಇತರ ಕಡೆಗಳಲ್ಲಿ ಕ್ರೌರ್ಯದ ಅಟ್ಟಹಾಸ ಮಾಡಿಸಿ, ತನ್ನ ಪ್ರಭಾವವನ್ನು ಬಲಪಡಿಸುತ್ತಾ ಬರುವುದು.
೩. ಆ ಪ್ರಾಚೀನ ವಾಮಾಚಾರವು ಭೂಮಿಯ ಪ್ರತಿ ವ್ಯಕ್ತಿಯ ಮೇಲೂ ತನ್ನ ಪ್ರಭಾವವನ್ನು ಬೀರುತ್ತಾ ಇದೆ. ಆದರೆ ಅದು ಅತ್ಯಂತ ಆಳದ ಮತ್ತು ರಹಸ್ಯ ವಲಯಗಳಲ್ಲಿರುವ ಕಾರಣ ಅವುಗಳ ಇರವು ಯಾರಿಗೂ ಅನುಭವವಾಗುವುದಿಲ್ಲ.
೪. ಮಾನವನು, ಜನರು ತಿಳಿದಿರುವಂತೆ ಏಕ ವ್ಯಕ್ತಿತ್ವವನ್ನು ಪಡೆದಿಲ್ಲ. ಅವನು ಹಲವು ಬೇರೆ ಬೇರೆ ವ್ಯಕ್ತಿತ್ವಗಳ ಒಂದು ಪುಂಜವಾಗಿರುವನು. ಅಂದರೆ ಒಬ್ಬನಲ್ಲಿ ಹಲವು ಸತ್ತ ಹಿಂದಿನ, ಮತ್ತು ಜೀವಂತವಾಗಿರುವ ಇಂದಿನ ವ್ಯಕ್ತಿತ್ವಗಳ ಅಂಶಗಳು ಸೇರಿಕೊಂಡಿವೆ. ಇದು ಹಲವು ಹಲವು ಸಹಸ್ರ ವರುಷಗಳ ಹಿಂದೆ ಆ ಪ್ರಾಚೀನ ವಾಮಾಚಾರವು, ಮಾನವ ವ್ಯಕ್ತಿತ್ವವನ್ನು ತನ್ನ ರೀತಿಯಲ್ಲೇ ಸುಲಭದಲ್ಲಿ ನಿಯಂತ್ರಿಸುತ್ತಾ ಮುಂದುವರಿದು ಬರಲು ಮಾಡಿ ಇಟ್ಟ, ಅತ್ಯಂತ ಭಯಾನಕ ವಿಕೃತ ರೀತಿಯಾಗಿದೆ. ಇಷ್ಟು ಮಾತ್ರ ಈ ವಿಕೃತ ರೀತಿಯಲ್ಲ, ಅದರಲ್ಲಿ ಹಲವು ಹಲವು ಇತರ ರೀತಿಗಳೂ ಇವೆ. ಅವೆಲ್ಲಾ ಊಹೆಗೂ ಮೇಲಿನ ರೀತಿಗಳಾಗಿವೆ.
೫. ಒಬ್ಬನ ಹಲವು ವ್ಯಕ್ತಿತ್ವಗಳ ಆ ಪುಂಜವು, ಸೂಕ್ಷ್ಮದಲ್ಲಿ ಇದ್ದು, ಸ್ಥೂಲ ಶರೀರದ ಮಿದುಳಿನ ಆ ಬಾಹ್ಯ ವ್ಯಕ್ತಿಯ ಮೂಲಕ, ಒಂದೇ ವ್ಯಕ್ತಿತ್ವದಂತೆ, ಜೀವನದಲ್ಲಿ ಪ್ರಕಟವಾಗುತ್ತಿರುವುದು. ಆದರೆ ಅತ್ಯಪರೂಪವಾಗಿ ಕೆಲವು ಕಡೆ ಅವುಗಳಲ್ಲಿ ಕೆಲವೊಂದು, ನೇರವಾಗಿ ಪ್ರಕಟವಾಗುವುದೂ ಇದೆ. ಆಗ ಆ ವ್ಯಕ್ತಿ ಯಾವುದೋ ಬೇರೆ ವ್ಯಕ್ತಿಯಂತೆ ವರ್ತಿಸಲು ತೊಡಗುವನು. ಇದನ್ನು ಜನರು ದೆವ್ವ ಮೈಗೆ ಸೇರುವುದು ಎನ್ನುವುದು. ಬೇರೆ ರೀತಿಗಳಲ್ಲಿಯೂ ಈ ರೀತಿ ಆಗುವುದು ಇದೆ.
೬. ಅತ್ಯಂತ ಆಶ್ಚರ್ಯಕರವಾದ ಒಂದು ರಹಸ್ಯವು ಬಯಲಾಗಿದೆ. ಅದೇನೆಂದರೆ ಇದುವರೆಗೂ ತಿಳಿದಿರುವಂತೆ ನರಕವೆಂಬುವುದು, ಅದು ಮಾನವನು ಸತ್ತ ನಂತರ ಸಿಗುವ ಭಯಾನಕ ಲೋಕವಲ್ಲ. ಅದು ಜೀವಂತವಾಗಿರುವಾಗ ಅತ್ಯಂತ ರಹಸ್ಯ ವಲಯಗಳಲ್ಲಿ ಮತ್ತು ಇತರ ಸೂಕ್ಷ್ಮದ ಕೆಲವು ಸ್ಥರಗಳಲ್ಲಿ ನಡೆಯುವ, ಮಾನವನನ್ನು ಆ ಪ್ರಾಚೀನ ವಾಮಾಚಾರವು ದೆವ್ವವಾಗಿಸುವಲ್ಲಿ, ಆ ಭೂಮಿಯ ವ್ಯಕ್ತಿಗಳ ಆಂಶಿಕವಾಗಿ ಬೇರ್ಪಡಿಸಲ್ಪಟ್ಟ ವ್ಯಕ್ತಿತ್ವಗಳಿಗೆ ನೀಚ ವ್ಯಕ್ತಿತ್ವವಾಗಲು ಬಲಾತ್ಕರಿಸುವ ಹಲವು ಚಿತ್ರ ಹಿಂಸೆ ರೀತಿಗಳಾಗಿವೆ. ಅಂದರೆ, ಪ್ರತಿಯೊಬ್ಬನ ವ್ಯಕ್ತಿತ್ವದಿಂದ ಆಂಶಿಕ ಶಕ್ತಿಯನ್ನು [ಆಂಶಿಕ ವ್ಯಕ್ತಿತ್ವವಿರುವ ಮನೋಶಕ್ತಿ] ಆ ಪ್ರಾಚೀನ ವಾಮಾಚಾರವು ಹೊರತೆಗೆಯುತ್ತಾ, ಆ ಶಕ್ತಿಯನ್ನು ಮಾನವನಿಗೆ ಬಾಹ್ಯದಲ್ಲಿ ತಿಳಿಯದಂತೆ, ಇತರ ಸೂಕ್ಷ್ಮವಲಯಗಳಲ್ಲಿ ಭೀಕರ ಚಿತ್ರ ಹಿಂಸೆ ನೀಡಿ ಅವುಗಳಿಗೆ ಮಣಿಯುವಂತೆ ಮಾಡಿ, ನೀಚ ಕೆಲಸವನ್ನು ಮಾಡಿಸಿ ಮಾಡಿಸಿ, ಹಲವು ಹಂತಗಳ ಕೊನೆಯಲ್ಲಿ ತಮಗೆ ಬೇಕಾದ ರೀತಿಯ ದೆವ್ವವಾಗಿಸಿಕೊಳ್ಳುವವು. ಕೊನೆಯ ಹಂತಕ್ಕೆ ತಲುಪಿದ ದೆವ್ವಗಳಿಗೆ ಭೂಮಿಯ ವ್ಯಕ್ತಿತ್ವದಲ್ಲಿರುವ ಯಾವ ಸ್ವಭಾವವೂ ಇರುವುದಿಲ್ಲ. ಅವುಗಳಿಗೆ ನೀಚ ದೆವ್ವದ ಸ್ವಭಾವ ಮಾತ್ರ ಇರುವಂತೆ ಮಾಡಲಾಗುವುದು. ಇದರಿಂದ ಆ ಶಕ್ತಿಗಳು ಯಾವಕಾಲಕ್ಕೂ, ಆ ಪ್ರಾಚೀನ ವಾಮಾಚಾರಕ್ಕೆ ಸಹಾಯಕವಾಗಿ ಮಾತ್ರ ಕೆಲಸ ಮಾಡುವವು. ಈ ರೀತಿ ನೀಚ ಶಕ್ತಿಗಳು ಜಗತ್ತಿನಲ್ಲಿ ಹೆಚ್ಚುತ್ತಾ ಬಂದಿರುವುದು. ಮತ್ತು ಮುಂದಕ್ಕೆ ಇನ್ನೂ ಹೆಚ್ಚಾಗುತ್ತಾ ಹೋಗುವುದು! ಕೊನೆಯಲ್ಲಿ ಜಗತ್ತಿನ ಎಲ್ಲರೂ ಕೆಟ್ಟವರಾಗಲು ಇದು ಕಾರಣ, ಆ ಕೆಟ್ಟ ಕಾಲ ಬರುವುದಕ್ಕೆ ಇವುಗಳ ಈ ಋಣಾತ್ಮಕವಾಗಿ ದೆವ್ವವಾಗಿಸುವ ಆ ನೀಚ ಕೆಲಸವೇ ಕಾರಣ ಎಂದು ತಿಳಿಯಬೇಕು. ಅದಲ್ಲದೆ, ಕಾಲವು ಕಾರಣವಿಲ್ಲದೆ ತನ್ನಿಂದ ತಾನಾಗಿ ಕೆಟ್ಟದಾಗಲು ಎಂದೂ ಸಾಧ್ಯವಿಲ್ಲ. ಆದರೆ ಆ ಪ್ರಾಚೀನ ವಾಮಾಚಾರವು ಧಾರ್ಮಿಕ ನಂಬಿಕೆಗಳ ಹಿನ್ನೆಲೆಯಲ್ಲಿ, ಆ ಕೆಟ್ಟ ಕಾಲವನ್ನು ಜಗತ್ತಿಗೆ ತರುವಲ್ಲಿ, ಅದಕ್ಕೆ ವಿರುದ್ಧವಾಗಿ ಯಾರೂ ಪ್ರಶ್ನೆ ಹಾಕದಂತೆ, ತಯಾರು ಮಾಡಿಕೊಂಡಿದೆ ಅಷ್ಟೆ. ಮಾತ್ರವಲ್ಲ, ಆ ಮುಂಬರುವ ಕೆಟ್ಟ ಕಾಲವನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲವೆಂಬಂತೆ ಧರ್ಮ, ಪಂಥಗಳ ಒಳಗಿಂದಲೇ ಬೋಧಿಸುವಂತೆ ಮಾಡಿ, ಆರಾಮವಾಗಿ, ಯಾರಿಂದಲೂ ಯಾವ ತಡೆಯೂ ಇಲ್ಲದೆ ಆ ಭಯಾನಕ ವಾಮಾಚಾರವು ಮುಂದುವರಿದು ಬಂದಿದೆ.
೭. ಈ ದೆವ್ವಗಳು ಇನ್ನೂ ಮಾನವನಲ್ಲಿ ಅಳಿದು ಉಳಿದಿರುವ ಮಾನವೀಯತೆಯೆಂಬ ಧನಾತ್ಮಕ ಭಾವನೆಯನ್ನು ಸ್ವಲ್ಪ ಕಾಲದೊಳಗಾಗಿ ಸರ್ವನಾಶ ಮಾಡಿಬಿಡುವವು. ಆದುದರಿಂದ ಈಗ ಆ ಅಳಿದುಳಿದ ಮಾನವೀಯತೆಯನ್ನು ಹಿಡಿದು ಅದನ್ನು ಹೆಚ್ಚಿಸಬೇಕಾಗಿದೆ. ಅದು ಪೂರ್ತಿ ಅಳಿದು ಹೋದರೆ ಮಾನವನ ಮನಸ್ಸು ಅದನ್ನು ಎಂದೆಂದಿಗೂ ಬಯಸಲಾರದ ಸ್ಥಿತಿಗೆ ಬರುವುದು. ಇದೇ ರೀತಿ ನೈತಿಕತೆಯ ಅವಸ್ಥೆಯೂ ಆಗುವುದು. ಇನ್ನು ಸ್ವಲ್ಪ ಕಾಲಾನಂತರ ಭೂಮಿಯಲ್ಲಿ ಎಲ್ಲರೂ ಅದರ ಕಡೆಗೆ ಗಮನ ಹರಿಸಲು ಹಿಂಜರಿಯುವರು. ಯಾಕೆಂದರೆ ಭೋಗ ಸುಖದ ದಾಸರಾಗಿ, ನೈತಿಕತೆಯೇ ಆಗ ದೊಡ್ಡ ಅನೈತಿಕತೆಯಾಗಿ ಜನಗಳಿಗೆ ಕಾಣಿಸುವುದು. ಮತ್ತು ತಮ್ಮ ಅನೈತಿಕ ರೀತಿಗಳನ್ನು ಅವರು ಮಾನವನ ಹಕ್ಕು, ಆಸಕ್ತಿ, ಇತ್ಯಾದಿ ರೀತಿಗಳಲ್ಲಿ ಸರಿಯೆಂದು ಸಾಧಿಸಿಕೊಳ್ಳುವರು. ಅನೈತಿಕ ಕಾಮ, ವಿಕೃತ ಕಾಮಗಳು ಹೆಚ್ಚಾಗುತ್ತಾ, ಸತಿ, ಪತಿ ಸಂಬಂಧ ಹದಗೆಟ್ಟು ಹೋಗಿ, ವಿವಾಹ ವಿಚ್ಛೇಧನವು ಹೆಚ್ಚುತ್ತಾ ಬರುವುದು ಅದರ ಮೊದಲ ಕೆಲವು ಹಂತಗಳಾಗಿವೆ. ಆದರೆ ನೈತಿಕತೆಯನ್ನು ಪುನಃ ಸ್ಥಾಪಿಸಲು, ಅನೈತಿಕತೆಯ ವಿರುದ್ಧ ಬಲಾತ್ಕಾರ ಅಥವಾ ಹಿಂಸಾತ್ಮಕ ದಾರಿ ಉಪಯೋಗಿಸುವುದು ಬಹಳ ಅಪಾಯಕಾರಿಯೆಂದು ತಿಳಿಸುವೆನು. ಯಾಕೆಂದರೆ ಹಾಗೆ ಮಾಡಿದ್ದಲ್ಲಿ, ಅದನ್ನು ಆ ಪ್ರಾಚೀನ ವಾಮಾಚಾರವು ಅದಕ್ಕೆ ಬೇಕಾದ ರೀತಿಯಲ್ಲಿ ಭಯಾನಕವಾಗಿ ಉಪಯೋಗಿಸಿಕೊಳ್ಳುವುದು. ಆದುದರಿಂದ ಆತ್ಮೀಯ ಪ್ರೀತಿಯನ್ನು ಪುನಃ ತರುವ ಹಲವು ರೀತಿಗಳನ್ನು ಉಪಯೋಗಿಸಿ ಅದರಿಂದ ಪಾರಾಗಬೇಕಷ್ಟೆ.
ಒಂದು ವಿಷಯವನ್ನು ತಿಳಿದಿರಬೇಕಾಗಿದೆ. ನನಗೆ ಆ ಪ್ರಾಚೀನ ವಾಮಾಚಾರದ ಹಲವು ರಹಸ್ಯಗಳು ತಿಳಿದ್ದರೂ ಅವುಗಳಲ್ಲಿ ಕೆಲವೊಂದನ್ನು ಮಾತ್ರ ಇಲ್ಲಿ ಕೊಟ್ಟಿರುವುದು. ಆದರೆ, ಇವೆಲ್ಲಾ ಸೂಕ್ಷ್ಮ ಸ್ಥರಗಳಲ್ಲಿ ಗೋಚರವಾದ ನನ್ನ ಬರೇ ಅನುಭವ ಎಂದು ಹೇಳಬಾರದು ಯಾಕೆಂದರೆ ಸಾವಿರಾರು ಜನರಿಗೆ ಈ ಸೂಕ್ಷ್ಮ ಸ್ಥರದ ಅನುಭವವಿದೆ, ಆದರೆ ಅವರೆಲ್ಲಾ ಅವುಗಳನ್ನು ಹಾಗೇ ನೋಡಿದ್ದಾರೆ ಅಥವಾ ಅಲ್ಲಿ ಅವುಗಳು ಹೇಳಿದಂತೆ ಒಪ್ಪಿಕೊಂಡವರು! ಆದರೆ ಅವುಗಳ ಮಾತನ್ನು ಲಕ್ಷಿಸದೆ ಆಳದಲ್ಲಿ ಅವುಗಳ ರಹಸ್ಯವನ್ನು ಪತ್ತೆ ಹಚ್ಚುವ ಕೆಲಸಕ್ಕೆ ಯಾರೂ ಕೈಹಾಕಿಲ್ಲ! ಆದುದರಿಂದ ನಾನು ಹೇಳುತ್ತಿರುವ ಈ ಎಲ್ಲಾ ಅಂಶಗಳೂ ಹಲವು ವರುಷಗಳಲ್ಲಿ ಪತ್ತೆಹಚ್ಚಿ ಸಿಕ್ಕ ಅಂಶಗಳೆಂದೂ ಆದರೆ ಅವು ಯಾವುದೋ ಸೂಕ್ಷ್ಮ ಶಕ್ತಿಯು ನನ್ನಲ್ಲಿ ಹೇಳಿರುವ ಮಾತುಗಳು ಅಲ್ಲ ಎಂದೂ ಜ್ಞಾಪಿಸಿಕೊಳ್ಳಬೇಕೆಂದು ಹೇಳುವೆನು.
ಈ ರೀತಿ, ಆ ಪ್ರಾಚೀನ ವಾಮಾಚಾರವು ಜಗತ್ತಿಗೆ ದೊಡ್ಡ ಅಪಾಯವನ್ನು ತಂದೊಡ್ಡುವುದನ್ನು ಸ್ಪಷ್ಟವಾಗಿ ತಿಳಿದಾಗ ಅದನ್ನು ಜಗತ್ತಿಗೆ ತಿಳಿಸದೆ ಇರಲು ನನ್ನಿಂದ ಸಾಧ್ಯವಾಗಲಿಲ್ಲ, ಅದಕ್ಕೆ ನಾನು ಅವುಗಳಲ್ಲಿ ಕೆಲವು ಮುಖ್ಯವಾದವುಗಳನ್ನು ನಿಮ್ಮ ಮುಂದಿಟ್ಟಿರುವುದು. ಆಪತ್ತನ್ನು ನೇರವಾಗಿ ಕಂಡವರು ಅದಕ್ಕೆ ಜನ ಬಲಿಯಾಗದಂತೆ ಮಾಡುವುದಕ್ಕಾಗಿ ‘ಅಪಾಯ’ ಎಂಬ ಫಲಕವನ್ನು ಅಲ್ಲಿ ಹಾಕಿಯೇ ಮುಂದುವರಿಯುತ್ತಾರೆ. ಅದು ಮಾನವೀಯತೆಯ ಕೆಲಸ ಅಷ್ಟೆ, ಅದನ್ನು ಮಾತ್ರ ನಾನು ಮಾಡಿದ್ದೇನೆ. ನಾನು ಯಾವ ಧರ್ಮ ಅಥವಾ ಪಂಥವನ್ನು ಸೃಷ್ಟಿಸಿಲ್ಲ ಮತ್ತು ಯಾರನ್ನೂ ನನ್ನಲ್ಲಿಗೆ ಬರಲು ಹೇಳುವುದಿಲ್ಲ, ಆದುದರಿಂದ ಜಗತ್ತನ್ನು ಉಳಿಸುವ ನಿಟ್ಟಿನಲ್ಲಿ ನೀವು ಜನರೇ ಇದಕ್ಕೆ ಒಂದು ಪರಿಹಾರ ಮಾರ್ಗವನ್ನು ಕಂಡುಕೊಳ್ಳಿರಿ, ಇಲ್ಲವಾದರೆ ಅಪಾಯವು ಕಟ್ಟಿಟ್ಟ ಬುತ್ತಿಯಾಗುವುದು.
ಎಚ್ಚರಿಸುವಿಕೆಯ ಅನಿವಾರ್ಯತೆ
ಓಂದೇವ ಅವರು ತಮ್ಮ ಬರಹಗಳಲ್ಲಿ ‘ಜನರನ್ನು ಎಚ್ಚರಿಸುವಿಕೆ’ಯ ಅನಿವಾರ್ಯತೆಗೆ ಕಾರಣವನ್ನು ಇನ್ನೊಂದು ರೀತಿಯಲ್ಲೂ ಹೇಳಿರುವರು. ಅವನ್ನು ನೇರವಾಗಿ ನಾವು ಹೇಳುವುದಿಲ್ಲ ಬದಲು ಈ ಕೆಳಗಿನ ಒಂದೆರಡು ಓಂದೇವ ಅವರ ಮಾತುಗಳಿಂದಲೇ ನಿಮಗೆ ತಿಳಿದುಕೊಳ್ಳಬಹುದಾಗಿದೆ.
- ನಮ್ಮ ನಮ್ಮ ಧರ್ಮದ ಮೇಲಿನ ಅಭಿಮಾನ ಎಂಬುವುದು ಅದು ಪಠಿಸಲಿರುವ ಮಂತ್ರವಲ್ಲ, ಯಾಕೆಂದರೆ ಧರ್ಮದ ಮೇಲಿನ ಅಭಿಮಾನ ಸೃಷ್ಟಿಯಾಗಬೇಕಾದರೆ ಆತನು ಸ್ವತಃ ಧರ್ಮವನ್ನು ಪಾಲನೆ ಮಾಡಬೇಕಾಗುವುದು. ತಾನು ಅಸೂಯೆ, ಧರ್ಮಾಂಧತೆ, ಹಿಂಸೆ ಇತ್ಯಾದಿಗಳಿಂದ ತುಂಬಿರುವಾಗ ಆತನಿಗೆ ನಿಜವಾಗಿಯೂ ತನ್ನ ಧರ್ಮವೇ [ಅದು ದುಷ್ಟ ಸ್ವಭಾವಗಳ ವಿರುದ್ಧ ಹೇಳುವ ಕಾರಣ] ಶತ್ರುವಾಗುವುದು!
- ನಾಸ್ತಿಕರ ವಾದವೂ ಆಸ್ತಿಕರಂತೆ ಒಂದು ಬರೇ ನಂಬಿಕೆಯಾಗುವುದು! ಯಾಕೆಂದರೆ ಅವರೂ ತಮ್ಮಲ್ಲಿ ಆಧಾರವಿಲ್ಲದೆಯೇ ದೇವರು ಇಲ್ಲವೆಂಬ ವಾದವನ್ನು ಮಾಡುವರು. ಈ ಎರಡು ತರದ ನಂಬಿಕೆಗಳ ಕಚ್ಚಾಟವು ಕೋಟಿ ವರುಷ ಕಳೆದರೂ ಮಾನವನಿಗೆ ಪ್ರಯೋಜನಕಾರಿಯಾಗಿ ಬದಲಾಗದು!
- ನಾಸ್ತಿಕ ರೀತಿಯು ಈ ಜಗತ್ತಿನಲ್ಲಿ ಬುದ್ಧನಂಥ ದೇವರನ್ನೇ ಸೃಷ್ಟಿಸಿದೆ ಮತ್ತು ಆಸ್ತಿಕವಾದವು ಈ ಜಗತ್ತಿನಲ್ಲಿ ಹಿಟ್ಲರ್ ನಂಥ ಸೈತಾನನನ್ನು ಸೃಷ್ಟಿಸಿದೆ. ಹೀಗಿರುವಾಗ, ನಾವು ಧರ್ಮ, ದೇವರು, ನಾಸ್ತಿಕ, ಆಸ್ತಿಕ ಇತ್ಯಾದಿ ಹಲವು ವಿಚಾರಗಳನ್ನು, ನಂಬಿಕೆಯ ಹಿನ್ನೆಲೆಯನ್ನು ಬಿಟ್ಟು, ಆ ಸತ್ಯದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮತ್ತು ತರ್ಕಬದ್ಧವಾಗಿ ತಿಳಿದುಕೊಳ್ಳಬೇಕಾಗುವುದು ಇಂದು ನಮ್ಮೆಲ್ಲರ ಉಳಿವಿನ ಪ್ರಶ್ನೆಯಾಗುವುದು.
ಓಂದೇವ ಅವರು, ಈ ಮೊದಲೇ ತಾವು ಯಾವ ಧರ್ಮ, ಪಂಥಗಳಲ್ಲೂ ಇಲ್ಲವೆಂದು, ಮತ್ತು ಯಾವ ಹೊಸ ಧರ್ಮ, ಪಂಥ, ಪರಂಪರೆಯನ್ನೂ ಸೃಷ್ಟಿಸುವ ಪ್ರಶ್ನೆಯೇ ಇಲ್ಲ ಎಂದೂ ಹೇಳಿರುವರು. ಅವರ ಸೂಕ್ಷ್ಮದ ಅನುಭವದ ಪ್ರಕಾರ ಈ ಚೌಕಟ್ಟು ಇರುವ ಧರ್ಮ, ಪಂಥ, ಪರಂಪರೆ, ಇತ್ಯಾದಿಗಳು ಆ ಪ್ರಾಚೀನ ವಾಮಾಚಾರದ ಬಲು ದೊಡ್ಡ ಆಯುಧಗಳಾಗಿವೆ ಎಂದಾಗಿದೆ.
ಎಲ್ಲಾ ಧರ್ಮ, ಪಂಥಗಳ ಒಳಗಿಂದಲೂ ಆ ಪ್ರಾಚೀನ ವಾಮಾಚಾರವು ಆದಿಯಿಂದಲೇ ತನ್ನ ಋಣಾತ್ಮಕ ಪ್ರಭಾವವನ್ನು ಬೀರುತ್ತಾ ಬಂದಿದೆ ಎಂಬುವುದೇ ಓಂದೇವರವರು ಹೇಳುವ ಜಗತ್ತಿನ ಅತಿ ದೊಡ್ಡ ಅಪಾಯದ ಸೂಚನೆಯಾಗಿದೆ! ಆದರೆ ಅದನ್ನು ಹೇಳಿದರೆ ಯಾರೂ ನಂಬುವುದು ಕಷ್ಟವಾಗುವುದು, ಅದಕ್ಕಾಗಿ ಅವರು ಹಲವು ನಿದರ್ಶನಗಳನ್ನು ಕೊಟ್ಟು ಅವುಗಳು ಹೇಗೆಲ್ಲಾ ಈ ಜಗತ್ತಿನ ಎಲ್ಲಾ ಧರ್ಮ, ಪಂಥಗಳಲ್ಲಿ ರಹಸ್ಯವಾಗಿ ಸೇರಿಕೊಂಡಿವೆ ಎಂಬುವುದನ್ನು ತಿಳಿಸಿರುವರು. ಅಷ್ಟು ಮಾತ್ರವಲ್ಲದೆ, ಈ ರಹಸ್ಯವನ್ನು ತಿಳಿದ ಹಿನ್ನೆಲೆಯಲ್ಲಿ ಒಂದು ಪರಿಹಾರ ಮಾರ್ಗವನ್ನು ಸೂಚಿಸಿರುವರು. ರೈಲು ಹಳಿಯಲ್ಲಿ ದೊಡ್ಡ ಬಿರುಕು ಉಂಟಾದುದನ್ನು ನೋಡಿದವನು ಅದನ್ನು ಕೂಡಲೇ ಹತ್ತಿರದ ರೈಲು ನಿಲ್ಧಾಣಕ್ಕೆ ತಿಳಿಸದಿದ್ದಲ್ಲಿ ನೀವು ಯಾರನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸುವಿರಿ ಎಂದು ಓಂದೇವ ಅವರು ಕೇಳುವರು, ಅದಕ್ಕೆ ಉತ್ತರ, “ಆ ನೋಡಿದ ವ್ಯಕ್ತಿಯನ್ನು” ಎಂದಾಗುವಾಗ, ಓಂದೇವರವರು ತನಗೆ ಮಾತ್ರ ತಿಳಿದಿರುವ ಆ ಭೀಕರ ದುರಂತ ಅಪಾಯದ ಸುಳಿವನ್ನು ಜಗತ್ತಿಗೆ ನೀಡದಿದ್ದಲ್ಲಿ ಅದು ಅವರ ದೊಡ್ಡ ತಪ್ಪು ಆಗುವುದು. ಈ ಕಾರಣಕ್ಕಾಗಿ ಮಾತ್ರ ಅದನ್ನು ಜಗತ್ತಿಗೆ ತಿಳಿಸಲು ಪ್ರಯತ್ನಿಸಿರುವುದು ಎನ್ನುವರು. ಆದುದರಿಂದ ಆ ಒಂದು ಉದ್ದೇಶವಲ್ಲದೆ, ಧರ್ಮ, ದೇವರು, ಪಂಥ ಇತ್ಯಾದಿಗಳನ್ನು ನಿಂದಿಸುವುದಲ್ಲ ತನ್ನ ಉದ್ದೇಶವೆಂದು ಸ್ಪಷ್ಟವಾಗಿ ಹೇಳಿರುವರು.
ವಿಶೇಷ ಸೂಚನೆ
ನಾವು ಓಂದೇವ ಅವರ ಹಲವು ಸಾರ್ವತ್ರಿಕ ಸಂದೇಶಗಳನ್ನು ಹಾಗೂ ಕೆಲವು ಪ್ರಶ್ನೋತ್ತರಗಳನ್ನು ನಿಮ್ಮ ಮುಂದಿಟ್ಟಿದ್ದೇವೆ, ಮತ್ತು ಇನ್ನು ಉಳಿದಿರುವ ಸಂದೇಶಗಳನ್ನು ಸ್ವಲ್ಪ ಸಮಯದ ನಂತರ ಇದೇ ಜಾಲತಾಣದ ಪ್ರಶ್ನೋತ್ತರ ವಿಭಾಗದಲ್ಲಿ ಪ್ರಕಟಿಸುವೆವು. ಇನ್ನು, ಜನರಿಗೆ ಸತ್ಯಸಂಧವಾದ ಪ್ರಶ್ನೆಗಳಿದ್ದಲ್ಲಿ ಅವನ್ನು ನಮಗೆ ಬರೆದು ಕಳುಹಿಸಬಹುದಾಗಿದೆ. ಆದರೆ, ಹಲವು ಪ್ರಶ್ನೆಗಳ ಉತ್ತರಗಳನ್ನು ಇದೇ ಪುಸ್ತಕದಲ್ಲಿ ಈ ಮೊದಲೇ ತಿಳಿಸಿ ಆಗಿರುವ ಕಾರಣ, ಪ್ರಶ್ನೆಗಳನ್ನು ಕಳುಹಿಸುವವರು ಅವೆಲ್ಲವನ್ನೂ ಓದಿದ ನಂತರವೇ ಕಳುಹಿಸಬೇಕಾಗಿದೆ ಎಂದು ಕೇಳಿಕೊಳ್ಳುವೆವು. ಅವುಗಳಿಗೆ ಉತ್ತರಗಳನ್ನು, ಓಂದೇವರವರು ತಮ್ಮ ಸಮಯ, ಸೌಕರ್ಯಕ್ಕನುಸರಿಸಿ, ಕೆಲವು ದಿವಸಗಳ ನಂತರ ತಿಳಿಸುವರು ಮತ್ತು ಅವನ್ನು ನಾವು ಇದೇ ಜಾಲತಾಣದ ಪ್ರಶ್ನೋತ್ತರ ವಿಭಾಗದಲ್ಲಿ ಪ್ರಕಟಿಸುವೆವು.