ಓಂದೇವ ಕಿರುನುಡಿಗಳು

  • ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೇ ದೇವರು. ಇದಕ್ಕಿಂತ ಮೇಲೆ ದೇವ ಸ್ವಭಾವವಿಲ್ಲ, ಮತ್ತು ಇದಕ್ಕಿಂತ ಕಡಿಮೆ ದೇವ ಸ್ವಭಾವ ಆಗುವುದಿಲ್ಲ.
  • ಹಲವು ಸಲ ಚಿಂತಿಸಿದಲ್ಲಿ ನಿಮಗೆ ಸತ್ಯವು ದೊರಕಲೂಬಹುದು, ಆದರೆ ಜೀವನ ಪೂರ್ತಿ ಯಾವುದನ್ನಾದರೂ ನಂಬಿದಲ್ಲಿ ಆ ನಂಬಿಕೆ ಮಾತ್ರ ಉಳಿಯುವುದು ಹೊರತು ಅದು ಸತ್ಯವನ್ನು ತರಲಾರದು.
  • ನಿಜವಾಗಿಯೂ ದೇವರ ಅನುಗ್ರಹವೆಂದರೆ ಉತ್ತಮ ಗುಣವಾಗಿದೆ. ಯಾಕೆಂದರೆ ಅದಿಲ್ಲದವನು ತನ್ನ ಜೀವನ ಪೂರ್ತಿ ಸಾವಿರಾರು ರೀತಿಗಳಲ್ಲಿ ಕೊರಗುತ್ತಾ ನರಕದಲ್ಲಿ ಬಾಳುವನು!!
  • ಧರ್ಮ ಎಂದರೆ ಅದು ಶಾಂತಿಯ ಪರ್ವತವಾಗುವುದು. ಯುದ್ಧ ಎಂದರೆ ಅದು ಹಿಂಸೆಯ ಪರ್ವತವಾಗಿದೆ, ಆದರೆ ಧರ್ಮಯುದ್ಧ ಎಂದರೆ ಅದು ಮೂರ್ಖತನದ ಪರ್ವತವಾಗುವುದು.
  • ಅಶೋಕ ಚಕ್ರವರ್ತಿಯ ಆ ಯುದ್ದ-ಕ್ರೌರ್ಯವು ಕೂಡಾ ಒಂದು ದಿನ, ಆತನಿಗೆ ಮಾನವನ ನೋವಿನ ಆ ಸತ್ಯಬೋಧವಾದ ಹಿನ್ನೆಲೆಯಲ್ಲಿ, ಸಂಪೂರ್ಣವಾಗಿ ಇಲ್ಲವಾಯಿತು! ಆದರೆ, ದೇವರಿಗಾಗಿ ಅಥವಾ ಧರ್ಮಕ್ಕಾಗಿ ಮಾಡುವ ಯುದ್ದ-ಕ್ರೌರ್ಯವು ಆ ಸತ್ಯಬೋಧವನ್ನು ಎಂದೂ ಸೃಷ್ಟಿಸಲಾರದು. ಅಂದರೆ, ಆ ಕ್ರೌರ್ಯವನ್ನು ಇಲ್ಲಿ ದೇವರಿಗೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಅರ್ಥ!! ಯಾಕೆಂದರೆ, ಸಾಮಾನ್ಯ ಯುದ್ಧದಲ್ಲಿ ರಾಜನಿಗೆ ಅದು ತನ್ನ ಸ್ವಾರ್ಥಕ್ಕೆ ಎಂದು ತಿಳಿದಿರುತ್ತದೆ, ಆದರೆ ಧರ್ಮದ ಹೆಸರಲ್ಲಿ ಕ್ರೌರ್ಯವನ್ನು ಮಾಡುವಾಗ ಅಲ್ಲಿ, ಅದನ್ನು ‘ದೇವರಿಗಾಗಿ’ ಅಥವಾ ‘ಸ್ವರ್ಗಕ್ಕಾಗಿ’ ಎಂದು ಅತ್ಯಂತ ಒಳಿತಿನ ಹಿನ್ನೆಲೆಯಲ್ಲಿ ಚಿತ್ರಿಸಿಬಿಟ್ಟಿರುವರು!!! ನಮಗೆ ಎಲ್ಲರಿಗೂ ತಿಳಿದಿರುವಂತೆ, ‘ಪ್ರೀತಿಯೇ ದೇವರು’ ಮತ್ತು ‘ಕ್ರೌರ್ಯವೇ ಸೈತಾನ’ ಎಂದಿರುವಾಗ, “ದೇವರಿಗಾಗಿ ಯುದ್ದ ಅಥವಾ ಕ್ರೌರ್ಯ” ಎಂಬುವುದು, ಅತ್ಯಂತ ದೊಡ್ಡ ದೈವ ನಿಂದನೆ ಮತ್ತು ದೇವರಿಗೆ ಮಾಡುವ ಅತ್ಯಂತ ಭಯಾನಕ ಅಪಚಾರವಾಗುವುದು ಎಂಬುವುದರಲ್ಲಿ ಸಂಶಯವಿಲ್ಲ.
  • ನಂಬಿಕೆಯು ಭಕ್ತಿಯನ್ನು ಯಾಂತ್ರಿಕ ಆಚಾರದೊಂದಿಗೆ ಜೋಡಿಸುವ ಅತ್ಯಂತ ಜಾಣತನದ ಒಂದು ಕೊಂಡಿಯಾಗಿದೆ. ಆಚಾರವೇ ಆಧಿಪತ್ಯವನ್ನು ಸ್ಥಾಪಿಸಿರುವಲ್ಲಿ, ಇನ್ನು, ಶುದ್ಧ-ಭಕ್ತಿಗೆ ಸ್ಥಾನವಿರುವುದಿಲ್ಲ. ಅದೇ ರೀತಿ, ಶುದ್ಧ-ಭಕ್ತಿ ಇರುವಲ್ಲಿ ಆಚಾರಗಳನ್ನು ಯಾರೂ ಗಣನೆಗೆ ತೆಗೆಯುವುದೇ ಇಲ್ಲ. ಮಹಾತ್ಮರು ಹಾಗೂ ಭಕ್ತಿ ಯೋಗಿಗಳು ತಮ್ಮ ಶುದ್ಧ-ಭಕ್ತಿಯಿಂದ ಮಾತ್ರ ದೇವರನ್ನು ಭಜಿಸಿದವರಾಗಿರುವರು.
  • ದೇವರಿಗೆ ಮತ್ತು ಧರ್ಮಕ್ಕೆ ಆಧಾರವಾಗಿರುವುದು ಸತ್ಯಸಂಧತೆ ಮತ್ತು ಅದರ ಮರಿಯಾದ ಆತ್ಮೀಯ ಪ್ರೀತಿ ಮಾತ್ರ ಎಂದು ತಿಳಿಯಬೇಕು. ಅಂದರೆ, ಇವೇ ಧರ್ಮ ಮತ್ತು ದೇವಸ್ವಭಾವ ಆಗಿದೆ ಎಂದು ಅರ್ಥ. ಇನ್ನು, ಮಹಾತ್ಮರಿಗೆ ನೈತಿಕತೆಯು ಅವುಗಳಿಂದ ಹೊರಟು ಬರುವ ಆ ಸಹಜ ಕ್ರಿಯೆಗಳು ಮಾತ್ರವಾಗುವವು.
  • ಮಹಾತ್ಮರು ಎಂದರೆ ಮಹಾ ಹೃದಯವಂತರು ಎಂದು ಅರ್ಥ. ಅವರು ಯೋಗಿಯಾಗಿರಬಹುದು, ಸನ್ಯಾಸಿಯಾಗಿರಬಹುದು, ಗೃಹಸ್ಥರಾದ ಋಷಿಯಾಗಿರಬಹುದು ಅಥವಾ ಗೃಹಸ್ಥರಾದ ಸಾಮಾನ್ಯ ಮಾನವರು ಆಗಿರಬಹುದು. ಅಂದರೆ, ಹೃದಯವಂತಿಕೆಯನ್ನು ಗಮನಿಸದೆ, ಬರೇ “ತನಗೆ” ಯೋಗ ಸಿದ್ದಿ, ಸ್ವರ್ಗ, ಮೋಕ್ಷ ಇತ್ಯಾದಿಗಳಲ್ಲಿ ಯಾವುದಾದರೂ ಒಂದನ್ನು ಉದ್ದೇಶಿಸುವ ಯಾರೂ ಕೂಡಾ ಮಹಾತ್ಮರಾಗುವುದಿಲ್ಲ ಎಂದು ಅರ್ಥ. ಸಾಮಾನ್ಯ ಮಾನವರಿಗೂ ಮಹಾತ್ಮರಾಗಿ ಜೀವಿಸಿ ಅದರ ಲಾಭವನ್ನು ಪಡೆಯುವ ವಿಚಾರವನ್ನು ಮಾತ್ರ ಎಲ್ಲಾ ಕಡೆಯೂ ಚರ್ಚಿಸಿರುವುದು ಎಂಬುವುದನ್ನು ಮರೆಯದೆ ತಿಳಿಯಬೇಕು. ಮರದಡಿಯ ಮಹಾತ್ಮರ ವಿಚಾರವಲ್ಲ ಹೇಳುತ್ತಿರುವುದೆಂದು ಪ್ರತ್ಯೇಕವಾಗಿ ನೆನಪಿಡಬೇಕು. ಮಹಾತ್ಮರ ಸಾಧನೆ ಎಂದಾಗ, ಸಾಮಾನ್ಯ ಮಾನವರು ಮನೆ ಮನೆಯ ಮಹಾತ್ಮರಾಗಿ ಬದಲಾಗಲು ಸಾಧ್ಯವಾಗುವ ಆ ಮಹಾಜೀವನ ರೀತಿಯ ಸುಲಭ ಅನುಷ್ಠಾನಗಳ ಬಗ್ಗೆ ಮಾತ್ರ ಉದ್ದೇಶಿಸುವುದು ಎಂದು ತಿಳಿದಿರಬೇಕು. ಮಹಾತ್ಮರ ರೀತಿಯ ಜೀವನದಲ್ಲಿ ಒಬ್ಬಾತನು ತನ್ನ ತಲೆಯೊಳಗೆ ಹರಡಿರುವ ತರಗೆಲೆಗಳನ್ನು ಗುಡಿಸಿ ಹೊರಹಾಕುವನು, ಆಗ ಅಲ್ಲೇ ಅತನಿಗೆ ಆ ತನ್ನ ಬಂಗಾರದ ಜೀವನವು ಕಾಣಿಸುವುದು!
  • ನಂಬಿಕೆಯವರಿಗೆ ಮತ್ತು ಮಹಾತ್ಮರಿಗೆ ಇರುವ ವ್ಯತ್ಯಾಸ ಏನೆಂದರೆ, ನಂಬಿಕೆಯವರು ಎಲ್ಲಾ ಧರ್ಮಗಳಲ್ಲೂ “ಸತ್ಯವು ನಮ್ಮ ಅಂಗಳದಲ್ಲಿ ಮಾತ್ರವೇ ಇರುವುದು” ಎಂದು ಸಾಧಿಸುವುದಕ್ಕೋಸ್ಕರ ಖಂಡನೆ ಮತ್ತು ಮಂಡನೆಗಳ ಮೂಲಕ ಆ “ಏಕ ಸತ್ಯ” ವನ್ನು ತಮ್ಮ ತಮ್ಮ ಅಂಗಳಕ್ಕೆ ಎಳೆಯುತ್ತಿರುತ್ತಾರೆ!! ಹೀಗೆ ಎಳೆದಾಗ ಆ “ಏಕ ಸತ್ಯವು” ಎಲ್ಲಿಗೂ ಹೋಗಲಾರದೆ ಮತ್ತು ನೋವು ತಾಳಲಾರದೆ ಒದ್ದಾಡುವುದು. ಆದರೆ ಇದರ ಫಲವಾಗಿ ಇಂದೂ ಆ “ಏಕ ಸತ್ಯವು” ಎಲ್ಲರ ಅಂಗಳದಿಂದಲೂ ಹೊರಗಡೆಯೇ ಉಳಿದುಕೊಂಡಿದೆ!! ಅಂದರೆ, ಆ ಖಂಡನೆ, ಮಂಡನೆಯ ರೀತಿಯಲ್ಲಿ ಆ ಏಕಸತ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ಅರ್ಥ. ಇನ್ನು, ಮಹಾತ್ಮರ ರೀತಿಯು, ಸತ್ಯ ಎಲ್ಲಿದ್ದರೂ ಅದನ್ನು ಮಾತ್ರ ಸತ್ಯ ಎಂದು ಒಪ್ಪುವ ರೀತಿಯಾಗಿದೆ. ಅಂದರೆ, ಸತ್ಯವನ್ನು ತಮ್ಮ ಅಂಗಳಕ್ಕೆ ಎಳೆಯುವ ಪ್ರಯತ್ನವನ್ನು ಅವರು ಎಂದೂ ಮಾಡುವುದಿಲ್ಲ, ಅದರ ಬದಲು ಅವರು ಸತ್ಯ ಎಲ್ಲಿದ್ದರೂ ಆ ಸತ್ಯದ ಸ್ಥಳದಲ್ಲೇ ಜೀವಿಸುವರು!! ಒಟ್ಟಿನಲ್ಲಿ, ಸತ್ಯ ಇರುವಲ್ಲಿ ಮಾತ್ರ ಜೀವಿಸುವವರು ಮಹಾತ್ಮರು, ಮತ್ತು ಇಲ್ಲಿಯ ತನಕ ಸತ್ಯವನ್ನು ಎಳೆದು ತನ್ನ ಅಂಗಳಕ್ಕೆ ತರಲಾಗದಿದ್ದರೂ, ಇನ್ನೂ ತನ್ನ ಅಂಗಳದಲ್ಲೇ ನಿಂತು, ಪ್ರತಿ ದಿನವೂ ಸತ್ಯಕ್ಕೆ ಗಾಳಹಾಕುವವರು ಈ ನಂಬಿಕೆಯವರು ಎಂದು ಹೇಳಬಹುದು!!
  • ಭಕ್ತಿಯು ಒಂದು ಭಾವವಾಗಿದೆ ಎಂಬುವುದು ಸರಿ. ಆದರೆ ಅದು ಒಬ್ಬ ಕಳ್ಳನ ಮೇಲೆ ಹುಟ್ಟಿಕೊಳ್ಳುವುದಿಲ್ಲ ಬದಲು ಒಬ್ಬ ಪವಿತ್ರ ಮಹಾತ್ಮನ ಮೇಲೆ ಹುಟ್ಟಿಕೊಳ್ಳುವುದು. ಇದರ ಅರ್ಥ, ಭಕ್ತಿಯಲ್ಲಿಯೂ ಚಿಂತನೆ ಇದೆ ಎಂದಾಗಿದೆ ಮತ್ತು ಅದು ಅಸತ್ಯವನ್ನು ಎಂದೂ ಒಪ್ಪುವುದಿಲ್ಲ ಎಂದೂ ಆಗಿದೆ. ನೀವು “ಅಮವಾಸ್ಯೆಯ ಚಂದ್ರನಂತೆ ದೊಡ್ಡದಾದ” ಎಂದು ದೇವರನ್ನು ಹೊಗಳುವ ಹಲವು ಗೀತೆಗಳನ್ನು ಎಷ್ಟೇ ಭಕ್ತಿ ಭಾವದಲ್ಲಿ ಹಾಡಿದರೂ, ಎಲ್ಲರು ನಿಮ್ಮನ್ನು ಒಮ್ಮೆ ನೋಡಿ ಮುಗುಳು ನಕ್ಕು ಮುಂದೆ ನಡೆವರು ಅಷ್ಟೆ. ಅಂದರೆ, ಭಕ್ತಿ ಭಾವವು ಸುಳ್ಳಿನಿಂದ ಹುಟ್ಟಿಕೊಳ್ಳುವುದಿಲ್ಲ ಎಂದು ಅರ್ಥ. ಅದು ಹುಟ್ಟಿಕೊಳ್ಳಬೇಕಿದ್ದರೆ, ನಮ್ಮ ಮನಸ್ಸಿಗೆ ನಾವು ತಕ್ಕ ಸಾಕ್ಷ್ಯಾಧಾರಗಳನ್ನು ಒದಗಿಸಬೇಕಾಗುವುದು! ಇದಾವುದೂ ಇಲ್ಲದೆ ಇರುವುದೇ ಆಚಾರ-ಭಕ್ತಿ ಆಗುವುದು. ಅದು ಹೇಗೆ ಭಕ್ತಿಯ ಹಿನ್ನೆಲೆಯಲ್ಲಿ ಹೇಳಲ್ಪಡುವುದು ಎಂಬುವುದೇ ಅಚ್ಚರಿಯ ವಿಷಯವಾಗಿದೆ!!
  • ಮಾನವನು ಪ್ರಾಣಿಗಳಿಗಿಂತ ಹೆಚ್ಚು ಕಷ್ಟಪಡುವನು, ಯಾಕೆಂದರೆ ಆತನೊಳಗೆ ಒಂದು ದೊಡ್ಡ ಹೊಟ್ಟೆ ಇರುವ ‘ಅಹಂಕಾರವು’ ಯಾವಾಗಲೂ ಹಸಿವಿನಿಂದ ಕಾಯುತ್ತಿರುವುದು! ಮಾನವನಿಗೆ ಅಹಂಕಾರವು ಇಲ್ಲವಾದಲ್ಲಿ ಕಷ್ಟಕ್ಕೆ ಗುರಿಯಾಗುವ ಸಾಧ್ಯತೆಯು ಪ್ರಾಣಿಗಳಿಗಿಂತಲೂ ಅತ್ಯಂತ ಕಡಿಮೆ ಮಾತ್ರ ಇರುವುದು.
  • ಕ್ಷಮೆಯು ವ್ಯಯಕ್ತಿಕವಾಗಿದೆ, ಅದು ಧರ್ಮಕ್ಕೆ ಸಂಬಂಧಿಸಿಲ್ಲ. ಆದರೆ, ಧರ್ಮವು ವ್ಯಯಕ್ತಿಕ ಹಾಗೂ ಸಾಮಾಜಿಕವಾಗಿದೆ, ಮತ್ತು ಅದು ಸಮಾಜದಲ್ಲಿ ದುಷ್ಟರು ಹೆಚ್ಚಾಗದಂತೆ ಶಿಕ್ಷಿಸುವ ಕೆಲಸವನ್ನೂ ಮಾಡುತ್ತಿರುವುದು. ಕ್ಷಮೆಯ ಒಂದು ದೊಡ್ಡ ಕೊರತೆಯು, ಒಬ್ಬಾತನು ಕ್ಷಮಿಸಲ್ಪಟ್ಟರೂ ಆತನಿಗೆ ಜ್ಞಾನೋದಯವಾಗಬೇಕೆಂದಿಲ್ಲ ಎಂಬುವುದಾಗಿದೆ. ಅಂದರೆ, ಒಬ್ಬಾತನ ಕ್ಷಮೆಯಿಂದ ತಪ್ಪು ಮಾಡಿದವನಿಗೆ ಜ್ಞಾನೋದಯವಾಗುವುದಾದರೆ ಆ ಕ್ಷಮೆಯು ಮಾತ್ರ ಧರ್ಮವಾಗುವುದು, ಮತ್ತು ಹಾಗೆ ಆಗುವುದಿಲ್ಲವಾದರೆ ಅದು ಆ ದುಷ್ಟರ ಹೆಚ್ಚಳಕ್ಕೆ ಕಾರಣವಾಗುವ ಅಧರ್ಮವಾಗುವುದು!!
  • ತಾಳ್ಮೆಯು ಮಹಾತ್ಮರಿಗೆ ಸಹಜವಾಗಿರುವುದು. ಆದರೆ, ಜನ ಸಾಮಾನ್ಯರಿಗೆ ಅದೊಂದು ಕಷ್ಟಾನುಭವವಾಗುವುದು. ತಾಳ್ಮೆಯು, ಜನರನ್ನು, ತಮ್ಮ ಸೋಲಿಗೆ ಕಾರಣವಾಗುವ ಆ ತಪ್ಪು ನಿರ್ಣಯವನ್ನು ಕೊಡುವ, ದುಡುಕು-ಸ್ವಭಾವದಿಂದ ರಕ್ಷಿಸುವುದು.
  • ಕೋಟಿ ನಕ್ಷತ್ರಗಳ ಮಧ್ಯೆ ನಮ್ಮ ಭೂಮಿಯು ಏನೂ ಅಲ್ಲ; ಏನೂ ಅಲ್ಲದ ಈ ಭೂಮಿಯಲ್ಲಿ ನಮ್ಮ ಶರೀರವು ಏನೇನೂ ಅಲ್ಲ; ಈ ಏನೇನೂ ಅಲ್ಲದ ಶರೀರದಲ್ಲಿ ತುಂಬಿದೆ ನೋವು, ರೋಗ, ಕಷ್ಟಗಳೆಲ್ಲ;  ಆದರೂ ಹೇಳುವುದು ಮನವು “ನಾನೇ ಎಲ್ಲ” !
  • ಈ ಮಾನವ ಕುಲವನ್ನು ಇನ್ನಾವ ಸಂಬಂಧವೂ ಸೃಷ್ಟಿಸಿಲ್ಲ, ಅದನ್ನು ಸೃಷ್ಟಿಸಿರುವುದು ಪತಿ-ಪತ್ನಿ ಸಂಬಂಧ ಮಾತ್ರವಾಗಿದೆ. ಮಾತ್ರವಲ್ಲ, ಒಂದು ಕುಟುಂಬದಲ್ಲಿ ಮಕ್ಕಳನ್ನು ಬೆಳೆಸುವವರೂ ಇವರೇ ಆಗಿರುವರು, ಆದರೆ ತಂದೆ, ತಾಯಿ ಎಂಬ ಇನ್ನೊಂದು ಹೆಸರಲ್ಲಿ ಮಾತ್ರವೆಂಬುವುದು ವ್ಯತ್ಯಾಸ. ಅಂದರೆ, ಈ ತಂದೆ, ತಾಯಂದಿರು ಉತ್ತಮರಾಗಿದ್ದರೆ, ಹೆಚ್ಚಿನ ಮಕ್ಕಳು ಅವರನ್ನೇ ಅನುಸರಿಸುವ ಸಾಧ್ಯತೆಯು ಹೆಚ್ಚುವುದು, ಮತ್ತು ಹಾಗಾದರೆ, ಅದರೊಂದಿಗೆ ಮಾನವ ಕುಲವೇ ಉತ್ತಮವಾಗುವ ಸಾಧ್ಯತೆಯೂ ಇರುವುದು. ಇಷ್ಟೆಲ್ಲ ವಿಶೇಷತೆಗಳನ್ನು ಈ ಪತಿ-ಪತ್ನಿ ಸಂಬಂಧವು ಹೊಂದಿರುವುದರಿಂದಲೇ ಈ ಸಂಬಂಧವನ್ನು ಎಲ್ಲಾ ಇತರ ಸಂಬಂಧಗಳಿಗಿಂತಲೂ ಮುಖ್ಯವಾದುದು ಎನ್ನುವುದು.
  • ಎಲ್ಲಾ ಧರ್ಮ, ಪಂಥಗಳು ಈ ಜಗತ್ತಿನ ಜನತೆಗಾಗಿ ಅನವರತ ಶ್ರಮವಹಿಸುತ್ತಾ ಬಂದಿವೆ ಎಂದು ತಾವೇ ಹೇಳಿಕೊಳ್ಳುತ್ತಿವೆ, ಆದರೆ ಜಗತ್ತು ಮತ್ತೂ ಕೆಟ್ಟದಾಯಿತು! ಅವು ಮತ್ತೂ ಶ್ರಮವಹಿಸಿದವು, ಆಗ ಮತ್ತೂ ಕೆಟ್ಟದಾಯಿತು! ಮತ್ತೂ ಶ್ರಮ ವಹಿಸಿದವು, ಆಗಲೂ ಜಗತ್ತು ಮತ್ತೂ ಕೆಟ್ಟದಾಯಿತು! ಇನ್ನು ಮುಂದೆಯೂ ಶ್ರಮವಹಿಸುವವು, ಆಗ ಒಮ್ಮೆಗೆ ಈ ಜಗತ್ತು ಒಳ್ಳೆಯದಾಗಬಹುದೇ? ಈ ರೀತಿ ಕೆಟ್ಟದಾಗಲು ಕಾರಣವನ್ನು ನಾಸ್ತಿಕರಲ್ಲಿ ಕೇಳಿದರೆ, ಅವರು ಆಸ್ತಿಕರನ್ನು ಬೊಟ್ಟು ಮಾಡಿ ತೋರಿಸುವರು! ಆದರೆ ಆಸ್ತಿಕರಲ್ಲಿ ಇದೇ ಪ್ರಶ್ನೆಯನ್ನು ಕೇಳಿದರೆ, “ಅದು, ಕೊನೆಗೆ ಎಲ್ಲರೂ ಕೆಟ್ಟವರಾಗುವರು ಎಂದು ಮೊದಲೇ ನಮ್ಮ ದೇವರು ನಮ್ಮ ಧರ್ಮದಲ್ಲಿ ಹೇಳಿರುವರು” ಎನ್ನುವರು!! ಹಾಗಿದ್ದರೆ, ಇಷ್ಟು ಕಾಲ ಉಸಿರುಗಟ್ಟಿ ಶ್ರಮವಹಿಸಿದ್ದು ಯಾಕೆ ಎಂಬ ಪ್ರಶ್ನೆಯು ಇಂದೂ ಯಕ್ಷಪ್ರಶ್ನೆಯಾಗಿಯೇ ಉಳಿಯುವುದು!!!
  • ನಂಬಿಕೆಯು ಅರಿವಿಗಿಂತ ಶ್ರೇಷ್ಠ ಎಂದು ವಾದಿಸಲು ಎಂದಿಗೂ ಸಾಧ್ಯವಿಲ್ಲ. ಯಾಕೆಂದರೆ, ಸರಿಯಾದ ಕಾರಣವಿದ್ದಲ್ಲಿ ಸತ್ಯವು ಸಾಬೀತು ಆಗಲ್ಪಡುವುದು, ಆದರೆ ನಂಬಿಕೆಗೆ ಇದು ಸಾಧ್ಯವಿಲ್ಲ. ಜಗತ್ತು ಸರಿಯಾದ ಕಾರಣಕ್ಕೆ ಅಥವಾ ತರ್ಕಕ್ಕೆ ತಲೆ ಬಾಗಲೇಬೇಕು. ಎರಡು ಕೂಡಿಸು ಎರಡು ನಾಲ್ಕು ಅಲ್ಲ ಎಂದು ದೇವರಿಂದಲೂ ವಾದಿಸಿ ಜಯಿಸಲು ಸಾಧ್ಯವಿಲ್ಲ. ಈ ಕಾರಣಗಳಿಗೆ ತಲೆ ಬಾಗಿರುವ ಸ್ಪಷ್ಟ ಉದಾಹರಣೆಯೇ ನಮ್ಮ ಮುಂದಿರುವ ಮತ್ತು ನಾವು ಅನುಭವಿಸುತ್ತಿರುವ ಈ ಎಲ್ಲಾ ತರದ ವೈಜ್ಞಾನಿಕ ಸೌಕರ್ಯಗಳಾಗಿವೆ. ಅಂದರೆ, ವೈಜ್ಞಾನಿಕವಾದುವೆಲ್ಲಾ “ಕಾರಣ ಸಹಿತ ವಿವರಣೆಯ” ಮೂರ್ತ ರೂಪಾಂತರಗಳಾಗಿವೆ ಎಂದು ಅರ್ಥ. ಇತ್ತ, ‘ನಂಬಿಕೆ’ಯು ಕಾರಣ ಕೊಡದಿರುವಿಕೆಯ ಮೂರ್ತ ರೂಪಾಂತರವಾಗುವವು! ಇನ್ನೂ, ನಂಬಿಕೆಯು ಅರಿವಿಗಿಂತಲೂ ಶ್ರೇಷ್ಟ ಎಂದರೆ, ಅದು ಮಾನಸಿಕ ಭ್ರಮೆಯಲ್ಲಿ ಮಾತ್ರ ಆ ರೀತಿ ಹೇಳಲು ಸಾಧ್ಯ, ಯಾಕೆಂದರೆ ಅಲ್ಲಿ ತರ್ಕವು ಸಂಪೂರ್ಣವಾಗಿ ನಾಶವಾಗಿರುತ್ತದೆ. ಇದಕ್ಕೆ ಒಂದು ಉದಾಹರಣೆ ಕಥೆಯನ್ನು ನೋಡೋಣ. “ಮೂರು ಅಜ್ಜಿಯಂದಿರು, ಆ ಮೂವರಿಗೂ ಸರಿಯಾಗಿ ಪರಿಚಯವಿರುವ ಒಬ್ಬ ವೈದ್ಯರಲ್ಲಿಗೆ, ಆ ಮೂವರಿಗೂ ಸಾಮಾನ್ಯವಾಗಿರುವ “ಕಳ್ಳರ ಭಯ”ವೆಂಬ ಒಂದೇ ಮಾನಸಿಕ ರೋಗಕ್ಕೆ ಚುಚ್ಚು ಮದ್ದನ್ನು ಪಡೆದು ಹಿಂದಿರುಗುತ್ತಿದ್ದರು. ಆದರೆ ವೈದ್ಯರು ಆ ಎರಡು ಶ್ರೀಮಂತ ಅಜ್ಜಿಯರಿಗಿಂತ ಎರಡು ಪಾಲು ಹೆಚ್ಚು ಹಣವನ್ನು ಅವರಲ್ಲಿ ಒಬ್ಬರಾದ ಅತ್ಯಂತ ಬಡ ಅಜ್ಜಿಯ ಕೈಯಿಂದ ವಸೂಲಿ ಮಾಡಿದುದು ಅವರಿಗೆ ತಿಳಿಯಿತು. ಅದು ಅವರಲ್ಲಿ ಕುತೂಹಲ ಮತ್ತು ಅಚ್ಚರಿಯನ್ನು ಮೂಡಿಸಿತು! ಕೊನೆಗೆ “ವೈಧ್ಯರು ನಿನಗೆ ಏನು ಮಾಡಿದರು?” ಎಂದು ಆ ಅಜ್ಜಿಯಲ್ಲಿ ಕೇಳುವಾಗ ಎಲ್ಲವೂ ಸ್ಪಷ್ಟವಾಯಿತು.” ವೈದ್ಯರು ಆ ಅಜ್ಜಿಗೆ ಮಾತ್ರ ಒಂದರ ಬದಲು ಎರಡು ಚುಚ್ಚು ಮದ್ದನ್ನು ಕೊಟ್ಟು, ಮಾತ್ರೆಗಳನ್ನೂ ಆ ಇಬ್ಬರು ಅಜ್ಜಿಯರಿಗಿಂತ ಎರಡು ಪಾಲು ಹೆಚ್ಚು ಕೊಟ್ಟಿದ್ದರಂತೆ! ಅಂದರೆ, ವೈದ್ಯರಿಗೆ ಪರಿಚಯವಿರುವ ಕಾರಣ ಆ ಮೂರು ಅಜ್ಜಿಯಂದಿರ ಸಾಂಪತ್ತಿಕ ಹಿನ್ನೆಲೆ ಚೆನ್ನಾಗಿ ತಿಳಿದಿದೆ. ಆಗ, ಆ ಅತ್ಯಂತ ಬಡತನದ ಅಜ್ಜಿಗೆ ಕಳ್ಳರ ಭಯವಿದೆ ಎಂದರೆ ಆ ಅಜ್ಜಿ ತರ್ಕವನ್ನೆಲ್ಲಾ ಕಳಕೊಂಡು ಬರೇ ಒಂದು ತರದ ಭ್ರಮೆಯಿಂದ ಮಾತ್ರ ಭಯ ಪಡುತ್ತಿರುವುದು ಎಂದು ವೈದ್ಯರಿಗೆ ತಿಳಿಯಿತು. ಈ ಹಿನ್ನೆಲೆಯಲ್ಲಿ ಆ ಅಜ್ಜಿಗೆ ದೊಡ್ಡ ಪ್ರಮಾಣದಲ್ಲಿ ಮದ್ದನ್ನು ಕೊಟ್ಟಿರುವುದು ಎಂದು ಅರ್ಥ. ಇದೇ ರೀತಿ, ತರ್ಕವನ್ನು ಕಳಕೊಂಡ ನಂಬಿಕೆಯೂ ಭ್ರಮೆಯ ತರದಲ್ಲಿ ಜಗತ್ತಿನಲ್ಲಿ ಶೋಷಣೆ, ಧ್ವೇಷ, ಹಿಂಸೆ, ರಕ್ತಪಾತವನ್ನು ಮಾಡುತ್ತಿದೆ. ಯಾವಾಗ ಅರಿವು ಈ ನಂಬಿಕೆಯ ಬದಲು ಬರುವುದೋ, ಆಗ, ಕೊನೆಯ ಪಕ್ಷ ಇಂದಿನ ಅಪರಾಧಗಳ ಸಂಖ್ಯೆಯು ಅದರ ಅರ್ಧದಷ್ಟಾದರೂ ಇಳಿಯುವುದರಲ್ಲಿ ಸಂಶಯವಿಲ್ಲ. ಇನ್ನು, ಮಹಾತ್ಮರ ಸಂಖ್ಯೆ ಹೆಚ್ಚಾದರೆ, ಅಲ್ಲಿ ಆ ಸಮಾಜವು ಶಾಂತಿಯ ಸ್ವರ್ಗವಾಗಿ ಪರಿವರ್ತಿಸಲ್ಪಡುವುದು ಎಂಬುವುದರಲ್ಲೂ ಸಂಶಯವಿಲ್ಲ!!
  • ನಮಗೆ ಸಾವಿರ ‘ಬೇಕು’ಗಳಿದ್ದರೆ ಒಂದರಲ್ಲೂ ತೃಪ್ತಿ ಇರಲಾರದು. ನಮಗೆ ಸಾವಿರ ಗುರಿಗಳಿದ್ದರೆ ಒಂದನ್ನೂ ಸಾಧಿಸಲು ಸಾಧ್ಯವಾಗದು. ಬೇಕುಗಳು, ಗುರಿಗಳು, ಇತ್ಯಾದಿಗಳು ಜೀವನವಲ್ಲ, ಯಾಕೆಂದರೆ ಇವೆಲ್ಲ ಮಾನವನನ್ನು ಸರ್ವವನ್ನೂ ಮರೆವಂತೆ ಮಾಡುವುದು ಮತ್ತು, ಚಿಕ್ಕ ಮಕ್ಕಳು ಬೀದಿಗೆ ಬಂದ ಆನೆಯ ಹಿಂದೆ ಎಲ್ಲವನ್ನು ಮರೆತು ನಡಕೊಂಡು ಹೋಗುವಂತೆ, ಬೇಕು, ಗುರಿಗಳ ಹಿಂದೆ ಓಡುತ್ತಾ ಜೀವನವನ್ನು ಮುಗಿಸುವಂತೆ ಮಾಡುವುದು! ಆದಕ್ಕೆಂದೇ ಮಹಾತ್ಮರು “ಮೊದಲು ಜೀವನವನ್ನು ರೂಪಿಸಬೇಕು” ಎನ್ನುವುದು, ಮತ್ತು ಗುರಿ ಅಥವಾ ಬೇಕುಗಳನ್ನು ಆ ರೂಪಿಸಿರುವ ಜೀವನವನ್ನು ಮತ್ತೂ ಅಂದವಾಗಿಸುವಲ್ಲಿ ಅದರ ಅಲಂಕಾರದ ರೀತಿಯಲ್ಲಿ ಮಾತ್ರ ಬಳಸಬೇಕು ಎನ್ನುವುದು. ಹಾಗೆ ಮಾಡುವಾಗ ಆನಂದದ ಜೀವನದೊಂದಿಗೆ ಅವರವರ ಅರ್ಹತೆಗನುಸಾರವಾಗಿರುವ ಬೇಕು, ಗುರಿಗಳ ಲಾಭವೂ ಆಗುವುದು!!
  • ಕಾಡಿನ ಆ ಕೋಟಿಗಟ್ಟಲೆ ಮರ ಗಿಡಗಳಿಗೆ ತಮ್ಮೊಳಗೆ ಸಂಬಂಧವಿಲ್ಲ, ಆದರೆ ಅವು ಚೆನ್ನಾಗಿ ಒಟ್ಟಿಗೆ ಬದುಕುವವು, ಆದರೆ ಮಾನವನಿಗೆ ಸಾವಿರಾರು ಹೆಸರಿನ ಸಂಬಂಧಗಳಿವೆಯಾದರೂ ಆತನು ನಿತ್ಯವೂ ಹೊಡೆದಾಡಿಕೊಳ್ಳುತ್ತಾನೆ! ಸಂಬಂಧದಿಂದಾಗಿ ಮಾನವನು ಮಹಾತ್ಮನಾಗುವನು ಮತ್ತು ಸಂಬಂಧದಿಂದಾಗಿಯೇ ಮಾನವನು ಅಸುರನೂ ಆಗುವನು ಎಂಬುವುದನ್ನು ಅರಿಯಬೇಕು. ಸ್ವಲ್ಪ ವಿವರಿಸುವುದಾದರೆ, ಮಹಾತ್ಮರ ದಾರಿಯಲ್ಲಿ ಮುಂದುವರಿಯುವವರು “ಈ ಭೂಮಿಯೇ ಒಂದು ಕುಟುಂಬ” ಎಂಬ ವಿಶಾಲ ಮನಸ್ಕತೆಯ ಸಂಬಂಧವನ್ನು ಹೊಂದಿರುವರು, ಆದರೆ, ಜನಸಾಮಾನ್ಯರು “ನಾನು ಮತ್ತು ನನ್ನ ಹೆಂಡತಿ ಮಕ್ಕಳೇ ಕುಟುಂಬ” ಎಂದೇ ತಿಳಿವರು ಮತ್ತು ಇನ್ನೂ ಕೆಳಗೆ ಹೋಗಿ, ಅತಿಯಾದ ವ್ಯಕ್ತಿ ಸ್ವಾರ್ಥದ ಆ “ನಾನೇ ಕುಟುಂಬ” ಎಂಬಲ್ಲಿಯವರೆಗೂ ಹೋಗುವರು! ಇದು ಧ್ವೇಷ, ಹಿಂಸೆಗೆ ಕಾರಣವಾಗಿ ಅಸುರ ಸ್ವಭಾವವನ್ನು ಮಾನವನಲ್ಲಿ ಹೆಚ್ಚಿಸುವುದು.
  • ದನವು ಹುಲಿಯೂ ಅಲ್ಲ, ಹುಲಿಯು ದನವೂ ಅಲ್ಲ, ಆದರೆ ಒಂದು ಕಡೆ ಮಾತ್ರ ಇವುಗಳನ್ನು ಆ ರೀತಿಯಲ್ಲಿ ಕಾಣಬಹುದು. ಅದು ಮಾನವನ ಹೃದಯದಲ್ಲಿ! ಅಲ್ಲಿ, ತಮಗೆ ಅನುಕೂಲವಾದಲ್ಲಿ ಕ್ರೂರಿಗಳಾದ ಕೆಟ್ಟವರೂ ಉತ್ತಮರಾಗುವರು, ಮತ್ತು ತಮಗೆ ಅನುಕೂಲವಾಗದಲ್ಲಿ ಉತ್ತಮರಾದ ಸಜ್ಜನರೂ ಕೆಟ್ಟವರಾಗುವರು!! ಅಂದರೆ, ಜನಸಾಮಾನ್ಯರ ಈ ‘ತಮ್ಮ ಅನುಕೂಲ’ ಎಂಬ ಸ್ವಾರ್ಥ ಭಾವನೆಯೇ ಸಮಾಜದಲ್ಲಿ ಉತ್ತಮ ಮತ್ತು ಕೆಟ್ಟವರನ್ನು ನಿರ್ಣಯಿಸುವುದು ಹೊರತು ಉತ್ತಮರ ಆ ಉತ್ತಮ ಸ್ವಭಾವ ಮತ್ತು ಅಥವಾ ಕೆಟ್ಟವರ ಆ ಕೆಟ್ಟ ಸ್ವಭಾವಗಳು ಅಲ್ಲ ಎಂದು ಅರ್ಥ!! ಇದು ಇನ್ನೂ ಒಂದು ಸತ್ಯವನ್ನು ಹೇಳುವುದು, ಅದೇನೆಂದರೆ, ಸಮಾಜವನ್ನು ಕೆಟ್ಟವರು ಒಂದು ಪಾಲು ನಾಶಮಾಡಿದರೆ, ತಮಗೆ ಅನುಕೂಲವನ್ನು ಮಾಡಿಕೊಳ್ಳುವುದನ್ನೇ ಮುಂದಿಟ್ಟು ಜೀವಿಸುವ ಈ ಸ್ವಾರ್ಥಿ ಜನರು, ಹಲವು ಪಾಲು ನಾಶಮಾಡುವರು ಎಂದಾಗಿದೆ!!
  • ಕಳ್ಳನ ಜಗತ್ತು ಮತ್ತು ಉತ್ತಮನ ಜಗತ್ತು ಒಂದೇ ಅಲ್ಲ, ಪತಿವ್ರತೆಯ ಜಗತ್ತು ಮತ್ತು ವೇಶ್ಯೆಯ ಜಗತ್ತು ಕೂಡಾ ಒಂದೇ ಅಲ್ಲ. ಅಂದರೆ, ಈ ಒಂದು ಸ್ಥೂಲ ಜಗತ್ತಿನ ಮಾನವರಲ್ಲಿ ಹಲವು ಸಾವಿರ ಮಾನವ ದೃಷ್ಟಿಕೋನಗಳ ಜಗತ್ತುಗಳಿವೆ ಎಂದು ಅರ್ಥ!! ಎಲ್ಲಾ ಧರ್ಮ, ಪಂಥಗಳು ತಮ್ಮ ತಮ್ಮ ದೃಷ್ಟಿಕೋನಗಳ ಜಗತ್ತನ್ನು ಬಲವಂತವಾಗಿ ಜಗತ್ತಿನ ಸರ್ವರಿಗೂ ಅನ್ವಯ ಮಾಡುವುದರಲ್ಲಿ ತಲ್ಲೀನವಾಗಿವೆ! ಅದಕ್ಕಾಗಿ ಆಮಿಷ, ಧ್ವೇಷ, ಹಿಂಸೆ, ರಕ್ತಪಾತಗಳು ಎಂಬ ಯಾವ ಮಾರ್ಗವನ್ನು ಅನುಸರಿಸಲೂ ಅವು ತಯಾರಾಗುವವು! ಆದರೆ ಮಹಾತ್ಮರ ರೀತಿಯಲ್ಲಿ ತಮ್ಮ ಕಡೆಗೆ ತಿರುಗಿಸುವ ಯಾವ ಪ್ರಯತ್ನವೂ ಇಲ್ಲ. ಅಲ್ಲಿ, ಕೆಟ್ಟವರೂ ಸೇರಿ, ಎಲ್ಲ ಮಾನವರ ಮನಃಸಾಕ್ಷಿಯಲ್ಲಿ ಅಡಗಿರುವ ಉತ್ತಮ ವ್ಯಕ್ತಿಯನ್ನು ಬಡಿದೆಬ್ಬಿಸಿ, ಆ ವ್ಯಕ್ತಿಯ ಜೀವನವು ಆನಂದ ಬರಿತವಾಗುವಂತೆ ಮಾಡುವ ಒಂದು ಮಾನವ ಸೇವೆ ಮಾತ್ರ ಇರುವುದು!
  • ನಾವು ಹಲವು ಸಲ ಸತ್ಯಚಿಂತನೆ ಮಾಡುವುದರ ಅಗತ್ಯವಿದೆಯೇ ಮತ್ತು ಒಮ್ಮೆ ಎಲ್ಲವನ್ನೂ ತಿಳಿದುಕೊಂಡರೆ ಸಾಕಾಗಲಾರದೇ ಎಂಬ ಸಂಶಯ ಕೆಲವರಿಗೆ ಇರಬಹುದು, ಆದರೆ ಇದಕ್ಕೆ ಉತ್ತರವು, ನಾವು ಪರೀಕ್ಷೆಗೆ ಒಮ್ಮೆ ಮಾತ್ರ ಓದಿಕೊಂಡರೆ ಸಾಕಾಗದೇ, ಹಲವು ಸಲ ಓದುವ ಅಗತ್ಯವಿದೆಯೇ ಎಂಬ ಪ್ರಶ್ನೆ ರೂಪದಲ್ಲೇ ಇರುವುದು. ನಿತ್ಯವೂ ತನಗೆ ತಾನೇ, ಕಂಠಪಾಠದ ರೀತಿಯಲ್ಲದ, ಮತ್ತು ಆ ಸತ್ಯಸಂಧವಾದ ರೀತಿಯಲ್ಲಿ ನೆನಪಿಸಿದಲ್ಲಿ ಮಾತ್ರ ಆ ಸತ್ಯಸಂಧವಾದ ಚಿಂತನೆಯು ಕಾಲಾನಂತರದಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವಾಗಿ ಮಾರ್ಪಡುವುದು. ಇಲ್ಲಿ ಸತ್ಯಸಂಧತೆಗೆ ತುಂಬಾ ಪಾತ್ರವಿದೆ. ಅದಿಲ್ಲವಾದರೆ, ದಾರವಾಹಿಯಲ್ಲಿನ ಪಾತ್ರಕ್ಕಾಗಿ ದಿನನಿತ್ಯ ಕಣ್ಣೀರು ಹಾಕಿಯೂ, ತಮ್ಮ ನಿಜಜೀವನದಲ್ಲಿ ಸ್ವಲ್ಪವೂ ಕರುಣೆ ಇಲ್ಲದ ಜನರಂತೆ ಆಗಿಬಿಡುವರು!
  • ಹಗಲು ಇದ್ದಲ್ಲಿ ರಾತ್ರಿಯೂ ಇರುವುದು, ಅಥವಾ ಸಿಹಿ ಇದ್ದಲ್ಲಿ ಕಹಿ ಇರಬೇಕು, ಆದುದರಿಂದ ಜಗತ್ತಲ್ಲಿ ಒಳ್ಳೆಯದು ಇದ್ದಲ್ಲಿ ಕೆಟ್ಟದು ಇರಲೇಬೇಕು ಎಂದು ಜನರು ಹೇಳಿಕೊಳ್ಳುವ ಮಾತು ತಪ್ಪಾಗುವುದು. ಯಾಕೆಂದರೆ, ಈ ಇರುವವುಗಳನ್ನು ದ್ವಂದಗಳಂತೆ ಜೋಡಿಸಿ ಜನರೇ ಹೇಳಿರುವುದು ಅಷ್ಟೆ. ಅದಲ್ಲದೆ, ಬೇರೆ ಆ ಮಾತಿಗೆ ಯಾವ ಆಧಾರವೂ ಇಲ್ಲ. ಈ ಜಗತ್ತಿನಲ್ಲಿ ಮೊದಲು ಕೆಟ್ಟವರ ಶೇಖಡ ಸಂಖ್ಯೆ ಬಹಳ ಕಡಿಮೆ ಇದ್ದು, ಕಾಲ ಹೋದಂತೆ ಕೆಟ್ಟವರ ಶೇಖಡ ಸಂಖ್ಯೆಯು ಬಹಳ ಹೆಚ್ಚಾಗಿರುವುದನ್ನು ಅದು ವಿವರಿಸುವುದಿಲ್ಲ. ಇಲ್ಲಿ ನಾವು ಪ್ರತ್ಯೇಕವಾಗಿ ಗಮನಿಸಬೇಕಾಗಿರುವುದು, ಉತ್ತಮರಿಗೆ ಈ ರೀತಿ ಹೇಳುವ ಅಗತ್ಯ ಬರುವುದಿಲ್ಲ ಎಂಬುವುದನ್ನಾಗಿದೆ. ಆದುದರಿಂದ ಈ ಮಾತಿನ ಸೃಷ್ಟಿಕರ್ತರು ಕೆಟ್ಟವರೆಂದು ಸ್ಪಷ್ಟ.
  • ಭೂಮಿಯಲ್ಲಿ ಎರಡು ರೀತಿಯ ನಾಸ್ತಿಕರು ಇರುವರು. ಅವುಗಳಲ್ಲಿ ಒಂದು ಎಲ್ಲಾ ದೇವರುಗಳ ಅಸ್ತಿತ್ವವನ್ನು ಅಲ್ಲಗಳೆಯುವವರಾದರೆ, ಇನ್ನೊಂದು ನಾಸ್ತಿಕ ವರ್ಗವು ಕೂಡಾ ಎಲ್ಲಾ ದೇವರುಗಳನ್ನು ಅಲ್ಲಗಳೆಯುವರೇ ಆಗಿರುವರು, ಆದರೆ ವ್ಯತ್ಯಾಸವಿರುವುದು ಈ ನಾಸ್ತಿಕ ವರ್ಗವು “ತಮ್ಮ ದೇವರನ್ನು ಬಿಟ್ಟು” ಎಂಬ ಪದ ಪುಂಜವನ್ನು ಅದರೊಂದಿಗೆ ಸೇರಿಸುವಲ್ಲಿ ಮಾತ್ರವಾಗಿರುವುದು! ಒಟ್ಟಿನಲ್ಲಿ, ಈ ಭೂಮಿಯಲ್ಲಿ ನಾಸ್ತಿಕರೇ ತುಂಬಿರುವರು!! ಮಹಾತ್ಮರು, ಆ ಪರಮ ಪಾವನ ಸ್ವಭಾವ-ದೇವರನ್ನು ಮಾತ್ರ ದೇವರೆಂದು ಆರಾಧಿಸುವವರು ಆದ ಕಾರಣ, ಅವರು ಆ ದೇವಸ್ವಭಾವ ಇರುವ ಜಗತ್ತಿನ ಎಲ್ಲಾ ದೇವರುಗಳನ್ನು ಆ ಪಾವನ ಸ್ವಭಾವದಲ್ಲಿ ದೇವರೆಂದು ಕಾಣುವರು. ಈ ಕಾರಣದಿಂದಾಗಿ, ಮಹಾತ್ಮರು ಮಾತ್ರ ಆ ನಿಜವಾದ ಆಸ್ತಿಕರಾಗುವರು ಎಂಬುವುದನ್ನು ಗಮನಿಸಬೇಕಾಗಿದೆ.
  • ಅಶಾಂತಿಯನ್ನು ಸತ್ಯಚಿಂತನೆಯಿಂದ ಮಾತ್ರ ಶಾಶ್ವತವಾಗಿ ಇಲ್ಲವಾಗಿಸಲು ಸಾಧ್ಯ. ಯಾಕೆಂದರೆ ಮನಸ್ಸಿಗೆ ಕಾರಣವನ್ನು ತರ್ಕಬದ್ಧವಾಗಿ ಕೊಟ್ಟಾಗ ಮಾತ್ರ ಅದು ಶಾಂತವಾದ ಆ ಸ್ಥಿತಿಯನ್ನು ಪಡೆಯುವುದು. ಇದನ್ನು ಸತ್ಯಚಿಂತನೆಗೆ ಮಾತ್ರ ಮಾಡಲು ಸಾಧ್ಯ, ಇಲ್ಲವಾದರೆ ಶಾಶ್ವತ ಶಾಂತಿಯು ದೊರಕಲಾರದು. ಅಂದರೆ, ನಿಮಗೆ ಮನಸ್ಸಿದ್ದರೆ ಅದಕ್ಕೆ ಮಾರ್ಗವೂ ಇದೆ ಎಂದು ಅರ್ಥ. ಆದುದರಿಂದ ಶಾಂತಿಬೇಕಿದ್ದಲ್ಲಿ, ಅದಕ್ಕಾಗಿ ಒಬ್ಬ ವ್ಯಕ್ತಿಯಲ್ಲಿ ಮೊದಲು ಬಹಳವಾಗಿ ಸೃಷ್ಟಿಯಾಗಬೇಕಾಗಿರುವುದು “ಶಾಂತಿ ಬೇಕು” ಎಂಬ ಆ ಸತ್ಯಸಂಧವಾದ ಮನಸ್ಸು ಆಗಿದೆ.
  • ಶಾಂತಿಯು ಮನಸ್ಸಿನ ಒಂದು ಸ್ಥಿತಿಯಾಗಿದೆ. ಆ ಸ್ಥಿತಿಯು ಮನಸ್ಸಿನ ಹಿಂದಿನ, ಮುಂದಿನ ಮತ್ತು ಇಂದಿನ ಯಾವ ಕಲ್ಪನಾ ಲೋಕಗಳೂ ಇರುವುದಿಲ್ಲ. ಸಂತೋಷವು ಒಬ್ಬ ವ್ಯಕ್ತಿಯ “ಬೇಕು” ಎಂಬ ಭಾಗಕ್ಕೆ ಆಹಾರವನ್ನು ಒದಸುವಲ್ಲಿ ಉಂಟಾಗುವ ಆ ಭಾವದ ಅಭಿವ್ಯಕ್ತಿಯಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ‘ಬೇಕು’ ಎಂಬುವುದನ್ನು ಗಳಿಸಿದಾಗ ಅಥವಾ ಅನುಭವಿಸಿದಾಗ ಉಂಟಾಗುವ ಭಾವದ ಅಭಿವ್ಯಕ್ತಿಯಾಗುವುದು. ಶಾಂತಿಯು ಒಂದು ಸ್ಥಿತಿಯಾದುದರಿಂದ ಅದು ಸರ್ವರಿಗೂ ಒಂದೇ ತರ ಆಗಿರುವುದು ಮತ್ತು ಅದಕ್ಕೆ ಕಾರಣವಿಲ್ಲ. ಅವನ್ನು ಮಾನವನೇ ಕಳಕೊಳ್ಳಬೇಕು ಹೊರತು ಅದಕ್ಕೆ ಆಗಾಗ್ಗ ಬದಲಾಗುವ ರೀತಿಯಿಲ್ಲ. ಆದರೆ, ಸಂತೋಷವು ಶಾಂತಿಯನ್ನು ಕದಡಿದ ಆ ಸುಖದ ಸ್ಥಿತಿ ಆಗಿರುವುದು, ಅಂದರೆ, ಸಂತೋಷವು ಕದಡಿದ ಮನಸ್ಸಿನಲ್ಲೇ ಸೃಷ್ಟಿಯಾಗುವುದು ಆದರೆ ಅದು ಸುಖದ ಅನುಭವವನ್ನು ಕೊಡುವುದು ಎಂದು ಅರ್ಥ. ಶಾರೀರಿಕ ಮತ್ತು ಮಾನಸಿಕ ನೋವನ್ನು ಕೊಟ್ಟಲ್ಲಿ ಮನಸ್ಸಿನ ಆ ಕದಡುವಿಕೆಯನ್ನು ದುಃಖ ಎನ್ನುವರು. ಇನ್ನು, ಸಂತೋಷವು ಎಲ್ಲರಿಗೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಮಾತ್ರವಲ್ಲ, ಅವುಗಳಿಗೆ ಕಾರಣಗಳು ಬೇರೆ ಬೇರೆ ಇರುತ್ತವೆ, ಮತ್ತು ಒಮ್ಮೆ ಸಂತೋಷ ಎಂದೆನಿಸಿದುದೇ ಇನ್ನೊಮ್ಮೆ ಅಥವಾ ಇನ್ನೊಂದು ಕಾಲದಲ್ಲಿ ದುಃಖವಾಗಿ ತೋರುವ ಸಾಧ್ಯತೆಯನ್ನು ಅವು [ಸಂತೋಷವು] ಒಳಗೊಂಡಿರುವುದು. ಜನಸಾಮಾನ್ಯರು ಸಂತೋಷದ ಹಿಂದೆ ಓಡುವರು ಮತ್ತು ತಮ್ಮ ಶಾಂತಿಯನ್ನು ಕಳಕೊಳ್ಳುವರು. ಆದರೆ, ಎಲ್ಲರಂತೆ ಸಮಾಜದಲ್ಲಿ ಗೃಹಸ್ಥರಾಗಿಯೇ ಜೀವಿಸುವ ಆ ಮಹಾತ್ಮರುಗಳು ಶಾಂತಿಯಿಂದ ಮಾತ್ರ ಜೀವಿಸುವರು, ಮತ್ತು ಸಂತೋಷವನ್ನು ತಮ್ಮ ಶಾಂತಿಗೆ ಬಾಧಿಸದ ರೀತಿಯಲ್ಲಿ, ಅವುಗಳಲ್ಲಿ ಸರಿಹೊಂದುವವುಗಳನ್ನು, ಆರಿಸಿ ಅನುಭವಿಸುವರು.
  • ಒಬ್ಬ ವ್ಯಕ್ತಿಯ ‘ನಾನು’ ಎಂಬ ಭಾವವು ತನಗೆ ತಾನೇ ಆದ್ಯತೆಯನ್ನು ಇಟ್ಟುಕೊಳ್ಳುವುದು, ಮತ್ತು ತನ್ನಲ್ಲಿನ ಕೊರತೆಯನ್ನು ತನಗೇ ಕಾಣಿಸದಂತೆ ಮಾಡುವುದು! ಆದುದರಿಂದಲೇ, ಒಬ್ಬಾತನಿಗೆ ತಾನು ಮಾಡುತ್ತಿರುವ ಅದೇ ತಪ್ಪು ಇನ್ನೊಬ್ಬನಲ್ಲಿ ಬಹಳ ಕೆಟ್ಟದಾಗಿ ಕಾಣಿಸುವುದು.
  • ನಿಜವಾಗಿಯೂ, ಒಬ್ಬನ ತಪ್ಪನ್ನು ಎತ್ತಿ ಹೇಳಬೇಕಿದ್ದರೆ ಆ ಹೇಳುವಾತನು ಅದನ್ನು ಮಾಡದವನಾಗಿರಬೇಕು.ಈ ನಿಟ್ಟಿನಲ್ಲಿ, ಜಗತ್ತಿನಲ್ಲಿ ಎಲ್ಲೆಡೆಯೂ ಮಾಡುವ ‘ಆರೋಪಗಳು’ ಎಷ್ಟು ಸತ್ಯಸಂಧವಾಗಿರಬಹುದು ಎಂದು ನಮಗೆ ಊಹಿಸಬಹುದಾಗಿದೆ. ಇನ್ನೊಬ್ಬ ಕುಡುಕನನ್ನು, ‘ಕುಡುಕ’ ಎಂದು ಹೀಯಾಳಿಸಿ ನಿಂದಿಸುವ ಒಬ್ಬ ಕುಡುಕನಂತೆ, ಈ ಜಗತ್ತಿನಲ್ಲಿ ಎಲ್ಲೆಲ್ಲೂ ಈ ಮೋಸದ ಡೊಂಬರಾಟ ಮಾತ್ರ ಸತ್ಯಸಂಧತೆಯ ಮುಖವಾಡದಲ್ಲಿ ನಡೆಯುತ್ತಿರುವುದು! ಸತ್ಯಸಂಧತೆಯ ಆ ಆಳದ ಮಹತ್ವವನ್ನು ಇಲ್ಲಿ ನಮಗೆ ಅರ್ಥೈಸಿಕೊಳ್ಳಬಹುದಾಗಿದೆ.
  • ಇಂದು ಮಾನವರಿಗೆ ಬೇಕಾಗಿರುವುದು ವ್ಯಕ್ತಿ ಸ್ವಾತಂತ್ರ್ಯಮಾತ್ರವಾಗಿದೆ. ಆದರೆ ಪಯಣದಲ್ಲಿರುವ ಮಾನವನ ಆನಂದ ಜೀವನ ದೋಣಿಯ ಹಾಯಿಗೆ ಬೇಕಾಗಿರುವುದು ಆ ಆತ್ಮೀಯ ಪ್ರೀತಿಯ ನೂಕುಗಾಳಿಯಾಗಿದೆ. ಇದನ್ನು ಪಡೆಯುವಲ್ಲಿ ವ್ಯಕ್ತಿ ಸ್ವಾತಂತ್ರ್ಯವು ಎಂದಿಗೂ ಕೆಲಸ ಮಾಡಲಾರದು, ಅಲ್ಲಿ ಬೇಕಾಗಿರುವುದು ತ್ಯಾಗಕ್ಕಾಗಿರುವ ಸ್ವಾತಂತ್ರ್ಯವಾಗಿದೆ. ಮಾನವನಿಗೆ ವ್ಯಕ್ತಿ ಸ್ವಾತಂತ್ರ್ಯವು ಇರಲಿ, ಆದರೆ ಸಾರ್ಥಕ ಜೀವನ ಬೇಕಾದಲ್ಲಿ, ತ್ಯಾಗದ ಸ್ವಾತಂತ್ರ್ಯವನ್ನೂ ಬಿಡದಿರಲಿ ಎಂದು ಆಶಿಸೋಣ.
  • ಅಡುಗೆ ಮಾಡುವುದು ಹೆಚ್ಚು ಕಡಿಮೆಯಾದಲ್ಲಿ ಊಟವು ಒಂದು ಕಹಿ ಅನುಭವವಾಗುವುದು. ಅದೇ ರೀತಿ ಮಾನವನು ತನ್ನ ಇಂದಿನ ಕರ್ಮವನ್ನು ಸರಿಪಡಿಸದಿದ್ದಲ್ಲಿ ಮುಂದೆ ಅದು ಒಂದು ಕಹಿ ಅನುಭವವಾಗಿ ತಿರುಗಿಬರುವುದು. ಸತ್ಯಚಿಂತನೆಯು ಇಂದಿನ ಕರ್ಮವನ್ನು ಸರಿಪಡಿಸಿ ಮುಂದಿನ ಜೀವನವನ್ನು ಸಿಹಿಮಾಡುವ ಔಷಧಿಯಾಗಿದೆ.
  • ಮಹಾತ್ಮರಾಗುವ ಸಾಧನೆಯು ಮುಂದುವರಿಯುತ್ತಾ ಇರುವಾಗ, ಒಮ್ಮೊಮ್ಮೆ, ಸತ್ಯಗಳು ಬಹಳ ಆಳದ ಅರ್ಥವನ್ನು ಹೊತ್ತು ಬಹಳ ದೊಡ್ಡದಾಗಿ ಪರ್ವತದಂತೆ ಕಾಣಿಸುವವು. ಅವನ್ನೇ ಬೋಧ ಎನ್ನುವುದು. ಅದು, ಆಳದ ಅರಿವು ಬಾಹ್ಯದ ಮನಸ್ಸಿನ ಎತ್ತರಕ್ಕೆ ಏರಿ ಕಾಣಿಸಲ್ಪಡುವ ಸಮಯವಾಗಿರುವುದು. ಈ ಬೋಧವೇ ಮಹಾತ್ಮನ ಸಾರವಾಗಿದೆ. ಚಿಕ್ಕ ಚಿಕ್ಕ ಬೋಧಗಳು ಸಾಮಾನ್ಯವಾಗಿ ಆಗುತ್ತಾ ಇರುವುದು. ಆದರೆ, ಈ ದೊಡ್ಡ ರೀತಿಯ ಬೋಧವು ಆತನ ಸತ್ಯಸಂಧತೆಯ ಆಳವನ್ನು ನೇರವಾಗಿ ಹೊಂದಿಕೊಂಡಿದೆ ಎನ್ನುವುದು ಒಂದು ಮುಖ್ಯ ಅಂಶವಾಗಿದೆ. ಸತ್ಯಸಂಧತೆಯು ಹೆಚ್ಚಾಗುವುದೇ ಮಹಾತ್ಮರ ಹಂತವು ಹೆಚ್ಚಾಗುವುದಕ್ಕೆ ಕಾರಣ ಎಂದು ಇದರಿಂದ ಸ್ಪಷ್ಟವಾಗುವುದು.
  • ಎಲ್ಲರೊಂದಿಗೆ ಬೆರೆತು ಜೀವಿಸುವುದು ತಪ್ಪು ಎಂದು ಯಾರೂ ಹೇಳುವುದಿಲ್ಲ. ಆದರೆ, ಅಲ್ಲಿ ಒಬ್ಬಾತನು ತನ್ನನ್ನೇ ಮರೆತು ಬೆರೆಯುವುದಾದರೆ, ಆ ಎಲ್ಲರ ಒಟ್ಟು ಸ್ವಭಾವವೇ ಅತನದ್ದಾಗುವುದು ಖಂಡಿತ. ಅಂದರೆ, ಯಾವ ರೀತಿಯ ಜನರೊಂದಿಗೆ ಆತನು ಹಿತವೆಂದು ತಿಳಿದು ಬೆರೆಯುತ್ತಾ ಇರುವನೋ, ಅದೇ ಜನರ ಸ್ವಭಾವವು ಆತನಲ್ಲಿ ಸೃಷ್ಟಿಯಾಗುವುದು. ಇದೇ ನಿಯಮವು ಉತ್ತಮರ ಅಥವಾ ಮಹಾತ್ಮರ ಸಹವಾಸಕ್ಕೂ ಅನ್ವಯವಾಗುವುದು. ಅದನ್ನು “ಸತ್ಸಂಗ” ಎಂದು ಆಧ್ಯಾತ್ಮವು ಕರೆಯುವುದು. ಅಲ್ಲಿ ಆ ಸಾಮಿಪ್ಯದಿಂದ, ಆ ವ್ಯಕ್ತಿಯಲ್ಲಿ, ಉತ್ತಮ ಸ್ವಭಾವವು ಆತನಿಗೇ ಅರಿವಿಲ್ಲದೆ ಅಂಟಿಕೊಳ್ಳುತ್ತವೆ. ಸಮಾಜದಲ್ಲಿ ಜನರೊಂದಿಗೆ ಬೆರೆವಾಗ “ಜಾಗ್ರತೆ” ಇಲ್ಲದೆ ಹೋದರೆ, ಮಹಾತ್ಮರ ದಾರಿಯಲ್ಲಿ ಮೇಲೇರಬೇಕಾದ ವ್ಯಕ್ತಿ ಕೆಳಗಿಳಿಯುವ ಸಾಧ್ಯತೆ ಇರುವುದು.
  • ಎಚ್ಚರದಿಂದಿರುವುದು ಕಾರ್ಯಗಳ ಜಯಕ್ಕೆ ಅತಿ ಮುಖ್ಯವಾಗಿದೆ. ಮಹಾತ್ಮರು ಅವರ ಜೀವನವನ್ನು ರೂಪಿಸುವಲ್ಲಿ ನಿರಂತರ ಎಚ್ಚರವಹಿಸಿ ಜೀವನವನ್ನು ಗೆಲ್ಲುವರು. ಇತರರು ಅವನ್ನು “ನಾನು” ಎಂಬುವುದರ ಜುಗಾರಿಗಾಗಿ ಪೂರ್ತಿ ವ್ಯಯ ಮಾಡಿ ತಲೆ ಕೆಡಿಸಿಕೊಳ್ಳುವರು.
  • ಸಂತೋಷದಲ್ಲಿ ಇರಬೇಕೆಂದು ಇದ್ದಲ್ಲಿ ಅದಕ್ಕೆ ತೊಂದರೆಯಾಗುವುದು ಶಾರೀರಿಕ ತೊಂದರೆಯು ಮಾತ್ರವಾಗಿದೆ. ಉಳಿದ ಹೆಚ್ಚಿನ ಮನಸ್ಸಿನ ತೊಂದರೆಗಳನ್ನು ಪ್ರಯತ್ನದ ಮೂಲಕ ನಮಗೆ ನಾವೇ ಹೇಳಿ ಸರಿಪಡಿಸಿಕೊಳ್ಳಬಹುದು. ಎಲ್ಲಾ ಮಹಾತ್ಮರೂ ಮಕ್ಕಳಾಗಿ ಬೆಳೆದು ಬಂದವರು. ಅವರು ಮತ್ತು ಇತರರಿಗೆ ಇರುವ ಒಂದು ಮುಖ್ಯ ವ್ಯತ್ಯಾಸವೆಂದರೆ ಅದು ಅವರು ಆತ್ಮಾವಲೋಕನಕ್ಕೆ ಪಟ್ಟಿರುವ ಪ್ರಯತ್ನದಲ್ಲಿ ಮಾತ್ರವಾಗಿದೆ. ನಾವು ನಾವೇ ಪ್ರಯತ್ನ ಮಾಡದಿದ್ದಲ್ಲಿ ನಮಗಾಗಿ ಇನ್ನೊಬ್ಬರು ಆತ್ಮಾವಲೋಕನ ಮಾಡಲು ಸಾಧ್ಯವಾದೀತೇ?
  • ವೇಗವು ಒಂದು ಶಾಪವಲ್ಲ, ಆದರೆ ಒಬ್ಬಾತನು ಅಪಘಾತಕ್ಕೆ ಒಳಗಾಗುವಾಗ ಅದು ಶಾಪವಾಗುವುದು. ಮಂದಗತಿಯು ಒಂದು ಶಾಪವಲ್ಲ, ಆದರೆ ಒಬ್ಬಾತನು ತನ್ನ ಗುರಿಯನ್ನು ಸಾಧಿಸಲಾರದಾಗ ಅದು ಶಾಪವಾಗುವುದು. ಹೆಚ್ಚು ಕಡಿಮೆ ಜಗತ್ತಿನ ಎಲ್ಲವುಗಳಲ್ಲೂ ಈ ರೀತಿಯ ಎರಡು ಭಾಗಗಳು ಇರುವವು. ಅವುಗಳಲ್ಲಿ ಶಾಪವಲ್ಲದ ಆ ಅನುಗ್ರಹ ಭಾಗವನ್ನು ಎಂದೆಂದಿಗೂ ಪಡೆಯಬೇಕು, ಮತ್ತು ಈ ಅನುಗ್ರಹವು, ಜೀವನದ ಎಲ್ಲಾ ಕಡೆಯೂ, ದೊರಕುವಂತೆ ಮಾಡುವುದಕ್ಕೆ ಸತ್ಯಚಿಂತನೆಗೆ ಮಾತ್ರ ಸಾಧ್ಯವಾಗುವುದು ಎಂಬುವುದನ್ನು ಮರೆಯಬಾರದು.
  • ಸಾರ್ವತ್ರಿಕ ಪ್ರೀತಿಯು ದೇವರ ಪ್ರೀತಿಯ ರೀತಿ ಎಂದು ಹೇಳಬಹುದು. ದೇವರ ಹೃದಯವು ಜಗತ್ತಿನ ಎಲ್ಲಾ ಜನರನ್ನು ಒಳಗೊಂಡಿರುವುದು, ಆದರೆ ಉತ್ತಮರನ್ನು ಮಾತ್ರ ಪ್ರೀತಿಸುವುದು. ಯಾರಾದರೂ ಈ ಮಾತಿಗೆ ವಿರೋಧ ಹೇಳುವುದಾದರೆ, ಅವರು ಸೈತಾನನನ್ನು ದೇವರು ಪ್ರೀತಿಸುವನೇ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ಕೊಡಬೇಕಾಗುವುದು.
  • ಒಂದು ಸೊನ್ನೆಗೆ ಮತ್ತು ಇನ್ನೊಂದು ಸೊನ್ನೆಗೆ ಮೌಲ್ಯದ ಅಂತರವಿಲ್ಲ. ಆದರೆ, ಸೊನ್ನೆಯಿಂದ ಆರಂಭವಾಗಿ ಸೊನ್ನೆಯಲ್ಲಿ ಮುಗಿವ ಈ ಜೀವನದ ಮಧ್ಯೆ ಒಂದು ದೊಡ್ಡ “ಜೀವನ” ಎಂಬ ಅಂತರವಿದೆ! ಜ್ಞಾನಿಗಳಿಗೆ ಈ ಮಧ್ಯದ ಅಂತರವು ಬರೇ ಮತ್ತೊಂದು ಸೊನ್ನೆ ಮಾತ್ರವಾಗಿ ಕಾಣಿಸುವ ಕಾರಣ ಅವರು ಅದನ್ನು ಸಮ ದೃಷ್ಟಿಯಿಂದ ನೋಡಿ ಶಾಂತಿಯಿಂದ ಜೀವನವನ್ನು ಆನಂದಿಸುವರು. ಆದರೆ, ಜನಸಾಮಾನ್ಯರು ಈ ಅಂತರಕ್ಕೆ ಹಲವು ಕೋಟಿ ರುಪಾಯಿಗಳ ಬೆಲೆಕೊಟ್ಟು, ಒಂದು ರುಪಾಯಿಯ ಶಾಂತಿ, ನೆಮ್ಮದಿಯ ಜೀವನವನ್ನೂ ಪಡೆಯದೆ ಸಾಯುವರು!! ಈ ಭೂಮಿಯ ಜೀವನ ವ್ಯಾಪಾರದಲ್ಲಿ ಲಾಭಗಳಿಸಲು ಹಣ, ಶ್ರೀಮಂತಿಕೆಗಳಿಗೆ ಸಾಧ್ಯವಿಲ್ಲ ಆದರೆ ಅದು ಮಹಾತ್ಮರ ಸತ್ಯಚಿಂತನೆಗೆ ಮಾತ್ರ ಸಾಧ್ಯ ಎಂಬ ಸತ್ಯವು ಇಲ್ಲಿ ಸ್ಪಷ್ಟವಾಗುವುದು.
  • ಯಾರನ್ನೂ ತಿದ್ದಲು ಹೋಗಬೇಡಿ. ಅದಕ್ಕಿಂತ ಅವರಿಗೆ ಸರ್ವ ವಿಚಾರಗಳನ್ನು ಒದಗಿಸಿಬಿಡುವುದೇ ಒಳಿತು. ಸಾಧ್ಯವಾದಲ್ಲಿ, ಮನೆ ಮನೆಯ ಮಹಾತ್ಮರ ಜೀವನದ ನಿಜವಾದ ಮಹತ್ವವನ್ನು ಹೇಳಿ ಅವರಿಗೆ ಅದರ ಲಾಭವನ್ನು ತಿಳಿಯುವಂತೆ ಮಾಡಬಹುದು. ತಿದ್ದುವ ಕ್ರಿಯೆಯು, ಕೊರತೆಯನ್ನು ನೀಗುವ ನಿಟ್ಟಿನಲ್ಲಿ, ಅವರಲ್ಲಿ ಇರುವ ಕೊರತೆಗಳನ್ನು ಕಾಣುವ ಉದ್ದೇಶವನ್ನು ಹೊಂದಿರುವುದು. ಯಾಕೆಂದರೆ ಕೊರತೆಯೇ ಇಲ್ಲವಾಗುವಾಗ ಆತನು ಆ ಮೇಲಿನ ಮಹಾತ್ಮನ ಹಂತಕ್ಕೆ ತಲುಪಿರುವನು. ಅದಕ್ಕೆ, ಬೇಗ ಬೇಗನೆ ಕೊರತೆಯನ್ನು ಹೇಳುತ್ತಾ ಮತ್ತು ಅವುಗಳನ್ನು ಆತನ ವ್ಯಕ್ತಿತ್ವದಿಂದ ದೂರ ಮಾಡುತ್ತಾ, ಈ ರೀತಿಯಲ್ಲಿ ತಿದ್ದುತ್ತಾ ಹೋಗುವುದು ವೇಗದ ಬೆಳವಣಿಗೆಗೆ ಕಾರಣವಾಗುವುದು. ಆದರೆ, ಅದಕ್ಕೆ ಅತ್ಯಂತ ಸಮರ್ಪಣೆ ಭಾವವು ತಿದ್ದಲ್ಪಡುವವನ ಕಡೆಯಿಂದ ಇರಲೇಬೇಕಾಗುವುದು. ಇದು ಇಂದಿನ ಕಾಲದಲ್ಲಿ ಕಾಣಿಸುವುದು ಅತ್ಯಂತ ವಿರಳ. ಆದುದರಿಂದ ಎಂದಿಗೂ ತಿದ್ದುವುದು ಬೇಡ, ಎಲ್ಲರೂ ತಮ್ಮಿಂದಾಗುವ ಆ ತಿಳಿಸಿಕೊಡುವ ಸೇವೆಯನ್ನು ಮಾತ್ರ ಮಾಡಿದರೆ ಸಾಕಾಗುವುದು. ಒಟ್ಟಿನಲ್ಲಿ, ತಿದ್ದುವ ಕೆಲಸವು ಒಬ್ಬಾತನು ಸ್ವತಃ ಆತನಿಗೇ ಮಾಡಬೇಕಾದ ಕೆಲಸವಾಗಿದೆ. ಅದಕ್ಕೆಂದೇ ಮಹಾತ್ಮರ ಸಾಧನೆಯಲ್ಲಿ ತನ್ನನ್ನು ತಾನೇ ತಿದ್ದುವ ಆ ಆತ್ಮವಲೋಕನಕ್ಕೆ ಅಷ್ಟಕ್ಕೂ ಪ್ರಾಮುಖ್ಯತೆಯನ್ನು ನೀಡಿರುವುದು.
  • ಮಾನವನು ಸುಖವನ್ನು ಬೇಕು ಎನ್ನುವನು, ಆದರೆ ಅದನ್ನು ಪಡೆಯುವ ವಿಧಾನವನ್ನೇ ನಿರಾಕರಿಸುವನು!! ಮಾನವನು ದುಃಖವನ್ನು ಬೇಡ ಎನ್ನುವನು, ಆದರೆ ಅದನ್ನು ಪಡೆಯುವ ರೀತಿಯನ್ನೇ ಅನುಸರಿಸುವನು!! ಇನ್ನು, ಈ ಜನರ ಗೋಳಿಗೆ ಏನಿದೆ ಅರ್ಥ?
  • ಆತ್ಮೀಯತೆ ಎಂಬುವುದು ತ್ಯಾಗಭಾವದಿಂದ ಮಾತ್ರ ಬರುವುದು. ಈ ಆತ್ಮೀಯತೆಯು ಅಹಂಕಾರಿಗಳಲ್ಲಿ ಇರುವುದಿಲ್ಲ. ಕಾರಣ, ತ್ಯಾಗಭಾವವನ್ನು ಅದು ತಡೆಯುಯುವುದು. ತ್ಯಾಗಭಾವವೆಂದ ಕೂಡಲೇ ಹಣವನ್ನು ದಾನ ಮಾಡುವ ದೃಶ್ಯವನ್ನು ನೆನೆಯುವುದು ಬೇಡ, ಯಾಕೆಂದರೆ, ಅದನ್ನು ಒಬ್ಬ ಕಿಡಿಗೇಡಿಗೂ ಮಾಡಲು ಸಾಧ್ಯವಿದೆ. ನಿಜವಾದ ತ್ಯಾಗಭಾವವೆಂದರೆ ತನ್ನನ್ನು ಮೊದಲು ಎಂದು ತಾನೇ ಪರಿಗಣಿಸದಿರುವುದಾಗಿದೆ! ಹಾಗಿದ್ದಲ್ಲಿ ಮಾತ್ರ, ಇತರರೂ ತನ್ನೊಂದಿಗೆ ತನ್ನ ಹಾಗೆ ಮನುಷ್ಯರಾಗಿ ಜೀವಿಸುತ್ತಿರುವರು ಎಂಬ ಸತ್ಯವನ್ನು ಹೃದಯವು ಆತನಿಗೆ ತಿಳಿಸುತ್ತಾ ಇರುವುದು!! ಈ “ನಾನು ಮೊದಲು” ಎಂಬುವುದನ್ನು ತ್ಯಾಗಮಾಡುವುದರಿಂದ ಹುಟ್ಟಿ ಬರುವ ಆತ್ಮೀಯತೆಯು ಮನೆ, ಸಮಾಜ, ಮತ್ತು ಲೋಕ ಶಾಂತಿಗೆ ಕಾರಣವಾಗುವುದು.
  • ಬೊಜ್ಜು ಕರಗಿಸಲು ಸಾಯಂಕಾಲ ನಡೆಯುವ ವ್ಯಕ್ತಿಯಲ್ಲಿ “ಕಾರಲ್ಲಿ ಹೋಗೋಣ ಬನ್ನಿ” ಎಂದು ಯಾರು ಕರೆದರೂ ಹೋಗಲಾರ. ಯಾಕೆಂದರೆ ಆತನ ಆಗಿನ ಉದ್ದೇಶವು ಕಾರಿನಿಂದಾಗುವ ಲಾಭವನ್ನು ತಳ್ಳಿಹಾಕಿದೆ!! ಅಂದರೆ, ಮೂಲದಲ್ಲಿ ಬೇಕುಗಳು ಉದ್ದೇಶಗಳನ್ನು ಸೃಷ್ಟಿಸುವವು, ಆದರೆ ಅನಂತರ ಆ ಉದ್ದೇಶಗಳೇ ಆತನನ್ನು ಎಳಕೊಂಡು ಹೋಗುವವು! ಆತನ ಉದ್ದೇಶಗಳೇ ಅನಂತರದ ಹಲವು ಬೇಕುಗಳನ್ನೂ ಸೃಷ್ಟಿಸಿಕೊಂಡು ಆತನನ್ನು ಅದಕ್ಕೆ ಬೇಕಾಗಿ ಕೆಲಸಗಳನ್ನು ಮಾಡುವಂತೆ ಒತ್ತಾಯಿಸುವುದು. ಇಲ್ಲಿ ನಾವು ತಿಳಿಯಬೇಕಾದ ಅಂಶವೆಂದರೆ, ಜೀವನದಲ್ಲಿ ಯಾವುದನ್ನು ನಮ್ಮ ಮೂಲ ಉದ್ದೇವಾಗಿಸಬೇಕು ಎಂಬ ತೀರ್ಮಾನವು ಬಹಳ ಮುಖ್ಯವಾಗಿದೆ ಎಂಬುವುದನ್ನಾಗಿದೆ. ಶಾಂತಿ, ನೆಮ್ಮದಿ, ಆನಂದ ಎಂಬವುಗಳನ್ನು ಮೂಲ ಉದ್ದೇಶವಾಗಿಟ್ಟು, ಅನಂತರ ತಮ್ಮ ತಮ್ಮ ಇತರ ಉದ್ದೇಶಗಳನ್ನು ತಮ್ಮ ಶಕ್ತಿಗೆ ಅನುಸರಿಸಿ ಮಾತ್ರ ಇಟ್ಟುಕೊಳ್ಳುವವರು ಮಹಾತ್ಮರಾಗಿರುವರು. ಆದರೆ ಜನಸಾಮಾನ್ಯರು ಶಾಂತಿ, ನೆಮ್ಮದಿಯನ್ನು ಪರಿಗಣಿಸದೆ, ತಮ್ಮ ಉದ್ದೇಶವನ್ನು ಹಣ, ಸಂಪತ್ತು, ಸ್ಥಾನ ಮಾನ, ಮತ್ತು ಖುಷಿಪಡುವಿಕೆಯಲ್ಲಿ ಇಡುವರು!! ಅಂದರೆ, ಈ ಎರಡು ರೀತಿಗಳಲ್ಲಿಯೂ ಕೆಲಸಗಳು ಇವೆ, ಮತ್ತು ಅವುಗಳ ಫಲಗಳೂ ಲಭಿಸುವವು. ಆದರೆ, ಮೊದಲನೆಯದರಲ್ಲಿ ಜೀವನ ಎಂಬ ದೋಣಿ, ತನ್ನನ್ನು ತಾನೇ ನಿಯಂತ್ರಿಸುವ ‘ಹುಟ್ಟು’ ಸಹಿತ ಸಮುದ್ರಲ್ಲಿ ಚಲಿಸುವ ರೀತಿಯಲ್ಲಿ ಇರುವುದು, ಆದರೆ ಎರಡನೆಯದರಲ್ಲಿ, ‘ಹುಟ್ಟು’ ಇಲ್ಲದ ಹಾಯಿ ದೋಣಿಯನ್ನು ಸಮುದ್ರದ ಗಾಳಿಯು, ಬೆಕ್ಕು ಇಲಿಯೊಂದಿಗೆ ನೋವು ಉಣಿಸುವ ಆಟ ಆಡಿದಂತೆ, ತನ್ನಿಷ್ಟದಂತೆ ಎಳಕೊಂಡುಹೋಗಿ ಆಡುವ ತರ ಇರುವುದು!!
  • ಹಾಸಿಗೆ ಹಿಡಿದವನಿಗೆ ಹಾಸಿಗೆಯಿಂದ ಏಳುವುದೇ ಸರ್ವಸ್ವವಾಗುವುದು. ಹಾಸಿಗೆಯಿಂದ ಎದ್ದವನಿಗೆ ಮೂರು ಹೊತ್ತು ಊಟವೇ ಸರ್ವಸ್ವವಾಗುವುದು. ಮೂರು ಹೊತ್ತು ಊಟ ಇದ್ದವನಿಗೆ ಒಂದು ಚಿಕ್ಕ ಮನೆಯೇ ಸರ್ವಸ್ವವಾಗುವುದು. ಒಂದು ಚಿಕ್ಕ ಮನೆ ಇದ್ದವನಿಗೆ ದೊಡ್ಡ ಮನೆ, ಕಾರುಗಳೇ ಸರ್ವಸ್ವವಾಗುವುದು. ದೊಡ್ಡ ಮನೆ, ಕಾರು ಇದ್ದವನಿಗೆ ಅಧಿಕಾರ, ಸ್ಥಾನ ಮಾನವೇ ಸರ್ವಸ್ವವಾಗುವುದು. ಅಧಿಕಾರ, ಸ್ಥಾನ ಮಾನ ಇದ್ದವನಿಗೆ ಅದಕ್ಕಿಂತಲೂ ಮೇಲೇರುವುದೇ ಸರ್ವಸ್ವವಾಗುವುದು. ಹೀಗೆ ಮತ್ತೂ ಮೇಲೇರಿದವನಿಗೆ ಇತರರು ಆ ಹಂತಕ್ಕೆ ಏರಬಾರದು ಎಂಬುವುದೇ ಸರ್ವಸ್ವವಾಗುವುದು!!
  • ಸಮಾಜದಲ್ಲಿ ಹೆಚ್ಚಿನವರೂ ಮೇಲು ಮೇಲಿನ ತನ್ನ ಪ್ರತಿ ಹಂತದಲ್ಲೂ, ತನ್ನ ಕೆಳಗಿನ ಹಂತದವರನ್ನು ಬಡವ ಎಂದು ತಿಳಿದೇ ಆತನೊಂದಿಗೆ ವ್ಯವಹರಿಸುವರು. ಈ ರೀತಿಯ ಜನರಿಂದ ಪ್ರೀತಿಯನ್ನು ಎಂದೂ ನಿರೀಕ್ಷಿಸಲು ಸಾಧ್ಯವಾಗದು ಎಂಬುವುದು ಒಂದು ದೊಡ್ಡ ಸತ್ಯವಾಗಿದೆ. ಯಾಕೆಂದರೆ, ನಾಳೆ ನೀವು ಎಲ್ಲಾದರೂ ಸೋತು ಅವರಿಗಿಂತ ಕೆಳಗಿನ ಹಂತಕ್ಕೆ ಹೋಗಿಬಿಟ್ಟರೆ, ಮೊದಲಿದ್ದ ನಿಮ್ಮ ಮೇಲಿನ ಅವರ ಪ್ರೀತಿಯು, ಬಡವನ ಮೇಲಿನ ಅಪಹಾಸ್ಯವಾಗಿ ನಿಮ್ಮನ್ನು ಮೆತ್ತಗೆ ತಲುಪುವುದು ನಿಮಗೆ ಸ್ಪಷ್ಟ ಅನುಭವವಾಗಬಹುದು. ಇಲ್ಲಿ, ಹಣವೇ ಪ್ರೀತಿಯನ್ನು ಸೃಷ್ಟಿಸುವ ಯಂತ್ರವಾಗಿ ಕೆಲಸ ಮಾಡುವುದು ಮತ್ತು ಹಣ ಇಲ್ಲದ ಸ್ಥಳಗಳಲ್ಲಿ ಆ ಯಂತ್ರವು ಕೆಲಸಮಾಡಲಾರದು!
  • ವಿಜ್ಞಾನದ ಎಲ್ಲಾ ಸೌಕರ್ಯಗಳನ್ನು ನಾವು ಉಣ್ಣುವುದು, ವಿಜ್ಞಾನವು, ಬದಲಾಗಲು ಒಪ್ಪಿಕೊಂಡ ಕಾರಣಕ್ಕೆ ಮಾತ್ರವಾಗಿದೆ. ಅದಲ್ಲವಾಗುತ್ತಿದ್ದರೆ, ಹೆಚ್ಚೆಂದರೆ ಎಲ್ಲರ ಮನೆಯ ಮುಂದೆ ಬೆಲೆ ಬಾಳುವ ಎತ್ತಿನ ಗಾಡಿಗಳು ಮಾತ್ರ ಇಂದು ಇರುತ್ತಿದ್ದವು. ಇದೇ ರೀತಿ, ಧರ್ಮಗಳು ಕೂಡಾ ಬದಲಾವಣೆಗೆ ಒಪ್ಪಿರುತ್ತಿದ್ದರೆ, ಇಂದು ಅದು ಬೆಳೆದು ಈ ಭೂಮಿಯನ್ನೇ ಶಾಂತಿ, ನೆಮ್ಮದಿ, ಆತ್ಮೀಯ ಪ್ರೀತಿಗಳ ಸ್ವರ್ಗವನ್ನಾಗಿ ಮಾಡಿಬಿಡುತ್ತಿದ್ದವು! ಆದರೆ, ಧರ್ಮಗಳು ಮಾತ್ರ ಬದಲಾಗಲು ಒಪ್ಪದೆ, ತನ್ನ ಆ ಹಿಂದಿನದ್ದು ಮಾತ್ರ ಸರಿ ಎಂದು, ಎತ್ತಿನಗಾಡಿ ಮಾತ್ರ ಸರಿ ಎಂಬ ತರ, ಇಂದೂ ವಾದಿಸುವವು!
  • ಸಕ್ಕರೆ ಕಾಯಿಲೆ ಇರುವವನಿಗೆ, ಸಕ್ಕರೆಯನ್ನು ಹಲವು ಚೀಲಗಳಷ್ಟು ಉಚಿತವಾಗಿ ಕೊಟ್ಟರೂ ಅದರಲ್ಲಿ ಆತನಿಗೆ ಪ್ರಯೋಜನ ಉಂಟಾಗುವುದಿಲ್ಲ. ಅದೇ ರೀತಿ, ಮಾನವರು ಎಷ್ಟೇ ಗಳಿಸಿದರೂ ಮನಸ್ಸು ಕೊರಗುತ್ತಿದ್ದರೆ ಆ ವ್ಯಕ್ತಿಯ ಜೀವನವು ಸಂತಸವನ್ನು ಅನುಭವಿಸುವ ಬದಲು ನರಕ ಯಾತನೆಯನ್ನು ಮಾತ್ರ ಅನುಭವಿಸುತ್ತಿರುವುದು.
  • ಜಗತ್ತಲ್ಲಿ ಎಲ್ಲರಿಗೂ ಸೇರಿ ಇರುವ ಆ ಸಾರ್ವತ್ರಿಕ ನೈತಿಕತೆ ಇರುವುದಿಲ್ಲ ಎಂದು ಕೆಲವರು ಹೇಳುವರು, ಆದರೆ ಅದು ಸರಿಯಲ್ಲ. ಕೆಲವು ನೈತಿಕ ನಿಯಮಗಳು ಬೇರೆ ಬೇರೆಯಾಗಿವೆ ಎಂಬುವುದು ಸರಿ. ಅದೇ ರೀತಿ, ಕೆಲವು ನೈತಿಕವೆಂದು ಕರೆಯಲ್ಪಡುವ ಆದರೆ ಆದರ್ಶ ಹೀನ ಅನೈತಿಕ ನಿಯಮಗಳೂ ಈ ಜಗತ್ತಿನ ಧರ್ಮ, ಪಂಥಗಳಲ್ಲಿ ನೈತಿಕತೆಯ ರೂಪದಲ್ಲಿ ಸೇರಿಕೊಂಡಿವೆ ಎಂಬುವುದೂ ಸರಿ. ಆದರೆ, ನಾವು ಈ ಎರಡನ್ನೂ ಹೊರತುಪಡಿಸಿ, ಆ ನಿಜವಾದ ಆದರ್ಶಕ್ಕೆ ಸರಿಯಾಗುವ ನೈತಿಕ ನಿಯಮಗಳನ್ನು ಮಾತ್ರ ಸಾರ್ವತ್ರಿಕ ನೈತಿಕತೆ ಎಂದಿರುವುದು. ಉದಾಹರಣೆಗೆ, ಕಳ್ಳತನ ಮಾಡಬಾರದು, ಇತರರನ್ನು ತನ್ನಂತೆ ಕಾಣಬೇಕು, ವಂಚಿಸಬಾರದು, ಮದುವೆಯ ಮಹತ್ವ, ಪರ ಸ್ತ್ರೀ, ಪರ ಪುರುಷ ಸಂಬಂಧ ಇರಬಾರದು, ಇತ್ಯಾದಿ ಹಲವು ಸಾಮಾನ್ಯ ನೈತಿಕ ನಿಯಮಗಳನ್ನು ಸಾರ್ವತ್ರಿಕ ನೈತಿಕತೆಯಲ್ಲಿ ಸೇರಿಸಬಹುದು. ಹೀಗಾಗಿ ಸಾರ್ವತ್ರಿಕ ನೈತಿಕತೆಯು ಇದೆ ಎಂದು ಸ್ಪಷ್ಟವಾಯಿತು.
  • ನ್ಯಾಯವು ಹೆಚ್ಚಿನ ಸಮಯದಲ್ಲೂ ಸತ್ಯವೇ ಆಗಿರುವುದು. ಆದರೆ ನ್ಯಾಯವು ಕೆಲವೊಂದು ಸಮಯದಲ್ಲಿ ಹೃದಯದ ಸತ್ಯಸಂಧತೆಯನ್ನು ಮೀರಿ ನಡೆಯುವುದು! ಉದಾಹರಣೆಗೆ, ಒಬ್ಬನು ತನ್ನ ಮನೆಯನ್ನು ಮಾರಿ ಆಯಿತು, ಆದರೆ, ಪಡಕೊಂಡವನ ಒಪ್ಪಿಗೆಯೊಂದಿಗೆ, ಒಂದು ವಾರ ಮತ್ತೂ ಅಲ್ಲಿರುವನು, ಆಗಲೂ ಅದನ್ನು ‘ನಮ್ಮ ಮನೆ’ ಎಂದೇ ಆತ ಮತ್ತು ಆತನ ಮನೆಯವರು ಹೇಳುವರು. ಇಲ್ಲಿ, ಮನಸ್ಸಿನ ನ್ಯಾಯವು “ಹಾಗೆ ಹೇಳುವುದು ಸರಿಯಲ್ಲ” ಎಂದು ಹೇಳುವುದು. ಆದರೆ ಹೃದಯದ ನ್ಯಾಯವು, “ಮನೆಯಲ್ಲಿ ಇರುವ ತನಕ ಅದನ್ನು ‘ನಮ್ಮ ಮನೆ’ ಯೆಂದು ಹೇಳಬಹುದು” ಎನ್ನುವುದು. ಮನೆಯ ಒಡೆತನವನ್ನು ಪ್ರತ್ಯೇಕವಾಗಿ ನೋಡಬೇಕು ಎಂದೂ ಅದು ವಿಭಜಿಸಿ ಹೇಳುವುದು. ತನ್ನ ಗುರುಗಳು, ಬರೇ ಒಂದು ದಿನ ತಡವಾಗಿ ಬಂದದ್ದನ್ನು, ನಿತ್ಯ ತಡವಾಗಿ ಬಂದದ್ದಕ್ಕೆ ತರಗತಿಯಲ್ಲಿ ಆ ಗುರು ಆತನನ್ನು ಶಿಕ್ಷಿಸುವಾಗ, “ನೀವೇ ತಡವಾಗಿ ಒಂದು ದಿನ ಬಂದಿದ್ದೀರಲ್ಲಾ” ಎಂದು ಆ ವಿದ್ಯಾರ್ಥಿಯು ಎತ್ತಿ ಹೇಳಿದನಂತೆ! ಇಲ್ಲಿ ಒಂದು ರೀತಿಯ ನ್ಯಾಯ ಅಥವಾ ತರ್ಕ ಇದೆ, ಆದರೆ ಆ ನ್ಯಾಯದಲ್ಲಿ ಬಹಳ ಕೊರತೆಗಳಿರುವವು. ಬರೇ ‘ಮನಸ್ಸು ಮೂಲವಾಗಿರುವ’ ನ್ಯಾಯವನ್ನು ಮಾತ್ರ ನೋಡಿದಾಗ, ಈ ರೀತಿಯ ಕಠೋರ ನ್ಯಾಯದ ”ವಾದ” ಮಾತ್ರ ಸಿಗುವವು! ನ್ಯಾಯಾಲಯಗಳಲ್ಲಿ ಇದರ ಬಳಕೆಯು, ಅನ್ಯಾಯವನ್ನು ನ್ಯಾಯ ಮಾಡುವ ವಕೀಲರ ಕಡೆಯಿಂದ, ಬಹಳವಾಗಿ ಆಗುವುದು. ಅಂತೂ, ಮಹಾತ್ಮರ ರೀತಿಯು, “ಹೃದಯದ ನ್ಯಾಯ”ವನ್ನು ಮಾತ್ರ ಉದ್ದೇಶಿಸುವುದು ಎಂದು ತಿಳಿಯಬೇಕು. ಹಾಗಿದ್ದರೆ ಮಾತ್ರವೇ ಉದ್ದೇಶ ಶುದ್ಧಿ ಇರಲು ಸಾಧ್ಯ, ಮತ್ತು ಜಗತ್ತಿಗೆ ಪರಿಹಾರವನ್ನು ಮತ್ತು ಶಾಂತಿಯನ್ನು ತರಬಲ್ಲ ಮಾನವ ಅಥವಾ ಮಹಾತ್ಮನಾಗಲು ಸಾಧ್ಯ. ಹೃದಯದ ನ್ಯಾಯ ಮತ್ತು ಹೃದಯದ ಪ್ರೀತಿ, ಇವುಗಳು ಮಾನವರನ್ನು ದೇವಸ್ವಭಾವವನ್ನು ಹೊತ್ತ ಮಹಾತ್ಮರುಗಳನ್ನಾಗಿ ಮಾಡುವವು!