ನಂಬಿಕೆಯ ದೇವರು ಮತ್ತು ಸತ್ಯದ ದೇವರು

ನಾವು ‘ಸತ್ಯವೇ ದೇವರು’ ಎಂದು ಕೇಳಿದ್ದೇವೆ. ಆದರೆ ‘ನನ್ನ ನಂಬಿಕೆಯೇ ದೇವರು’ ಎಂದು, ಎಂದೂ ಕೇಳಿಲ್ಲ. ಸತ್ಯವೇ ದೇವರಾದರೆ ಸೂರ್ಯನಂತೆ ಎಲ್ಲರೂ ಒಪ್ಪುವ ಒಬ್ಬ ಸೃಷ್ಟಿಕರ್ತ ದೇವರು ಅನಿವಾರ್ಯವಾಗುತ್ತಿತ್ತು, ಮತ್ತು ಮಾನವರೆಲ್ಲರೂ ಅವನ ಮಕ್ಕಳಂತೆ ಸಂತೋಷದಿಂದ ಜೀವಿಸುತ್ತಿದ್ದರು. ಆದರೆ ನಿಜ ಸ್ಥಿತಿಯಲ್ಲಿ ಹಾಗಿಲ್ಲ. ಮತ್ತು ‘ನನ್ನ ನಂಬಿಕೆಯೇ ದೇವರು’ ಇದೇ ಹಿಂದಿನಿಂದಲೂ ರಾರಾಜಿಸುತ್ತಿರುವ ದೇವರು.

ಹಲವು ಸೃಷ್ಟಿಕರ್ತರಿರಲು ಸಾಧ್ಯವಿಲ್ಲ. ಇದ್ದಲ್ಲಿ ಒಬ್ಬನೇ ಸಾಧ್ಯ ಎಂದಾದರೆ ಯಾಕೆ ಈ ಹೊಡೆದಾಟ? ಆತನ ಹೆಸರೆತ್ತಿ ಯಾಕೆ ಈ ರಕ್ತಪಾತ? ಶಾಂತಿಗಾಗಿ ದೇವರಿರುವನೋ ಅಲ್ಲ ಆತ ಹಿಂಸೆ, ರಕ್ತಪಾತ ಮಾಡಿಸುವನೋ? ಇಲ್ಲೇ ಮುಕ್ತ ನಿಲುವಿನ ವೈಜ್ಞಾನಿಕ ದೃಷ್ಟಿಯ ತರ್ಕದ ಅನಿವಾರ್ಯತೆ ಕಾಣಿಸುವುದು. ನಂಬಿಕೆಯೆಂಬ ಚೂರಿಯಿಂದ, ತಮ್ಮೊಳಗೆ ಇರಿದು ಇರಿದು, ಕೋಟಿಗಟ್ಟಲೆ ಜನರನ್ನು ಕೊಂದ ಚರಿತ್ರೆ ಇರುವಾಗ “ನಂಬಿಕೆಯಿಂದ ಇದುವರೆಗೂ ಏನೂ ಪ್ರಯೋಜನವಾಗಿಲ್ಲವೇ?” ಎಂಬ ಪ್ರಶ್ನೆಯನ್ನು ಹಾಕುವ ಹಕ್ಕು ಜಗತ್ತಿನಲ್ಲಿ ಯಾರಿಗೂ ಇಲ್ಲವಾಗುವುದು. ಎಲ್ಲಾ ದೇವರ ಲೀಲೆ ಎಂದು ಸಮಾಧಾನಪಟ್ಟುಕೊಳ್ಳುವವರು, ತಮ್ಮೊಳಗೆ ಹೊಡೆಸಿ ರಕ್ತದ ಹೊಳೆ ಹರಿಸುವುದು ಒಬ್ಬ ತಂದೆಯಾದವನು ಮಾಡುವನೇ ಎಂದು ಆಲೋಚಿಸುವುದು ಉತ್ತಮ. ಹೀಗಿದ್ದರೆ ದೇವರು ಮತ್ತು ಸೈತಾನ ಎಂದು ಜಗತ್ತಿನ ಎಲ್ಲೆಡೆ ವಿಭಜಿಸಿ, ಪ್ರೀತಿಯೇ ದೇವರು, ಕ್ರೌರ್ಯವೇ ಸೈತಾನ ಎಂದು ವರ್ಣಿಸುವ ಅಗತ್ಯವೇ ಇಲ್ಲವಾಗಿತ್ತು. ಎಲ್ಲವನ್ನೂ ದೇವರು ತನ್ನ ಲೀಲೆಯ ಮೂಲಕ ಮಾಡುತ್ತಿದ್ದಾನಲ್ಲಾ! ಆದುದರಿಂದ ಕತ್ತಲೆಯನ್ನು ಬೆಳಕಾಗಿ ವಿವರಿಸದೆ, ಮತ್ತು ಬೆಳಕನ್ನು ಕತ್ತಲೆಗೆ ತಳ್ಳದೆ ಜಗತ್ತು ಸತ್ಯ ಶೋಧಕ್ಕೆ ಮುಂದಾಗಲಿ. ಆಗಲೇ ಭೂಮಿಯಲ್ಲಿ ನಿಜವಾದ ಶಾಂತಿ ಸೂರ್ಯನ ಉದಯವಾಗುವುದು. ಎಲ್ಲಿಯ ತನಕ ಇದು ಸಾಧ್ಯವಾಗುವುದಿಲ್ಲವೋ ಅಲ್ಲಿಯ ತನಕ ಶಾಂತಿಯ ಮಾತು ಬಹಳ ದೂರವೇ ಉಳಿಯುವುದು. ಜಗತ್ತಿಗೆ ಭಯ, ಹಿಂಸೆಗಳ ಕಪಿ ಮುಷ್ಠಿಯಿಂದ ಹೊರಬರಲು ಸಾಧ್ಯವಾಗುವುದಿಲ್ಲ.

ಸತ್ಯಕ್ಕೆ ಅಸ್ತಿತ್ವವಿದೆ. ಆದರೆ ನಂಬಿಕೆಯು ಸತ್ಯ ತಿಳಿಯದ ಸ್ಥಿತಿಯನ್ನು ಪ್ರತಿನಿಧೀಕರಿಸುವ ಕಾರಣ, ಅಲ್ಲಿ ಅದಕ್ಕೆ ಅಸ್ತಿತ್ವ ಇರುವುದಿಲ್ಲ. ನಂಬಿಕೆಯು ಸಂಶಯದ ನೆರಳಿನಂತೆ, ‘ಅದು ಇದೆ’ ಎಂದು ಇನ್ನೂ ಅನುಭವವಾಗದ ಸ್ಥಿತಿ. ಈ ಸ್ಥಿತಿಯಲ್ಲಿ, ಅದು ಒಂದು ವ್ಯಕ್ತಿಯೂ ಆಗುವುದಿಲ್ಲ, ಒಂದು ತತ್ವವೂ ಆಗುವುದಿಲ್ಲ. ಹೀಗಿರುವಾಗ ವ್ಯಕ್ತಿದೇವರಾಗಿಯೂ, ತತ್ವ ಚೈತನ್ಯವಾಗಿಯೂ ಅದು ಅಸ್ತಿತ್ವವನ್ನೇ ಪಡೆಯುವುದಿಲ್ಲ. ಭಕ್ತನು ಮನಸ್ಸನ್ನು ಕೇಂದ್ರೀಕರಿಸಿದರೂ, ಆ ಕೇಂದ್ರ ಬಿಂದುವಿಗೆ ಅಸ್ತಿತ್ವವಿಲ್ಲದಿರುವಲ್ಲಿ, ಆಗ ಆತನ ಸಾಧನೆಯು ಗುರಿತಲುಪದ ಬಾಣದಂತೆ ಆಗುವುದು. ಈ ರೀತಿ ನಂಬಿಕೆಯು ನಂಬುವ ವಸ್ತುವಿನ ಅಸ್ತಿತ್ವವನ್ನೇ ಇಲ್ಲದಂತೆ ಮಾಡುವುದು! ಇತ್ತ, ಸತ್ಯವೇ ದೇವರೆಂದರೆ, ಮತ್ತು ಆ ಸತ್ಯದ ದೇವರನ್ನು ಸತ್ಯವೆಂದು ತಿಳಿಯುವ ಆ ಸತ್ಯದ ಹಿನ್ನೆಲೆಯ ರೀತಿಗಳನ್ನು ಅವಲಂಭಿಸುವಾಗ, ಸತ್ಯಕ್ಕೆ ಅಸ್ತಿತ್ವವಿರುವ ಕಾರಣ, ಆ ದೇವ ಸಂಕಲ್ಪಕ್ಕೆ ಅಸ್ತಿತ್ವ ಬರುವುದು. ಆದುದರಿಂದ ದೇವರನ್ನು ನಂಬುವುದು ಎಂಬ ರೀತಿಯನ್ನು ಬಿಟ್ಟು, ದೇವರು ಸತ್ಯವೆಂದು ತಿಳಿಯುವ ರೀತಿಯನ್ನು ಅನುಸರಿಸುವುದು ದೇವರಿಗೆ ಅಸ್ತಿತ್ವವಿಲ್ಲ ಎಂಬುವುದರಿಂದ ದೇವರಿಗೆ ಅಸ್ತಿತ್ವವಿದೆ ಎಂಬಲ್ಲಿಗೆ ಬರುವಷ್ಟು ಮಹತ್ವದ್ದಾಗುವುದು. ದಾಸರುಗಳು ಮತ್ತು ಶರಣರಲ್ಲಿ ಹೆಚ್ಚಿನವರೂ ಆ ದೇವರನ್ನು ನಂಬಿದವರಲ್ಲ, ಬದಲು, ಅವರು ದೇವರನ್ನು ಅರಿತು ಭಕ್ತಿ ಯೋಗಿಗಳಾದವರು! ಅವರು ಆಚಾರಗಳ ಹಿಂದೆ ಬೀಳದೆ, ಆ ದೇವರ ಮಹಿಮೆಯನ್ನು [ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಗುಣಗಳನ್ನು] ಹಲವು ವಿಧಗಳಲ್ಲಿ ಹಾಡಿ ಹೊಗಳಿರುವರು. ಆದುದರಿಂದ ದಾಸರು, ಶರಣರು, ಇತ್ಯಾದಿ ಭಕ್ತಿಯೋಗಿಗಳಲ್ಲಿ ಹೆಚ್ಚಿನವರೂ ಆ ನಂಬಿಕೆ ರೀತಿಯನ್ನು ಅನುಸರಿಸಿಯೇ ಇಲ್ಲ ಎನ್ನಬಹುದು.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||