ಧರ್ಮ ಪ್ರಚಾರ ಮತ್ತು ಮತಾಂತರ

ಧರ್ಮವನ್ನು ಪ್ರಚಾರಮಾಡಲು ಅದು ಮಾರು ಕಟ್ಟಯ ವಸ್ತುವಲ್ಲ, ಅದು ನಾವು ನಾವೇ ಅನುಷ್ಠಿಸಬೇಕಾದ ಕರ್ಮವಾಗಿದೆ. ಸತ್ಯದ ಅನುಷ್ಠಾನ ಮಾತ್ರ ಇರುವಲ್ಲಿ ಪ್ರಚಾರ ಮಾಡುವ ಅವಕಾಶ ಯಾರಿಗೂ ಸಿಗಲಾರದು. ಸತ್ಯವನ್ನು ತಿಳಿಯಲು ಇಚ್ಛಿಸುವವರಿಗೆ ಅದರ ಕುರಿತು, ಸಾಧ್ಯವಾದಲ್ಲಿ, ತಿಳಿಸಿ ಕೊಡಬಹುದು ಅಷ್ಟೆ. ಧರ್ಮ ಪ್ರಚಾರವು ಮತಾಂತರದ ಜನಸಂಖ್ಯೆ ಹೆಚ್ಚಿಸುವಲ್ಲಿದೆ, ಆದರೆ, ಧರ್ಮ ಅನುಷ್ಠಾನವು, ಮನೋ ಶುದ್ಧೀಕರಣದಿಂದ ಮನೆ ಮನೆಯ ಮಹಾತ್ಮರನ್ನು ಸೃಷ್ಟಿಸುವಲ್ಲಿದೆ.

ಮೂಲದಲ್ಲಿ, ಈ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೇ ಎಲ್ಲಾ ಧರ್ಮಗಳಲ್ಲೂ ಇರುವ ಸಾರಧರ್ಮವಾಗಿರುವಾಗ, ಇನ್ನು, ಒಬ್ಬನು ಶ್ರೇಷ್ಠಧರ್ಮಕ್ಕೆ ಬೇಕಾಗಿ ಮತಾಂತರವಾಗಲು ಸಾಧ್ಯವಿಲ್ಲ ಎಂದಾಯಿತು. ಅಂದರೆ, ಬರೇ ಆಚಾರಗಳ ವ್ಯತ್ಯಾಸಕ್ಕೆ ಮಾತ್ರ ಮತಾಂತರ ಆದಂತೆ ಆಗುವುದು. ಒಂದು ದಿಕ್ಕಿಗೆ ತಿರುಗಿ ಮಾಡುವ ಧರ್ಮಾಚರಣೆಯಿಂದ ಅದರ ವಿರುದ್ಧ ದಿಕ್ಕಿಗೆ ತಿರುಗಿ ಮಾಡುವ ಧರ್ಮಾಚರಣೆಗೆ ವರ್ಗಾವಣೆ ಮಾಡಿದಂತೆ ಮಾತ್ರ ಈ ಮತಾಂತರಕ್ಕೆ ಅರ್ಥ ಬರುವುದು ಅಷ್ಟೆ!! ಈ ಕಾರಣದಿಂದ, ಧರ್ಮ ಮತ್ತು ಮತಾಂತರಗಳೊಳಗೆ ಯಾವ ಸಂಬಂಧವೂ ಇಲ್ಲ ಎಂದು ತಿಳಿದುಕೊಳ್ಳಬಹುದು. ಇನ್ನು, ಒಂದು ಉದಾಹರಣೆ ಸಂಭಾಷಣೆಯನ್ನು ಈ ಕೆಳಗೆ ಕೊಡಲಾಗಿದೆ ಅದನ್ನು ಗಮನಿಸಿರಿ.

ಒಂದು ಸಂಭಾಷಣೆಯು ಈ ಕೆಳಗಿನಂತಿದೆ.

ಪ್ರಶ್ನೆ- ಮತಾಂತರ ತಪ್ಪಲ್ಲವೇ?

ಧರ್ಮ ಪಂಡಿತ- ಮತಾಂತರ ತಪ್ಪಲ್ಲ, ಸಂವಿಧಾನವೂ ಅದನ್ನು ವಿರೋಧಿಸಿಲ್ಲ.

ಪ್ರಶ್ನೆ- ಒಂದು ದೇಶದಲ್ಲಿ ಎಷ್ಟು ಜನರನ್ನು ನಿಮ್ಮ ಧರ್ಮಕ್ಕೆ ಮತಾಂತರ ಮಾಡಬಹುದು ಎಂದು ನಿಮ್ಮ ಅಂದಾಜು?

ಧರ್ಮ ಪಂಡಿತ – ಈ ಜಗತ್ತಿನ ಎಲ್ಲರೂ ನಮ್ಮ ಧರ್ಮಕ್ಕೆ ಮತಾಂತರವಾಗುವ ತನಕವೂ ಸಾಧ್ಯ.

ಪ್ರಶ್ನೆ- ನೀವು ಮತಾಂತರವನ್ನು ಖಂಡಿತಾ ಪ್ರೊತ್ಸಾಹಿಸುವಿರಾದರೆ, ಇನ್ನೊಂದು ಧರ್ಮದವರು ನಿಮ್ಮ ಧರ್ಮವರನ್ನೆಲ್ಲಾ ಅವರ ಧರ್ಮಕ್ಕೆ ಮತಾಂತರ ಮಾಡುವಾಗ ನೀವು ಅದನ್ನು ಪ್ರೋತ್ಸಾಹಿಸಬೇಕಾಗುವುದು. ನೀವು ಅದರ ವಿರುದ್ಧ ಒಂದು ಮಾತನ್ನೂ ಆಡುವುದಿಲ್ಲ ಎಂದು ಹೇಳಬಹುದೇ?

ಧರ್ಮ ಪಂಡಿತ- ಹಾಗೆ ಯಾರಾದರೂ ಮಾಡುವುದಾದರೆ, ನಾವು ಯಾವ ಬೆಲೆ ತೆತ್ತಾದರೂ ಅದನ್ನು ಎದುರಿಸುವೆವು.

ಪ್ರಶ್ನೆ- ಅಂದರೆ, ಅದರ ಅರ್ಥ, ಅಲ್ಲಿ ನೀವು ಅದನ್ನು ಪ್ರೋಹ್ಸಾಹಿಸುವುದಿಲ್ಲ ಎಂದು, ಅಲ್ಲವೇ?

ಧರ್ಮ ಪಂಡಿತ –…………………………………. [ಮೌನ]

ಜನರಿಗೆ ಸೃಷ್ಟಿಕರ್ತ ದೇವರು ಬೇಕು, ಆದರೆ ಅವರದ್ದು ಮಾತ್ರ ಸಾಕು! ಜನರಿಗೆ ಧರ್ಮ ಬೇಕು, ಆದರೆ ಅವರದ್ದು ಮಾತ್ರ ಸಾಕು! ಜನರಿಗೆ ಮತಾಂತರವೂ ಬೇಕು, ಆದರೆ ಅದನ್ನು ಮಾಡುವವರು ಅವರು ಮಾತ್ರ ಆಗಿರಬೇಕು!

ಇಷ್ಟೆಲ್ಲಾ ದುಷ್ಟ ಬುದ್ಧಿಯನ್ನು ತಮ್ಮಲ್ಲಿರಿಸುತ್ತಾ, ಈ ಜನರು ಹೇಗೆ ಆ ವಿಶಾಲ ಅರ್ಥವಿರುವ ಧರ್ಮವನ್ನು ಬೋಧಿಸುವರು ಎಂಬುವುದು, ನಿಜವಾಗಿಯೂ, ಒಂದು ಪವಾಡದಂತೆ ತೋರುವುದು!!

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||