ಕೆಲವರು, ದೇವರ ಕಡೆಗಿನ ದಾರಿಗಳು ಹಲವು, ಆದರೆ ದೇವರೆಂಬ ಗುರಿಯು ಒಂದು ಎಂದು ಹೇಳುವರು. ಇದರ ಬಗ್ಗೆ ಹೇಳುವಾಗ, ಹಾಗೆ ಆಗಿರಬೇಕೆಂದು ನಾನು ಆಶಿಸುತ್ತೇನೆ ಎಂದು ಹೇಳುತ್ತೇನೆ, ಆದರೆ ನಿಜಸ್ಥಿತಿಯಲ್ಲಿ ಅದು ಹಾಗಿಲ್ಲ ಎಂಬುವುದು ಬೇಸರದ ವಿಷಯವಾಗಿದೆ. ಮೊದಲು ಎಲ್ಲಾ ಧರ್ಮ, ಪಂಥ, ಸಂಪ್ರದಾಯಗಳ ಗುರಿಗಳು ಒಂದೇ ಆಗಿದೆಯೇ ಎಂದು ನೋಡೋಣ. ಗುರಿಗಳು ಒಂದೇ ಆಗಿಲ್ಲ, ಯಾಕೆಂದರೆ ಒಂದು ಧರ್ಮ, ದೇವರು, ಒಂದು ರೀತಿಯಲ್ಲಿ ವಿವರಿಸಲ್ಪಟ್ಟರೆ ಇನ್ನೊಂದು ಧರ್ಮ, ದೇವರು, ಇನ್ನೊಂದು ರೀತಿಯಲ್ಲಿ ವಿವರಿಸಲ್ಪಟ್ಟಿರುವುದು. ಸಗುಣ ದೇವರು, ನಿರ್ಗುಣ ದೇವರು, ರೂಪ ಇರುವ ದೇವರು, ರೂಪ ಇಲ್ಲದ ದೇವರು, ಅದೇ ರೀತಿ, ಸಾತ್ವಿಕ ದೇವರು, ತಾಮಸಿಕ ದೇವರು, ಅವತಾರ ದೇವರು, ಹೀಗೆ ದೇವರುಗಳ ರೀತಿಗಳೇ ಹಲವು ಇರುವವು, ಅಂದರೆ ಗುರಿಗಳು ಹಲವು ಎಂದು ಅರ್ಥ. ಮಾತ್ರವಲ್ಲ, ಆ ದೇವರುಗಳ ಸ್ವರ್ಗ ಇತ್ಯಾದಿಗಳ ವಿವರಣೆಗಳೂ ಬೇರೆ ಬೇರೆ ಆಗಿವೆ. ಹೀಗಿರುವಾಗ, ‘ಹಲವು ಗುರಿಗಳು, ಅವುಗಳಿಗೆ ಹಲವು ದಾರಿಗಳು,’ ಎಂದಲ್ಲಿ ಮಾತ್ರ ಅದು ಸತ್ಯದ ಮಾತಾಗುವುದು.
ನಮಗೆ ಒಂದೇ ಗುರಿ ಬೇಕಿದ್ದಲ್ಲಿ, ಅದು ಎಲ್ಲಾ ದೇವರ ಮತ್ತು ಎಲ್ಲಾ ಧರ್ಮಗಳ ಸ್ವಭಾವ ವಿವರಣೆಗಳಲ್ಲಿ ಮಾತ್ರ ಸಿಗುವುದು, ಅದುವೇ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೀತಿಯಾಗಿದೆ. ಯಾಕೆಂದರೆ ಅದನ್ನು ಬೇರೆ ಬೇರೆ ರೀತಿಯಲ್ಲಿ ವಿವರಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ದೇವರ ಸ್ವಭಾವವೇ ದೇವರ ಅಸ್ತಿತ್ವವಾಗಿರುವಾಗ, ಅದರ ಹಿನ್ನೆಲೆಯಲ್ಲಿ ದೇವರು, ಧರ್ಮಗಳನ್ನು ವಿವರಿಸಿದಲ್ಲಿ ನಮಗೆಲ್ಲಾ, ನಿಜವಾದ, ಆ ಒಂದೇ ಗುರಿ ಸಿಗುವುದು. ಈ ಗುರಿಗಳನ್ನು ಸಾಧಿಸುವಲ್ಲಿ ಯಾವ ಧರ್ಮ, ಪಂಥ, ಸಂಪ್ರದಾಯಗಳಿಗೂ ತಮ್ಮ ತಮ್ಮೊಳಗೆ ಹೊಡೆದಾಡಿಕೊಳ್ಳುವ ಅವಕಾಶ ಇರುವುದಿಲ್ಲ, ಅದೇ ರೀತಿ, ಧರ್ಮ, ಪಂಥಗಳಲ್ಲಿ ಬದಲಾವಣೆ ಮಾಡುವ ಅಗತ್ಯವೂ ಬರುವುದಿಲ್ಲ. ಆದರೆ, ಇಲ್ಲಿ, ಎಲ್ಲಾ ಧರ್ಮ, ಪಂಥಗಳ ಗುರಿಸಾಧಿಸುವ ದಾರಿಗಳೂ ಆ ಆತ್ಮೀಯ ಮತ್ತು ಅನಂತ ‘ಶಾಂತಿ’ಯೆಂಬ ಹೆದ್ದಾರಿಯೇ ಆಗಿಬಿಡುವವು ಎಂಬುವುದು ಜಗತ್ತಿಗೆ ಅತ್ಯಂತ ಲಾಭದಾಯಕವಾಗಿ ಪರಿಣಮಿಸುವುದು!